ರತನ್ ಟಾಟಾರಿಗೆ ಬೀಳ್ಕೊಡುಗೆ ವೇಳೆ ತಕರಾರು; ಮನುಷ್ಯನ ಸ್ಬಭಾವ-ಆಸೆ-ಕನಸುಗಳ ಬಗ್ಗೆ ಮಧು ವೈಎನ್ ವಿಭಿನ್ನ ಒಳನೋಟ
Oct 12, 2024 09:55 PM IST
ಟಾಟಾ ವ್ಯಾಪಾರ ಸಾಮ್ರಾಜ್ಯವನ್ನು ಜಾಗತಿಕ ಮಟ್ಟಕ್ಕೆ ಬೆಳಸಿದ ರತನ್ ಟಾಟಾ
- ಮನುಷ್ಯ ಜಾತಿಯಲ್ಲಿ ಮಾತ್ರ ತಾನು ಹಸಿವಿನಿಂದಿದ್ದು ಇನ್ನೊಬ್ಬರಿಗೆ ಊಟ ಇಡುವ ಪರಿಕಲ್ಪನೆ ಇರುವುದು. ಇನ್ನೊಬ್ಬರಿಗೆ ನೋವಾದಾಗ ನಮಗೆ ದುಃಖವಾಗುವುದು. ಇನ್ನೊಬ್ಬರಿಗೆ ಒಳ್ಳೆಯದಾದಾಗ ನಮ್ಮೊಳಗೆ ಸಂತಸ ಉಕ್ಕುವುದು.
ಮನುಷ್ಯನಲ್ಲಿ ಹುಟ್ಟುವ ಪರಿಕಲ್ಪನೆಗಳೆಲ್ಲವೂ ವಿಶೇಷ, ಅದ್ಭುತ. ಅದರಲ್ಲಿ ಸಮಾನತೆಯೂ ಒಂದು. ಎಲ್ಲರಿಗೂ ಎಲ್ಲವೂ ದಕ್ಕಬೇಕು ಎಂಬುದು. ಇದು ಪ್ರಾಣಿಗಳಲ್ಲಿಲ್ಲ. ಪ್ರಾಣಿಗಳದು ಕೇವಲ ಉಳಿಯುವುದಕ್ಕಾಗಿ ನಡೆಸುವ ಹೋರಾಟ. ಹಸಿ ಹಸಿಯಾದ ನೈಸರ್ಗಿಕ ನಡವಳಿಕೆ. ಒಂದು ವೇಳೆ ನಿಮಗೆ ಅವು ಹಂಚಿ ತಿನ್ನುವುದು ಕಂಡರೂ ಅದು ‘ಆಲೋಚನೆ’ಯಿಂದಾಗಿ ಬಂದಿರುವುದಲ್ಲ. ಅವು ಸಮುದಾಯಿಕವಾಗಿ ನಡೆದುಕೊಳ್ಳುವುದೂ ಸಹ ನೈಸರ್ಗಿಕ ಅನಿವಾರ್ಯಗಳಿಂದಾಗಿ. ಮನುಷ್ಯ ಜಾತಿಯಲ್ಲಿ ಮಾತ್ರ ತಾನು ಹಸಿವಿನಿಂದಿದ್ದು ಇನ್ನೊಬ್ಬರಿಗೆ ಊಟ ಇಡುವ ಪರಿಕಲ್ಪನೆ ಇರುವುದು. ಇನ್ನೊಬ್ಬರಿಗೆ ನೋವಾದಾಗ ನಮಗೆ ದುಃಖವಾಗುವುದು. ಇನ್ನೊಬ್ಬರಿಗೆ ಒಳ್ಳೆಯದಾದಾಗ ನಮ್ಮೊಳಗೆ ಸಂತಸ ಉಕ್ಕುವುದು.
ಮುನಷ್ಯನಲ್ಲಿ ಇಂಥದೇ ಇನ್ನು ಕೆಲವು ವಿಶೇಷ ಗುಣಗಳಿವೆ. ಆಸೆ, ಆಕಾಂಕ್ಷೆ, ಬೆಳವಣಿಗೆ, ಸಾಧನೆ ಇವೇ ಮೊದಲಾಗಿ. ಇದರಿಂದಾಗಿಯೇ ಅವನು ನಿರಂತರವಾಗಿ ವಿಕಾಸದ ಪಥದಲ್ಲಿರುವುದು. ಅಂತರಿಕ್ಷಕ್ಕೆ ಹಾರುವುದು, ಇನ್ನೊಂದು ಗ್ರಹದಲ್ಲಿ ಜೀವಿಗಳನ್ನು ಹುಡುಕುವುದು, ಉಗುರು ಕಟ್ ಮಾಡಲು ನೈಲ್ ಕಟರ್ ತಯಾರಿಸುವುದು- ಇದೆಲ್ಲವೂ ಅವನ ಪ್ರಗತಿಯ ಮನೋಭಾವದಿಂದ ದಕ್ಕುವುದು. ಇಂಥ ಆಸೆ, ಆಕಾಂಕ್ಷೆ, ಸಾಧನೆಗಳು ವೈಪರೀತ್ಯಕ್ಕೆ ಹೋದಾಗ ಅವನು ಬಳುವಳಿಯಾಗಿ ಪಡೆಯುವುದು ನೋವು ದುಃಖ ಗಾಯ ಸಾವು ಇತ್ಯಾದಿಯಾಗಿ.
