ನನ್ನಿಷ್ಟದ ಸಾಕುಪ್ರಾಣಿ: ಬಿಳಿ ಬಣ್ಣದ ಗುಂಡಮ್ಮ ನಮ್ಮ ರಾಣಿ; ಮಕ್ಕಳ ಬರಹ ಓದಿ, ಮಕ್ಕಳು ಬಿಡಿಸಿದ ಚಿತ್ರ ನೋಡಿ
Nov 27, 2024 06:58 AM IST
ಚಿತ್ರ ಪ್ರಬಂಧ ಕಳಿಸಿದ ಪುಟಾಣಿಗಳು: ಮೊದಲ ಸಾಲು- ಪ್ರಾರ್ಥನಾ ಪಿ.ಆರ್., ಅನಿರುದ್ಧ ಪಿ., ವರ್ಷಿಣಿ ಎಂ.ನಾರಾಯಣ, ಮನಸ್ವಿ ಆರ್.ಕೆ., ಎರಡನೇ ಸಾಲು: ಆರಾಧ್ಯ ಆರ್., ಶರಧಿ ಕಾರಂತ್, ಸಂಚಿತ್ ಎಂ.ದೇವಾಡಿಗ
- ಮಕ್ಕಳ ದಿನಾಚರಣೆ ಪ್ರಯುಕ್ತ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ (ಎಚ್‌ಟಿ ಕನ್ನಡ) ಜಾಲತಾಣವು 4 ರಿಂದ 7 ನೇ ತರಗತಿ ಮಕ್ಕಳಿಂದ ‘ನನ್ನಿಷ್ಟದ ಸಾಕುಪ್ರಾಣಿ’ ವಿಷಯದ ಬಗ್ಗೆ ಚಿತ್ರಕಲೆ ಮತ್ತು ಪ್ರಬಂಧಗಳನ್ನು ಆಹ್ವಾನಿಸಿತ್ತು. ನಮ್ಮ ಆಹ್ವಾನ ಮನ್ನಿಸಿ ಪ್ರಬಂಧ, ಚಿತ್ರಕಲೆ ಕಳಿಸಿದ ಪುಟಾಣಿಗಳ ಬರಹ ಮತ್ತು ಕಲಾಕೃತಿಗಳು ಇಲ್ಲಿವೆ. ಪಾಲ್ಗೊಂಡ ಎಲ್ಲರಿಗೂ ಅಭಿನಂದನೆಗಳು.
ಮಕ್ಕಳ ದಿನಾಚರಣೆ ಪ್ರಯುಕ್ತ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ (ಎಚ್‌ಟಿ ಕನ್ನಡ) ಜಾಲತಾಣವು ಮಕ್ಕಳಿಂದ ಪ್ರಬಂಧ, ಚಿತ್ರಕಲೆಗಳನ್ನು ಆಹ್ವಾನಿಸಿತ್ತು. ‘ನನ್ನಿಷ್ಟದ ಸಾಕುಪ್ರಾಣಿ’ ಎನ್ನುವ ವಿಷಯವನ್ನು ಸೂಚಿಸಲಾಗಿತ್ತು. ಮಕ್ಕಳು ಖುಷಿಯಿಂದಲೇ ಚಿತ್ರಗಳನ್ನು ಬರೆದರು, ಪ್ರಬಂಧಗಳನ್ನು ಕಳಿಸಿದರು. ಈ ಪೈಕಿ ಪ್ರಾರ್ಥನಾ ಪಿ.ಆರ್., ಅನಿರುದ್ಧ ಪಿ., ವರ್ಷಿಣಿ ಎಂ.ನಾರಾಯಣ, ಮನಸ್ವಿ ಆರ್.ಕೆ., ಆರಾಧ್ಯ ಆರ್., ಶರಧಿ ಕಾರಂತ್, ಸಂಚಿತ್ ಎಂ.ದೇವಾಡಿಗ ಅವರ ಚಿತ್ರ ಮತ್ತು ಪ್ರಬಂಧಗಳು ಮನೋಜ್ಞವಾಗಿದ್ದವು. ಮಕ್ಕಳ ಸಹಜ ಮುಗ್ಧ ದೃಷ್ಟಿಯಲ್ಲಿ ಅವರು ತಮ್ಮ ಸುತ್ತಲ ಪರಿಸರವನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವ ಇಣುಕುನೋಟವನ್ನೂ ಈ ಪ್ರಬಂಧ, ಚಿತ್ರಕಲೆಗಳು ನೀಡುತ್ತವೆ.
