logo
ಕನ್ನಡ ಸುದ್ದಿ  /  ಜೀವನಶೈಲಿ  /  ಉಪ್ಪಿನಕಾಯಿ ಇಲ್ಲದಿದ್ದರೆ ರುಚಿಸದು ಊಟ: ಅನ್ನದ ಜತೆ ಸವಿಯಿರಿ ಈ ಟೇಸ್ಟಿ ಹುಣಸೆಹಣ್ಣಿನ ಉಪ್ಪಿನಕಾಯಿ, ರೆಸಿಪಿ ತುಂಬಾನೇ ಸಿಂಪಲ್

ಉಪ್ಪಿನಕಾಯಿ ಇಲ್ಲದಿದ್ದರೆ ರುಚಿಸದು ಊಟ: ಅನ್ನದ ಜತೆ ಸವಿಯಿರಿ ಈ ಟೇಸ್ಟಿ ಹುಣಸೆಹಣ್ಣಿನ ಉಪ್ಪಿನಕಾಯಿ, ರೆಸಿಪಿ ತುಂಬಾನೇ ಸಿಂಪಲ್

Priyanka Gowda HT Kannada

Sep 09, 2024 04:30 PM IST

google News

ಹುಣಸೆಹಣ್ಣಿನ ಉಪ್ಪಿನಕಾಯಿಯನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  • ಖಾದ್ಯಗಳ ರುಚಿ ಸ್ವಲ್ಪ ಸಪ್ಪೆ ಎನಿಸಿದರೆ ಉಪ್ಪಿನಕಾಯಿ ಇದ್ದರೆ ಸಾಕು ಊಟವನ್ನು ರುಚಿಕರವಾಗಿರಿಸುತ್ತದೆ. ಕೆಲವೊಮ್ಮೆ ಊಟಕ್ಕೆ ಏನೂ ಸಾಂಬಾರ್ ಇಲ್ಲದಿದ್ದರೆ, ಉಪ್ಪಿನಕಾಯಿಯಲ್ಲಿ ಊಟ ಮಾಡಬಹುದು. ಉಪ್ಪಿನಕಾಯಿಯಲ್ಲಿ ಹಲವು ವೆರೈಟಿಗಳಿದ್ದು, ಇವುಗಳಲ್ಲಿ ಹುಣಸೆಹಣ್ಣಿನ ಉಪ್ಪಿನಕಾಯಿಯೂ ಒಂದು. ಇದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹುಣಸೆಹಣ್ಣಿನ ಉಪ್ಪಿನಕಾಯಿಯನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹುಣಸೆಹಣ್ಣಿನ ಉಪ್ಪಿನಕಾಯಿಯನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (freepik)

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿನಂತೆ ಊಟದಲ್ಲಿ ಉಪ್ಪಿನ ಕಾಯಿ ಇಲ್ಲದಿದ್ದರೆ ಆಹಾರ ರುಚಿಸುವುದು ತುಸು ಕಷ್ಟವೇ ಹೌದು. ಯಾವುದೇ ಶುಭ ಸಮಾರಂಭವಿರಲಿ, ಹಬ್ಬವಿರಲಿ ಊಟದ ಜೊತೆಗೆ ಉಪ್ಪಿನಕಾಯಿ ಬೇಕೇ ಬೇಕು. ಊಟಕ್ಕೆ ಕುಳಿತಾಗ ಉಪ್ಪಿನಕಾಯಿ ಇಲ್ಲದಿದ್ದರೆ ಹತ್ತಾರು ಬಗೆಯ ಖಾದ್ಯ ಮಾಡಿದರೂ ಅದು ವ್ಯರ್ಥವೇ. ಉಪ್ಪಿನಕಾಯಿ ಅಂದ್ರೆ ಮೊದಲು ನೆನಪಾಗುವುದು ಮಾವಿನ ಕಾಯಿ ಉಪ್ಪಿನಕಾಯಿ ಅಥವಾ ನಿಂಬೆ ಉಪ್ಪಿನಕಾಯಿ. ಆದರೆ, ಉಪ್ಪಿನಕಾಯಿಯಲ್ಲಿ ಹಲವಾರು ತರಹೇವಾರಿ ಪಾಕವಿಧಾನಗಳಿವೆ. ಅದು ಮಾವಿನಕಾಯಿ, ಸೌತೆಕಾಯಿ, ಹಾಗಲಕಾಯಿ, ಬಾಳೆಗೊನೆಯಿಂದ ಹಿಡಿದು ಹುಣಸೆಹುಳಿ ಉಪ್ಪಿನಕಾಯಿಯವರೆಗೆ ವೆರೈಟಿ ಉಪ್ಪಿನಕಾಯಿಗಳನ್ನು ತಯಾರಿಸಬಹುದು. ಹುಣಸೆ ಹುಳಿ ಉಪ್ಪಿನಕಾಯಿಯು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿ ಹೊಂದಿರುವ ಈ ಉಪ್ಪಿನಕಾಯಿಯನ್ನು ಸವಿದರೆ ಮತ್ತೆ ಮತ್ತೆ ಬೇಕೆನಿಸದೆ ಇರಲಾರದು. ಅಷ್ಟು ರುಚಿ ಹೊಂದಿದೆ ಈ ಹುಣಸೆಹಣ್ಣಿನ ಉಪ್ಪಿನಕಾಯಿ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ.