ಮನುಷ್ಯ ಜಾತಿ ತಾನೊಂದೆ ವಲಂ
ಪ್ರಾಣಿಗಳಲ್ಲಿ ಈ ಬಗೆಯ ಸ್ವಯಂ ವಿಕಾಸಗೊಳ್ಳುವ ಪರಿಕಲ್ಪನೆ ಇಲ್ಲ. ನಿಸರ್ಗದ ಏರುಪೇರುಗಳಿಂದಾಗಿ ಅನಿವಾರ್ಯವಾಗಿ ಲಕ್ಷ ವರುಷಗಳಲ್ಲಿ ಇಷ್ಟು ಮಾತ್ರ ವಿಕಾಸಗೊಳ್ಳುತ್ತವಷ್ಟೆ. ಮನುಷ್ಯ ಹಾಗಲ್ಲ. ಪ್ರಕೃತಿಯ ಹೊರತಾಗಿ, ಪ್ರಕೃತಿಗೆ ವಿರುದ್ಧವಾಗಿ ಬೆಳೆಯುತ್ತ ಹೋಗುತ್ತಾನೆ. ಅನೇಕ ಸಲ ಎಡವಿ ಪತನಗೊಳ್ಳುತ್ತಾನೆ. ಮತ್ತೆ ಎದ್ದೇಳುತ್ತಾನೆ. ಇದಕ್ಕೆ ಕೊನೆಯಿಲ್ಲ. ಇದನ್ನು ತಡೆಯಲಾಗಲ್ಲ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದೂ ಮನುಷ್ಯನ ವಿಶೇಷ ಗುಣ. ನೈಸರ್ಗಿಕವಾಗಿ ಮನುಷ್ಯರೆಲ್ಲರೂ ಒಂದೇ ಅಲ್ಲ. ಅವರ ಬಣ್ಣ, ಆಹಾರ, ಅಗತ್ಯ, ಆಸೆ ಎಲ್ಲವೂ ಬೇರೆ ಬೇರೆ. ಒಂದಾಗಿ ಇರುವ ಆಸೆಯೂ ಅವನದೇ ಆಗಿರುವುದರಿಂದ ಇದೊಂದು ಬಗೆಯ ಜಗ್ಗಾಟ. ಪ್ರಾಣಿಗಳಿಗಿಂತ ಭಿನ್ನವಾದ ಪ್ರಗತಿಯ ಮನೋಭಾವ.
ಮನುಷ್ಯನಲ್ಲಿಯೇ ಇರಬಹುದಾದ ಇಂತಹ ಅದ್ಭುತ ಗುಣವನ್ನು ನಾವು ಮತೀಯ ಹಂತಕ್ಕೆ ಇಳಿಸಿ ಅಲ್ಪಗೊಳಿಸಿದ್ದೇವೆ, ಸಂಕುಚಿತಗೊಳಿಸಿದ್ದೇವೆ. ಸಮಾನತೆ ಎಂದರೆ ಸಮಾನ ಅವಕಾಶಗಳು, ಸಮಾನ ಗೌರವ, ಘನತೆ ಎಂಬಲ್ಲಿಂದ ಶುರುವಾಗುತ್ತದೆ. ಸಮಾನ ಐಶ್ವರ್ಯ ಎಂಬ ಹಂತಕ್ಕೆ ಹೋದಾಗ ಮತೀಯ ಗುಣ ಪಡೆಯುತ್ತದೆ. ಇದು ಕಹಿಯಾದರೂ ಸತ್ಯ. ಮನುಷ್ಯನಲ್ಲಿಯ ಭಿನ್ನ ಭಿನ್ನ ಅಂತಹ ಆಸೆ ಆಕಾಂಕ್ಷೆ ಬೆಳವಣಿಗೆಯ ಲಾಲಸೆಯಿಂದಾಗಿ ಇಲ್ಲಿ ಹಲವು ಪದರಗಳು ಸೃಷ್ಟಿಯಾಗಿರುತ್ತವೆ. ದುರಾಸೆ, ವಂಚಿಸಿ ಕೊಳ್ಳೆ ಹೊಡೆಯುವುದು, ಅವಕಾಶ ಮತ್ತು ಸಂಪನ್ಮೂಲಗಳು ಸದಾ ತನ್ನ ಬಳಿಯಿರಲೆಂದೇ ಹೊಂಚು ಹಾಕಲು ಉಪಾಯ ಮಾಡುವುದು- ಮನುಷ್ಯ ಈ ಮಟ್ಟಕ್ಕೆ ಹೋದಾಗ ಪರಿಸ್ಥಿತಿ ಬಿಗಡಾಯಿಸುತ್ತದೆ.
