ಶೈಕ್ಷಣಿಕ ಪ್ರವಾಸ ಮಾರ್ಗದರ್ಶಿ: ನೀರಿರುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯುವಾಗ ಎಚ್ಚರ ವಹಿಸಬೇಕಾದ ಅಂಶಗಳಿವು
ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸ ಶುರುವಾಗಿದೆ. ಪ್ರವಾಸಕ್ಕೆ ಹೋಗುವುದು ಎಂದರೆ ಮಕ್ಕಳಿಗೆ ಮಾತ್ರವಲ್ಲ, ಶಿಕ್ಷಕರಿಗೂ ಖುಷಿ. ಆದರೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಕೊಂಚ ಸವಾಲು ಎನ್ನುವುದು ಸುಳ್ಳಲ್ಲ. ಅದರಲ್ಲೂ ನೀರಿರುವ ಪ್ರದೇಶಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತಪ್ಪದೇ ಕೆಲವೊಂದು ಎಚ್ಚರ ವಹಿಸಬೇಕಾಗುತ್ತದೆ.
ಡಿಸೆಂಬರ್ ತಿಂಗಳು ಎಂದರೆ ಶಾಲಾ ಪ್ರವಾಸದ ಸಮಯ. ಮಕ್ಕಳು ಪ್ರವಾಸಕ್ಕೆ ಹೋಗಬೇಕು ಎಂದುಕೊಂಡು ಜೂನ್ ತಿಂಗಳಿನಿಂದಲೇ ಹಣ ಕೂಡಿಸಿ ಇಡಲು ಶುರು ಮಾಡುತ್ತಾರೆ. ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುವುದು ಪೋಷಕರಿಗೂ ಒಂಥರಾ ಖುಷಿ. ಮಕ್ಕಳೊಂದಿಗೆ ಪ್ರವಾಸ ಮಾಡುವುದು ಶಿಕ್ಷಕರಿಗೂ ಖುಷಿ. ಆದರೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ನಿಜಕ್ಕೂ ಸುಲಭದ ಮಾತಲ್ಲ.
ಅದರಲ್ಲೂ ಜಲಪಾತ, ನದಿ, ಸಮುದ್ರದಂತಹ ನೀರಿರುವ ಪ್ರದೇಶಗಳಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಶಿಕ್ಷಕರು ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಕೊಂಚ ಎಚ್ಚರ ತಪ್ಪಿದರೂ ಮಕ್ಕಳ ಪ್ರಾಣಕ್ಕೆ ಕುತ್ತು ಬರಬಹುದು. ಮಕ್ಕಳು ನೀರು ಎಂದಾಕ್ಷಣ ಹೆಚ್ಚು ಉತ್ಸುಕರಾಗುತ್ತಾರೆ. ನೀರಾಟ ಎಂದರೆ ಮಕ್ಕಳಿಗೆ ಬಹಳ. ಆದರೆ ನೀರಿರುವ ಪ್ರದೇಶಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ಮುನ್ನ ಈ ಎಚ್ಚರಿಕೆ ಅಂಶಗಳನ್ನು ತಪ್ಪದೇ ಪರಿಗಣಿಸಬೇಕು.
ಮಕ್ಕಳು ನೀರಿಗೆ ಇಳಿಯದಂತೆ ನೋಡಿಕೊಳ್ಳಿ
ಮಕ್ಕಳು ನೀರು ಎಂದಾಕ್ಷಣ ಜಿಗಿಯಲು ಶುರು ಮಾಡುತ್ತಾರೆ. ಆ ಕಾರಣಕ್ಕೆ ನೀರಿರುವ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಮೊದಲೇ ಮಕ್ಕಳಿಗೆ ನೀರಿಗೆ ಇಳಿಯದಂತೆ ಸೂಚನೆ ಕೊಡಿ. ದೂರದಿಂದ ನೋಡಿ ಬರುವಂತೆ ಸಲಹೆ ನೀಡಿ. ಮಕ್ಕಳಿಂದ ಮುಂದೆ ಶಿಕ್ಷಕರು ಇರಬೇಕು. ಯಾವ ಮಗು ಕೂಡ ಕಣ್ತಪ್ಪಿನಿಂದ ನೀರಿನ ಬಳಿಗೆ ಹೋಗದಂತೆ ನೋಡಿಕೊಳ್ಳಿ. ಒಂದು ವೇಳೆ ಮಕ್ಕಳು ನೀರಿಗೆ ಇಳಿಯಲೇಬೇಕು ಎಂದು ಹಟ ಮಾಡಿದರೆ ಆಳವಿಲ್ಲದ ಜಾಗ ಗುರುತಿಸಿ ಅಲ್ಲಿ ಮಕ್ಕಳನ್ನು ಆಟ ಆಡಲು ಬಿಡಿ. ಆಗಲೂ ಮಕ್ಕಳ ಜೊತೆಗೆ ನೀವು ಇರಿ.
