logo
ಕನ್ನಡ ಸುದ್ದಿ  /  ಜೀವನಶೈಲಿ  /  ಭಾನುವಾರದ ಸಂಜೆಗೆ ಕಾಫಿ ಜೊತೆ ಬೆಸ್ಟ್‌ ಕಾಂಬಿನೇಷನ್ ಆಗುತ್ತೆ ಮಿಶ್ರ ಬೇಳೆ ವಡಾ, ಇದನ್ನು ಮಾಡೋದು ಸುಲಭ, ರೆಸಿಪಿ ಇಲ್ಲಿದೆ

ಭಾನುವಾರದ ಸಂಜೆಗೆ ಕಾಫಿ ಜೊತೆ ಬೆಸ್ಟ್‌ ಕಾಂಬಿನೇಷನ್ ಆಗುತ್ತೆ ಮಿಶ್ರ ಬೇಳೆ ವಡಾ, ಇದನ್ನು ಮಾಡೋದು ಸುಲಭ, ರೆಸಿಪಿ ಇಲ್ಲಿದೆ

Reshma HT Kannada

Oct 12, 2024 04:21 PM IST

google News

ಮಿಶ್ರ ಬೇಳೆ ವಡಾ

    • ಉದ್ದಿನವಡೆಯನ್ನು ನೀವು ಯಾವಾಗಲೂ ತಿಂದಿರುತ್ತೀರಿ. ಆದರೆ ಮಿಶ್ರ ಬೇಳೆಗಳ ವಡೆಯನ್ನೂ ಒಮ್ಮೆ ತಿಂದು ನೋಡಿ, ಇದರ ರುಚಿ ಖಂಡಿತ ನಿಮಗೆ ಇಷ್ಟ ಆಗುತ್ತೆ. ಹಾಗಂತ ಎಲ್ಲಿ ಹೋಗಿ ತಿನ್ನೋದು ಅಂತ ಕೇಳ್ಬೇಡಿ. ಮನೆಯಲ್ಲೇ ಸುಲಭವಾಗಿ ಮಾಡಿಕೊಂಡು ತಿನ್ನಬಹುದು, ನಾಳೆ ಭಾನುವಾರ ಟ್ರೈ ಮಾಡಿ. ರೆಸಿಪಿ ಇಲ್ಲಿದೆ.
ಮಿಶ್ರ ಬೇಳೆ ವಡಾ
ಮಿಶ್ರ ಬೇಳೆ ವಡಾ

ಸಂಜೆ ಕಾಫಿ ಜೊತೆ ಏನಾದ್ರೂ ತಿನ್ನೋಕೆ ಇದ್ರೆ ಎಷ್ಟು ಚೆನ್ನಾಗಿರುತ್ತದೆ ಅನ್ನಿಸೋದು ಸಹಜ. ಅದರಲ್ಲೂ ಭಾನುವಾರದ ಹೊತ್ತು ಮನೆಯಲ್ಲೇ ಕೂತಿದ್ದಾಗ ನಾಲಿಗೆ ತಿಂಡಿಗಳನ್ನು ಬಯಸೋದು ಸಹಜ. ನಿಮಗೂ ಏನಾದ್ರೂ ಕರಿದ ತಿಂಡಿ ತಿನ್ನಬೇಕು ಅನ್ನಿಸಿದ್ರೆ ಮಿಶ್ರ ಬೇಳೆಗಳ ವಡೆ ಮಾಡಿ, ಇದನ್ನ ಸುಲಭವಾಗಿ ಕೆಲವೇ ಸಾಮಗ್ರಿ ಬಳಸಿ ಮಾಡಬಹುದು.

ಮಿಶ್ರ ಬೇಳೆಗಳ ವಡಾ ಸಂಜೆಯ ಕಾಫಿ ಜೊತೆಗೆ ಮಸ್ತ್ ಕಾಂಬಿನೇಷನ್ ಆಗುತ್ತೆ. ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಇದನ್ನ ಮಾಡಲು ಏನೆಲ್ಲಾ ಬೇಕು, ಮಾಡುವ ಕ್ರಮ ಹೇಗೆ ಎಂಬ ವಿವರ ಇಲ್ಲಿದೆ.

ಮಿಶ್ರ ಬೇಳೆ ವಡಾಕ್ಕೆ ಬೇಕಾಗುವ ಸಾಮಗ್ರಿಗಳು

ಉದ್ದಿನಬೇಳೆ – ಅರ್ಧ ಕಪ್, ಕಡಲೆಬೇಳೆ – ಅರ್ಧ ಕಪ್‌, ಹೆಸರುಬೇಳೆ – ಅರ್ಧ ಕಪ್‌ ಗೋಧಿಹಿಟ್ಟು – ಅರ್ಧ ಕಪ್‌, ಅಕ್ಕಿಹಿಟ್ಟು – ಅರ್ಧ ಕಪ್‌, ಶುಂಠಿ – ಸಣ್ಣ ತುಂಡು, ನೀರು – ಹದಕ್ಕೆ, ಎಣ್ಣೆ – ಕರಿಯಲು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಹಸಿಮೆಣಸು – ಐದಾರು, ಕರಿಬೇವು – ಒಂದು ಮುಷ್ಟಿ, ಉಪ್ಪು – ರುಚಿಗೆ,

ಮಿಶ್ರ ಬೇಳೆ ವಡೆ ಮಾಡುವ ವಿಧಾನ

ಉದ್ದಿನಬೇಳೆ, ಕಡಲೆಬೇಳೆ, ಹೆಸರುಬೇಳೆಯನ್ನು ಮೊದಲೇ ನೆನೆಸಿಟ್ಟಿರಬೇಕು. ಇವುಗಳನ್ನು ಕನಿಷ್ಠ 5 ಗಂಟೆಗಳ ಕಾಲ ನೆನೆಸಿ ಇಡಬೇಕು. ನಂತರ ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ. ಅದೇ ಜಾರಿಗೆ ಶುಂಠಿ, ಹಸಿಮೆಣಸು ಹಾಗೂ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ. ಆ ಪಾತ್ರೆಗೆ ಗೋಧಿಹಿಟ್ಟು, ಅಕ್ಕಿಹಿಟ್ಟು, ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ವಡೆಯ ಆಕಾರಕ್ಕೆ ತಟ್ಟಿ, ಇದನ್ನು ಎಣ್ಣೆಯಲ್ಲಿ ಕರಿಯಿರಿ. ಈಗ ನಿಮ್ಮ ಮುಂದೆ ರುಚಿಯಾದ ಮಿಶ್ರಬೇಳೆಯ ವಡಾ ತಿನ್ನಲು ಸಿದ್ಧ.

ಈ ರೀತಿಯ ವಡಾವನ್ನು ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಮಾತ್ರವಲ್ಲ ಮಿಶ್ರಬೇಳೆಗಳು ಕೂಡ ಆರೋಗ್ಯಕ್ಕೆ ಉತ್ತಮವಾಗಿರುವ ಕಾರಣ ಈ ವಡಾ ರುಚಿಯ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ಎನ್ನಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