logo
ಕನ್ನಡ ಸುದ್ದಿ  /  ಜೀವನಶೈಲಿ  /  ಈ ವೀಕೆಂಡ್‍ನಲ್ಲಿ ಮಾಡಿ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ: ನೀರುದೋಸೆ ಜತೆ ತಿಂದ್ರೆ ಸೂಪರ್ ಉಂಟು ಮಾರಾಯ್ರೆ ಅಂತೀರಿ

ಈ ವೀಕೆಂಡ್‍ನಲ್ಲಿ ಮಾಡಿ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ: ನೀರುದೋಸೆ ಜತೆ ತಿಂದ್ರೆ ಸೂಪರ್ ಉಂಟು ಮಾರಾಯ್ರೆ ಅಂತೀರಿ

Priyanka Gowda HT Kannada

Nov 15, 2024 12:14 PM IST

google News

ಈ ವೀಕೆಂಡ್‍ನಲ್ಲಿ ಮಾಡಿ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ: ನೀರುದೋಸೆ ಜತೆ ತಿಂದ್ರೆ ಸೂಪರ್ ಉಂಟು ಮಾರಾಯ್ರೆ ಅಂತೀರಿ

  • ಮಂಗಳೂರು ಹಾಗೂ ಉಡುಪಿ ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಚಿಕನ್ ಸುಕ್ಕ ರೆಸಿಪಿಯನ್ನು ಕೋಳಿ ಸುಕ್ಕ ಅಥವಾ ಕೋರಿ ಆಜದಿನ (ತುಳು ಭಾಷೆಯಲ್ಲಿ) ಎಂದೂ ಕರೆಯುತ್ತಾರೆ. ನೀರುದೋಸೆ, ಇಡ್ಲಿ, ಅನ್ನದ ಜತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಮಂಗಳೂರು ಸ್ಪೆಷಲ್ ಚಿಕನ್ ಸುಕ್ಕ ರೆಸಿಪಿ ಇಲ್ಲಿದೆ.

ಈ ವೀಕೆಂಡ್‍ನಲ್ಲಿ ಮಾಡಿ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ: ನೀರುದೋಸೆ ಜತೆ ತಿಂದ್ರೆ ಸೂಪರ್ ಉಂಟು ಮಾರಾಯ್ರೆ ಅಂತೀರಿ
ಈ ವೀಕೆಂಡ್‍ನಲ್ಲಿ ಮಾಡಿ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ: ನೀರುದೋಸೆ ಜತೆ ತಿಂದ್ರೆ ಸೂಪರ್ ಉಂಟು ಮಾರಾಯ್ರೆ ಅಂತೀರಿ (PC: Canva/Slurrp)

ವೀಕೆಂಡ್ ಬಂತು ಅಂದ್ರೆ ಮಾಂಸಾಹಾರ ಪ್ರಿಯರು ಚಿಕನ್, ಮಟನ್ ಇಲ್ಲವೇ ಮೀನಿನ ಖಾದ್ಯಗಳನ್ನು ಸವಿಯುತ್ತಾರೆ. ಈ ವೀಕೆಂಡ್‍ನಲ್ಲಿ ಯಾವ ರೆಸಿಪಿ ಮಾಡುವುದು ಎಂಬ ಯೋಚನೆಯಲ್ಲಿದ್ದರೆ ಚಿಕನ್ ಸುಕ್ಕ ರೆಸಿಪಿ ಮಾಡಬಹುದು. ಮಂಗಳೂರು ಹಾಗೂ ಉಡುಪಿ ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಈ ಸುಕ್ಕ ರೆಸಿಪಿಯನ್ನು ಕೋಳಿ ಸುಕ್ಕ ಅಥವಾ ಕೋರಿ ಆಜದಿನ (ತುಳು ಭಾಷೆಯಲ್ಲಿ) ಎಂದೂ ಕರೆಯುತ್ತಾರೆ. ಈ ಸುಕ್ಕವನ್ನು ಎರಡು ಶೈಲಿಯಲ್ಲಿ ಮಾಡಬಹುದು. ಒಣ ಅಥವಾ ಡ್ರೈ ಆಗಿ ರೆಸಿಪಿ ತಯಾರಿಸಬಹುದು. ಹಾಗೆಯೇ ಸ್ವಲ್ಪ ಗ್ರೇವಿಯಾಗಿಯೂ ಇದನ್ನು ತಯಾರಿಸಬಹುದು. ನೀರುದೋಸೆ, ಇಡ್ಲಿ, ಅನ್ನದ ಜತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಇದರ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ನೀವೂ ಈ ರೆಸಿಪಿಯನ್ನು ಮಾಡಲು ಇಷ್ಟಪಡುವಿರಾದರೆ, ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನಾವಿಲ್ಲಿ ಸ್ವಲ್ಪ ಗ್ರೇವಿ ಇರುವ ಕೋಳಿ ಸುಕ್ಕ ಪಾಕವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಬನ್ನಿ ರೆಸಿಪಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.