ಪ್ರಿಯ ಓದುಗರೇ, ಮಕ್ಕಳ ಬರಹ ಓದಿ, ಚಿತ್ರಕಲೆ ನೋಡಿ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರಿಂದಲೂ ಓದಿಸಿ, ಚಿತ್ರಗಳನ್ನು ತೋರಿಸಿ. ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ (ಎಚ್‌ಟಿ ಕನ್ನಡ) ಜಾಲತಾಣವು ಈ ಚಟುವಟಿಕೆಯನ್ನು ಮುಂದಿನ ದಿನಗಳಲ್ಲಿ ವಿವಿಧ ವಯೋಮಾನ, ತರಗತಿಗಳ ಮಕ್ಕಳಿಗಾಗಿ ಮುಂದುವರಿಸಲಿದೆ. ನಿಮ್ಮ ಮನೆ, ಸುತ್ತಲಿನ ಮಕ್ಕಳೂ ಪಾಲ್ಗೊಳ್ಳಲು ಪ್ರೇರೇಪಿಸಿ. ಮಕ್ಕಳ ವಿಚಾರ ಜಗತ್ತಿಗೆ ಬರಲಿ. ಮಕ್ಕಳ ಕನಸು, ದೊಡ್ಡವರ ಅನುಭವ ಸೇರಿದರೆ ಸುಂದರ ಜಗತ್ತು ರೂಪಿಸಲು ಸಾಧ್ಯವಾದೀತು ಎನ್ನುವುದು ನಮ್ಮ ಆಶಯ.
ಅದು ನನ್ನ ತುಂಟ ಬೆಕ್ಕು
ನನ್ನಿಷ್ಟದ ಸಾಕುಪ್ರಾಣಿ ಎಂಬ ವಿಷಯದ ಕುರಿತು ನನ್ನ ಬರಹವನ್ನು ಪ್ರಾರಂಭಿಸುತ್ತಿದ್ದೇನೆ. ಕೈಲಾದಷ್ಟು ಪ್ರೀತಿ ಕೊಟ್ಟರೆ ಸಾಯುವವರೆಗೂ ಜೊತೆಯಾಗಿರುವ ಏಕೈಕ ಜೀವ ಎಂದರೆ ಅದು ನಾವು ಸಾಕುವ ಸಾಕು ಪ್ರಾಣಿಗಳು. ಪ್ರಾಣಿಗಳೆಂದರೆ ಸಾಕು ಮತ್ತು ಕಾಡು ಪ್ರಾಣಿಗಳಾಗಿ ಎರಡು ರೀತಿಯಲ್ಲಿ ವಿಂಗಡನೆ ಆಗುತ್ತದೆ. ಆದರೆ ಅದರಲ್ಲಿ ಮನುಷ್ಯನ ಹತ್ತಿರ ಬೆರೆಯುವಂತಹ ಪ್ರಾಣಿ ಎಂದರೆ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ. ಆಡು ಇತ್ಯಾದಿ. ಇವುಗಳಲ್ಲಿ ನನಗಿಷ್ಟವಾದ ಪ್ರಾಣಿ ಎಂದರೆ ಅದು ಬೆಕ್ಕು. ಬೆಕ್ಕಿನ ವೈಜ್ಞಾನಿಕ ಹೆಸರು 'ಪೆಲಿಸ್ ಕ್ಯಾಟಸ್'.