ಹುಣಸೆಹಣ್ಣಿನ ಉಪ್ಪಿನಕಾಯಿ ತಯಾರಿಸುವುದು ಹೀಗೆ

ಬೇಕಾಗುವ ಸಾಮಗ್ರಿ: ಹುಣಸೆಹಣ್ಣು- 1 ಕಪ್, ಬಿಸಿ ನೀರು- ಅರ್ಧ ಕಪ್, ಮೆಂತ್ಯ ಕಾಳು- 1 ಚಮಚ, ಜೀರಿಗೆ- 3 ಚಮಚ, ಅಜ್ವಾನ (ಓಂ ಕಾಳು)- ¼ ಚಮಚ, ಬೆಲ್ಲ- ಮುಕ್ಕಾಲು ಕಪ್, ಬ್ಯಾಡಗಿ ಮೆಣಸು- 20, ಖಾರದ ಮೆಣಸಿನಕಾಯಿ- 5, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ- ಸ್ವಲ್ಪ, ಕರಿಬೇವು- 7 ರಿಂದ 8 ಎಲೆ, ಸಾಸಿವೆ- 2 ಚಮಚ.

ಮಾಡುವ ವಿಧಾನ: ಮೊದಲಿಗೆ ಹುಣಸೆಹಣ್ಣನ್ನು ಸರಿಯಾಗಿ ಸ್ವಚ್ಛಗೊಳಿಸಿ. ಅದರಲ್ಲಿರುವ ಬೇಡದ ವಸ್ತುಗಳನ್ನು ತೆಗೆದುಹಾಕಿ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಸ್ವಚ್ಛಗೊಳಿಸಿದ ನಂತರ ಹುಣಸೆಹಣ್ಣನ್ನು ಅರ್ಧ ಕಪ್ ಬಿಸಿ ನೀರಿನಲ್ಲಿ ನೆನೆಯಲು ಬಿಡಿ. ಇನ್ನೊಂದೆಡೆ ಒಂದು ಬಾಣಲೆಯಲ್ಲಿ ಮೆಂತ್ಯ ಕಾಳು, 2 ಚಮಚ ಜೀರಿಗೆ ಹಾಗೂ ಓಂ ಕಾಳನ್ನು ಹುರಿಯಿರಿ. ನಂತರ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಬ್ಯಾಡಗಿ ಹಾಗೂ ಖಾರದ ಮೆಣಸನ್ನು ಫ್ರೈ ಮಾಡಿ (ಕರಿಯಿರಿ). ನಂತರ ಹುರಿದಿಟ್ಟ ಜೀರಿಗೆ, ಮೆಂತ್ಯ, ಓಂಕಾಳನ್ನು ಪುಡಿ ಮಾಡಿಟ್ಟುಕೊಳ್ಳಿ. ನಂತರ ಕರಿದ ಒಣಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಎರಡು ಚಮಚದಷ್ಟು ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಂದು ಚಮಚ ಜೀರಿಗೆ ಹಾಕಿ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ನೆನೆಸಿಟ್ಟ ಹುಣಸೆಹಣ್ಣನ್ನು ಹಾಕಿ ಫ್ರೈ ಮಾಡಿ. ನಂತರ ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ರಿಂದ 6 ನಿಮಿಷಗಳ ನಂತರ ಪುಡಿ ಮಾಡಿಟ್ಟ ಮಸಾಲೆಗಳನ್ನು ಹಾಕಿ ಮಿಕ್ಸ್ ಮಾಡಿ. ನಂತರ ಬಿಸಿ ಮಾಡಿಟ್ಟ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ಕೆಡದಂತೆ ಇಡಲು ತಣ್ಣಗಾದ ಬಳಿಕ ಗಾಜಿನ ಕಂಟೇನರ್ ಗೆ ವರ್ಗಾಯಿಸಿ.

ಆರೋಗ್ಯ ಪ್ರಯೋಜನ

ಪೋಷಕಾಂಶಗಳಲ್ಲಿ ಸಮೃದ್ಧ: ಹುಣಸೆಹಣ್ಣು ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಮ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ: ಇದರಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಹುಣಸೆಹಣ್ಣು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಚಯಾಪಚಯ ಕ್ರಿಯೆಗೆ ಸಹಕಾರಿ: ಹುಣಸೆಹಣ್ಣು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