logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಾರ್ತಿಕ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕದೆ ಮಾಡಿ ಟೇಸ್ಟಿ ರೆಸಿಪಿ: ರೆಸ್ಟೋರೆಂಟ್ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೀಗೆ

ಕಾರ್ತಿಕ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕದೆ ಮಾಡಿ ಟೇಸ್ಟಿ ರೆಸಿಪಿ: ರೆಸ್ಟೋರೆಂಟ್ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೀಗೆ

Priyanka Gowda HT Kannada

Nov 16, 2024 11:08 AM IST

google News

ಕಾರ್ತಿಕ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕದೆ ಮಾಡಿ ಟೇಸ್ಟಿ ರೆಸಿಪಿ: ರೆಸ್ಟೋರೆಂಟ್ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೀಗೆ

  • ಕಾರ್ತಿಕ ಮಾಸದಲ್ಲಿ ಬಹಳಷ್ಟು ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಆಹಾರವನ್ನು ಸೇವಿಸುತ್ತಾರೆ. ನಿಮಗೆ ರುಚಿಕರವಾದ ಖಾದ್ಯ ತಿನ್ನಬೇಕು ಎಂದು ಅನಿಸಿದರೆ, ಈರುಳ್ಳಿ-ಬೆಳ್ಳುಳ್ಳಿ ಹಾಕದೆ ರೆಸ್ಟೋರೆಂಟ್ ಶೈಲಿಯ ಪಾಕವಿಧಾನ ಪ್ರಯತ್ನಿಸಬಹುದು. ಕಾರ್ತಿಕ ಮಾಸದಲ್ಲಿ ಉಪವಾಸ ಮಾಡುವವರಿಗೆ ಈ ರೆಸಿಪಿ ತುಂಬಾ ಉಪಯುಕ್ತವಾಗಿದೆ. ಇಲ್ಲಿದೆ ಪನೀರ್ ಗ್ರೇವಿ ಮಾಡುವ ವಿಧಾನ.

ಕಾರ್ತಿಕ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕದೆ ಮಾಡಿ ಟೇಸ್ಟಿ ರೆಸಿಪಿ: ರೆಸ್ಟೋರೆಂಟ್ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೀಗೆ
ಕಾರ್ತಿಕ ಮಾಸದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕದೆ ಮಾಡಿ ಟೇಸ್ಟಿ ರೆಸಿಪಿ: ರೆಸ್ಟೋರೆಂಟ್ ಶೈಲಿಯ ಪನೀರ್ ಗ್ರೇವಿ ಮಾಡುವುದು ಹೀಗೆ (PC: Slurrp/HT file photo)

ಕಾರ್ತಿಕ ಮಾಸ ಬಂತೆಂದರೆ ಉಪವಾಸ, ವ್ರತಗಳು ಆರಂಭವಾಗುತ್ತವೆ. ತಿಂಗಳು ಪೂರ್ತಿ ಬಹುತೇಕ ಮಂದಿ ಮಾಂಸಾಹಾರ ತ್ಯಜಿಸುತ್ತಾರೆ. ಜತೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಇರುವವರು ಬಹಳ ಮಂದಿ ಇದ್ದಾರೆ. ಈ ತಿಂಗಳು ಪೂರ್ತಿ ಈರುಳ್ಳಿ, ಬೆಳ್ಳುಳ್ಳಿ ಬಳಸದೆ ಸಾತ್ವಿಕ ಆಹಾರ ಸೇವಿಸಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಕೆಲವರದ್ದು. ಬೆಳ್ಳುಳ್ಳಿ ಮತ್ತು ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಗ್ರೇವಿ ಬೇಕಿದ್ದರೆ ಇಲ್ಲಿ ನೀಡಿರುವ ರೆಸಿಪಿ ಟ್ರೈ ಮಾಡಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಗ್ರೇವಿ ಮಾಡಲು ಬಯಸಿದರೆ, ನಿಮಗೆ ಕೆಲವು ಮಸಾಲೆಗಳು ಮತ್ತು ತರಕಾರಿಗಳು ಬೇಕಾಗುತ್ತವೆ. ಇವೆಲ್ಲವೂ ಸೇರಿ ಗ್ರೇವಿಗೆ ಒಳ್ಳೆ ರುಚಿ ನೀಡುತ್ತದೆ. ಈ ಗ್ರೇವಿಯನ್ನು ಬೇಯಿಸಿದರೆ ಅದು ಮೂರ್ನಾಲ್ಕು ದಿನಗಳವರೆಗೆ ಕೆಡದಂತೆ ಇಡಬಹುದು. ಆದರೆ, ಅದನ್ನು ಫ್ರಿಜ್‍ನಲ್ಲಿಡಲು ಮರೆಯಬೇಡಿ. ಇಲ್ಲದಿದ್ದರೆ ಹಾಳಾಗಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೆಯೇ ಟೇಸ್ಟಿ ಪನೀರ್ ಗ್ರೇವಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ಪನೀರ್ ಗ್ರೇವಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಎಣ್ಣೆ- ಎರಡು ಟೀ ಚಮಚ, ಬಿರಿಯಾನಿ ಎಲೆಗಳು- ಮೂರು, ಲವಂಗ- ಮೂರು, ಏಲಕ್ಕಿ- 4, ಕರಿಮೆಣಸು- ಎರಡು, ಜೀರಿಗೆ- ಒಂದು ಟೀ ಚಮಚ, ದಾಲ್ಚಿನ್ನಿ- ಸಣ್ಣ ತುಂಡು, ಟೊಮೆಟೋ- ಆರು, ಉಪ್ಪು- ರುಚಿಗೆ ತಕ್ಕಷ್ಟು, ಶುಂಠಿ- ಸಣ್ಣ ತುಂಡು, ನೆನೆಸಿದ ಗೋಡಂಬಿ- ಹತ್ತು, ಕೊತ್ತಂಬರಿ ಪುಡಿ- ಎರಡು ಟೀ ಚಮಚ, ಜೀರಿಗೆ ಪುಡಿ- ಒಂದು ಟೀ ಚಮಚ, ಗರಂ ಮಸಾಲೆ- ಒಂದು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಪನೀರ್ ತುಂಡುಗಳು - ಅರ್ಧ ಕಪ್, ಕಸೂರಿ ಮೇತಿ- ಅರ್ಧ ಚಮಚ, ಹಸಿರು ಬಟಾಣಿ- ಅರ್ಧ ಕಪ್, ಒಣಮೆಣಸಿನಕಾಯಿ- ಎರಡು.