ಕಾಲು ಜಾರಬಹುದು ಎಚ್ಚರ
ನದಿ, ಜಲಪಾತದಂತಹ ಜಾಗಗಳಲ್ಲಿ ಮಣ್ಣು, ಕಲ್ಲುಬಂಡೆಗಳು ಪಾಚಿ ಕಟ್ಟಿರುತ್ತವೆ. ನೋಡಲು ಸಮತಟ್ಟಾಗಿ ಕಂಡರೂ ಯಾವ ಜಾಗ ಜಾರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಬಂಡೆಗಳ ಮೇಲೆ ಜಲಪಾತ ಅಥವಾ ನದಿಯ ತುದಿಗೆ ಹೋಗದಂತೆ ಎಚ್ಚತ ವಹಿಸಿ.
ಸಮುದ್ರ ತೀರದಲ್ಲಿ ಹೀಗಿರಲಿ ಎಚ್ಚರ
ಸಮುದ್ರ ತೀರಗಳು ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತದೆ. ಸಮುದ್ರ ತೀರದಲ್ಲಿ ಆಟವಾಡುವುದು ಮಕ್ಕಳ ಕನಸೂ ಆಗಿರಬಹುದು. ಆದರೆ ಸಮುದ್ರ ತೆರೆಗಳು ಯಾವಾಗ ಏರುತ್ತವೆ, ಯಾವಾಗ ಇಳಿಯುತ್ತೆ ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ಚಿಕ್ಕ ಅಲೆಯನ್ನು ತಡೆಯುವ ಶಕ್ತಿ ಇರುವುದಿಲ್ಲ. ಆ ಕಾರಣಕ್ಕೆ ಯಾವುದೇ ಕಾರಣಕ್ಕೂ ಮಕ್ಕಳು ಸಮುದ್ರದ ನೀರಿಗೆ ಇಳಿಯದಂತೆ ನೋಡಿಕೊಳ್ಳಿ. ಅವರು ತೀರದಲ್ಲೇ ಆಡುವಂತೆ ಹೇಳಿ.
ನದಿಗಳಲ್ಲಿ ಹೀಗಿರಲಿ
ನದಿಗಳು ಹೆಚ್ಚು ಅಪಾಯ ಎಂದಲ್ಲ ಅಂದರೂ ನದಿಯು ಕೂಡ ಆಳವಾಗಿರುತ್ತದೆ. ಕೆಲವೊಮ್ಮೆ ನದಿಗಳಲ್ಲಿ ವಿಷಕಾರಿ ಪ್ರಾಣಿಗಳು ಕೂಡ ಇರಬಹುದು. ಇದರಿಂದ ಮಕ್ಕಳಿಗೆ ಹಾನಿಯಾಗಬಹುದು. ಕೆಲವೊಮ್ಮೆ ವಿಷಕಾರಿ ಪ್ರಾಣಿಗಳಿಂದ ಮಕ್ಕಳ ಪ್ರಾಣಕ್ಕೂ ತೊಂದರೆ ಉಂಟಾಗಬಹುದು.
ಜಲಪಾತವನ್ನು ದೂರದಿಂದಲೇ ತೋರಿಸಿ
ಜಲಪಾತಗಳನ್ನು ಕಂಡಾಗ ಮಕ್ಕಳಿಗೆ ಅದರ ಬಳಿಗೆ ಹೋಗಿ ಆಟವಾಡಬೇಕು ಎಂದು ಅನ್ನಿಸುವುದು ಸಹಜ. ಆದರೆ ಜಲಪಾತದ ನೀರಿನ ಅಬ್ಬರ ಜೋರಾಗಿರುತ್ತದೆ. ಮಾತ್ರವಲ್ಲ ನೀರಿನ ಸೆಳೆತವು ಕೆಲವು ಕಡೆ ಹೆಚ್ಚಿರುತ್ತದೆ. ಆ ಕಾರಣಕ್ಕೆ ದೂರದಿಂದಲೇ ತೋರಿಸಿ ಖುಷಿಪಡಿಸಿ.
