ಶೈಕ್ಷಣಿಕ ಪ್ರವಾಸ ಮಾರ್ಗದರ್ಶಿ: 1ರಿಂದ 3ನೇ ತರಗತಿ ಮಕ್ಕಳನ್ನು ಶಾಲಾ ಪ್ರವಾಸಕ್ಕೆ ಕಳುಹಿಸುವ ಮುನ್ನ ಈ ಅಂಶಗಳು ಗಮನದಲ್ಲಿರಲಿ
ಡಿಸೆಂಬರ್ ಎಂದರೆ ಕ್ರಿಸ್‌ಮಸ್, ವರ್ಷಾಂತ್ಯ ಮಾತ್ರವಲ್ಲ ಶಾಲಾ ಮಕ್ಕಳು ಪ್ರವಾಸಕ್ಕೆ ಹೋಗುವ ಸಮಯವೂ ಹೌದು. ನಿಮ್ಮ ಪುಟ್ಟ ಕಂದಮ್ಮ 1 ರಿಂದ 3ನೇ ತರಗತಿ ಒಳಗೆ ಓದುತ್ತಿದ್ದು ನಿಮ್ಮ ಮಗು ಶಾಲಾ ಪ್ರವಾಸಕ್ಕೆ ಹೊರಟಿದ್ದರೆ ಮಗುವಿನ ಪ್ರವಾಸದ ಸಿದ್ಧತೆ ಹೇಗಿರಬೇಕು ಎಂಬ ವಿವರ ಇಲ್ಲಿದೆ ನೋಡಿ.
ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ ಶುರುವಾಗಿದೆ. ಸಾಮಾನ್ಯವಾಗಿ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ ಶಾಲಾ ಪ್ರವಾಸ ಶುರುವಾಗುತ್ತದೆ. ಈ ಸಮಯದಲ್ಲಿ ಮಕ್ಕಳು ಕೂಡ ಖುಷಿಯಿಂದ ಪ್ರವಾಸಕ್ಕೆ ಹೋಗುವ ಹುಮ್ಮಸ್ಸಿನಲ್ಲಿರುತ್ತಾರೆ. ತಮ್ಮ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವುದು ಮಕ್ಕಳಿಗೆ ಖುಷಿ ಕೊಡುತ್ತದೆ. ಚಿಕ್ಕ ಮಕ್ಕಳು ಕೂಡ ಶಾಲಾ ಪ್ರವಾಸಕ್ಕೆ ಹೋಗಲು ಹುಮ್ಮಸ್ಸು ತೋರುತ್ತಾರೆ.
ನಿಮ್ಮ 1 ರಿಂದ 3ನೇ ತರಗತಿ ನಡುವೆ ಓದುತ್ತಿರುವ ಪುಟ್ಟ ಕಂದಮ್ಮನಾದರೆ ನೀವು ಆ ಮಗುವನ್ನು ಪ್ರವಾಸಕ್ಕೆ ಕಳುಹಿಸುವ ಮುನ್ನ ಒಂದಿಷ್ಟು ತಯಾರಿ ಮಾಡಿಯೇ ಕಳುಹಿಸಬೇಕಾಗುತ್ತದೆ. ಸಾಮಾನ್ಯವಾಗಿ 6 ರಿಂದ 10 ವರ್ಷದ ಒಳಗಿನ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುವಾಗ ಪೋಷಕರಿಗೆ ಒಂದಿಷ್ಟು ಹೆಚ್ಚು ತಯಾರಿ ಮಾಡಬೇಕಾಗುತ್ತದೆ. ಪ್ರವಾಸಕ್ಕೆ ಹೋಗುವ ದಿನ ಮಗುವಿನ ಬಟ್ಟೆಯಿಂದ ಡಬ್ಬಿಗೆ ಹಾಕುವ ಸ್ನ್ಯಾಕ್ಸ್‌ವರೆಗೆ ಏನೆಲ್ಲಾ ತಯಾರಿ ಮಾಡಬೇಕು ನೋಡಿ.
ಶಾಲೆಯಲ್ಲಿ ಮಗುವಿನ ಪ್ರವಾಸದ ಬಗ್ಗೆ ಹೇಳಿದಾಗ ನಿಮಗೆ ಸ್ಥಳ ಹಾಗೂ ದಿನಾಂಕವನ್ನೂ ಹೇಳಿರುತ್ತಾರೆ. ಹಾಗಾಗಿ ಮೊದಲೇ ಮಗು ಪ್ರವಾಸಕ್ಕೆ ಹೋಗುವ ತಾಣದ ಬಗ್ಗೆ ಕೇಳಿ ಅಥವಾ ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳಿ. ಆಗ ನಿಮಗೆ ಮಗುವಿಗೆ ಎಂತದ ಬಟ್ಟೆ ಹಾಕಬೇಕು, ಆಹಾರ ಎಂಥದ್ದು ನೀಡಬೇಕು ಎಂಬಿತ್ಯಾದಿ ಎಲ್ಲವನ್ನೂ ಗಮನಿಸಲು ಸಾಧ್ಯವಾಗುತ್ತದೆ.
