logo
ಕನ್ನಡ ಸುದ್ದಿ  /  ಜೀವನಶೈಲಿ  /  ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಜೀವನ ವೆಚ್ಚ-ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ

ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಜೀವನ ವೆಚ್ಚ-ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ

Jayaraj HT Kannada

Oct 05, 2024 08:56 PM IST

google News

ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ

    • Study in UK: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅಧ್ಯಯನ ಮಾಡಲು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತೆ. ಅಲ್ಲಿನ ಜೀವನ ವೆಚ್ಚವೇ ದುಬಾರಿ. ಈ ನಡುವೆ ಗುಣಮಟ್ಟದ ಶಿಕ್ಷಣದಿಂದಾಗಿ ಶೈಕ್ಷಣಿಕ ವೆಚ್ಚಗಳೂ ಅಧಿಕ. ಭಾರತೀಯ ವಿದ್ಯಾರ್ಥಿಗಳು ಯುಕೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಆಗುವ ವೆಚ್ಚದ ಲೆಕ್ಕಾಚಾರ ಹೀಗಿದೆ.
ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ
ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ (Pexel)

ವಿದೇಶದಲ್ಲಿ ಅಧ್ಯಯನ ಮಾಡುವ ಇರಾದೆಯಿರುವ ಭಾರತೀಯ ವಿದ್ಯಾರ್ಥಿಗಳಿಗೆ ಯುಕೆ ಅಥವಾ ಯುನೈಟೆಡ್‌ ಕಿಂಗ್‌ಡಮ್‌ ಜನಪ್ರಿಯ ರಾಷ್ಟ್ರ. ಅದರಲ್ಲೂ ಇಂಗ್ಲೆಂಡ್‌ನಲ್ಲಿರುವ ಐತಿಹಾಸಿಕ ವಿಶ್ವವಿದ್ಯಾನಿಲಯಗಳು ಭಾರತೀಯರ ಮೆಚ್ಚಿನ ಆಯ್ಕೆ. ಹಲವು ದಶಕಗಳಿಂದಲೂ ಭಾರತೀಯ ವಿದ್ಯಾರ್ಥಿಗಳು ಇಲ್ಲಿನ ಪ್ರಸಿದ್ಧ ವಿಶವವಿದ್ಯಾನಿಲಯಗಳಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಜಾಗತಿಕ ಮನ್ನಣೆ ಗಳಿಸಿರುವ ಜನಪ್ರಿಯ ವಿವಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಂತಹ ಸಂಸ್ಥೆಗಳು ಕೂಡ ವಿಶ್ವ ದರ್ಜೆಯ ಶಿಕ್ಷಣ ನೀಡುತ್ತದೆ.

ಭಾರತೀಯರ ಪೈಕಿ ಹಲವು ವಿದ್ಯಾರ್ಥಿಗಳು ಯುಕೆಗೆ ಹಾರುವ ಇಚ್ಛೆ ಹೊಂದಿದ್ದರೂ, ವೆಚ್ಚ ದುಬಾರಿಯಾಗುತ್ತದೆ ಎಂದು ಬೇರೆ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಹಜವಾಗಿ ಇಂಗ್ಲೆಂಡ್ ಸೇರಿದಂತೆ ಯುಕೆಯ ಎಲ್ಲಾ ಭಾಗಗಳಲ್ಲಿ ಜಾಗತಿಕವಾಗಿ ಖ್ಯಾತಿ ಪಡೆದಿರುವ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಇಲ್ಲಿ ಅಧ್ಯಯನ ಮಾಡುವುದು ದುಬಾರಿ. ಜೀವನ ವೆಚ್ಚ ಕೂಡಾ ದುಬಾರಿಯಾಗಿರುವುದರಿಂದ ಎಲ್ಲರ ಕೈಗೂ ಇಲ್ಲಿನ ಶಿಕ್ಷಣ ಕೈಗೆಟಕುವಂತಿಲ್ಲ.

ಯುಕೆಯಲ್ಲಿ ಶೈಕ್ಷಣಿಕ ವೆಚ್ಚಕುರಿತು ಯೂನಿವರ್ಸಿಟಿ ಲಿವಿಂಗ್‌ನ ಸಂಸ್ಥಾಪಕ ಮತ್ತು ಸಿಇಒ ಸೌರಭ್ ಅರೋರಾ ಮಾತನಾಡಿದದ್ದಾರೆ. ಅವರ ಪ್ರಕಾರ, ಅಲ್ಲಿನ ದೇಶೀಯ ವಿದ್ಯಾರ್ಥಿಗಳು ಸರಿಸುಮಾರು 9,78,000 ರೂಪಾಯಿ ಸರಾಸರಿ ವಾರ್ಷಿಕ ಬೋಧನಾ ಶುಲ್ಕ ಭರಿಸಬೇಕಾಗುತ್ತದೆ. ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ವೆಚ್ಚವು ವರ್ಷಕ್ಕೆ 10,000 ಪೌಂಡ್‌ ಆಗುತ್ತದೆ. ಅಂದರೆ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಕೋರ್ಸ್ ಮತ್ತು ಸಂಸ್ಥೆಯನ್ನು ಅವಲಂಬಿಸಿ 10,58,000ಯಿಂದ ಹಿಡಿದು 40 ಲಕ್ಷದವರೆಗೆ ಖರ್ಚಾಗುತ್ತದೆ. "ಪ್ರತಿ ಭಾರತೀಯ ವಿದ್ಯಾರ್ಥಿಗೆ ವಾರ್ಷಿಕ ಸರಾಸರಿ ವೆಚ್ಚವು 35,426 ಪೌಂಡ್‌ ಅಂದರೆ 37,47,000 ರೂಪಾಯಿಯವರೆಗೆ ಖರ್ಚಾಗುತ್ತದೆ ಎಂದು ಅರೋರಾ ಹೇಳುತ್ತಾರೆ.

