logo
ಕನ್ನಡ ಸುದ್ದಿ  /  ಜೀವನಶೈಲಿ  /  ಪಾತ್ರೆಗಳನ್ನು ತೊಳೆಯುವುದರಿಂದ ತಲೆಗೂದಲಿನ ಬಣ್ಣ ತಯಾರಿವರೆಗೆ: ನೀವು ತೆಂಗಿನ ಸಿಪ್ಪೆಯ ಪ್ರಯೋಜನ ತಿಳಿದ್ರೆ, ಖಂಡಿತಾ ಬಿಸಾಡಲ್ಲ

ಪಾತ್ರೆಗಳನ್ನು ತೊಳೆಯುವುದರಿಂದ ತಲೆಗೂದಲಿನ ಬಣ್ಣ ತಯಾರಿವರೆಗೆ: ನೀವು ತೆಂಗಿನ ಸಿಪ್ಪೆಯ ಪ್ರಯೋಜನ ತಿಳಿದ್ರೆ, ಖಂಡಿತಾ ಬಿಸಾಡಲ್ಲ

Priyanka Gowda HT Kannada

Oct 11, 2024 01:44 PM IST

google News

ತೆಂಗಿನಕಾಯಿ ನಾರಿನ ಪ್ರಯೋಜನ ತಿಳಿದ್ರೆ, ನೀವು ಕೂಡ ಅದರ ಸಿಪ್ಪೆಯನ್ನು ಎಂದಿಗೂ ಎಸೆಯಲಾರಿರಿ.

    • ಎಳನೀರು, ತೆಂಗಿನಕಾಯಿ, ತೆಂಗಿನೆಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ, ಅದರ ಸಿಪ್ಪೆ ಕೂಡ ಅಷ್ಟೇ ಉಪಯುಕ್ತವಾಗಿದೆ. ಆದರೆ, ಬಹುತೇಕರು ಇದನ್ನು ನಿಷ್ಪ್ರಯೋಜಕ ಎಂದು ಎಸೆಯುತ್ತಾರೆ. ತೆಂಗಿನಕಾಯಿ ಸಿಪ್ಪೆಗಳ ಪ್ರಯೋಜನ ತಿಳಿದ್ರೆ, ಖಂಡಿತಾ ಇನ್ಮುಂದೆ ನೀವು ಬಿಸಾಡಲ್ಲ.
ತೆಂಗಿನಕಾಯಿ ನಾರಿನ ಪ್ರಯೋಜನ ತಿಳಿದ್ರೆ, ನೀವು ಕೂಡ ಅದರ ಸಿಪ್ಪೆಯನ್ನು ಎಂದಿಗೂ ಎಸೆಯಲಾರಿರಿ.
ತೆಂಗಿನಕಾಯಿ ನಾರಿನ ಪ್ರಯೋಜನ ತಿಳಿದ್ರೆ, ನೀವು ಕೂಡ ಅದರ ಸಿಪ್ಪೆಯನ್ನು ಎಂದಿಗೂ ಎಸೆಯಲಾರಿರಿ.

ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡ ತೆಂಗಿನಮರವು ಇಂದು ನಮ್ಮದೆಯೇನೋ ಎಂಬಷ್ಟರ ಮಟ್ಟಿಗೆ ಭಾರತೀಯರು ಇದನ್ನು ಬಳಸುತ್ತಿದ್ದೇವೆ. ದೇವರ ಪೂಜೆಯಿಂದ ಹಿಡಿದು, ಅಡುಗೆ ಮನೆಯಲ್ಲಿ ತಯಾರಾಗುವ ಖಾದ್ಯಗಳವರೆಗೆ ತೆಂಗಿನಕಾಯಿ ಬೇಕೆ ಬೇಕು. ತೆಂಗಿನ ಮರವು ಅತ್ಯಂತ ಪವಿತ್ರವಾಗಿದ್ದು, ಇದನ್ನು ಕಲ್ಪವೃಕ್ಷ ಅಂತಲೇ ಕರೆಯಲಾಗುತ್ತದೆ. ತೆಂಗಿನಕಾಯಿಯಿಂದ ಸಿಹಿ ಖಾದ್ಯ, ಚಟ್ನಿ ಸೇರಿದಂತೆ ಹಲವಾರು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಎಳನೀರು, ತೆಂಗಿನಕಾಯಿ, ತೆಂಗಿನೆಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ, ಅದರ ಸಿಪ್ಪೆ ಕೂಡ ಅಷ್ಟೇ ಉಪಯುಕ್ತವಾಗಿದೆ. ಆದರೆ, ಬಹುತೇಕರು ಇದನ್ನು ನಿಷ್ಪ್ರಯೋಜಕ ಎಂದು ಎಸೆಯುತ್ತಾರೆ. ತೆಂಗಿನಕಾಯಿ ಸಿಪ್ಪೆಗಳಿಗೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉಪಯುಕ್ತ ವಿಚಾರಗಳ ಬಗ್ಗೆ ತಿಳಿಸಲಾಗಿದೆ. ಇದರ ಪ್ರಯೋಜನ ತಿಳಿದ್ರೆ, ನೀವು ಕೂಡ ಅದರ ಸಿಪ್ಪೆಯನ್ನು ಎಂದಿಗೂ ಎಸೆಯಲಾರಿರಿ.

