ಕನ್ನಡ ಸುದ್ದಿ  /  Lifestyle  /  Food Mango Pickle Recipe Make Mango Pickle In Simple Way At Home Easy Method To Prepare Mango Pickle Instantly Bgy

Mango Pickle: ಮನೆಯಲ್ಲೇ ಥಟ್ಟಂತ ಮಾವಿನಕಾಯಿ ಉಪ್ಪಿನಕಾಯಿ ರೆಡಿ ಮಾಡ್ಬೇಕಾ; ಇಲ್ಲಿದೆ ಸುಲಭ ವಿಧಾನ, ಅನುಸರಿಸಿ

ಉಪ್ಪಿನಕಾಯಿ ಇದ್ದರೆ ಊಟದ ರುಚಿ ಹೆಚ್ಚುವುದು ಸುಳ್ಳಲ್ಲ. ಈಗಂತೂ ಮಾವಿನಕಾಯಿ ಸೀಸನ್‌, ಈ ಸೀಸನ್‌ನಲ್ಲಿ ರುಚಿಯಾದ ಮಾವಿನಕಾಯಿ ಉಪ್ಪಿನಕಾಯಿ ಇದ್ದರೆ, ಆಹಾ ಊಟದ ಘಮ್ಮತ್ತೆ ಬೇರೆ. ಮನೆಯಲ್ಲೇ ಸುಲಭವಾಗಿ, ಥಟ್ಟಂತ ಉಪ್ಪಿನಕಾಯಿ ರೆಡಿ ಆಗಬೇಕು ಅಂತಿದ್ರೆ ಈ ಕ್ರಮ ಅನುಸರಿಸಿ.

ಮಾವಿನಕಾಯಿ ಉಪ್ಪಿನಕಾಯಿ
ಮಾವಿನಕಾಯಿ ಉಪ್ಪಿನಕಾಯಿ

ಬೇಸಿಗೆಕಾಲ ಬಂತೆಂದರೆ ಸಾಕು ಮಾವಿನಕಾಯಿ ಸೀಸನ್‌ ಶುರುವಾಗುತ್ತದೆ. ಮಾವಿನಕಾಯಿಯಿಂದ ಪ್ರಾರಂಭವಾಗುವ ವಿಭಿನ್ನ ಆಹಾರ ಪದಾರ್ಥಗಳು, ಮಾವಿನ ಹಣ್ಣಿನ ಕಾಲ ಮುಗಿದು, ತಿಂಗಳುಗಳ ನಂತರ ಉಪ್ಪು ನೀರಲ್ಲಿ ನೆನೆಸಿಟ್ಟ ಮಾವಿನಕಾಯಿಯಿಂದ ತಯಾರಿಸುವ ಪದಾರ್ಥಗಳವರೆಗೂ ಎಲ್ಲೆಡೆ ಮಾವು..ಮಾವು..ಮಾವಿನದೇ ದರ್ಬಾರ್..

ಮಾವಿನಕಾಯಿ ಸೀಸನ್‌ ಶುರುವಾಗುತ್ತಲೇ ಎಲ್ಲರೂ ಮಾಡುವ ಮೊದಲ ಕೆಲಸವೇ ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಶುರುವಿಟ್ಟುಕೊಳ್ಳೋದು. ಅದರಲ್ಲೂ ದಿಢೀರ್‌ ಅಂತ ಮಾವಿನಕಾಯಿ ಉಪ್ಪಿನಕಾಯಿ ಮಾಡಿ, ಮನೆಗೆ ಬಂದ ಅತಿಥಿಗಳನ್ನು ಸಂತೃಪ್ತಿಗೊಳಿಸುವುದೆಂದರೆ ಮನೆಯ ಮಹಿಳೆಯರಿಗಂತೂ ಅದೇನೋ ಸಂತಸ, ಸಂಭ್ರಮ. ಆದರೆ ದಿಢೀರ್‌ ಅಂತ ಮಾವಿನಕಾಯಿಯಿಂದ ಉಪ್ಪಿನಕಾಯಿ ಮಾಡುವುದು ಹೇಗೆ... ಒಂದು ತಿಂಗಳವರೆಗಾದರೂ ಅದನ್ನು ಬಳಸುವಂತಿರಬೇಕಲ್ಲ ಅಂತ ಯೋಚಿಸುತ್ತಿದ್ದೀರಾ..? ಅದಕ್ಕಾಗಿ ಸರಳ ವಿಧಾನಗಳನ್ನು ಅನುಸರಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಮನೆಯಲ್ಲಿ ಮಾವಿನಕಾಯಿ ಇದ್ದರೆ ಅತಿಥಿಗಳು ಬರುವ ಮುನ್ನ ರುಚಿಕರ ಉಪ್ಪಿನಕಾಯಿ ಮಾಡಬಹುದು. ಬೆಂಗಳೂರು ಹಾಗೂ ಕರಾವಳಿ ಶೈಲಿಯಲ್ಲಿ ಉಪ್ಪಿನಕಾಯಿ ಮಾಡುವ ಸುಲಭ ವಿಧಾನಗಳು ಹೀಗಿವೆ:

