ಈ ಪೆಪ್ಪರ್ ಸೂಪ್ ಸೇವಿಸಿ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಇಲ್ಲಿದೆ ಪಾಕವಿಧಾನ
Nov 22, 2024 11:55 AM IST
ಈ ಪೆಪ್ಪರ್ ಸೂಪ್ ಸೇವಿಸಿ: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಇಲ್ಲಿದೆ ಪಾಕವಿಧಾನ
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಕಾಳುಮೆಣಸಿನಿಂದ ಮಾಡಿದ ಖಾದ್ಯಗಳನ್ನು ಆಗಾಗ ತಿನ್ನಬೇಕು. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾಳುಮೆಣಸಿನ (ಪೆಪ್ಪರ್) ಸೂಪ್ ಅನ್ನು ಪ್ರಯತ್ನಿಸಿ. ಇದು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ಕಾಳುಮೆಣಸು ಸೂಪ್ ಪಾಕವಿಧಾನವನ್ನು ನೀಡಲಾಗಿದೆ.
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾಳುಮೆಣಸು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹೀಗಾಗಿ ಶೀತ, ಕೆಮ್ಮು, ಜ್ವರದಿಂದ ಬಳಲುವುದು ಸಾಮಾನ್ಯ. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾಳುಮೆಣಸಿನ (ಪೆಪ್ಪರ್) ಸೂಪ್ ಅನ್ನು ಪ್ರಯತ್ನಿಸಿ. ಇದು ತುಂಬಾ ರುಚಿಕರವಾಗಿರುತ್ತದೆ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ಕಾಳುಮೆಣಸಿನ ಸೂಪ್ ಮಾಡುವುದರಿಂದ ಚಳಿಗಾಲದಲ್ಲಿ ಜ್ವರ ಬೇಗ ಬರುವುದಿಲ್ಲ. ಅಲ್ಲದೆ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಈ ಪೆಪ್ಪರ್ (ಕಾಳುಮೆಣಸಿನ) ಸೂಪ್ ಪಾಕವಿಧಾನವನ್ನು ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿಯಿರಿ.
ಪೆಪ್ಪರ್ ಸೂಪ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕಾಳುಮೆಣಸು- ಎರಡು ಟೀ ಚಮಚ, ಕರಿಬೇವಿನ ಎಲೆ- 10 ರಿಂದ 12, ತುರಿದ ತೆಂಗಿನಕಾಯಿ- ½ ಕಪ್, ಕರಿಮೆಣಸು- ಎಂಟು, ಅಕ್ಕಿ- ಒಂದು ಟೀ ಚಮಚ, ಮೆಂತ್ಯ ಕಾಳು- ಕಾಲು ಟೀ ಚಮಚ, ಕಡಲೆಬೇಳೆ- ಒಂದು ಟೀ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- ಒಂದೂವರೆ ಚಮಚ, ಜೀರಿಗೆ- ಒಂದು ಟೀ ಚಮಚ, ಟೊಮೆಟೋ- ಎರಡು, ಹುಣಸೆಹುಳಿ- ಒಂದು ಕಪ್, ನೀರು- ಸಾಕಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ- ಹತ್ತು, ಲವಂಗ- 2, ಸಣ್ಣ ಈರುಳ್ಳಿ- ಆರು, ಇಂಗು- ಚಿಟಿಕೆ, ಸಾಸಿವೆ- ಒಂದು ಟೀ ಚಮಚ, ಎಣ್ಣೆ- ಮೂರು ಟೀ ಚಮಚ.
ಪೆಪ್ಪರ್ ಸೂಪ್ ರೆಸಿಪಿ ತಯಾರಿಸುವ ವಿಧಾನ: ಮೊದಲಿಗೆ ಪೆಪ್ಪರ್ ಪೇಸ್ಟ್ ಅನ್ನು ತಯಾರಿಸಬೇಕು. ಇದಕ್ಕಾಗಿ ಸ್ಟೌವ್ ಮೇಲೆ ಬಾಣಲೆ ಇಟ್ಟು ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಮೆಂತ್ಯ, ಅಕ್ಕಿ ಮತ್ತು ಕರಿಮೆಣಸು ಹುರಿಯಿರಿ. ಕೊನೆಯಲ್ಲಿ ತುರಿದ ತೆಂಗಿನಕಾಯಿ ಸೇರಿಸಿ. ಜತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ಈ ಸಂಪೂರ್ಣ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ.
ಈಗ ಅದೇ ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗೆ ಸಾಸಿವೆ ಹಾಕಿ ಹುರಿಯಿರಿ. ನಂತರ ಕರಿಬೇವಿನ ಸೊಪ್ಪು ಮತ್ತು ಇಂಗು ಹಾಕಿ ಹುರಿಯಿರಿ. ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅರಿಶಿನ ಮತ್ತು ಉಪ್ಪು ಸೇರಿಸಿ. ಬೆಳ್ಳುಳ್ಳಿ, ಲವಂಗವನ್ನು ಸೇರಿಸಿ. ಸಂಪೂರ್ಣ ಮಿಶ್ರಣವನ್ನು ಬೇಯಿಸಲು ಬಿಡಿ. ಇದಕ್ಕೆ ಕತ್ತರಿಸಿದ ಟೊಮೆಟೊ ಸೇರಿಸಿ. ಅದು ಮೃದುವಾಗುವವರೆಗೆ ಫ್ರೈ ಮಾಡಿ.
ಹುಣಸೆಹಣ್ಣನ್ನು ಮೊದಲೇ ನೀರಿನಲ್ಲಿ ನೆನೆಸಿ ಪಕ್ಕಕ್ಕೆ ಇಡಿ. ಒಂದು ಕಪ್ ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 20 ನಿಮಿಷ ಬೇಯಿಸಲು ಬಿಡಿ. ನಂತರ ಇದಕ್ಕೆ ಪೆಪ್ಪರ್ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಷ್ಟು ನೀರು ಸಹ ಸೇರಿಸಬೇಕು. ಅರ್ಧ ಘಂಟೆಯವರೆಗೆ ಮುಚ್ಚಿ, ಬೇಯಿಸಿದರೆ ಟೇಸ್ಟಿ ಪೆಪ್ಪರ್ ಸೂಪ್ ಸವಿಯಲು ಸಿದ್ಧ.
ಬಯಸಿದಲ್ಲಿ ತುರಿದ ಬೆಲ್ಲವನ್ನು ಕೂಡ ಸೇರಿಸಬಹುದು. ಮಸಾಲೆಯುಕ್ತ ಪೆಪ್ಪರ್ ಸೂಪ್ ತುಂಬಾ ರುಚಿಕರವಾಗಿರುತ್ತದೆ. ಬಾಯಿ ಸಪ್ಪೆ ಎನಿಸಿದಾಗಲೂ ಈ ಪೆಪ್ಪರ್ ಸೂಪ್ ಅನ್ನು ತಯಾರಿಸಿ ಸೇವಿಸಬಹುದು. ಬಿಸಿ ಅನ್ನಕ್ಕೆ ಈ ಕಾಳುಮೆಣಸಿನ ಸೂಪ್ ಸೇರಿಸಿ ತಿಂದರೆ ರುಚಿಯೇ ಅಗಾಧ.