ಬಟ್ಟೆ ಹೀಗಿರಲಿ
ಸಾಮಾನ್ಯವಾಗಿ ಡಿಸೆಂಬರ್ ಎಂದರೆ ಚಳಿ ಇರುತ್ತದೆ. ಮಗುವನ್ನು ಪ್ರವಾಸಕ್ಕೆ ಕಳುಹಿಸುವಾಗ ಚಳಿಗೆ ಹೊಂದುವ ಬಟ್ಟೆಯನ್ನು ತೊಡಿಸಿ. ಜಾಕೆಟ್ ಅಥವಾ ಸ್ವೆಟರ್ ತೊಡಿಸಿ. ಕಾಲು ಬೆಚ್ಚಗಿರುವಂತೆ ಸಾಕ್ಸ್ ಹಾಕಲು ಮರೆಯದಿರಿ. ಮಗುವಿಗೆ ಬೇಗ ಶೀತವಾಗುವ ಕಾರಣ ಕಿವಿ ಮುಚ್ಚುವಂತೆ ಟೋಪಿ ತೊಡಿಸಿ. ವಿಪರೀತ ಚಳಿ ಇರುವ ಪ್ರದೇಶಕ್ಕೆ ಮಗು ಪ್ರವಾಸಕ್ಕೆ ಹೋಗುವುದಾದರೆ ಕೈಗವಸು ಕೂಡ ತೊಡಿಸಿ. ಮಗುವಿನ ಬ್ಯಾಗ್‌ನಲ್ಲಿ ಇನ್ನೊಂದು ಜೊತೆ ಬಟ್ಟೆ ಇರಿಸಲು ಮರೆಯಬೇಡಿ.
ಸ್ನ್ಯಾಕ್ಸ್ ಏನಿದ್ದರೆ ಉತ್ತಮ
ಪ್ರವಾಸಕ್ಕೆ ಹೋಗುವಾಗ ಮಕ್ಕಳಿಗೆ ಡಬ್ಬಿಯಲ್ಲಿ ಸ್ನ್ಯಾಕ್ಸ್ ಹಾಕಿ ಕಳುಹಿಸುವುದು ಉತ್ತಮ. ಆದರೆ ಯಾವುದೇ ಕಾರಣಕ್ಕೂ ಎಣ್ಣೆ ಪದಾರ್ಥಗಳನ್ನು ಹಾಕಬೇಡಿ. ಹಣ್ಣು, ಬ್ರೆಡ್ ಜಾಮ್, ಚಪಾತಿ ರೋಲ್‌ನಂತಹ ತಿನಿಸುಗಳನ್ನು ಹಾಕಿ. ಸಿಹಿ ಪದಾರ್ಥಗಳನ್ನು ಕೂಡ ಹಾಕದೇ ಇರುವುದು ಉತ್ತಮ. ಎಣ್ಣೆ ಪದಾರ್ಥಗಳನ್ನು ತಿಂದರೆ ವಾಂತಿ ಬರುವ ಸಾಧ್ಯತೆಯೂ ಹೆಚ್ಚು.
ವಾಂತಿ ಸಮಸ್ಯೆ ನಿರ್ವಹಿಸುವುದು ಹೇಗೆ?
ಪ್ರವಾಸ ಮಕ್ಕಳು ಬಸ್ ಅಥವಾ ಶಾಲಾ ವಾಹನದಲ್ಲಿ ಹೋಗುತ್ತಾರೆ. ಸಾಮಾನ್ಯವಾಗಿ ಮನೆಯಿಂದ ಶಾಲೆಗೆ ಓಡಾಡುವ ಮಕ್ಕಳಿಗೆ ದೂರ ಪ್ರಯಾಣ ಎಂದಾಗ ವಾಂತಿ ಬರಬಹುದು. ಅದಕ್ಕಾಗಿ ಮಗುವಿಗೆ ಸಿದ್ಧತೆ ಮಾಡಿ ಕಳುಹಿಸುವುದು ಉತ್ತಮ. ವಾಂತಿ ಬರುವಂತೆ ಅನ್ನಿಸಿದರೆ ಕಿಟಕಿ ಪಕ್ಕ ಕೂರುವಂತೆ ಸಲಹೆ ನೀಡಿ. ಮಗುವಿನ ಬ್ಯಾಗ್‌ನಲ್ಲಿ ಪ್ಲಾಸ್ಟಿಕ್ ಕವರ್‌ವೊಂದನ್ನು ಇರಿಸಿ. ವಾಂತಿ ಬರುವಂತೆ ಅನ್ನಿಸಿದರೆ ಟೀಚರ್‌ಗೆ ಹೇಳಬೇಕು ಎಂದು ತಿಳಿಸಿ. ಕವರ್‌ನಲ್ಲಿ ವಾಂತಿ ಮಾಡುವಂತೆ ತಿಳಿಸಿ. ವಾಂತಿ ಬಂದಂತೆ ಅನ್ನಿಸಿದ ತಕ್ಷಣ ಪಕ್ಕದಲ್ಲಿ ಕುಳಿತ ಗೆಳೆಯ ಅಥವಾ ಗೆಳೆತಿಗೆ ಹೇಳುವಂತೆ ತಿಳಿಸಿ.
