ಚಿಕನ್‌ನಿಂದ ಅಷ್ಟೇ ಅಲ್ಲ, ಮೊಟ್ಟೆಯಿಂದಲೂ ಮಾಡಬಹುದು ಸೂಪರ್ ಟೇಸ್ಟಿ ಲಾಲಿಪಾಪ್, ಮಕ್ಕಳಿಗೆ ಇದು ಫೇವರಿಟ್ ಆಗೋದು ಖಂಡಿತ
Oct 02, 2024 04:47 PM IST
ಎಗ್ ಲಾಲಿಪಾಪ್
- ಸಂಜೆಯ ಸ್ನ್ಯಾಕ್ಸ್‌ಗೆ ಮಕ್ಕಳಿಗೆ ಏನಾದ್ರೂ ಸ್ಪೆಷಲ್ ಆಗಿರುವ ತಿಂಡಿ ಮಾಡಿಕೊಡಬೇಕು ಅಂತಿದ್ರೆ ಎಗ್ ಲಾಲಿಪಾಪ್ ಟ್ರೈ ಮಾಡಿ. ಮೊಟ್ಟೆ ತಿನ್ನೊಲ್ಲ ಅಂತ ಹಟ ಮಾಡುವ ಮಕ್ಕಳು ಕೂಡ ಮತ್ತೆ ಬೇಕು ಅಂತ ಕೇಳಿ ತಿಂತಾರೆ. ಚಿಕನ್ ಲಾಲಿಪಾಪ್‌ನಷ್ಟೇ ಟೇಸ್ಟಿ ಆಗಿರೋ ಎಗ್ ಲಾಲಿಪಾಪ್ ಮಾಡೋದು ಹೇಗೆ ನೋಡಿ.
ಸಾಕಷ್ಟು ಪೋಷಕಾಂಶಗಳಿರುವ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎನ್ನುತ್ತಾರೆ. ಆದರೆ ಮಕ್ಕಳು ಮೊಟ್ಟೆ ತಿನ್ನಲು ಕೇಳೋಲ್ಲ. ಅದಕ್ಕೆ ಮೊಟ್ಟೆಯಿಂದ ರುಚಿಯಾದ ತಿನಿಸುಗಳನ್ನು ಮಾಡಿಕೊಟ್ಟರೆ ಖುಷಿಯಿಂದ ತಿಂತಾರೆ, ಹಾಗಂತ ದಿನಾ ಒಂದೇ ರೀತಿ ತಿಂಡಿ ತಿಂದ್ರೆ ಮಕ್ಕಳು ಖುಷಿ ಪಡೊಲ್ಲ. ಅದಕ್ಕೆ ಸ್ಪೆಷಲ್ ಆಗಿ ಎಗ್ ಲಾಲಿಪಾಪ್ ಮಾಡಿ.
ಚಿಕನ್ ಲಾಲಿಪಾಪ್ ಗೊತ್ತು, ಇದ್ಯಾವುದು ಎಗ್ ಲಾಲಿಪಾಪ್ ಅಂತ ಯೋಚ್ನೆ ಮಾಡ್ತಾ ಇದೀರಾ, ಮೊಟ್ಟೆಯಿಂದ ಸಖತ್ ಟೇಸ್ಟಿ, ಕ್ರಂಚಿ ಎಗ್ ಲಾಲಿಪಾಪ್ ಮಾಡಬಹುದು. ಇದನ್ನು ಸಿಂಪಲ್ ಮಾಡಿ ಮಾಡಬಹುದಾದ ರೆಸಿಪಿಯಾಗಿದೆ. ಮಕ್ಕಳ ಹುಟ್ಟುಹಬ್ಬ, ಪಾರ್ಟಿಯಂತಹ ಕಾರ್ಯಕ್ರಮಗಳಲ್ಲಿ ಈ ತಿಂಡಿ ಮಾಡಿದ್ರೆ ಸಖತ್ ಡಿಫ್ರೆಂಟ್ ಆಗುತ್ತೆ, ಇದು ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಹಾಗಾದ್ರೆ ಎಗ್ ಲಾಲಿಪಾಪ್ ಮಾಡೋದು ಹೇಗೆ ನೋಡಿ.
ಎಗ್ ಲಾಲಿಪಾಪ್ ಮಾಡಲು ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ – 6, ಮೈದಾ – 1 ಕಪ್, ಕಡಲೆ ಹಿಟ್ಟು – 3 ಚಮಚ, ಖಾರದಪುಡಿ – ಅರ್ಧ ಟೀ ಚಮಚ, ಅರಿಸಿನ ಪುಡಿ – ಅರ್ಧ ಟೀ ಚಮಚ, ಕಾಳುಮೆಣಸಿನ ಪುಡಿ – 1 ಟೀ ಚಮಚ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ತೆಳುವಾಗಿ ಕತ್ತರಿಸಿ ಈರುಳ್ಳಿ – 1, ಕ್ಯಾಪ್ಸಿಕಂ – 1 ಚಿಕ್ಕದಾಗಿ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಗ್ ಲಾಲಿಪಾಪ್ ಮಾಡುವುದು ಹೇಗೆ
ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಮೈದಾ ಮತ್ತು ಕಡಲೆಹಿಟ್ಟು ಹಾಕಿ, ಅದಕ್ಕೆ ಖಾರದಪುಡಿ, ಅರಿಸಿನ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಈ ಹಿಟ್ಟನ್ನು ಪಕ್ಕಕ್ಕೆ ಇರಿಸಿ. ಈಗ ಬೇಯಿಸಿದ ಮೊಟ್ಟೆಯನ್ನು ಚಿಕ್ಕದಾಗಿ ತುರಿದುಕೊಳ್ಳಿ. ಇದಕ್ಕೆ ಉಪ್ಪು, ಅರಿಸಿನ, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಈರುಳ್ಳಿ ತುಂಡುಗಳು, ಕ್ಯಾಪ್ಸಿಕಂ ತುಂಡುಗಳು, ಕೊತ್ತಂಬರಿ ಸೊಪ್ಪು ಸೇರಿಸಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ. ಎಲ್ಲವನ್ನೂ ಒಟ್ಟಿಗೆ ಬೆರೆಸಿದ ನಂತರ, ಸಣ್ಣ ಉಂಡೆಗಳನ್ನಾಗಿ ಮಾಡಿ. ಇದನ್ನು ಮೊದಲೇ ಮಾಡಿಟ್ಟುಕೊಂಡ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈ ಉಂಡೆಗಳನ್ನು ಸೇರಿಸಿ ಮತ್ತು ಅವುಗಳನ್ನು ಡೀಪ್ ಫ್ರೈ ಮಾಡಿ. ಟೂತ್ ಪಿಕ್ ನಿಂದ ಚುಚ್ಚಿ ಬಡಿಸಿದರೆ ಎಗ್ ಲಾಲಿಪಾಪ್ ರೆಡಿ. ಇದನ್ನು ಟೊಮೆಟೊ ಸಾಸ್ ಜೊತೆ ತಿನ್ನಲು ಸಖತ್ ಆಗಿರುತ್ತೆ.
ವಿಭಾಗ