ಬೆಂಗಳೂರು ಶೈಲಿ ಮಾವಿನಕಾಯಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: 2 ಮಧ್ಯಮ ಗಾತ್ರದ ತೋತಾಪುರಿ ಮಾವಿನಕಾಯಿ, 2 ಟೀ ಚಮಚ ಸಾಸಿವೆ, 2 ಚಮಚ ಮೆಂತ್ಯೆ, 3 ಟೀ ಚಮಚ ಉಪ್ಪು, ಒಗ್ಗರಣೆ, 3 ಟೇಬಲ್‌ ಚಮಚ ಎಣ್ಣೆ, 1 ಟೀ ಚಮಚ ಸಾಸಿವೆ, ಇಂಗು ಸ್ವಲ್ಪ, 2 ಕಡ್ಡಿ ಕರಿಬೇವಿನ ಸೊಪ್ಪು

ತಯಾರಿಸುವ ವಿಧಾನ: ತೋತಾಪುರಿ ಮಾವಿನಕಾಯಿಯ ತೊಟ್ಟನ್ನು ತೆಗೆದು ಸಣ್ಣಗಾತ್ರದಲ್ಲಿ ಹೆಚ್ಚಿಕೊಳ್ಳಿ. ಮತ್ತೊಂದು ಕಡೆ 2 ಚಮಚ ಸಾಸಿವೆಯನ್ನು ಎಣ್ಣೆ ಹಾಕದೆ ಘಮ ಬರುವವರೆಗೆ ಹುರಿದುಕೊಂಡು ತಣ್ಣಗಾಗಲು ಪಕ್ಕಕ್ಕಿರಿಸಿ. 2 ಚಮಚ ಮೆಂತ್ಯವನ್ನೂ ಸಣ್ಣ ಉರಿಯಲ್ಲಿ ಘಮ ಬರುವವರೆಗೆ ಹುರಿದು, ಸಾಸಿವೆಯ ಜೊತೆಗೆ ತಣ್ಣಗಾಗಲು ಇಟ್ಟುಕೊಳ್ಳಿ. ತಣ್ಣಗಾದ ನಂತರ ಸಾಸಿವೆ ಹಾಗೂ ಮೆಂತ್ಯವನ್ನು ನೀರು ಹಾಕದೆಯೇ ಒಟ್ಟಿಗೆ ಪೌಡರ್‌ ರೂಪದಲ್ಲಿ ರುಬ್ಬಿಕೊಳ್ಳಿ.

ಸಣ್ಣಗೆ ಹೆಚ್ಚಿಕೊಂಡ ಮಾವಿನಕಾಯಿಯನ್ನು ಬೌಲ್‌ಗೆ ಹಾಕಿಕೊಂಡು ಅದಕ್ಕೆ 3 ಟೀ ಚಮಚ ಉಪ್ಪು, 2 ಟೀ ಚಮಚ ಅಚ್ಚ ಖಾರದ ಪುಡಿ, 1 ಚಮಚ ಅರಶಿನ ಪುಡಿ, ಸಾಸಿವೆ ಮೆಂತ್ಯದ ಪುಡಿಯನ್ನೂ 2 ಟೀ ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಅದನ್ನು ಬೆರೆಯಲು ಬಿಡಿ.

ಈಗ ಮಿಶ್ರಣಕ್ಕೆ ಒಗ್ಗರಣೆ ಹಾಕುವುದಕ್ಕಾಗಿ 3 ಚಮಚ ಎಣ್ಣೆಗೆ 1 ಚಮಚ ಸಾಸಿವೆ, ಅದು ಸಿಡಿದ ನಂತರ ಸ್ವಲ್ಪ ಇಂಗಿನ ಪುಡಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಅದು ತಣ್ಣಗಾದ ನಂತರ ಬೆರೆಸಿಟ್ಟ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿ ಸಿದ್ಧವಾಗುತ್ತದೆ. ಸಾಮಾನ್ಯ ತಾಪಮಾನದಲ್ಲಿ 1 ವಾರದ ಕಾಲ, ಫ್ರಿಡ್ಜ್‌ನಲ್ಲಿ ಇರಿಸಿದರೆ 1 ತಿಂಗಳವರೆಗೂ ಕೆಡದಂತೆ ದಿಢೀರನೆ ತಯಾರಿಸಿದ ಈ ಮಾವಿನ ಕಾಯಿ ಉಪ್ಪಿನಕಾಯಿಯನ್ನು ಇಟ್ಟು, ಬಳಸಬಹುದು.

