ಆರ್‌ಬಿಐ ಕಣ್ಣಿಗೆ ಬಿದ್ದಿದೆ ಗೋಲ್ಡ್ ಲೋನ್ ಕಂಪನಿಗಳ ಕಳ್ಳಾಟ; ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದ ರಿಸರ್ವ್‌ ಬ್ಯಾಂಕ್‌-business gold loan companies under scrutiny allegations of fraud andrule violations uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರ್‌ಬಿಐ ಕಣ್ಣಿಗೆ ಬಿದ್ದಿದೆ ಗೋಲ್ಡ್ ಲೋನ್ ಕಂಪನಿಗಳ ಕಳ್ಳಾಟ; ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದ ರಿಸರ್ವ್‌ ಬ್ಯಾಂಕ್‌

ಆರ್‌ಬಿಐ ಕಣ್ಣಿಗೆ ಬಿದ್ದಿದೆ ಗೋಲ್ಡ್ ಲೋನ್ ಕಂಪನಿಗಳ ಕಳ್ಳಾಟ; ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದ ರಿಸರ್ವ್‌ ಬ್ಯಾಂಕ್‌

ಗೋಲ್ಡ್ ಲೋನ್ ಕಂಪನಿಗಳು ಚಿನ್ನದ ಮೇಲೆ ಸಾಲ ನೀಡುವಾಗ ಅಕ್ರಮಗಳನ್ನು ಎಸಗುತ್ತಿದ್ದು, ನಿಗದಿತ ಮಾರ್ಗಸೂಚಿಯನ್ನು ಅನುಸರಿಸುತ್ತಿಲ್ಲ ಎಂಬುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ಗಮನಿಸಿದೆ. ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದ ಆರ್‌ಬಿಐ, ಹಲವು ಗೋಲ್ಡ್ ಲೋನ್ ವಂಚನೆ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಅದರ ವಿವರ ಇಲ್ಲಿದೆ.

ಗೋಲ್ಡ್ ಲೋನ್ ಕಂಪನಿಗಳ ಕಳ್ಳಾಟ ಆರ್‌ಬಿಐ ಕಣ್ಣಿಗೆ ಬಿದ್ದಿದೆ.  ರಿಸರ್ವ್‌ ಬ್ಯಾಂಕ್‌ ಈ ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದೆ. (ಸಾಂಕೇತಿಕ ಚಿತ್ರ)
ಗೋಲ್ಡ್ ಲೋನ್ ಕಂಪನಿಗಳ ಕಳ್ಳಾಟ ಆರ್‌ಬಿಐ ಕಣ್ಣಿಗೆ ಬಿದ್ದಿದೆ. ರಿಸರ್ವ್‌ ಬ್ಯಾಂಕ್‌ ಈ ಅಕ್ರಮ ಸರಿಪಡಿಸಲು 3 ತಿಂಗಳ ಗಡುವು ನೀಡಿದೆ. (ಸಾಂಕೇತಿಕ ಚಿತ್ರ) (Pexels/ Pixabay /Canva)

ನವದೆಹಲಿ: ಗೋಲ್ಡ್ ಲೋನ್ ಕೊಡುವ ಕಂಪನಿಗಳು ನಿಯಮ ಉಲ್ಲಂಘಿಸಿ ಗ್ರಾಹಕರನ್ನು ವಂಚಿಸುತ್ತಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗಮನಿಸಿದೆ. ಗೋಲ್ಡ್ ಲೋನ್ ಕೊಡುವಾಗ ಈ ಕಂಪನಿಗಳು ಅನುಸರಿಸಬೇಕಾದ ಮಾನದಂಡಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಈ ಅಕ್ರಮಗಳನ್ನೆಲ್ಲ ಮೂರು ತಿಂಗಳ ಒಳಗೆ ಸರಿಪಡಿಸಬೇಕು ಎಂದು ಗೋಲ್ಡ್ ಲೋನ್ ಕಂಪನಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಈ ವಿದ್ಯಮಾನದ ಬೆನ್ನಿಗೆ ನಿನ್ನೆ (ಅಕ್ಟೋಬರ್ 1) ಷೇರುಪೇಟೆಯಲ್ಲಿ ಲಿಸ್ಟೆಡ್ ಆಗಿರುವ ಗೋಲ್ಡ್ ಲೋನ್ ಕಂಪನಿಗಳ ಷೇರು ಮೌಲ್ಯ ಕುಸಿತ ಕಂಡಿತ್ತು. ಗೋಲ್ಡ್ ಲೋನ್‌ ನೀಡುವಾಗ ಅದರ ಸರಿಯಾದ ಮೌಲ್ಯವನ್ನು ಗ್ರಾಹಕರ ಸಮ್ಮುಖದಲ್ಲಿ ನಿರ್ಣಯಿಸುತ್ತಿಲ್ಲ. ಅದೂ ಅಲ್ಲದೆ ಗ್ರಾಹಕರು ಗೋಲ್ಡ್ ಲೋನ್ ಮರುಪಾವತಿಸದೇ ಡೀಫಾಲ್ಟ್ ಆದಾಗ ಆಭರಣ ಹರಾಜು ಹಾಕುವಾಗ ಕೂಡ ಪಾರದರ್ಶಕ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ ಎಂಬುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ಗಂಭೀರವಾಗಿ ತೆಗೆದುಕೊಂಡಿದೆ.

