logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಂಕಣ: ನಿಮಗೆ ಅತಿಯಾದ ಗಾಬರಿ, ಆತಂಕವಾದಾಗ ಏನು ಮಾಡಬಹುದು? 5 ಪರಿಹಾರಗಳನ್ನು ತಿಳಿಯಿರಿ- ಭವ್ಯಾ ವಿಶ್ವನಾಥ್‌ ಮನದ ಮಾತು

ಅಂಕಣ: ನಿಮಗೆ ಅತಿಯಾದ ಗಾಬರಿ, ಆತಂಕವಾದಾಗ ಏನು ಮಾಡಬಹುದು? 5 ಪರಿಹಾರಗಳನ್ನು ತಿಳಿಯಿರಿ- ಭವ್ಯಾ ವಿಶ್ವನಾಥ್‌ ಮನದ ಮಾತು

Praveen Chandra B HT Kannada

Oct 26, 2024 11:30 AM IST

google News

ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣದಲ್ಲಿ ಭಯ ಮತ್ತು ಆತಂಕಕ್ಕೆ ಇರುವ ಕಾರಣಗಳು, ಇವೆರಡರ ನಡುವೆ ಇರುವ ವ್ಯತ್ಯಾಸಗಳ ಕುರಿತು ತಿಳಿಸಿದ್ದಾರೆ.

    • ಭವ್ಯಾ ವಿಶ್ವನಾಥ್‌ ಅವರು ಇಂದಿನ ಮನದ ಮಾತು ಅಂಕಣದಲ್ಲಿ ಭಯ ಮತ್ತು ಆತಂಕಕ್ಕೆ ಇರುವ ಕಾರಣಗಳು, ಇವೆರಡರ ನಡುವೆ ಇರುವ ವ್ಯತ್ಯಾಸಗಳ ಕುರಿತು ತಿಳಿಸಿದ್ದಾರೆ. ಭಯ, ಆತಂಕದಿದ ಪಾರಾಗಲು ಅಮೂಲ್ಯ 5 ಸಲಹೆಗಳನ್ನೂ ನೀಡಿದ್ದಾರೆ.
ಭವ್ಯಾ ವಿಶ್ವನಾಥ್‌ ಮನದ ಮಾತು  ಅಂಕಣದಲ್ಲಿ ಭಯ ಮತ್ತು ಆತಂಕಕ್ಕೆ ಇರುವ ಕಾರಣಗಳು, ಇವೆರಡರ ನಡುವೆ ಇರುವ ವ್ಯತ್ಯಾಸಗಳ ಕುರಿತು ತಿಳಿಸಿದ್ದಾರೆ.
ಭವ್ಯಾ ವಿಶ್ವನಾಥ್‌ ಮನದ ಮಾತು ಅಂಕಣದಲ್ಲಿ ಭಯ ಮತ್ತು ಆತಂಕಕ್ಕೆ ಇರುವ ಕಾರಣಗಳು, ಇವೆರಡರ ನಡುವೆ ಇರುವ ವ್ಯತ್ಯಾಸಗಳ ಕುರಿತು ತಿಳಿಸಿದ್ದಾರೆ.

ಇತ್ತೀಚೀನ ದಿನಗಳ ತೀವ್ರ ಅವಸರ ಮತ್ತು ವೇಗವಾಗಿ ಚಲಿಸುತ್ತಿರುವ ಬದುಕಿನಲ್ಲಿ ಆತಂಕ ಮತ್ತು ಗಾಬರಿ ಸಾಮಾನ್ಯವಾಗಿದೆ. “ನೀವು ಆತಂಕಕ್ಕೆ ಈಡಾದ ತಕ್ಷಣವೇ ನಿಮ್ಮ ಚಿತ್ತ ಚಂಚಲವಾಗುವುದು. ನೀವು ಗೊಂದಲದ ಗೂಡಾಗುವಿರಿ. ಮತ್ತು ನೀವು ಕಿರಿಕಿರಿಗೊಳ್ಳುವಿರಿ. ನಿಮ್ಮ ವ್ಯಕ್ತಿಸಂಬಂಧಗಳು ಹಾಳಾಗುವವು. ಕೊನೆಗೆ ನಿಮಗೆ ಸಿಗುವುದು ಅಸಹಕಾರ. ನಂತರ ನೀವು ದೊಡ್ಡ ಸಂಕಷ್ಟಕ್ಕೀಡಾಗುವಿರಿ. ನಿಮ್ಮ ರಕ್ತದೊತ್ತಡ ಏರುತ್ತದೆ. ನೀವು ಔಷಧಗಳ ಮೊರೆಹೋಗುವಿರಿ. ಬದಲಿಗೆ ಪರಿಸ್ಥಿತಿಯನ್ನು ಅರಿಯಿರಿ. ಪರಿಹಾರವನ್ನು ಆಲೋಚಿಸಿ ಚರ್ಚೆಯೇ ಬಹುಸಮಸ್ಯೆಗಳನ್ನು ನಿವಾರಿಸುವುದು. ನಿಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸುವಿರಿ” (ಮಾಹಿತಿ ಮೂಲ-ಮನಸ್ಸು ಮತ್ತು ಆಧುನಿಕ ಸಮಸ್ಯೆಗಳು ಪುಸ್ತಕ)