ತೆಂಗಿನಕಾಯಿ ಸಿಪ್ಪೆಯ ಪ್ರಯೋಜನಗಳು

ಪಾತ್ರೆಗಳನ್ನು ತೊಳೆಯಲು ಬಳಸಿ: ತೆಂಗಿನ ಸಿಪ್ಪೆಯನ್ನು ಪಾತ್ರೆಗಳನ್ನು ತೊಳೆಯಲು ಸ್ಕ್ರಬ್ಬರ್‌ಗಳಾಗಿ ಬಳಸಬಹುದು. ಹಳ್ಳಿಗಳಲ್ಲಿ ಈಗಲೂ ಬಹಳಷ್ಟು ಮಂದಿ ಈ ತೆಂಗಿನ ನಾರನ್ನು ಪಾತ್ರೆ ತೊಳೆಯಲು ಬಳಸುತ್ತಾರೆ. ಅಂಗಡಿಗಳಲ್ಲಿ ಖರೀದಿಸಿದ ಸ್ಕ್ರಬರ್ ಅನ್ನು ಒಮ್ಮೆ ಬಳಕೆ ಮಾಡಿದ ನಂತರ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲದಿದ್ದಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಆದರೆ, ತೆಂಗಿನ ಸಿಪ್ಪೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇದರಿಂದ ಅಡುಗೆ ಪಾತ್ರೆಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಬಹುದು. ಪಾತ್ರೆಯಲ್ಲಿರುವ ಹಳದಿ ಬಣ್ಣವೆಲ್ಲಾ ಮಾಯವಾಗಿ ಪಾತ್ರೆಗಳು ಹೊಸದರಂತೆ ಹೊಳೆಯುತ್ತದೆ. ಪಾತ್ರೆಗಳು ಕಪ್ಪಾಗಿದ್ದರೆ, ಅಥವಾ ಆಹಾರ ಸುಟ್ಟು ಕಪ್ಪಾಗಿದ್ದರೂ, ತೆಂಗಿನ ಸಿಪ್ಪೆಯಿಂದ ಸುಲಭವಾಗಿ ಉಜ್ಜಿ ಸ್ವಚ್ಛಗೊಳಿಸಬಹುದು.

ಕಿಚನ್ ಟೈಲ್ಸ್ ಸ್ವಚ್ಛಗೊಳಿಸಲು ಪ್ರಯೋಜನಕಾರಿ: ಅಡುಗೆ ಮನೆಯ ಟೈಲ್ಸ್‌ಗಳಲ್ಲಿರುವ ಕೊಳೆಯನ್ನು ತೆಗೆಯಲು ತೆಂಗಿನ ಸಿಪ್ಪೆಯನ್ನು ಬಳಸಬಹುದು. ಕಿಚನ್ ಸ್ಲ್ಯಾಬ್ ಸ್ವಚ್ಛಗೊಳಿಸಲು ಕೂಡ ಪರಿಣಾಮಕಾರಿಯಾಗಿದೆ. ಕಿಚನ್ ಸ್ಲ್ಯಾಬ್ ಮೇಲೆ ಸ್ವಲ್ಪ ನೀರು ಹಾಗೂ ಡಿಶ್ವಾಶ್ ದ್ರವವನ್ನು ಸುರಿದು, ತೆಂಗಿನ ಸಿಪ್ಪೆಯ ನಾರುಗಳನ್ನು ಉಜ್ಜಿ, ಸ್ವಚ್ಛಗೊಳಿಸಬಹುದು. ಅಡುಗೆ ಮನೆಯ ಸ್ಲ್ಯಾಬ್‍ನಲ್ಲಿರುವ ಎಣ್ಣೆ ಮತ್ತು ಮಸಾಲೆಗಳ ಮೊಂಡು ಕಲೆಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ.