ಗೋಲ್ಡ್‌ ಲೋನ್ ಲೋಪದೋಷ; ಆರ್‌ಬಿಐ ಗಮನಿಸಿದ 6 ಅಂಶಗಳಿವು

1) ಸಾಲದ ಮೊತ್ತ ಮತ್ತು ಸಾಲದ ಮರುಪಾವತಿ ಸಾಮರ್ಥ್ಯದ ಮೌಲ್ಯಮಾಪನ ಮಾಡುವಾಗ ಥರ್ಡ್‌ ಪಾರ್ಟಿಯ ನೆರವು ಪಡೆಯುವಾಗ ಅದರಲ್ಲಿ ಲೋಪದೋಷವಿದೆ.

2) ಗ್ರಾಹಕರ ಎದುರೇ ಚಿನ್ನದ ಮೌಲ್ಯಮಾಪನ ಮಾಡಬೇಕು. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ.

3) ಗೋಲ್ಡ್ ಲೋನ್ ಅಂತಿಮ ಬಳಕೆಯ ಮೇಲ್ವಿಚಾರಣೆಯೂ ಇಲ್ಲ, ಶ್ರದ್ಧೆಯೂ ಇಲ್ಲ

4) ಗೋಲ್ಡ್ ಲೋನ್ ಪಡೆದುಕೊಂಡವರು ಸುಸ್ತಿದಾರರಾದಾಗ ಅವರು ಅಡ ಇಟ್ಟ ಚಿನ್ನಾಭರಣಗಳ ಹರಾಜು ನಡೆಸುವಾಗ ಅದರಲ್ಲಿ ಪಾರದರ್ಶಕ ವ್ಯವಸ್ಥೆ ಇರುವುದಿಲ್ಲ.

5) ಚಿನ್ನದ ಮೌಲ್ಯಕ್ಕೆ ತಕ್ಕಂತೆ ಸಾಲ ನೀಡುವ ವಿಚಾರದಲ್ಲಿ ನಿಗಾವಹಿಸುವಿಕೆ ಇಲ್ಲ

6) ರಿಸ್ಕ್‌ ಮಟ್ಟವನ್ನು ಅಂದಾಜಿಸುವ ಮಾನದಂಡ ಸರಿ ಇಲ್ಲ

ಗೋಲ್ಡ್ ಲೋನ್ ಉಸ್ತುವಾರಿ ಸಂಸ್ಥೆಗಳಿಗೆ ಆರ್‌ಬಿಐ ಸೂಚನೆ

ಗೋಲ್ಡ್ ಲೋನ್‌ ನೀಡುವಾಗ ಅಗತ್ಯ ಪಾಲಿಸಬೇಕಾದ ಮಾನದಂಡಗಳು ಸರಿಯಾಗಿ ಜಾರಿಯಾಗುತ್ತಿವೆಯಾ ಎಂಬುದನ್ನು ಗಮನಿಸಬೇಕು. ಗೋಲ್ಡ್ ಲೋನ್‌ ಉಸ್ತುವಾರಿ ಸಂಸ್ಥೆಗಳೆಲ್ಲ ತಮ್ಮ ನೀತಿ ಮತ್ತು ಕಾರ್ಯವಿಧಾನಗಳನ್ನು ಗಮನಿಸಬೇಕು. ಚಿನ್ನದ ಮೇಲಿನ ಸಾಲ ನೀಡುವಾಗ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.

