ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು ಮಟನ್ ಮೂಳೆ ಸೂಪ್; ಹೋಟೆಲ್ ಸ್ಟೈಲ್‌ನಲ್ಲಿ ಸಿಂಪಲ್ ಆಗಿ ಸೂಪ್ ಮಾಡೋದು ಹೇಗೆ ನೋಡಿ
Nov 11, 2024 02:34 PM IST
ಮಟನ್ ಮೂಳೆ ಸೂಪ್
- ಚಳಿಗಾಲದಲ್ಲಿ ಸೂಪ್ ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಸೂಪ್‌ಗೆ ಬಳಸುವ ವಸ್ತುಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೀವು ಮಾಂಸಾಹಾರಿಗಳಾಗಿದ್ರೆ ವಾರಕ್ಕೊಮ್ಮೆ ಮಟನ್ ಬೋನ್ ಸೂಪ್ ಕುಡಿಯುವ ಅಭ್ಯಾಸ ಮಾಡಿ. ಇದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. ಇದರ ರುಚಿ ಕೂಡ ಶೀತ ವಾತಾವರಣಕ್ಕೆ ಹೇಳಿ ಮಾಡಿಸಿದಂತಿರುತ್ತದೆ.
ಮಾಂಸಾಹಾರಿಗಳಿಗೆ ಮಟನ್ ಮಾಂಸ ಇಷ್ಟವಾಗುತ್ತದೆ. ಮಟನ್ ಸೇವನೆಯು ಆರೋಗ್ಯಕ್ಕೆ ಬಹಳ ಉತ್ತಮ. ಇದು ದೇಹಕ್ಕೆ ತಂಪು ನೀಡುತ್ತದೆ. ಮಟನ್ ಮೂಳೆಯಿಂದ ಸಖತ್ ಆಗಿರೋ ಸೂಪ್ ಮಾಡಬಹುದು. ನೀವು ಮಾಂಸಾಹಾರ ಪ್ರಿಯರಾಗಿದ್ರೆ ಈ ಚಳಿಗಾಲದಲ್ಲಿ ಮಟನ್ ಮೂಳೆ ಸೂಪ್ ಕುಡಿಯುವ ಅಭ್ಯಾಸ ಮಾಡಬಹುದು.
ಮಟನ್ ಮೂಳೆ ಸೂಪ್ ನಿಮ್ಮ ನಾಲಿಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಇದನ್ನು ಮಾಡುವುದು ಕೂಡ ಸುಲಭ. ವಾರಕೊಮ್ಮೆ ಮಟನ್ ಸೂಪ್ ಕುಡಿಯುವುದರಿಂದ ದೇಹಕ್ಕೆ ವಿವಿಧ ರೀತಿ ಪೋಷಕಾಂಶಗಳು ದೊರೆಯುತ್ತವೆ. ಇದು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ಮಟನ್ ಸೂಪ್ ಉತ್ತಮ. ಇದನ್ನು ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ನೋಡಿ.
ಮಟನ್ ಮೂಳೆ ಸೂಪ್
ಬೇಕಾಗುವ ಸಾಮಗ್ರಿಗಳು: ಮಟನ್ ಮೂಳೆ – ಅರ್ಧ ಕೆಜಿ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ದಾಲ್ಚಿನ್ನಿ ಎಲೆ – 2, ಶಜೀರಾ – ಅರ್ಧ ಚಮಚ, ದಾಲ್ಚಿನ್ನಿ – 1 ಸಣ್ಣ ತುಂಡು, ಏಲಕ್ಕಿ – 2, ಲವಂಗ – 2, ಪುದಿನ ಎಲೆ – ಅರ್ಧ ಕಪ್, ಕೊತ್ತಂಬರಿ ಸೊಪ್ಪು – ಅರ್ಧ ಕಪ್, ಕರಿಬೇವು – 10 ಎಳಸು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಉಪ್ಪು – ರುಚಿಗೆ, ಜೀರಿಗೆ ಪುಡಿ – ಅರ್ಧ ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಖಾರದಪುಡಿ – ಒಂದು ಚಮಚ, ಅರಿಸಿನ – ಕಾಲು ಚಮಚ, ಹಸಿಮೆಣಸು – 3, ಟೊಮೆಟೊ – 2, ಈರುಳ್ಳಿ – ಕಾಲು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಮಟನ್ ಮೂಳೆ ಸೂಪ್ ಮಾಡುವ ವಿಧಾನ
ಮೊದಲು ಮಟನ್ ಮೂಳೆಗಳನ್ನು ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ. ಈಗ ಕುಕ್ಕರ್ ಒಲೆಯ ಮೇಲಿಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಏಲಕ್ಕಿ, ಶಾಜೀರಾ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಈಗ ಅದಕ್ಕೆ ಮಟನ್ ಮೂಳೆ ಸೇರಿಸಿ ಮಿಶ್ರಣ ಮಾಡಿ. ಪಾತ್ರೆ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. ನಂತರ ಅರಿಸಿನ, ಶುಂಠಿ–ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಕ್ಕದಾಗಿ ಹೆಚ್ಚಿದ ಚೂರುಗಳನ್ನು ಸೇರಿಸಿ, ಅದು ಮೃದುವಾಗುವವರೆಗೂ ಬೇಯಿಸಿ. ನಂತರ ಖಾರದಪುಡಿ, ಉಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಸೇರಿಸಿ, ಕುಕ್ಕರ್ ಮುಚ್ಚಿ. ಕನಿಷ್ಠ ಐದಾರು ವಿಶಲ್ ಕೂಗಿಸಿ. ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು ಕಾಳುಮೆಣಸಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ. ಒಂದು ನಿಮಿಷ ಕುದಿಸಿ ಸ್ಟೌ ಆಫ್ ಮಾಡಿ. ಈಗ ನಿಮ್ಮ ಮುಂದೆ ಮಟನ್ ಮೂಳೆ ಸೂಪ್ ರೆಡಿ.
ಮಟನ್ ಮೂಳೆ ಸೂಪ್ ಕುಡಿಯುವುದು ಶೀತ, ಜ್ವರದಂತಹ ಸಮಸ್ಯೆಗಳು ಬಾಧಿಸುವುದಿಲ್ಲ. ಇದರಿಂದ ಮೈಕೈ ಹಗುರಾಗುತ್ತದೆ. ಕ್ಯಾಲ್ಸಿಯಂ ಕೊರತೆ ಇರುವವರು ವಾರಕ್ಕೊಮ್ಮೆ ತಪ್ಪದೇ ಇದನ್ನು ಕುಡಿದರೆ ಕೆಲವು ದಿನಗಳಲ್ಲಿ ಫಲಿತಾಂಶ ಗೋಚರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ದೇಹದಲ್ಲಿ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ವಿಭಾಗ