ಗಾಬರಿ ಮತ್ತು ಆತಂಕದ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳೋಣ.

ನಿಮಗೆಲ್ಲ ತಿಳಿದಿರುವ ಹಾಗೆ, ಗಾಬರಿಯು ಭಯದ ಸಂಕೇತ ಮತ್ತು ಸ್ವಾಭಾವಿಕ. ಭಯದಿಂದಲೇ ಅನಾಹುತ ಮತ್ತು ದುರಂತಗಳಿಂದ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾನೆ. ಪ್ರಾಣಿ ಪಕ್ಷಿಗಳಿಗೂ ಸಹಿತ ಈ ಕಾರಣಕ್ಕೆ ಭಯ ಸ್ವಾಭಾವಿಕ. ಆದ್ದರಿಂದ ಎಲ್ಲಾ ಸಜೀವ ವಸ್ತುಗಳಿಗೆ ಭಯವೆಂಬುದು ಅಗತ್ಯವಾದ ಭಾವನೆಗಳಲ್ಲಿ ಒಂದು. ಆದರೆ ಆತಂಕವು ಭಯಗಿಂತ ಭಿನ್ನ ಮತ್ತು ಇದು ಸ್ವಾಭಾವಿಕವಲ್ಲ. ಆತಂಕವು ಮನುಷ್ಯನು ಊಹಿಸಿಕೊಂಡು ಅಥವಾ ಭ್ರಮೆಯಿಂದ ಸೃಷ್ಟಿಸಿಕೊಳ್ಳುವಂತಹ ಭಯವೆಂದು ಕರೆಯಬಹುದು. “ಏನೇನೊ ಆಗಿಬಿಡಬಹುದು” ಎಂದು ಕಲ್ಪಿಸಿ ಮಾಡಿಕೊಳ್ಳಬಹುದಾದ ಆತಂಕ. ಇದನ್ನು ಮನಃಶಾಸ್ತ್ರದಲ್ಲಿ ಒಂದು ರೀತಿಯ ಮಾನಸಿಕ ಅಸ್ವಸ್ಥತೆ “ಆಂಗ್ಸೈಟಿ( anxiety)” ಎಂದು ಪರಿಗಣಿಸಲಾಗಿದೆ. ಒತ್ತಡದ ಪರಿಸ್ಥಿತಿಗೆ ಪ್ರತಿಕ್ರಯಿಸಬೇಕಾದ ಅಗತ್ಯಬಿದ್ದಾಗ ಆತಂಕವು ಉದ್ಭವಿಸುತ್ತದೆ.

ಉದಾಹರಣೆ 1: ಹಾವು: ದಿಢೀರನೆ ನಮ್ಮ ಎದುರು ಹಾವು ಬಂದಾಗ ಭಯವಾಗುವುದು ಸ್ವಾಭಾವಿಕ.

ಆತಂಕ - ಆದರೆ ಹಾವು ಬಂದುಬಿಡಬಹುದೆಂದು ಊಹಿಸಿಕೊಂಡು, ಖಂಡಿತವಾಗಿಯೂ ಅನಾಹುತವಾಗುತ್ತದೆ ಎಂದು ವಿಪರೀತವಾಗಿ ಭಯಪಡುವುದು ಆತಂಕ.