ವಿಶೇಷವಾಗಿ ಕೆಲವು ಗೋಲ್ಡ್ ಲೋನ್ ಕಂಪನಿಗಳ ಗೋಲ್ಡ್‌ ಲೋನ್‌ ಪ್ರಮಾನ ಗಮನಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್ ಆ ಕಂಪನಿಗಳಿಗೆ ಗೋಲ್ಡ್ ಲೋನ್‌ಗಳ ಮೇಲ್ವಿಚಾರಣೆ ಮತ್ತು ನಿಗಾವನ್ನು ಬಿಗಿಗೊಳಿಸಬೇಕು ಎಂದು ಸೂಚಿಸಿದೆ. ಗೋಲ್ಡ್ ಲೋನ್‌ ನೀಡುವ ಪ್ರಕ್ರಿಯೆಯನ್ನು ನಡೆಸುವುದಕ್ಕೆ ಕಂಪನಿಗಳು ಥರ್ಡ್‌ ಪಾರ್ಟಿ ಸೇವೆಯನ್ನು ಹೊರಗುತ್ತಿಗೆಗೆ ಬಳಸುತ್ತಿವೆ. ಹೀಗಿರುವಾಗ ಆ ಸೇವಾ ಪೂರೈಕೆದಾರರ ಮೇಲೆ ಸಾಕಷ್ಟು ನಿಯಂತ್ರಣವನ್ನು ಖಚಿತಪಡಿಸಬೇಕಾದ್ದು ಅಗತ್ಯ ಎಂದು ಆರ್‌ಬಿಐ ಹೇಳಿದೆ.

ಕೆಲವು ಗೋಲ್ಡ್ ಲೋನ್ ಕಂಪನಿಗಳು ಸಾಲ ನೀಡುವಾಗ ನಗದು ಹಣವನ್ನು ವಿತರಿಸುತ್ತಿರುವುದು ಗಮನಸೆಳೆದಿದೆ. ಅದೂ ಅಲ್ಲದೆ, ಕೆವೈಸಿ ಸಂಬಂಧಿತ ನಿಯಮಗಳನ್ನೂ ಕಂಪನಿಗಳು ಪಾಲಿಸುತ್ತಿಲ್ಲ. ಟಾಪ್ ಅಪ್ ಸಾಲವನ್ನು ಅನುಮೋದಿಸುವಾಗ ಚಿನ್ನದ ಮರುಮೌಲ್ಯಮಾಪನ ಅಥವಾ ಹೊಸದಾಗಿ ಮೌಲ್ಯಮಾಪನ ಮಾಡುತ್ತಿಲ್ಲ. ಸಾಲ ಮಂಜೂರಾದ ಕೆಲವು ದಿನಗಳ ಬಳಿಕ ಸಾಲದ ಖಾತೆ ಮುಚ್ಚುತ್ತಿರುವುದು ಕೂಡ ಕಂಡುಬಂದಿದೆ ಎಂದು ಆರ್‌ಬಿಐ ಹೇಳಿದೆ.

ಗೋಲ್ಡ್ ಲೋನ್‌ ಕಂಪನಿಗಳು ಈ ಎಲ್ಲ ಅಕ್ರಮಗಳನ್ನು ಮೂರು ತಿಂಗಳ ಒಳಗೆ ಸರಿಪಡಿಸಬೇಕು. ಇಲ್ಲದೇ ಇದ್ದರೆ ಮಾರ್ಗಸೂಚಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಈಗಾಗಲೇ ಹಿರಿಯ ಮೇಲ್ವಿಚಾರಣಾ ಅಧಿಕಾರಿಗಳನ್ನು ನೇಮಕ ಮಾಡಿದ್ದು ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಆರ್‌ಬಿಐ ವಿವರ ಮಾಹಿತಿಯೊಂದಿಗೆ ಎಚ್ಚರಿಸಿದೆ.

mysore-dasara_Entry_Point