Deepavali 2023: ನಮ್ಮೆಲ್ಲರ ಸಡಗರ, ಸಂಭ್ರಮದ ನಡುವೆ ದೇಶದ ಗಡಿ ಕಾಯುತ್ತಿರುವ ಸೈನಿಕರ ದೀಪಾವಳಿ ಆಚರಣೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ
Nov 10, 2023 10:35 AM IST
ಗಡಿಯಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ದೀಪಾವಳಿ ಆಚರಿಸುತ್ತಿರುವ ಯೋಧರು (ಫೈಲ್ ಫೋಟೋ)
Deepavali 2023: ಕೆಲಸಕ್ಕೆ ರಜೆ ಹಾಕಿ, ಮನೆ ಮಂದಿಯೊಂದಿಗೆ ಹಬ್ಬ ಆಚರಿಸುವ ನಾವು ಗಡಿಯಲ್ಲಿರುವ ಸೈನಿಕರನ್ನು ನೆನಪಿಸಿಕೊಳ್ಳಬೇಕು. ದೇಶದ ಗಡಿಯಲ್ಲಿ ಮಳೆ, ಬಿಸಿಲು, ಚಳಿ ಯಾವುದಕ್ಕೂ ಜಗ್ಗದೆ ದೇಶ ಕಾಯುವ ಯೋಧರು ಯಾವ ರೀತಿ ದೀಪಾವಳಿ ಆಚರಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿದೆ.
Deepavali 2023: ಹಬ್ಬ ಎಂದರೆ ಸಡಗರ, ಸಂಭ್ರಮ. ಆ ದಿನ ಕೆಲಸಕ್ಕೆ ರಜೆ ಹಾಕಿ ಆತ್ಮೀಯರೆಲ್ಲಾ ಒಟ್ಟುಗೂಡಿ ಮನೆಯ ಅಲಂಕಾರ ಮಾಡಿ, ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ, ಪಟಾಕಿ ಹಚ್ಚಿ , ಮೃಷ್ಟಾನ್ನ ಭೋಜನ ತಿಂದು ಆನಂದಿಸುತ್ತೇವೆ. 5 ದಿನಗಳ ಹಬ್ಬವನ್ನು ಎಷ್ಟು ಸಾಧ್ಯವೋ ಅಷ್ಟು ಅದ್ದೂರಿಯಾಗಿ ಆಚರಿಸುತ್ತೇವೆ. ನಮ್ಮ ಈ ಸಡಗರ, ಸಂಭ್ರಮ, ಸಂತೋಷಕ್ಕೆ ದೇವರ ಆಶೀರ್ವಾದವೇ ಕಾರಣ, ಹಾಗೇ ದೇವರ ರೂಪದಲ್ಲಿರುವ ಗಡಿಯಲ್ಲಿರುವ ಯೋಧರು ಕೂಡಾ ಕಾರಣ.
ಕ್ಯಾಂಡಲ್ ಹಚ್ಚಿ, ದೇಶದ ಜನತೆಗೆ ಶುಭ ಹಾರೈಸುವ ಯೋಧರು
ದೇಶದ ಗಡಿಯಲ್ಲಿ ನಿಂತು ಮಳೆ, ಬಿಸಿಲು, ಚಳಿ, ಗಾಳಿ ಎನ್ನದೆ ಶತ್ರುಗಳ ಆಕ್ರಮಣದಿಂದ ನಮ್ಮೆಲ್ಲರನ್ನೂ ಕಾಪಾಡುತ್ತಿರುವ ಯೋಧರನ್ನು ಕೂಡಾ ನಾವು ಪ್ರತಿದಿನ ನೆನಪಿಸಿಕೊಳ್ಳಬೇಕು. ಅವರ ತ್ಯಾಗದಿಂದಲೇ ನಾವು ಪ್ರತಿ ದಿನ ನಿಶ್ಚಿಂತೆಯಿಂದ ಬದುಕುತ್ತಿದ್ದೇವೆ. ಯೋಧರಿಗೆ ಮನೆ, ಮಠ, ಮಕ್ಕಳು, ಸ್ನೇಹಿತರು ಎಲ್ಲವೂ ದೇಶ ಸೇವೆಯೇ. ರಜೆಯೂ ಇಲ್ಲ, ಬಯಸಿದಂತೆ ವಿಶ್ರಾಂತಿಯೂ ಅವರಿಗಿಲ್ಲ. ನಾವು ಇಲ್ಲಿ ಇಷ್ಟೆಲ್ಲಾ ಖುಷಿಯಿಂದ ಹಬ್ಬ ಆಚರಿಸುವಾಗ ಅಲ್ಲಿ ಗಡಿಯಲ್ಲಿ ಯೋಧರು ಏನು ಮಾಡುತ್ತಾರೆ. ಅವರೂ ನಮ್ಮಂತೆ ದೀಪಾವಳಿ ಆಚರಿಸುತ್ತಾರಾ? ಯಾವ ರೀತಿ ಆಚರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತದೆ. ನಮ್ಮ ನಿಮ್ಮಂತೆ ಅಲ್ಲದಿದ್ದರೂ ಗಡಿಯಲ್ಲೇ ನಿಂತೇ ಹಣತೆ ಹಚ್ಚಿ ದೇಶದ ಜನರಿಗೆ ಯೋಧರು, ದೀಪಾವಳಿಯ ಶುಭ ಕೋರುತ್ತಾರೆ. ಸಣ್ಣ ಪುಟ್ಟ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಇದೇ ಅವರ ಆಚರಣೆ.