ಮಕ್ಕಳಿಗೆ ಈ ಎಚ್ಚರಿಕೆ ಹೇಳಲು ಮರೆಯದಿರಿ
ಪುಟ್ಟ ಕಂದಮ್ಮನನ್ನು ಪ್ರವಾಸಕ್ಕೆ ಕಳುಹಿಸುವುದು ಪೋಷಕರಿಗೆ ಆತಂಕಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಗುವಿಗೆ ಸಾಕಷ್ಟು ಜಾಗೃತೆ ಹೇಳಿರುತ್ತಾರೆ. ಆದರೂ ಈ ಎಚ್ಚರಿಕೆಗಳನ್ನೂ ನೀಡಲು ಮರೆಯದಿರಿ.
- ಬಸ್ ಹತ್ತುವಾಗ ಇಳಿಯುವಾಗ ಹುಷಾರಾಗಿ ಇರಬೇಕು. ಟೀಚರ್ ಇಳಿಸಿದ ಮೇಲಷ್ಟೇ ಇಳಿಯಬೇಕು ಎಂದು ಹೇಳಿ
- ಕಿಟಿಕಿಯಲ್ಲಿ ತಲೆ, ಕೈ ಹೊರಗಡೆ ಹಾಕಬಾರದು ಎಂದು ಹೇಳಿ
- ಪ್ರವಾಸದ ಸ್ಥಳದಲ್ಲಿ ಹಾಗೂ ಬಸ್‌ನಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನಬಾರದು ಎಂದು ಬುದ್ಧಿಮಾತು ಹೇಳಿ.
- ಪ್ರವಾಸದ ಸ್ಥಳದಲ್ಲಿ ನೀರಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿ.
- ರಸ್ತೆಯಲ್ಲಿ ಓಡಾಡಬಾರದು, ಟೀಚರ್ ಜೊತೆಗೆ ಇರಬೇಕು ಎಂದು ಬುದ್ಧಿಮಾತು ಹೇಳಿ.
- ಪ್ರವಾಸದ ಸ್ಥಳದಲ್ಲಿ ತರಗತಿ ಮಕ್ಕಳ ಗುಂಪನ್ನ ಬಿಟ್ಟು ಎಲ್ಲಿಯೂ ಹೋಗಬಾರದು ಎಂದು ಹೇಳಿ.
- ಬಸ್‌ನಲ್ಲಿ, ಪ್ರವಾಸದ ಸ್ಥಳದಲ್ಲಿ ತರಲೆ ಮಾಡಬಾರದು ಎಂದು ಹೇಳಿ.
- ಏನಾದರೂ ತೊಂದರೆ ಆಗುತ್ತಿದೆ ಅನ್ನಿಸಿದರೆ ಟೀಚರ್ ಬಳಿ ಹೇಳಿ ಅಪ್ಪ ಅಥವಾ ಅಮ್ಮನಿಗೆ ಫೋನ್ ಮಾಡಬೇಕು ಎಂದು ಹೇಳಿ.
- ಡಬ್ಬಿಯಲ್ಲಿ ಹಾಕಿಕೊಟ್ಟ ತಿಂಡಿಯನ್ನ ಮಾತ್ರ ತಿನ್ನಬೇಕು ಹಾಗೂ ಬಾಟಲಿಯಲ್ಲಿ ಹಾಕಿದ ನೀರನ್ನಷ್ಟೇ ಕುಡಿಯಬೇಕು ಅಂತ ಹೇಳಿ.
- ಮಗುವಿನ ಬ್ಯಾಗ್‌ನಲ್ಲಿ ಕರ್ಚೀಫ್, ನೀರಿನ ಬಾಟಲಿ, ಟಿಶ್ಯೂ ಪೇಪರ್ ಮರೆಯದೇ ಹಾಕಿರಿ.
ಇದನ್ನೂ ಓದಿ: ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ, ಕಡಿಮೆ ಬಜೆಟ್‌ನಲ್ಲಿ ಹೋಗಿ ಬರಬಹುದಾದ ದೇಶಗಳಿವು, ಈ ಡಿಸೆಂಬರ್‌ನಲ್ಲಿ ಪ್ಲಾನ್ ಮಾಡಿ