logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ರುಚಿಯ ಚಿತ್ರಾನ್ನ ತಿನ್ಬೇಕು ಅಂತಿದ್ರೆ ಕಾಯಿ ಜೀರಿಗೆ ಚಿತ್ರಾನ್ನ ಮಾಡ್ಕೊಳ್ಳಿ, ಹೆಸರು ಡಿಫ್ರೆಂಟ್ ರುಚಿಯೂ ಭಿನ್ನ

ಹೊಸ ರುಚಿಯ ಚಿತ್ರಾನ್ನ ತಿನ್ಬೇಕು ಅಂತಿದ್ರೆ ಕಾಯಿ ಜೀರಿಗೆ ಚಿತ್ರಾನ್ನ ಮಾಡ್ಕೊಳ್ಳಿ, ಹೆಸರು ಡಿಫ್ರೆಂಟ್ ರುಚಿಯೂ ಭಿನ್ನ

Reshma HT Kannada

Oct 01, 2024 08:01 AM IST

google News

ಕಾಯಿ ಜೀರಿಗೆ ಚಿತ್ರಾನ್ನ ರೆಸಿಪಿ

    • ಚಿತ್ರಾನ್ನ ಅಂದ ಕೂಡಲೇ ಮುಖ ಸಿಂಡರಿಸುವವರ ಸಂಖ್ಯೆಯೇ ಹೆಚ್ಚು. ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುವ ಈ ತಿಂಡಿ ಬಹುತೇಕರಿಗೆ ಇಷ್ಟವಾಗುವುದಿಲ್ಲ. ಆದರೆ ಡಿಫ್ರೆಂಟ್ ಆಗಿರೋ ಹೊಸ ರುಚಿ, ಹೊಸ ಹೆಸರಿನ ಈ ಚಿತ್ರಾನ್ನ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿಂತಾರೆ. ಅದು ಕಾಯಿ ಜೀರಿಗೆ ಚಿತ್ರಾನ್ನ ಇದನ್ನು ಮಾಡೋದು ಹೇಗೆ ನೋಡಿ.
ಕಾಯಿ ಜೀರಿಗೆ ಚಿತ್ರಾನ್ನ ರೆಸಿಪಿ
ಕಾಯಿ ಜೀರಿಗೆ ಚಿತ್ರಾನ್ನ ರೆಸಿಪಿ (PC: Ambika Shetty's Kitchen-Kannada/ Facebook)

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಾಹಾರ ರೆಸಿಪಿಗಳಲ್ಲಿ ಅಗ್ರಸ್ಥಾನ ಇರುವುದು ಚಿತ್ರಾನ್ನಕ್ಕೆ. ಇದರೊಂದಿಗೆ ಹಬ್ಬ–ಹರಿದಿನಗಳಲ್ಲೂ ಚಿತ್ರಾನ್ನಕ್ಕೆ ವಿಶೇಷ ಬೇಡಿಕೆ. ಹಾಗಂತ ಇದು ಎಲ್ಲರಿಗೂ ಇಷ್ಟ ಅಂತಲ್ಲ. ಹಲವರು ಚಿತ್ರಾನ್ನ ಅಂದ್ರೆ ಮುಖ ಸಿಂಡರಿಸುತ್ತಾರೆ. ಅಂಥವರಿಗೆ ಡಿಫ್ರೆಂಟ್ ರುಚಿಯ ಚಿತ್ರಾನ್ನ ಮಾಡಿಕೊಟ್ರೆ ಖಂಡಿತ ತಿಂತಾರೆ.

ಏನಿದು ಡಿಫ್ರೆಂಟ್ ರುಚಿ, ಚಿತ್ರಾನ್ನ ಅಂದ್ರೆ ಅನ್ನ, ನಿಂಬೆಹಣ್ಣು, ಹಸಿಮೆಣಸು, ಒಗ್ಗರಣೆ ಹಾಕಿ ಮಾಡೋದಲ್ವಾ ಅಂತ ಪ್ರಶ್ನೆ ಕೇಳ್ಬೇಡಿ. ಚಿತ್ರಾನ್ನವನ್ನೂ ಬೇರೆ ರೀತಿಯಲ್ಲಿ ಬೇರೆ ರುಚಿಯಲ್ಲೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ Ambika Shetty's Kitchen-Kannada ಎಂಬ ಫೇಸ್‌ಬುಕ್ ಖಾತೆ ಹೊಂದಿರುವವರು. ಇವರ ಹೊಸ ರುಚಿಯ ಚಿತ್ರಾನ್ನ ರೆಸಿಪಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಇದಕ್ಕೆ ಕಾಯಿ ಜೀರಿಗೆ ಚಿತ್ರಾನ್ನ ಎಂಬ ಹೆಸರಿಗೆ. ನೋಡಲು ಪುಳಿಯೋಗರೆಯಂತೆ ಕಾಣುವ ಈ ಚಿತ್ರಾನ್ನ ಮಾಡೋದು ಹೇಗೆ ಅದಕ್ಕೆ ಏನೆಲ್ಲಾ ಬೇಕು ಎಂಬುದನ್ನು ನೋಡಿ.