ಕರಾವಳಿ ಶೈಲಿ ಮಾವಿನಕಾಯಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ಉಪ್ಪಿನಕಾಯಿಯ ಮಾವಿನಕಾಯಿ, 1 ಕಪ್‌ ಕಲ್ಲುಪ್ಪು, ಎರಡು ಚಮಚ ಅರಸಿನ ಪುಡಿ, 100 ಗ್ರಾಂ ಬ್ಯಾಡಗಿ ಮೆಣಸು, 20-30 ಗುಂಡು ಮೆಣಸು, 1 ಚಮಚ ಕೊಬ್ಬರಿ ಎಣ್ಣೆ, ಕಾಲು ಚಮಚ ಇಂಗು, 2 ಚಮಚ ಸಾಸಿವೆ, 1 ಚಮಚ ಜೀರಿಗೆ, ಅರ್ಧ ಚಮಚ ಮೆಂತ್ಯ, ಅರ್ಧ ಲೀಟರ್ ನೀರು

ತಯಾರಿಸುವ ವಿಧಾನ: ಮಾವಿನ ಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿಕೊಂಡು ಬದಿಗೆ ಇರಿಸಿ. ಪಾತ್ರೆಯಲ್ಲಿ ಅರ್ಧ ಲೀಟರ್‌ ನೀರು ಹಾಕಿ, ಅದಕ್ಕೆ 1 ಕಪ್‌ ಕಲ್ಲುಪ್ಪು ಹಾಗೂ ಅರ್ಧ ಸ್ಪೂನ್‌ ಅರಿಶಿನವನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಕುದಿದ ನೀರಿಗೆ ಹೆಚ್ಚಿಕೊಂಡ ಮಾವಿನಕಾಯಿಯನ್ನು ಸೇರಿಸಿ ಮತ್ತೊಂದು ಕುದಿ ಬರಿಸಿ, ಆರಲು ಬಿಡಿ.

ತವಾವನ್ನು ಬೆಂಕಿಯ ಮೇಲಿಟ್ಟು 100 ಗ್ರಾಂ ಬ್ಯಾಡಗಿ ಮೆಣಸು ಹಾಗೂ 20-30 ಗುಂಡು ಮೆಣಸು ಹಾಗೂ ಅರ್ಧ ಚಮಚ ಇಂಗಿನಪುಡಿ ಹಾಕಿ ಘಮ ಬರುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ಆರಲು ಬಟ್ಟಲಿಗೆ ಹಾಕಿಕೊಳ್ಳಿ. ಅದೇ ತವಾಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಸಾಸಿವೆ, ಜೀರಿಗೆ ಹಾಗೂ ಮೆಂತ್ಯೆಯನ್ನೂ ಹುರಿದುಕೊಳ್ಳಿ. ಈಗ ಸಾಸಿವೆ, ಜೀರಿಗೆ ಹಾಗೂ ಮೆಂತ್ಯದ ಜೊತೆಗೆ ಹುರಿದ ಮೆಣಸುಗಳನ್ನು ಸೇರಿಸಿ ಪುಡಿಮಾಡಿಕೊಳ್ಳಿ.

ಈಗ ಬೇಯಿಸಿಟ್ಟ ಮಾವಿನ ಕಾಯಿಯನ್ನು ಉಪ್ಪು ನೀರಿನ ಜೊತೆಯಲ್ಲೇ ನಿತ್ಯದ ಬಳಕೆಗೆ ಬೇಕಾದಷ್ಟು ಮಾತ್ರ ತೆಗೆದುಕೊಂಡು ಅದಕ್ಕೆ ತಯಾರಿಸಿಟ್ಟ ಉಪ್ಪಿನಕಾಯಿ ಪೌಡರ್‌ ಮಿಶ್ರಣ ಮಾಡಿ. ಹೆಚ್ಚಿನದನ್ನು ಭರಣಿಗಳಲ್ಲಿ ಶೇಖರಿಸಿಕೊಂಡರೆ ವರ್ಷದವರೆಗೂ ಉಪಯೋಗಿಸಬಹುದು.

ಒಟ್ಟಿನಲ್ಲಿ ಮನೆಗೆ ಅತಿಥಿಗಳು ಬಂದಾಗ ಊಟದ ಜೊತೆಗೆ ಉಪ್ಪಿನಕಾಯಿ ಇಲ್ಲವಲ್ಲಾ ಎಂದು ಇನ್ನು ಚಿಂತೆ ಮಾಡಬೇಕಿಲ್ಲ. ಮಾವಿನಕಾಯಿ ಇದ್ದರೆ ಸಾಕು ದಿಢೀರನೆ ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿಯನ್ನು ಸಿದ್ಧಮಾಡಿಕೊಳ್ಳಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