ಚಿಕನ್ ಸುಕ್ಕ ಅಥವಾ ಕೋರಿ ಆಜದಿನ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕೋಳಿ/ಚಿಕನ್- 1 ಕೆಜಿ, ಬ್ಯಾಡಗಿ ಮೆಣಸು- 20, ಖಾರದ ಮೆಣಸು- 4, ಧನಿಯಾ ಬೀಜ- 4 ಟೀ ಚಮಚ, ತುಪ್ಪ/ಅಡುಗೆ ಎಣ್ಣೆ- ಸ್ವಲ್ಪ, ಜೀರಿಗೆ- 1 ಟೀ ಚಮಚ , ಮೆಂತ್ಯ- ಅರ್ಧ ಚಮಚ, ಕರಿಮೆಣಸು- ಅರ್ಧ ಟೀ ಚಮಚ, ಲವಂಗ- 2, ಚೆಕ್ಕೆ- 1 ಸಣ್ಣ ತುಂಡು, ಗಸಗಸೆ- ಅರ್ಧ ಟೀ ಚಮಚ, ಈರುಳ್ಳಿ- 1, ಬೆಳ್ಳುಳ್ಳಿ- 16 ಎಸಳು, ಶುಂಠಿ- 1 ಸಣ್ಣ ತುಂಡು, ಅರಶಿನ ಪುಡಿ- 1 ಟೀ ಚಮಚ, ತೆಂಗಿನ ತುರಿ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಹುಣಸೆಹಣ್ಣು- 1 ಸಣ್ಣ ನಿಂಬೆ ಗಾತ್ರದಷ್ಟು, ಟೊಮೆಟೊ- ಅರ್ಧ, ಕರಿಬೇವು ಸೊಪ್ಪು- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿ. ಇದಕ್ಕೆ ಬ್ಯಾಡಗಿ ಮೆಣಸು ಹಾಗೂ ಖಾರದ ಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಧನಿಯಾ ಬೀಜ, ಮೆಂತ್ಯ, ಗಸಗಸೆ, ಚೆಕ್ಕೆ, ಕರಿಮೆಣಸು, ಲವಂಗ ಹಾಕಿ ಹುರಿಯಿರಿ. ಒಂದು ಮಿಕ್ಸಿ ಜಾರಿಗೆ ಈ ಹುರಿದಿಟ್ಟ ಮಿಶ್ರಣವನ್ನು ಹಾಕಿ, ಜತೆಗೆ ಜೀರಿಗೆಯನ್ನು ಹುರಿಯದೆ ಹಾಗೆಯೇ ಹಾಕಿ. ಇದಕ್ಕೆ ಬೇಕಿದ್ದರೆ ಕತ್ತರಿಸಿದ ಅರ್ಧ ಈರುಳ್ಳಿ ಸೇರಿಸಬಹುದು. 8 ಬೆಳ್ಳುಳ್ಳಿ ಎಸಳು, ಹುಣಸೆ ಹಣ್ಣು ಸೇರಿಸಿ ರುಬ್ಬಿಕೊಳ್ಳಿ.

ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಕೊಬ್ಬರಿ ಎಣ್ಣೆ/ಯಾವುದೇ ಅಡುಗೆ ಎಣ್ಣೆ ಹಾಕಿ. ಬಿಸಿಯಾದಾಗ ಕತ್ತರಿಸಿದ 1 ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಕತ್ತರಿಸಿದ ಅರ್ಧ ಟೊಮೆಟೊ ಹಾಕಿ ಫ್ರೈ ಮಾಡಿ. ಇದಕ್ಕೆ ಕರಿಬೇವುಸೊಪ್ಪು, ಸಣ್ಣಗೆ ಹೆಚ್ಚಿದ 8 ಎಸಳು ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಶುಚಿಗೊಳಿಸಿದ ಕೋಳಿಯನ್ನು ಬೆರೆಸಿ, ಇದಕ್ಕೆ 1 ಟೀ ಚಮಚ ಅರಶಿನ ಹಾಕಿ. ಕೋಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಕೋಳಿ ಬೆಂದ ನಂತರ, ರುಬ್ಬಿಟ್ಟಿರುವ ಮಸಾಲೆ ಮಿಶ್ರಣವನ್ನು ಹಾಕಿ, ಕುದಿಯಲು ಬಿಡಿ. ಮಸಾಲೆ ಮಿಶ್ರಣ ಸ್ವಲ್ಪ ಡ್ರೈ ಆಗಬೇಕು, ಅಲ್ಲಿ ತನಕ ಬೇಯಲು ಬಿಡಿ. ಉಪ್ಪಿನ ರುಚಿ ನೋಡಿ ಬೇಕಿದ್ದರೆ ಹಾಕಬಹುದು. ತಳ ಹಿಡಿಯದಂತೆ ಸೌಟಿಂದ ತಿರುಗಿಸುತ್ತಿರಿ.

ಇನ್ನು ತುರಿದ ತೆಂಗಿನತುರಿಯನ್ನು ಮಿಕ್ಸಿಯಲ್ಲಿ ಸ್ವಲ್ಪ ಪುಡಿ ಮಾಡಿಕೊಳ್ಳಿ. ಬೇಕಿದ್ದರೆ ಚಿಟಿಕೆ ಅರಶಿನ ಸೇರಿಸಬಹುದು. ಇದನ್ನು ಬಾಣಲೆಗೆ ಹಾಕಿ ಹುರಿಯಿರಿ. ಚಿಕನ್ ಮಸಾಲೆ ನೀರು ಕಡಿಮೆಯಾದ ಬಳಿಕ ಈ ತೆಂಗಿನತುರಿಯನ್ನು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಚಿಕನ್ ಸುಕ್ಕ ರೆಸಿಪಿ ಸಿದ್ಧ. ಇದನ್ನು ಅನ್ನ, ನೀರುದೋಸೆ ಅಥವಾ ರೊಟ್ಟಿಯೊಂದಿಗೂ ಸವಿಯಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