'ಬೆಕ್ಕು' ಇದು ಒಂದು ಸಣ್ಣ ಸಾಕು ಪ್ರಾಣಿ. ಬೆಕ್ಕು ಇದು ನಾಲ್ಕು ಗಿಡ್ಡ ಕಾಲು ಮತ್ತು ಒಂದು ಸುಂದರವಾದ ಬಾಲವನ್ನು ಹೊಂದಿರುತ್ತದೆ. ಇದರ ಮೈಯಲ್ಲಿ ಮೃದುವಾದ ಮತ್ತು ರೇಷ್ಮೆಯಂತಹ ಕೂದಲುಗಳು ಆವರಿಸಿರುತ್ತದೆ. ಇದರ ಉಗುರು ಮತ್ತು ಹಲ್ಲುಗಳು ಚೂಪಾಗಿರುತ್ತದೆ. ಇದು ಪ್ರಕಾಶಮಾನವಾದ ಮತ್ತು ಬಲವಾದ ಬಣ್ಣದ ಕಣ್ಣುಗಳನ್ನು ಹೊಂದಿದೆ. ಇದು ಹುಲಿಯ ಹಾಗೆ ಕಾಣುವ ಸುಂದರ ಸಣ್ಣ ಪ್ರಾಣಿ. ನಮ್ಮ ಮನೆಗಳಲ್ಲಿ ಕಾಣುವ ಸುಂದರ ಪ್ರಾಣಿ.
ಮನೆಗಳಲ್ಲಿ, ಬೀದಿಗಳಲ್ಲಿ ವಾಸಿಸುವ ಈ ಪ್ರಾಣಿ ಬಗ್ಗೆ ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ವ್ಯವಹರಿಸಬೇಕು. ನನ್ನ ಬೆಕ್ಕಿನ ಹೆಸರು 'ಸ್ವೀಟಿ' ಅದು ನಮ್ಮ ಮನೆಯಲ್ಲಿದ್ದು ನಾಲ್ಕು ವರ್ಷ ಆಯ್ತು. ಅದು ನಮ್ಮ ಮನೆಯ ಮುದ್ದಿನ ಬೆಕ್ಕು ಹಾಗೂ ಇದು ನಮ್ಮ ಮನೆಯಲ್ಲಿ ಮಗುವಿನ ತರ ಇರುತ್ತದೆ. ಅದು ಮನೆಯಲ್ಲಿ ನಾಲ್ಕು ವರ್ಷಗಳಿಂದ ಇದ್ದು 10 ಮಕ್ಕಳಿಗೆ ಜನ್ಮ ನೀಡಿದೆ. ಅದು ನನ್ನ ತುಂಟ ಬೆಕ್ಕು.
- ವರ್ಷಿಣಿ ಎಂ.ನಾರಾಯಣ, 6ನೇ ತರಗತಿ, ಹೋಲಿ ರೊಸರಿ ಇಂಗ್ಲಿಷ್ ಮಾಧ್ಯಮ ಶಾಲೆ, ಕುಂದಾಪುರ
ಇದನ್ನೂ ಓದಿ: ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕರ್ನಾಟಕದ ಈ ಪ್ರಮುಖ ಮೃಗಾಲಯಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ
ಬಿಳಿ ಬಣ್ಣದ ಗುಂಡಮ್ಮ ನಮ್ಮ ರಾಣಿ
ನಮ್ಮ ಮನೆಯ ಪಕ್ಕದಲ್ಲಿ | ಒಂದು ನಾಯಿ ಇರುವುದು | ನಾನು ಬಂದ ಒಡನೆ ಅದು | ಕುಣಿದು ಓಡಿ ಬರುವುದು | ತಿಂಡಿ ಕೊಡು ಬೇಗ ಕೊಡು | ಬಂದೆ ನಾನು ಎಂದು ಕೇಳುತ | ಅತ್ತ ಇತ್ತ ಸುತ್ತಿ ಓಡಿ ತಿರುಗಿ | ಕೊಟ್ಟ ತಿಂಡಿ ತಿಂದು ನಲಿವುದು…
ನನಗೆ ಹಸು ಮತ್ತು ನಾಯಿ ಎಂದರೆ ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಅದೆರಡೂ ಇಲ್ಲ. ಆದರೆ ಪಕ್ಕದ ಮನೆ ನಾಯಿ ನಮ್ಮ ಮನೆಗೆ ಆಗಾಗ ಬರುವುದು. ಬಂದಾಗ ನಾನು ಅದಕ್ಕೆ ಬಿಸ್ಕಿಟ್, ತಿಂಡಿ ಕೊಡುತ್ತೇನೆ. ಅದು ಓಡಿ ಬಂದು ತಿಂದು ಖುಷಿಯಾಗಿ ಬಾಲ ಅಲ್ಲಾಡಿಸುತ್ತಾ ಹೋಗುತ್ತದೆ.
