ಕಾಜು ಮಸಾಲೆಯಿಂದ ಪನೀರ್‌ ಮಸಾಲೆವರೆಗೆ: ರೆಸ್ಟೋರೆಂಟ್‌ ಶೈಲಿಯ ಪರ್ಫೆಕ್ಟ್‌ ಗ್ರೇವಿ ತಯಾರಿಸಲು ಇಲ್ಲಿದೆ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಜು ಮಸಾಲೆಯಿಂದ ಪನೀರ್‌ ಮಸಾಲೆವರೆಗೆ: ರೆಸ್ಟೋರೆಂಟ್‌ ಶೈಲಿಯ ಪರ್ಫೆಕ್ಟ್‌ ಗ್ರೇವಿ ತಯಾರಿಸಲು ಇಲ್ಲಿದೆ ಟಿಪ್ಸ್‌

ಕಾಜು ಮಸಾಲೆಯಿಂದ ಪನೀರ್‌ ಮಸಾಲೆವರೆಗೆ: ರೆಸ್ಟೋರೆಂಟ್‌ ಶೈಲಿಯ ಪರ್ಫೆಕ್ಟ್‌ ಗ್ರೇವಿ ತಯಾರಿಸಲು ಇಲ್ಲಿದೆ ಟಿಪ್ಸ್‌

ಮನೆಗೆ ಬಂದ ಅತಿಥಿಗಳಿಗೆ ರೆಸ್ಟೋರೆಂಟ್‌ನಂತೆ ಕಾಜು ಮಸಾಲೆ, ಪನೀರ್‌ ಮಸಾಲೆ, ವೆಜಿಟೇಬಲ್‌ ಮಸಾಲೆ ಮುಂತಾದವುಗಳನ್ನು ಮಾಡಿ ಉಣಬಡಿಸಬೇಕೆಂದಿದ್ದೀರಾ? ಆದರೆ ಅದು ಅಷ್ಟು ಪರ್ಫೆಕ್ಟ್‌ ಆಗಿ ಬರ್ತಾ ಇಲ್ವಾ? ಹಾಗಾದರೆ ಗ್ರೇವಿ ತಯಾರಿಸುವಾಗ ಈ ಟಿಪ್ಸ್‌ ಪಾಲಿಸಿ. ಥೇಟ್‌ ರೆಸ್ಟೋರೆಂಟ್‌ ರುಚಿಯಲ್ಲಿ ನೀವೂ ಅಡುಗೆ ಮಾಡಬಹುದು.

ಕಾಜು ಮಸಾಲದಿಂದ ಪನೀರ್‌ ಮಸಾಲವರೆಗೆ: ರೆಸ್ಟೋರೆಂಟ್‌ ಶೈಲಿಯ ಪರ್ಫೆಕ್ಟ್‌ ಗ್ರೇವಿ ತಯಾರಿಸಲು ಇಲ್ಲಿದೆ ಟಿಪ್ಸ್‌
ಕಾಜು ಮಸಾಲದಿಂದ ಪನೀರ್‌ ಮಸಾಲವರೆಗೆ: ರೆಸ್ಟೋರೆಂಟ್‌ ಶೈಲಿಯ ಪರ್ಫೆಕ್ಟ್‌ ಗ್ರೇವಿ ತಯಾರಿಸಲು ಇಲ್ಲಿದೆ ಟಿಪ್ಸ್‌ (PC: Freepik)

ದೀಪಾವಳಿ ಹಬ್ಬದ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹಬ್ಬದ ಸಮಯದಲ್ಲಿ ವಿಶೇಷ ಅಡುಗೆಗಳನ್ನು ಮಾಡಲಾಗುತ್ತದೆ. ಬಂಧು–ಬಾಂಧವರನ್ನು ಮನೆಗೆ ಆಹ್ವಾನಿಸಲಾಗುತ್ತದೆ. ದಕ್ಷಿಣ ಭಾರತದ ಅಡುಗೆಗಳು, ಉತ್ತರ ಭಾರತದ ಅಡುಗೆಗಳು ಹೀಗೆ ವಿವಿಧ ಶೈಲಿಯ ಅಡುಗೆಗಳನ್ನು ತಯಾರಿಸಿ ಅತಿಥಿಗಳನ್ನು ಸತ್ಕರಿಸಲಾಗುತ್ತದೆ. ಬೆಳಕಿನ ಹಬ್ಬದ ಸಮಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ರೆಸ್ಟೋರೆಂಟ್‌ ಶೈಲಿಯ ಮಸಾಲೆಗಳನ್ನು ತಯಾರಿಸಿ ಉಣಬಡಿಸುವ ಆಸೆ ನಿಮಗಿದ್ದರೆ ಅದಕ್ಕೆ ಸರಿಯಾಗಿ ಗ್ರೇವಿ ತಯಾರಿಸುವುದು ಮುಖ್ಯ. ಕಾಜು ಮಸಾಲೆ, ಪನೀರ್‌ ಮಸಾಲೆ, ತರಕಾರಿಗಳ ಮಸಾಲೆ ಮುಂತಾದ ಯಾವುದೇ ಅಡುಗೆಗಳನ್ನು ತಯಾರಿಸಲು ಗ್ರೇವಿ ಪರ್ಫೆಕ್ಟ್‌ ಆಗಿರಬೇಕು. ಆಗ ಅಡುಗೆಯ ರುಚಿ ಮತ್ತು ಪರಿಮಳ ಅದ್ಭುತವಾಗಿರುತ್ತದೆ. ರೆಸ್ಟೋರೆಂಟ್‌ ಶೈಲಿಯ ಗ್ರೇವಿ ತಯಾರಿಸಲು ಕೆಲವು ಸೀಕ್ರೆಟ್‌ ಟಿಪ್ಸ್‌ಗಳಿವೆ. ಅದನ್ನು ಅನುಸರಿಸಿ ಗ್ರೇವಿ ತಯಾರಿಸಿದಿರೆ ಬಾಯಿಚಪ್ಪರಿಸಿಕೊಂಡು ಸವಿಯುವುದಂತು ಗ್ಯಾರಂಟಿ. ಅದಕ್ಕಾಗಿ ಇಲ್ಲಿ ಆ ಸೀಕ್ರೆಟ್‌ ಟಿಪ್ಸ್‌ ಅನ್ನು ನೀಡಲಾಗಿದೆ.

