Egg 65 Recipe: ಸೌತ್ ಇಂಡಿಯನ್ ಸ್ಟೈಲ್ ಎಗ್ 65 ಮಾಡುವ ವಿಧಾನ ಇಲ್ಲಿದೆ; ದೊಡ್ಡವರಿಗಷ್ಟೇ ಅಲ್ಲ ಈ ರೆಸಿಪಿ ಮಕ್ಕಳಿಗೂ ಇಷ್ಟವಾಗುತ್ತೆ
ನಾನ್‌ವೆಜ್ ತಿನ್ನುವವರಿಗೆ ಮೊಟ್ಟೆ ಮೇಲೆ ವಿಶೇಷ ಪ್ರೀತಿ ಇರುವುದು ಸುಳ್ಳಲ್ಲ. ಮೊಟ್ಟೆಯಿಂದ ಬಗೆ ಬಗೆಯ ಖಾದ್ಯಗಳನ್ನ ತಯಾರಿಸಬಹುದು, ಆದರೆ ನೀವು ರೀತಿಯ ಸೌತ್ ಇಂಡಿಯನ್ ಸ್ಟೈಲ್ ಎಗ್ 65 ಮಾಡಿ ತಿಂದ್ರೆ ಖಂಡಿತ ಕಳೆದು ಹೋಗ್ತೀರಾ, ಯಾಕಂದ್ರೆ ಅದರ ರುಚಿಯನ್ನ ನೀವು ಸವಿದೇ ನೋಡಬೇಕು. ಇದನ್ನು ಮಾಡೋದು ಹೇಗೆ ನೋಡಿ.
ಮೊಟ್ಟೆಯನ್ನ ನಾನ್‌ವೆಜ್ ತಿನ್ನುವವರು ಮಾತ್ರವಲ್ಲ, ಸಸ್ಯಹಾರಿಗಳೂ ಇಷ್ಟಪಡುತ್ತಾರೆ. ಇದು ಕೇವಲ ರುಚಿಯಿಂದಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಪ್ರಾಮುಖ್ಯ ಹೊಂದಿದೆ. ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಸಮೃದ್ಧವಾಗಿದೆ. ಇದರಲ್ಲಿ ಆರೋಗ್ಯಕ್ಕೆ ಅವಶ್ಯವಿರುವ ಸಾಕಷ್ಟು ಪೋಷಕಾಂಶಗಳಿವೆ. ಇದು ಸ್ನಾಯು ಮತ್ತು ಅಂಗಾಂಶವನ್ನು ಸರಿಪಡಿಸಲು ಸಹಾಯ ಮಾಡುವ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿದೆ.
ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಮೊಟ್ಟೆ ಅವಶ್ಯ. ಪ್ರತಿದಿನ ಮೊಟ್ಟೆಯನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ರೈಬೋಫ್ಲಾವಿನ್, ಫೋಲೇಟ್, ಕಬ್ಬಿಣ, ರಂಜಕ, ಸೆಲೆನಿಯಮ್, ಮೆಗ್ನೀಸಿಯಮ್, ವಿಟಮಿನ್ ಎ, ಇ ಮತ್ತು ಬಿ6, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಇಷ್ಟೆಲ್ಲಾ ಆರೋಗ್ಯ ಪ್ರಯೋಜನವಿರುವ ಮೊಟ್ಟೆಯಿಂದ ಪ್ರತಿದಿನ ಒಂದೇ ರೀತಿಯ ರೆಸಿಪಿಗಳನ್ನು ತಯಾರಿಸಿ ತಿಂದರೆ ಬೇಸರ ಮೂಡುವುದು ಖಚಿತ. ಅದಕ್ಕಾಗಿ ಇಂದು ನೀವು ವಿಶೇಷವಾದ ಮೊಟ್ಟೆ ಖಾದ್ಯ ಮಾಡಬೇಕು ಅಂತಿದ್ರೆ ದಕ್ಷಿಣ ಭಾರತ ಶೈಲಿಯ ಎಗ್ 65 ಮಾಡಿ ತಿನ್ನಿ. ಇದರ ರುಚಿಗೆ ನೀವೂ ಖಂಡಿತ ಫಿದಾ ಆಗ್ತೀರಿ. ಸೌತ್ ಇಂಡಿಯನ್ ಸ್ಟೈಲ್ ಎಗ್ 65 ಮಾಡೋದು ಹೇಗೆ ನೋಡಿ.