ವಾಟರ್ ಪಾರ್ಕ್‌ಗಳು
ವಾಟರ್ ಪಾರ್ಕ್‌ಗಳು ಕೂಡ ಮಕ್ಕಳನ್ನು ಸೆಳೆಯುವ ಇನ್ನೊಂದು ಜಾಗ. ಆದರೆ ವಾಟರ್ ಪಾರ್ಕ್‌ಗಳಲ್ಲಿ ಕೂಡ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕು. ಕೆಲವೊಂದು ಆಟಗಳು ಮಕ್ಕಳಿಗೆ ಅಪಾಯವಾಗಬಹುದು. ಅಲ್ಲಿನ ನೀರಿನ ಸೆಳೆತವು ಮಕ್ಕಳಿಗೆ ಉಸಿರುಗಟ್ಟಿಸಬಹುದು. ಇನ್ನೂ ಕೆಲವೊಮ್ಮೆ ಮಕ್ಕಳು ಕಾಲು ಜಾರಿ ಬಿದ್ದು ಅನಾಹುತಗಳಾಗಬಹುದು. ಹಾಗಾಗಿ ಇಂತಹ ನೀರಿರುವ ಜಾಗದಲ್ಲೂ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾಗುತ್ತದೆ.
ನೀರಿರುವ ಜಾಗದಲ್ಲಿ ಈ ಮುನ್ನೆಚ್ಚರಿಕೆಗಳೂ ಇರಲಿ
- ಚಪ್ಪಲಿ ಜಾರದಂತೆ ನೋಡಿಕೊಳ್ಳಿ. ಪ್ರವಾಸಕ್ಕೆ ಬರುವಾಗಲೇ ಸ್ಲಿಪರ್ ಧರಿಸದಂತೆ ಹೇಳಿ.
- ನೀರಿರುವ ಜಾಗಕ್ಕೆ ಪ್ರವಾಸಕ್ಕೆ ಹೋಗುವುದಾದರೆ ಒಂದು ಟವಲ್ ಅನ್ನು ಬ್ಯಾಗ್‌ನಲ್ಲಿ ಇರಿಸಿರುವಂತೆ ಪೋಷಕರಿಗೆ ಹೇಳಿ ಇಡಿ.
- ವಾಟರ್‌ಪಾರ್ಕ್‌ನಲ್ಲಿ ಆಡುವಾಗ ಮಕ್ಕಳ ಮೂಗು, ಕಿವಿಗೆ ನೀರು ಹೋಗದಂತೆ ಎಚ್ಚರ ವಹಿಸಿ
- ದೋಣಿ, ತೆಪ್ಪದಲ್ಲಿ ಹೋಗುವುದಿದ್ದರೆ ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಿ.
- ನದಿ, ಸಮುದ್ರದ ಬಳಿಗೆ ಹೋದರು ಮಕ್ಕಳು ಅದರ ನೀರು ಕುಡಿಯದಂತೆ ನೋಡಿಕೊಳ್ಳಿ.
- ನೀರಿನಲ್ಲಿ ಆಟವಾಡಿದ ನಂತರ ಧರಿಸಿಲು ಮಕ್ಕಳಿಗೆ ಇನ್ನೊಂದು ಜೊತೆ ಬಟ್ಟೆ ಬ್ಯಾಗ್‌ನಲ್ಲಿ ಇರಿಸುವಂತೆ ಪೋಷಕರಿಗೆ ತಿಳಿಸಿ
- ಸ್ಕೂಬ್ ಡೈವಿಂಗ್‌ನಂತಹ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಕೊಂಡಿದ್ದರೆ ಸಾಕಷ್ಟು ಎಚ್ಚರ ವಹಿಸಿ.
ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆಯ ಮಜಾ; ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್
ವಿಭಾಗ