ನಮ್ಮ ಮನೆಗೆ ಬೇರೆ ಯಾರಾದರೂ ಬಂದರೆ ಅದು ಬೊಗಳುತ್ತಾ ಅವರನ್ನು ಅಟ್ಟಿಸುತ್ತದೆ. ಆದರೆ ನಮ್ಮ ಮನೆಯವರಿಗೆ ಅದು ಏನನ್ನೂ ಮಾಡುವುದಿಲ್ಲ. ಅದು ಮರಿ ಇಟ್ಟಾಗ ಬರುವುದು ಕಡಿಮೆ ಆದರೆ ಮರಿಗಳು ಸ್ವಲ್ಪ ದೊಡ್ಡದಾದಾಗ ಅವುಗಳನ್ನೂ ಕರೆದುಕೊಂಡು ಬರುವುದು. ಆಗ ನೋಡಲು ಇನ್ನೂ ಖುಷಿ.
ಅದರ ಹೆಸರು 'ರಾಣಿ'. ಈಗ ಅದರ ಗಂಡು ಮರಿಯೊಂದು ಅದರ ಜೊತೆಯಾಗಿದೆ. ಅದು ನಾನು ಬೆಳಗ್ಗೆ ಎದ್ದು ಹೊರಗೆ ಬರುವಾಗ ನಮ್ಮ ಮನೆಯಲ್ಲಿ ಹಾಜರ್. ಅದಕ್ಕೆ ಹೇಳಿದ್ದೆಲ್ಲ ಅರ್ಥ ಆಗುತ್ತದೆ. ಹೇಳಿದಂತೆ ಕೇಳುತ್ತದೆ. ತಿಂಡಿ ಕೊಟ್ಟರೆ ತಿಂದು ಹೋಗುತ್ತದೆ. ನಾನು ದಾರಿಯಲ್ಲಿ ಎಲ್ಲೇ ಸಿಕ್ಕಿದರೂ ಅದು ನನ್ನನ್ನು ಗುರುತು ಹಿಡಿಯುತ್ತದೆ. ನಮ್ಮ ಮನೆಯದು ಅಲ್ಲದೇ ಹೋದರೂ, ನಮ್ಮ ಮನೆಯದೇ ಎನ್ನುವ ಹಾಗೆ ಇರುವ ಬಿಳಿ ಬಣ್ಣದ ಗುಂಡಮ್ಮ ನಮ್ಮ ರಾಣಿ.
- ಮನಸ್ವಿ ಆರ್.ಕೆ., 7ನೇ ತರಗತಿ, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಬಸವನಗುಡಿ, ಬಂಟ್ವಾಳ ತಾಲ್ಲೂಕು
ಇದನ್ನೂ ಓದಿ: ಶೈಕ್ಷಣಿಕ ಪ್ರವಾಸ ಮಾರ್ಗದರ್ಶಿ: ನೀರಿರುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯುವಾಗ ಎಚ್ಚರ ವಹಿಸಬೇಕಾದ ಅಂಶಗಳಿವು
ನಾವು ತೋರಿದ ಪ್ರೀತಿಗೆ ಬೆಲೆಕೊಡುವ ಜೀವಿ
‘ಇಟ್ಟರೆ ಸೆಗಣಿಯಾದೆ, ತಟ್ಟಿದರೆ ಬೆರಣಿಯಾದೆ, ನೀನಾರಿಗಾದೆಯೋ ಎಲೆಮಾನವ’ ಎಂಬ ಪ್ರಾಜ್ಞರ ಮಾತಿನಂತೆ ನನ್ನ ಇಷ್ಟದ ಪಾಣಿ ದನದ ಬಗ್ಗೆ ನನ್ನ ಬರವಣಿಗೆ ಆರಂಭಿಸುತ್ತಿದ್ದೇನೆ. ನಾವು ತೋರಿದ ಪ್ರೀತಿಗೆ ಬೆಲೆಕೊಡುವ ಜೀವಿಯೆಂದರೆ ಅದುವೆ ಸಾಕುಪ್ರಾಣಿ. ಮನುಷ್ಯರಿಂದ ಸಾಕಲ್ಪಟ್ಟ ಆಥವಾ ಪಳಗಿಸಲ್ಪಟ್ಟ ಪ್ರಾಣಿಗಳೇ ಸಾಕುಪ್ರಾಣಿಗಳು. ಸಾಕುಪ್ರಾಣಿಗಳು ಮನುಷ್ಯನಿಗೆ ತುಂಬಾ ಉಪಯುಕ್ತವಾಗಿವೆ.