ಮಾಡುವ ವಿಧಾನ: ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಲವಂಗ, ಬಿರಿಯಾನಿ ಎಲೆ, ಮೆಣಸು, ಏಲಕ್ಕಿ, ದಾಲ್ಚಿನ್ನಿ ಹಾಕಿ ಹುರಿಯಿರಿ. ನಂತರ ಜೀರಿಗೆಯನ್ನು ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ. ಇದಕ್ಕೆ ಉಪ್ಪು, ಶುಂಠಿ ಪೇಸ್ಟ್ ಮತ್ತು ನೆನೆಸಿದ ಒಣ ಮೆಣಸಿನಕಾಯಿಯನ್ನು ಸೇರಿಸಿ. ಇವೆಲ್ಲವನ್ನೂ ಎರಡರಿಂದ ಮೂರು ನಿಮಿಷಗಳ ಕಾಲ ಫ್ರೈ ಮಾಡಿ. ಹೆಚ್ಚು ರುಚಿಗಾಗಿ ಇದಕ್ಕೆ ಹಸಿರು ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.

ಈ ಮಿಶ್ರಣ ಚೆನ್ನಾಗಿ ಬೆಂದ ನಂತರ ನೆನೆಸಿದ ಗೋಡಂಬಿ ಹಾಕಿ ಮಿಕ್ಸ್ ಮಾಡಿ. ಇವೆಲ್ಲವನ್ನೂ ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಬೇಯಿಸಿ. ಸ್ಟೌವ್ ಆಫ್ ಮಾಡಿ, ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಈ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್‌ಗೆ ರುಬ್ಬಿಕೊಳ್ಳಿ.

ಒಂದು ಕಡಾಯಿಯನ್ನು ಒಲೆಯ ಮೇಲೆ ಇಟ್ಟು ತುಪ್ಪವನ್ನು ಹಾಕಿ. ತುಪ್ಪಕ್ಕೆ ಅರಿಶಿನ, ಮೆಣಸಿನಕಾಯಿ, ಧನಿಯಾ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ ಮತ್ತು ಕಸೂರಿಮೇತಿ ಸೇರಿಸಿ ಫ್ರೈ ಮಾಡಿ. ನಂತರ, ಈ ಮಸಾಲೆಗಳಿಗೆ ಪನೀರ್ ತುಂಡುಗಳು ಮತ್ತು ಹಸಿರು ಬಟಾಣಿಗಳನ್ನು ಸೇರಿಸಿ, ಅವುಗಳನ್ನು ಫ್ರೈ ಮಾಡಿ. ನಂತರ ಮೊದಲೇ ರುಬ್ಬಿದ ಗ್ರೇವಿ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಮೇಲ್ಭಾಗವನ್ನು ಮುಚ್ಚಿ, ಗ್ರೇವಿಯನ್ನು ಚೆನ್ನಾಗಿ ಬೇಯಿಸಿ. ಸ್ವಲ್ಪ ಸಮಯದ ನಂತರ ಅಡುಗೆ ಎಣ್ಣೆಯು ಗ್ರೇವಿಯಿಂದ ಬೇರ್ಪಡುತ್ತದೆ. ನಂತರ ಸ್ಟೌವ್ ಆಫ್ ಮಾಡಿ. ಅಷ್ಟೇ, ಟೇಸ್ಟಿ ಗ್ರೇವಿ ಸವಿಯಲು ಸಿದ್ಧವಾಗಿದೆ.

ಇಲ್ಲಿ ಉಲ್ಲೇಖಿಸಿರುವ ಪಾಕವಿಧಾನದಲ್ಲಿ, ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಬಳಸಲಾಗುವುದಿಲ್ಲ. ಹಾಗಾಗಿ ಕಾರ್ತಿಕ ಮಾಸದಲ್ಲಿ ಈ ಗ್ರೇವಿಯನ್ನು ತಿನ್ನಬಹುದು. ಇದರ ರುಚಿಯೂ ತುಂಬಾ ಚೆನ್ನಾಗಿರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