ಉದಾಹರಣೆ 2: ಪರೀಕ್ಷೆ - ಮಕ್ಕಳಿಗೆ ಪರೀಕ್ಷೆ ಸಮಯ ಬಂದಾಗ ಸ್ವಲ್ಪ ಮಟ್ಟಿಗೆ ಭಯವಾಗುವುದು ಅಗತ್ಯ ಮತ್ತು ಸ್ವಾಭಾವಿಕ, ಈ ಭಯದಿಂದ ಅವರು ಸಿದ್ಧತೆಯನ್ನು ನಡೆಸಬಹುದು. ಆದರೆ, ಈ ಭಯವು ವಿಪರೀತವಾಗಿ, ಪರೀಕ್ಷೆಯ ಫಲಿತಾಂಶವನ್ನು ಮತ್ತು ಅದರಿಂದಾಗುವ ನಕಾರಾತ್ಮಕ ಪರಿಣಾಮವನ್ನು ಸಹ ಊಹಿಸಿ, ಪರೀಕ್ಷೆಯ ಸಿದ್ಧತೆಗೆ ಅಡ್ಡಿಮಾಡಿಕೊಂಡು ಬಳಲುವುದು ಆತಂಕ.

ಉದಾಹರಣೆ 3: ಉದ್ಯೋಗದಲ್ಲಿ ಒಂದು ಉದ್ಯೋಗಿಗೆ ಎಲ್ಲರ ಮುಂದೆ ಒಂದು ಪ್ರಸ್ತುತಿ (presentation) ಕೊಡಬೇಕಾದ ಪರಿಸ್ಥಿತಿಯಲ್ಲಿ, ಸಿದ್ಧತೆಗಿಂತ ಹೆಚ್ಚಾಗಿ ಅತಿಯಾದ ಭಯ, ಉದ್ವೇಗವಾಗಿ, ಆತಂಕಕ್ಕೆ ಈಡಾಗಿ, ಪ್ರಸ್ತುತಿ ನೀಡುವ ಸಮಯಕ್ಕೆ ಸರಿಯಾಗಿ ಎಲ್ಲರನ್ನೂ ನೋಡಿದ ಕ್ಷಣವೇ ಎಲ್ಲವನ್ನು ಮರೆತು, ಬಾಯಿ ಒಣಗಿ ಸ್ಥಬ್ಧನಾಗಿ ನಿಂತು ಬಿಡುವುದೇ ಆತಂಕ.

ಹೀಗೆ ಆತಂಕಗಳಿಗೆ ನಾವು ಬೇರೆ ಪರಿಸ್ಥಿತಿಗಳಲ್ಲಿ ತುತ್ತಾಗುತ್ತೇವೆ. ಆದರೆ ಇದರ ಬಗ್ಗೆ ಸರಿಯಾದ ಅರಿವಿದ್ದರೆ, ಆತಂಕವನ್ನು ಸರಾಗವಾಗಿ ನಿಯಂತ್ರಿಸಬಹುದು.

ಆತಂಕದ (anxiety) ಲಕ್ಷಣಗಳು ಮತ್ತು ಪರಿಣಾಮಗಳು

- ದೇಹ - ಆಯಾಸ, ಬೆವರುವುದು, ಕೈ ಕಾಲು ನಡುಗುವುದು, ಬಾಯಿ ಒಣಗುವುದು, ಬಾಯಾರಿಕೆ, ಎದೆ ಬಡಿತ ಹೆಚ್ಚುವುದು, ವಾಕರಿಕೆ ಅಥವಾ ನಡುಕ ಇತ್ಯಾದಿ

- ಬುದ್ಧಿ - ನಿದ್ರಾಹೀನತೆ, ನೆನಪಿನ ಶಕ್ತಿ ಕುಂದುವುದು, ಬುದ್ಧಿ ಭ್ರಮಣೆ ಸ್ಥಿತಿ, ಸಂಶಯ ಮತ್ತು ಗೊಂದಲಕ್ಕೀಡಾಗುವುದು, ಅತಿಯಾದ ಚಿಂತೆ, ಭಯ, ಏಕಾಗ್ರತೆಯ ಕೊರತೆ, ಮನಸ್ಸಲ್ಲಿ ನಾನಾ ಆಲೋಚನೆಗಳ ಓಟ ಅಥವಾ ಅನಗತ್ಯ ಆಲೋಚನೆಗಳು

- ನಡವಳಿಕೆ: ಹೈಪರ್ವಿಜಿಲೆನ್ಸ್ ಅಥವಾ ಕಿರಿಕಿರಿ

ಆತಂಕ, ಅತಿಯಾದ ಚಿಂತೆ, ಭಯ, ಸನ್ನಿಹಿತವಾದ ವಿನಾಶದ ಭಾವನೆ, ನಿದ್ರಾಹೀನತೆ ಕೂಡ ಉಂಟಾಗಬಹುದು.