ನಮ್ಮ ನಿಯಮಿತ ದೈನಂದಿನ ಅಸ್ತಿತ್ವಕ್ಕೆ ಮತ್ತು ನಮ್ಮ ಕುಟುಂಬಗಳ ಕೆಲವು ಕೆಲಸಗಳಿಗೆ ಸಾಕುಪ್ರಾಣಿಗಳು ಅವಶ್ಯಕ. ಅವು ನಮ್ಮ ಉತ್ಸಾಹದಿಂದ ಹೆಚ್ಚು ಸ್ನೇಹಪರಗೊಳ್ಳುತ್ತವೆ. ನಮ್ಮ ಆತಂಕದ ಭಾವನೆಗಳನ್ನು ಕಡಿಮೆ ಮಾಡುತ್ತವೆ. ಮತ್ತು ನಮ್ಮ ಸಾಮಾಜಿಕ ಅಭ್ಯಾಸಗಳನ್ನು ವಿಸ್ತರಿಸುತ್ತವೆ. ಸಾಕುಪ್ರಾಣಿಗಳು ವ್ಯಕ್ತಿಯ ಸಹವಾಸಕ್ಕಾಗಿ ಅಥವಾ ಮನೆಯಲ್ಲಿ ಮನರಂಜನೆಗಾಗಿ ಇರುವ ಪ್ರಾಣಿಗಳಾಗಿವೆ. ಅವು ಮನುಷ್ಯರಿಗೆ ಸಹಚರರಾಗಿ ಮತ್ತು ತಮ್ಮ ಮಾಲೀಕರಿಗೆ ಬಹಳ ನಿಷ್ಠರಾಗಿರುತ್ತವೆ.
ಹಸುಗಳು ಹಾಲಿನ ಉತ್ಪಾದಕರು. ಹಾಲು ಪ್ರಪಂಚದಾದ್ಯಂತ ವ್ಯಾಪಕವಾಗಿ ಸೇವಿಸುವ ದ್ರವವಸ್ತು. ಹಸುವಿನ ಹಾಲನ್ನು ಹೆಚ್ಚು ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಮತ್ತು ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೇ, ನಾವು ಹಾಲಿನಿಂದ ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ಚೀಸ್‌ನಂತಹ ಅನೇಕ ಡೇರಿ ಉತ್ಪನ್ನಗಳನ್ನು ಪಡೆಯುತ್ತೇವೆ. ದನಗಳು ನಮಗೆ ಹಾಲು ನೀಡುವುದರ ಹೊರತಾಗಿ ಸಗಣಿಯನ್ನು ನೀಡುತ್ತವೆ. ಇದನ್ನು ಮಣ್ಣು ಮತ್ತು ಸಸ್ಯಗಳಿಗೆ ಉತ್ತಮ ಗೊಬ್ಬರ ಎಂದು ಪರಿಗಣಿಸಲಾಗಿದೆ. ಹಸುವಿನ ಸಗಣಿಯು ಇಂಧನ ಮತ್ತು ಜೈವಿಕ ಅನಿಲದ ಪ್ರಮುಖ ಭಾಗವಾಗಿದೆ. ಈ ನಿಟ್ಟಿನಲ್ಲಿ ಹಸುಗಳು ನಮಗೆ ತುಂಬಾ ಉಪಯುಕ್ತವಾಗಿವೆ.
ಹಿಂದೂ ಧರ್ಮದ ಪ್ರಕಾರ, ಗೋವುಗಳಿಗೆ ತಾಯಿ ಸ್ಥಾನವನ್ನು ನೀಡಲಾಗುತ್ತದೆ. ದೇಶದ ಅನೇಕ ಭಾಗಗಳಲ್ಲಿ ಅವುಗಳನ್ನು ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಹೀಗಾಗಿ ನಮ್ಮ ಜೀವನದಲ್ಲಿ ಗೋವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಾವು ಅವುಗಳನ್ನು ರಕ್ಷಿಸಬೇಕು.