ಸಿಂಕ್ ಸ್ವಚ್ಛಗೊಳಿಸಲು ಪರಿಣಾಮಕಾರಿ: ಅಡುಗೆ ಮನೆಯ ಸಿಂಕ್ ಯಾವಾಗಲೂ ತೇವಾಂಶವಿರುವುದರಿಂದ ಇದರಲ್ಲಿರುವ ಕೊಳಕು ಕಲೆಗಳನ್ನು ಸುಲಭದಲ್ಲಿ ತೆಗೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ತೆಂಗಿನ ಸಿಪ್ಪೆಯನ್ನು ಬಳಸಿ ಸಿಂಕ್ ಅನ್ನು ತ್ವರಿತವಾಗಿ ಸ್ವಚ್ಛಗೊಳಿಸಬಹುದು. ಸಿಂಕ್‌ಗೆ ಡಿಶ್ವಾಶ್ ದ್ರವವನ್ನು ಸುರಿದು ತೆಂಗಿನ ನಾರಿನಿಂದ ಉಜ್ಜಿ ತೊಳೆಯಬೇಕು.

ಗೊಬ್ಬರ ತಯಾರಿಸಬಹುದು: ತೆಂಗಿನ ಸಿಪ್ಪೆ ಅಥವಾ ನಾರಿನಿಂದ ಗೊಬ್ಬರವನ್ನು ತಯಾರಿಸಬಹುದು. ಇದನ್ನು ಕೈ ತೋಟಕ್ಕೆ ಬಳಸಬಹುದು. ಈ ಗೊಬ್ಬರ ತಯಾರಿಸಲು ಮೊದಲಿಗೆ, ತೆಂಗಿನ ಸಿಪ್ಪೆಯನ್ನು ಸಂಗ್ರಹಿಸಿ 3 ರಿಂದ 4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ. ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಒಂದು ಪಾತ್ರೆಗೆ ಈ ಪುಡಿಯನ್ನು ಹಾಕಿ ನೀರು ಸೇರಿಸಿ 2 ರಿಂದ 3 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ಚೆನ್ನಾಗಿ ಹಿಸುಕಿ, ಕೈ ತೋಟಕ್ಕೆ ಗೊಬ್ಬರವಾಗಿ ಬಳಸಬಹುದು.

ತಲೆಗೂದಲಿನ ಬಣ್ಣವನ್ನೂ ತಯಾರಿಸಬಹುದು: ತಲೆಗೂದಲಿಗೆ ಬಣ್ಣ ಹಾಕಲು ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ದುಬಾರಿ ಹಣವನ್ನೂ ವ್ಯಯಿಸುತ್ತಾರೆ. ಕೂದಲಿಗೆ ಈ ತೆಂಗಿನ ನಾರಿನ ಸಹಾಯದಿಂದ ಬಣ್ಣವನ್ನೂ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಮೊದಲಿಗೆ ತೆಂಗಿನ ನಾರನ್ನು ಬಾಣಲೆಯಲ್ಲಿ ಹುರಿಯಬೇಕು. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ, ಸಾಸಿವೆ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಬೇಕು. ಇಷ್ಟು ಮಾಡಿದರೆ ಸಾಕು ನೈಸರ್ಗಿಕವಾಗಿ ಬಣ್ಣ ತಯಾರಾಗುತ್ತದೆ. ಇದನ್ನು ತಲೆಗೂದಲಿಗೆ ಹಚ್ಚಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