ಸಮಾನತೆಯ ಕನಸು ಕಾಣುವವರು ಮನುಷ್ಯನಲ್ಲಿರುವ ಆಸೆ ಆಕಾಂಕ್ಷೆ ಬೆಳವಣಿಗೆ ಸಾಧನೆ ಇವೇ ಮೊದಲಾದ ವಿಶೇಷ ಗುಣಗಳನ್ನು ಪರಿಗಣಿಸದೇ ಸದಾ ಪ್ರಾಣಿಗಳಿಗೆ ಹೋಲಿಸಿಕೊಂಡು, ‘ಪ್ರಾಣಿಗಳಂತೆಯೇ ಉಳಿಯಬೇಕೇ?’ ಎಂಬ ಪ್ರಶ್ನೆಗಳಿಗೆ ಆಸ್ಪದ ಕೊಟ್ಟು ‘ಸಮಾನತೆಯ ರಾಜಕಾರಣ’ ಸೋಲುತ್ತ ಬಂದಿದೆ. ಕ್ಯಾಪಿಟಲಿಸಮ್ಮು ಈ ಕೊರತೆ ನೀಗಿಸುತ್ತದಾದರೂ ಅದಕ್ಕೆ ಕಟ್ಟಬೇಕಾದ ತೆರಿಗೆ ಕಡಿಮೆಯೇನಲ್ಲ. ಯಾಕಂದರೆ ಆಸೆ ದುರಾಸೆಗೆ ಇಳಿಯಲು ಹೆಚ್ಚು ಸಮಯ ಬೇಕಿರಲ್ಲ. ಇಂದು ಮನುಷ್ಯ ಸಂಬಂಧಗಳು ಪಲ್ಲಟಗೊಂಡಿರುವುದು, ಸಮುದಾಯಗಳು ಒಡೆದಿರುವುದು- ಎಲ್ಲವೂ ಎಷ್ಟು ಸೈಟು, ಎಷ್ಟು ಚಿನ್ನ ಎಂಬಲ್ಲಿಗೆ, ಏನು ಮಾಡಿದರೂ ಇದರಲ್ಲೇನೋ ಲಾಭ ಇಟ್ಟುಕೊಂಡಿರುವನಾ ಎಂದು ಸಂಶಯ ಪಡುವಂತಾಗಿರುವುದು ಅದರ ಬಳುವಳಿಗಳು.
ಮಾರುತಿ ಗೋಪಿಕುಂಟೆಯವರು ಈ ರೀತಿ ಕಾಮೆಂಟ್ ಮಾಡಿದ್ದಾರೆ
“ಹಣ ಗಳಿಸುವ ಹಾದಿಯಲ್ಲಿ ಎಲ್ಲವೂ ಗೌಣವಾಗಿ ಕಂಡು ಭ್ರಮೆಯ ಬದುಕು ನಡೆಸುತ್ತಾ ಒಂದಿನ ಈ ಲೋಕವನ್ನೆ ಬಿಟ್ಟು ಹೋಗುತ್ತಾನೆ. ಬಿಟ್ಟು ಹೋದ ಮೇಲೂ ಉಳಿಯುವ ಅವನ ನಿಜದ ಬದುಕು ಮತ್ತೆ ಕಾಡುವಂತಿದ್ದರೆ ಜನಜನಿತವಾಗಿದ್ದರೆ ಸಹೃದಯದಲ್ಲಿ ಆತನ ಬದುಕು ನೆಲೆಗೊಳ್ಳುವಂತಿದ್ದರೆ ಆ ಬದುಕು ಮನುಷ್ಯತ್ವದ ಬದುಕು ಅನಿಸಬಹುದೇನೂ ಆದರೆ ಹಾಗೆ ಬದುಕುವವರು ವಿರಾತಿವಿರಳ. ಇನ್ನೊಂದು ಆರ್ಥಿಕ ಸಮಾನತೆ ಸಾಧ್ಯವಾಗುವವರೆಗೂ ಸಮಾನತೆ ದೂರದ ಕನಸು”
ಗಮನಿಸಿ: ಟಾಟಾರನ್ನು ಅತ್ಯಂತ ಪ್ರೀತಿಯಿಂದ ಬೀಳ್ಕೊಡುವ ಬಗ್ಗೆ ತಕರಾರುಗಳ ಅಭಿಪ್ರಾಯ ಓದಿದಾಗ ಅನಿಸಿದ್ದುನ್ನು ಮಧು ವೈಎನ್ ಈ ರೀತಿ ಹಂಚಿಕೊಂಡಿದ್ದಾರೆ. ಅವರ ಫೇಸ್ಬುಕ್ ಪೋಸ್ಟ್ಅನ್ನು ಯತಾವತ್ತಾಗಿ ಪ್ರಕಟಿಸಲಾಗಿದೆ.
ವಿಭಾಗ