ವಿಪರೀತವಾದ ಆತಂಕದಿಂದ ವ್ಯಕ್ತಿಯು ಅತಿಯಾದ ಗೊಂದಲಕ್ಕೆ ಈಡಾಗುತ್ತಾನೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥನಾಗಿ, ಗೊಂದಲಕ್ಕೀಡಾಗಿ, ತನ್ನ ಮೇಲೆ ಮತ್ತು ಇತರರ ಮೇಲೆ ಸಂಶಯ ಪಡುತ್ತಾನೆ(self doubt), ನಂಬಿಕೆ ಕಳೆದುಕೊಳ್ಳುತ್ತಾನೆ, ಆತ್ಮ ವಿಶ್ವಾಸ ಕುಂದುತ್ತದೆ, ಸಿಟ್ಟಿಗೆ ಈಡಾಗಿ, ಸಂಬಂಧಗಳಲ್ಲಿ ಕಲಹ ಹೆಚ್ಚಾಗಿ ನೆಮ್ಮದಿ ಹಾಳಾಗುತ್ತದೆ.

ಆತಂಕವನ್ನು (anxiety) ಬಗೆಹರಿಸಿಕೊಳ್ಳುವುದು ಹೇಗೆ?

1. ಅರಿವು ಮತ್ತು ಒಪ್ಪಿಗೆ

ಮೊದಲು, ನಾವು ಆತಂಕವೆನ್ನುವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದನ್ನು ಒಪ್ಪಿಕೊಳ್ಳಬೇಕು. ನಂತರ ಅದರಿಂದಾಗುವ ಪರಿಣಾಮಗಳನ್ನು ಅರಿತು, ಆತಂಕದಿಂದ ಗುಣವಾಗಬೇಕೆಂದು ಬಲವಾದ ಬಯಕೆ ಮತ್ತು ದೃಢ ಸಂಕಲ್ಪವಿದ್ದು, ಚಿಕೆತ್ಸೆ ತೆಗೆದುಕೊಳ್ಳಲು ಪ್ರಯತ್ನಿಸಬೇಕು.

2. ಮನಸ್ಸನ್ನು ಪ್ರಶಾಂತಗೊಳಿಸಿ (Calm your mind)

ವಿಪರೀತವಾದ ಆತಂಕದ ಸಮಯದಲ್ಲಿ ಮನಸ್ಸು ಮತ್ತು ಬುದ್ಧಿ ಸ್ಥಿಮಿತದಲ್ಲಿರುವುದಿಲ್ಲ. ಸಾಕಷ್ಚು ಏರಿಳಿತಗಳಿಂದ ಕೂಡಿದ್ದು, ಸಿಟ್ಟಿಗೆ ಹೆಚ್ಚು ಅವಕಾಶವಿರುತ್ತದೆ. ಗಾಬರಿ, ಭಯದಿಂದ ಬುದ್ಧಿ ಭ್ರಮಣೆಯಾಗಿ ಸಂತುಲನ ಕಳೆದುಕೊಂಡ ಕಾರಣ ಮನಸ್ಸಿನಲ್ಲಿ ಸಾಕಷ್ಟು ದುಗುಡ, ಅಶಾಂತಿ ಮನೆ ಮಾಡಿರುತ್ತದೆ. ಚಡಪಡಿಸಿವುದು, ಸಿಟ್ಟು, ಕಿರಿಕಿರಿ, ವಿನಾಕಾರಣ ಮತ್ತೊಬ್ಬರನ್ನು ದೂಷಿಸುವುದು ಸಾಮಾನ್ಯವಾಗಿರುತ್ತದೆ. ಇಂಥ ಮನಸ್ಥಿತಿಯನ್ನು ನಿಯಂತ್ರಿಸಿ, ಶಾಂತಪಡಿಸುವುದು ಅಗತ್ಯ. ಆ ಕ್ಷಣದಲ್ಲಿ ಮೈಂಡ್ ಕಾಮ್ ಆಗುವುದಕ್ಕೆ, 1 ಪೂರ್ತಿ ಲೋಟ ತಣ್ಣನೆ ನೀರು ಕುಡಿಯಬಹುದು, 3 ಸಲ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳುವುದು , ತಕ್ಷಣವೇ ಇರುವ ಜಾಗವನ್ನು ಬಿಟ್ಟು ಪ್ರಶಾಂತವಾದ ಜಾಗಕ್ಕೆ ಹೊರಡುವುದು , ಈ ರೀತಿಯ ಸುಲಭವಾದ ಚಟುವಟಿಕೆಗಳನ್ನು ಮಾಡಿದಾಗ ಮನಸ್ಸು ಶಾಂತವಾಗುವ ಸಾಧ್ಯತೆ ಹೆಚ್ಚು