ಎಗ್ 65 ಮಾಡಲು ಬೇಕಾಗುವ ಸಾಮಗ್ರಿಗಳು
ಮೊಟ್ಟೆ– 5 ರಿಂದ 6, ಮೈದಾಹಿಟ್ಟು – 2 ಟೇಬಲ್ ಚಮಚ, ಕಾರ್ನ್ ಫ್ಲೋರ್ – 4 ಟೇಬಲ್ ಚಮಚ, ಖಾರದ ಪುಡಿ– 4 ಚಮಚ, ಗರಂಮಸಾಲ – ಅರ್ಧ ಚಮಚ, ಜೀರಿಗೆ ಪುಡಿ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಎಣ್ಣೆ – ಅಗತ್ಯ ಇರುವಷ್ಟು, ಉಪ್ಪು – ರುಚಿಗೆ
ಎಗ್ 65 ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿ, ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಬದಿಗಿರಿಸಿಕೊಳ್ಳಿ. ಆದರೆ ಯಾವುದೇ ಕಾರಣಕ್ಕೂ ಮೊಟ್ಟೆ ಚೂರಾಗದಂತೆ, ಬಿರುಕು ಮೂಡದಂತೆ ನೋಡಿಕೊಳ್ಳಿ. ನಂತರ ಒಂದು ಬೌಲ್‌ಗೆ ಮೈದಾಹಿಟ್ಟು, ಕಾರ್ನ್‌ಫ್ಲೋರ್, ಖಾರದಪುಡಿ, ಜೀರಿಗೆಪುಡಿ, ಗರಂಮಸಾಲ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಪೇಸ್ಟ್‌ನ ಹದಕ್ಕೆ ಬರಬೇಕು. ನಂತರ ಮೊಟ್ಟೆಯನ್ನು ನಾಲ್ಕು ಭಾಗ ಮಾಡಿ, ತಯಾರಿಸಿಟ್ಟುಕೊಂಡ ಪೇಸ್ಟ್‌ಗೆ ಸೇರಿಸಿ. ಆ ಪೇಸ್ಟ್ ಮೊಟ್ಟೆಯ ಎಲ್ಲಾ ಭಾಗಕ್ಕೂ ಹಿಡಿಯುವಂತೆ ನೋಡಿಕೊಳ್ಳಿ. ಈ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮೊದಲು ದೊಡ್ಡ ಉರಿಯಲ್ಲಿ ಮೂರು ನಿಮಿಷ ಬಿಸಿ ಮಾಡಿ. ನಂತರ ಮಧ್ಯಮ ಉರಿಯಲ್ಲಿ ಇಟ್ಟು ಮಿಶ್ರಣ ಮಾಡಿಕೊಂಡ ಮೊಟ್ಟೆಯನ್ನು ಎಣ್ಣೆಗೆ ಬಿಡಿ. ಚೆನ್ನಾಗಿ ಕಾದ ಮೇಲೆ ಮೊಟ್ಟೆಯನ್ನು ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ನಂತರ ಗ್ರೀನ್ ಚಟ್ನಿ ಜೊತೆ ತಿನ್ನಲು ಕೊಡಿ. ಈ ಎಗ್ 65 ರುಚಿಯಂತೂ ಅದ್ಭುತವಾಗಿರುತ್ತೆ. ಇದನ್ನ ತಯಾರಿಸೋದು ಸುಲಭ. ಮಕ್ಕಳಿಗೂ ಕೂಡ ಈ ಎಗ್ ರೆಸಿಪಿ ಇಷ್ಟವಾಗುತ್ತೆ. ಊಟಕ್ಕೆ ಏನೂ ಸೈಡ್ಸ್ ಇಲ್ಲ ಎಂದಾಗ ಈ ರೀತಿ ಎಗ್ 65 ಮಾಡಿದ್ರೆ ಊಟ ಖಂಡಿತ ಹೆಚ್ಚೇ ಸೇರುತ್ತೆ ಅನ್ನೋದ್ರಲ್ಲಿ ಡೌಟ್ ಇಲ್ಲ.