ಕಾಯಿ ಜೀರಿಗೆ ಚಿತ್ರಾನ್ನಕ್ಕೆ ಬೇಕಾಗುವ ಸಾಮಗ್ರಿಗಳು

ಜೀರಿಗೆ – 1 ಚಮಚ, ಸಾಸಿವೆ – ಮುಕ್ಕಾಲು ಚಮಚ, ಅರಿಸಿನ – ಚಿಟಿಕೆ, ಒಣಮೆಣಸು – 6 ರಿಂದ 8, ತೆಂಗಿನತುರಿ – 1 ಕಪ್‌, ನಿಂಬೆರಸ – 3 ಚಮಚ, ಬೆಲ್ಲ– ನಿಂಬೆಗಾತ್ರದ್ದು, ಉಪ್ಪು – ರುಚಿಗೆ, ಅನ್ನ – 2ಕಪ್‌, ಎಣ್ಣೆ – 3 ಚಮಚ, ಶೇಂಗಾ – ಒಂದು ಅರ್ಧ ಮುಷ್ಟಿ, ಒಗ್ಗರಣೆಗೆ: ಸಾಸಿವೆ – ಅರ್ಧ ಚಮಚ, ಉದ್ದಿನಬೇಳೆ – 1 ಚಮಚ, ಕಡಲೆಬೇಳೆ – 1 ಚಮಚ, ಕರಿಬೇವಿನ ಎಲೆ – 1 ದಂಟು, ಒಣಮೆಣಸು – 1

ಕಾಯಿ ಜೀರಿಗೆ ಚಿತ್ರಾನ್ನ ಮಾಡುವ ವಿಧಾನ

ಮಿಕ್ಸಿ ಜಾರಿಗೆ ಹಸಿಜೀರಿಗೆ, ಹಸಿ ಸಾಸಿವೆ, ಅರಿಸಿನ, ಒಣಮೆಣಸು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ತೆಂಗಿನತುರಿ, ಬೆಲ್ಲ, ನಿಂಬೆರಸ, ಸ್ವಲ್ಪ ಉಪ್ಪು ಸೇರಿಸಿ ಇನ್ನೊಮ್ಮೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಒಂದು ಅಗಲ ಪಾತ್ರೆಗೆ ಹಾಕಿ ಅದಕ್ಕೆ ಅನ್ನ ಸೇರಿಸಿ, ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಅನ್ನದೊಂದಿಗೆ ಮಸಾಲೆ ಚೆನ್ನಾಗಿ ಸೇರಿಕೊಳ್ಳುವಂತೆ ಕಲೆಸಿ. ಉಪ್ಪು ಬೇಕಿದ್ದರೆ ಸೇರಿಸಿ. ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಶೇಂಗಾ ಬೀಜ ಸೇರಿಸಿ, ಹುರಿದುಕೊಳ್ಳಿ. ನಂತರ ಇದನ್ನು ಬೇರೆ ಪಾತ್ರೆಗೆ ತೆಗೆದುಕೊಳ್ಳಿ. ಅದೇ ಎಣ್ಣೆಗೆ ಒಗ್ಗರಣೆಗೆ ತಿಳಿಸಿರುವ ಸಾಮಗ್ರಿಗಳನ್ನು ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಮೊದಲೇ ಮಾಡಿಟ್ಟುಕೊಂಡ ಅನ್ನದ ಮಿಶ್ರಣ ಸೇರಿಸಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹುರಿದಿಟ್ಟುಕೊಂಡಿದ್ದ ಶೇಂಗಾ ಬೀಜ ಹಾಕಿ. ಈಗ ನಿಮ್ಮ ಮುಂದೆ ಹೊಸ ರುಚಿಯ ಕಾಯಿ ಜೀರಿಗೆ ಚಿತ್ರಾನ್ನ ತಿನ್ನಲು ಸಿದ್ಧ.

ಈ ಚಿತ್ರಾನ್ನವನ್ನು ನೀವು ಮದುವೆ ಮನೆಗಳಲ್ಲಿ ತಿಂದಿರಬಹುದು. ಉಡುಪಿ ಶೈಲಿಯ ಊಟ ಇರುವಲ್ಲಿ ಈ ಚಿತ್ರಾನ್ನವನ್ನು ಬಡಿಸುತ್ತಾರೆ. ಚಿತ್ರಾನ್ನ ಇಷ್ಟ ಆಗೊಲ್ಲ ಅನ್ನೋರಿಗೆ ಈ ರೀತಿ ಚಿತ್ರಾನ್ನ ಮಾಡಿಕೊಟ್ಟರೆ ಖಂಡಿತ ಇಷ್ಟಪಟ್ಟು ತಿಂತಾರೆ, ಟ್ರೈ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