3. ಅತಿಯಾದ ಆಲೋಚನೆ(over thinking)

ಆತಂಕವಾಗುವ ವಿಚಾರದ ಕುರಿತು ನಿರಂತರವಾಗಿ ಅತಿಯಾದ ಯೋಚನೆಮಾಡುವುದನ್ನು ತಡೆಯಬೇಕು. ಇಲ್ಲದಿದ್ದರೆ ಯೋಚನೆ ಮಾಡಿದಷ್ಟು ನೆಗೆಟೀವ್ ಆಲೋಚನೆಗಳು ಹೆಚ್ಚಾಗಿ, ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಚಿಂತೆ, ಅಸಹಾಯಕತನ, ಗಾಬರಿ, ಸಂಶಯ, ಗೊಂದಲ ಅತಿರೇಕವಾಗುತ್ತದೆ. ನಿಮ್ಮ ಆಲೋಚನೆಗಳು ಮತ್ತು ಚಿಂತೆಗಳು ಅಂತ್ಯವಿಲ್ಲದೆ ನಿಮ್ಮನ್ನು ಆವರಿಸಿದಾಗ, ಮುಂದಿನ ಹಂತಗಳಿಗೆ ನಿಮ್ಮನ್ನು ಸಿದ್ಧಪಡಿಸುವ ಬದಲು, ಸಾಮಾನ್ಯವಾಗಿ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಏಕೆಂದರೆ ಅದು ನಿಮ್ಮನ್ನು ಭಯದಲ್ಲಿ ಮುಳುಗಿಸುತ್ತದೆ. ಅತಿಯಾಗಿ ಯೋಚಿಸುವುದು ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸ್ಥಿತಿಗಳ ಲಕ್ಷಣವವ ಹೌದು.

4 . ಉಸಿರಾಟದ ವ್ಯಾಯಾಮ

ಅತಿಯಾದ ಯೋಚನೆ ಮತ್ತು ಚಿಂತೆ, ಭಯದಿಂದಾದ ಆತಂಕವನ್ನು ಉಸಿರಾಟದ ಕಡೆಗೆ ಗಮನ ಹರಿಸಿ ಕಡಿಮೆ ಮಾಡಿಕೆೊಳ್ಳಬಹುದು. ಪ್ರತಿನಿತ್ಯ ಎರಡು ಬಾರಿ ಪ್ರಾಣಾಯಾಮ ( ಉಸಿರಾಟದ ವ್ಯಾಯಾಮ) ಮಾಡುವುದರಿಂದ ಮಾನಸಿಕ ಸಮತೋಲನವನ್ನು ಗಳಿಸಬಹುದು. ಮನಸ್ಸು ಪ್ರಶಾಂತವಾಗುವುದಲ್ಲದೆ, ಸ್ಥಿಮಿತವಾಗಿಯೂ ಮತ್ತು ಸ್ಪಷ್ಟತೆಯಿಂದಲೂ ಕೂಡಿರುತ್ತದೆ. ಆದ್ದರಿಂದ ಆತಂಕದಿಂದ ಬಳಲುತ್ತಿರುವವರು ಪ್ರಾಣಾಯಾಮ ಅಭ್ಯಾಸ ಮಾಡುವುದು ಉತ್ತಮ

5. ಆಪ್ತ ಸಮಾಲೋಚನೆ(counselling)

ಆತಂಕವನ್ನು ನಿಭಾಯಿಸುವುದಕ್ಕೆ ಮತ್ತು ಗುಣಪಡಿಸುವುದಕ್ಕೆ ಮನಶಾಸ್ತ್ರದಲ್ಲಿ ಪರಿಣಾಮಕರಿಯಾದ ಅನೇಕ ತಂತ್ರಗಳಿವೆ. ಗಂಭೀರವಾಗಿ ಆತಂಕದಿಂದ ಬಳಲುತ್ತಿದ್ದು, ದೈನಂದಿನ ಕಾಯ೯ಗಳನ್ನು ನಿಭಾಸಿಸುವುದು ಕಷ್ಟಕರವಾಗಿದ್ದು, ಪರಸ್ಪರ ಸಂಬಂಧಗಳ ಮೇಲೂ ಭಾರಿ ಪರಿಣಾಮ ಬಿದ್ದಿದ್ದರೆ, ನಿಲ೯ಕ್ಷ್ಯಮಾಡದೆ ಆಪ್ತಸಮಾಲೋಚಕರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