ಸಣ್ಣ ಪುಟ್ಟ ಆಚರಣೆಯಲ್ಲೇ ಖುಷಿ ಕಾಣುವ ಸೈನಿಕರು
ಕೋವಿಡ್ ಕಾರಣದಿಂದ ದೀಪಾವಳಿ ಸಂಭ್ರಮವನ್ನೇ ಕಾಣದಿದ್ದ ಜನರು ಕಳೆದ ವರ್ಷ ಅದ್ದೂರಿಯಾಗಿ ಹಬ್ಬ ಆಚರಿಸಿದ್ದರು. ಅದೇ ರೀತಿ ಜಮ್ಮ ಕಾಶ್ಮೀರದಲ್ಲಿ ಕೂಡಾ ಸೈನಿಕರು ಕ್ಯಾಂಡಲ್ ಹಚ್ಚಿ, ಸುರ್ ಸುರ್ ಬತ್ತಿ, ಹೂಕುಂಡ ಹಚ್ಚಿ ಖುಷಿ ಪಟ್ಟಿದ್ದರು. ಕರ್ನಲ್ ಇಕ್ಬಾಲ್ ಸಿಂಗ್, ತಮ್ಮ ಸೈನಿಕರೊಂದಿಗೆ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿದ್ದರು. ಒಂದು ತಂಡ ಪಟಾಕಿ ಸಿಡಿಸಿ ಸಿಹಿ ತಿಂದು ಸಂಭ್ರಮಿಸುವರೆಗೂ ಇನ್ನೊಂದು ತಂಡ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿರುತ್ತದೆ. ಹೀಗೆ ನಿದ್ರೆ ಇಲ್ಲದೆ, ದೇಶವನ್ನು ಕಾಯುವ ಯೋಧರು, ಜೊತೆ ಜೊತೆಗೆ ಹಬ್ಬದ ಖುಷಿಯನ್ನು ಎಂಜಾಯ್ ಮಾಡುತ್ತಾರೆ.
ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
ಹಾಗೇ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ಲಡಾಖ್‌ನ ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಯೋಧರನ್ನು ಮಾತನಾಡಿಸಿ, ಅವರಿಗೆ ಸಿಹಿ ತಿನ್ನಿಸಿ, ಅವರೊಂದಿಗೆ ಸಮಯ ಕಳೆದಿದ್ದರು. ದೇಶಕ್ಕಾಗಿ ಮಡಿದ ಯೋಧರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಿದ್ದರು. ಅವರ ಕಷ್ಟ ಸುಖಗಳನ್ನು ವಿಚಾರಿಸಿದ್ದರು. ಸೈನಿಕರು ಕೂಡಾ ಹಾಡು ಹಾಡುತ್ತಾ ಮೋದಿ ಅವರನ್ನು ರಂಜಿಸಿದ್ದರು.
ಈ ಬಾರಿಯೂ ಸೈನಿಕರನ್ನು ಭೇಟಿ ಆಗಲಿರುವ ಮೋದಿ
ಕಳೆದ 10 ವರ್ಷಗಳಿಂದಲೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಾ ಬಂದಿದ್ದಾರೆ. ಎಷ್ಟೇ ಬಿಡುವಿಲ್ಲದೆ ಕೆಲಸಗಳಿದ್ದರೂ ದೀಪಾವಳಿ ದಿನ ಗಡಿಗೆ ತೆರಳಿ ಅವರನ್ನು ಮಾತನಾಡಿಸಿ ಬರುತ್ತಿದ್ದಾರೆ. 2014ರಲ್ಲಿ ಸಿಯಾಚಿನ್, 2015ರಲ್ಲಿ ಪಂಜಾಬ್, ಮರುವರ್ಷ, ಚೀನಾ ಗಡಿ ಬಳಿ, ಗುರೆಜ್ ಸೆಕ್ಟರ್, ಹರ್ಷಿಲ್ ಸ್ಟೇಷನ್, ಜಮ್ಮುವಿನ ರಜೌರಿ, ಜಮ್ಮುವಿನ ಲಾಂಗ್ವಾಲಾ, ನೌಶೇರಾ, 2022ರಲ್ಲಿ ಕಾರ್ಗಿಲ್ ಬಳಿ, ಹೀಗೆ ಪ್ರತಿ ವರ್ಷವೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಈ ಬಾರಿಯೂ ಮೋದಿ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಹಬ್ಬದ ಶುಭಾಶಯ ಹೇಳಿ ಬರಲಿದ್ದಾರೆ.