ರೆಸ್ಟೋರೆಂಟ್‌ ಶೈಲಿಯ ಗ್ರೇವಿ ತಯಾರಿಸಲು ಈ ಟಿಪ್ಸ್‌ ಪಾಲಿಸಿ

– ಮಸಾಲೆಗಳನ್ನು ಎಣ್ಣೆಯಲ್ಲಿ ಹುರಿಯಿರಿ. ಲವಂಗ, ಚಕ್ಕೆ, ಏಲಕ್ಕಿ, ಕರಿ ಮೆಣಸು, ಪಲಾವ್‌ ಎಲೆ, ಜಾಪತ್ರೆ, ಚಕ್ರಮೊಗ್ಗುಗಳಂತಹ ತಾಜಾ ಮಸಾಲೆ ಪದಾರ್ಥಗಳನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಅದರ ಸುವಾಸನೆ ಮತ್ತು ಗ್ರೇವಿಯ ರುಚಿ ಎರಡೂ ಹೆಚ್ಚುತ್ತದೆ.

– ರೆಸ್ಟೋರೆಂಟ್‌ನಂತೆ ದಪ್ಪ ಗ್ರೇವಿ ತಯಾರಿಸಲು ಈರುಳ್ಳಿ ಮತ್ತು ಟೊಮೆಟೊ ಪೇಸ್ಟ್‌ನ್ನು ತಯಾರಿಸಿಕೊಳ್ಳಿ. ಟೊಮೆಟೊ ಮತ್ತು ಈರುಳ್ಳಿಯನ್ನು ನುಣ್ಣಗೆ ರುಬ್ಬಿಕೊಳ್ಳುವುದರಿಂದ ಅದು ಕೆನೆಯಂತಹ ಮೃದುವಾದ ಟೆಕ್ಸ್ಚರ್‌ ನೀಡುತ್ತದೆ.

– ರುಬ್ಬಿದ ಮಸಾಲೆಗಳನ್ನು ಮೊದಲು ಎಣ್ಣೆಯಲ್ಲಿ ಹುರಿದುಕೊಳ್ಳಿ. ಮಸಾಲೆಯಿಂದ ಎಣ್ಣೆ ಬೇರ್ಪಟ್ಟ ನಂತರ ಅದಕ್ಕೆ ನೀರು ಮತ್ತು ನಿಮ್ಮಿಷ್ಟದ ತರಕಾರಿ, ಗೋಡಂಬಿ ಅಥವಾ ಪನೀರ್‌ ಸೇರಿಸಿ. ಎಣ್ಣೆಯಲ್ಲಿ ಬೆಂದ ಮಸಾಲೆಯು ಗ್ರೇವಿಯ ರುಚಿಯನ್ನು ದುಪ್ಪಟ್ಟುಗೊಳಿಸುತ್ತದೆ.

– ಗ್ರೇವಿಯ ರುಚಿ ಹೆಚ್ಚಿಸಲು ಚೀಸ್‌ ಅಥವಾ ತಾಜಾ ಕ್ರೀಮ್‌ ಬಳಸಿ. ಅಷ್ಟೇ ಅಲ್ಲದೇ ಗ್ರೇವಿಗೆ ನೆನೆಸಿದ ಗೋಡಂಬಿ ಪೇಸ್ಟ್‌, ಗಸಗಸೆ ಪೇಸ್ಟ್‌ ಅಥವಾ ಸಿಹಿ ಮೊಸರನ್ನು ಸೇರಿಸಬಹುದು. ಇವು ಮಸಾಲೆಗಳ ರುಚಿಯನ್ನು ಬ್ಯಾಲೆನ್ಸ್‌ ಮಾಡುತ್ತವೆ.

– ಗ್ರೇವಿಯ ಸ್ವಾದವನ್ನು ಹೆಚ್ಚಿಸಲು ಕಸೂರಿ ಮೇಥಿಯನ್ನು ತಪ್ಪದೇ ಹಾಕಿ. ಗ್ರೇವಿಯನ್ನು ಚೆನ್ನಾಗಿ ಕುದಿಸಿದ ನಂತರ ಕೊನೆಯಲ್ಲಿ ಸೇರಿಸಿ.

– ಮಸಾಲೆಗಳನ್ನು ಯಾವಾಗಲೂ ಮಧ್ಯಮ ಉರಿಯಲ್ಲೇ ಬೇಯಿಸಿ.

ಈ ಟಿಪ್ಸ್‌ ಬಳಸಿಕೊಂಡು ನಿಮ್ಮಿಷ್ಟದ ಮಸಾಲೆ ತಯಾರಿಸಿ. ಈ ದೀಪಾವಳಿಯ ಸಂಭ್ರಮಾಚರಣೆಗೆ ರುಚಿಯಾದ ಮಸಾಲೆಗಳನ್ನು ತಯಾರಿಸಿ.

Whats_app_banner