ಶೈಕ್ಷಣಿಕ ವೆಚ್ಚ ಹೇಗಿರುತ್ತದೆ?

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಬೋಧನಾ ಶುಲ್ಕವು ಆಯಾ ಕೋರ್ಸ್ ಮೇಲೆ ಬದಲಾಗುತ್ತವೆ. ಅಲ್ಲದೆ ಕಲಿಕಾ ವಿಧಾನ ಮತ್ತು ಪ್ರಾಯೋಗಿಕ ಕಲಿಕೆ ಮತ್ತು ಪ್ರಯೋಗಾಲಯಗಳ ಆಧಾರದ ಮೇಲೆ ವೆಚ್ಚ ಭಿನ್ನವಾಗಿರುತ್ತವೆ. ಜೊತೆಗೆ ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಶ್ವವಿದ್ಯಾಲಯ, ಕೋರ್ಸ್ ಮತ್ತು ಶಿಕ್ಷಣ ಸಂಸ್ಥೆ ಇರುವ ನಗರದ ಆಧಾರದ ಮೇಲೆ ವೆಚ್ಚದಲ್ಲಿ ವ್ಯತ್ಯಾಸವಿರುತ್ತದೆ.

ಯುಕೆಯಲ್ಲಿ ಅಧ್ಯಯನ ಮಾಡುವ ಒಟ್ಟು ವಾರ್ಷಿಕ ವೆಚ್ಚ

ಯೂನಿವರ್ಸಿಟಿ ಲಿವಿಂಗ್ ಇಂಡಿಯನ್ ಸ್ಟೂಡೆಂಟ್ಸ್ ಮೊಬಿಲಿಟಿ ರಿಪೋರ್ಟ್ 2023-24ರ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ಯುಕೆಯಲ್ಲಿ ಶಿಕ್ಷಣ ಪಡೆಯಲು ಪಾವತಿಸಬೇಕಾದ ಸರಾಸರಿ ವೆಚ್ಚ ಹೀಗಿದೆ.

  • ಶೈಕ್ಷಣಿಕ ವೆಚ್ಚ: 21,65,000
  • ವಸತಿ: ರೂ. 8,07,000
  • ಇತರ ಜೀವನ ವೆಚ್ಚಗಳು: 7,74,000
  • ಒಟ್ಟು ವೆಚ್ಚ: 37,47,000 (35,426 ಪೌಂಡ್)

ಹೆಚ್ಚುವರಿ ವೆಚ್ಚಗಳು

ಜೀವನ ವೆಚ್ಚ: ಆಯಾ ವಿದ್ಯಾರ್ಥಿಯ ಜೀವನಶೈಲಿಯ ಆಧಾರದ ಮೇಲೆ ಆಹಾರ ವೆಚ್ಚ, ಸಾರಿಗೆ ಮತ್ತು ವೈಯಕ್ತಿಕ ವಸ್ತುಗಳಿಗಾಗಿ ಖರ್ಚಾಗುತ್ತದೆ. ಇದು ವಿದ್ಯಾರ್ಥಿಯ ಜೀವನಶೈಲಿಯ ಮೇಲೆ ಹೆಚ್ಚು ಕಡಿಮೆ ಆಗಬಹುದು.

ಪುಸ್ತಕಗಳು ಮತ್ತು ಕೋರ್ಸ್ ಮೆಟೀರಿಯಲ್‌ಗಳು: ವಿದ್ಯಾಭ್ಯಾಸಕ್ಕೆ ಬೇಕಾದ ಕೆಲವು ವಸ್ತುಗಳು ಆನ್‌ಲೈನ್‌ನಲ್ಲಿ ದೊರಕಬಹುದು. ಕೆಲವೊಂದು ಪುಸ್ತಕಗಳು ವಿಶ್ವವಿದ್ಯಾನಿಲಯದಿಂದ ಸಿಗುತ್ತವೆ. ಕೆಲವೊಂದನ್ನು ವಿದ್ಯಾರ್ಥಿಗಳೇ ಖರೀದಿಸಬೇಕಾಗುತ್ತದೆ.

ಅಗತ್ಯ ಸಲಕರಣೆಗಳು: ಆಯಾ ಕೋರ್ಸ್‌ಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳು, ಸಾಫ್ಟ್‌ವೇರ್, ಲ್ಯಾಬ್ ಉಪಕರಣಗಳು ಬೇಕಾದರೆ ಅದಕ್ಕೂ ಖರ್ಚಾಗುತ್ತದೆ.

ಆರೋಗ್ಯ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆಯ ಅಗತ್ಯವಿರುತ್ತದೆ. ಉಚಿತ ರಾಷ್ಟ್ರೀಯ ಆರೋಗ್ಯ ಸೇವೆಗಳಿಗೆ ಅರ್ಹತೆ ಪಡೆಯದಿದ್ದರೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ವೆಚ್ಚ ದುಬಾರಿಯಾಗಬಹುದು. ಹೀಗಾಗಿ ವಿಮೆಯ ಅಗತ್ಯವಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