Rain: ಕೂಲ್‌ ಕೂಲ್‌ ವೆದರ್‌ಗೆ ಬೇಕು ಹಾಟ್‌ ಹಾಟ್‌ ಸೂಪ್‌; ಮನೆಯಲ್ಲೇ ಥಟ್‌ ಅಂತ ಸೂಪ್‌ ತಯಾರಿಸಿ, ದೇಹಾಲಸ್ಯ ನೀಗಿಸಿ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Rain: ಕೂಲ್‌ ಕೂಲ್‌ ವೆದರ್‌ಗೆ ಬೇಕು ಹಾಟ್‌ ಹಾಟ್‌ ಸೂಪ್‌; ಮನೆಯಲ್ಲೇ ಥಟ್‌ ಅಂತ ಸೂಪ್‌ ತಯಾರಿಸಿ, ದೇಹಾಲಸ್ಯ ನೀಗಿಸಿ; ಇಲ್ಲಿದೆ ರೆಸಿಪಿ

Rain: ಕೂಲ್‌ ಕೂಲ್‌ ವೆದರ್‌ಗೆ ಬೇಕು ಹಾಟ್‌ ಹಾಟ್‌ ಸೂಪ್‌; ಮನೆಯಲ್ಲೇ ಥಟ್‌ ಅಂತ ಸೂಪ್‌ ತಯಾರಿಸಿ, ದೇಹಾಲಸ್ಯ ನೀಗಿಸಿ; ಇಲ್ಲಿದೆ ರೆಸಿಪಿ

ಬಿಸಿಲಿನ ಝಳದಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ ಖುಷಿ ಕೊಟ್ಟಿದ್ದಾನೆ, ಇದರ ನಡುವೆ ವಾತಾವರಣವೂ ಸಖತ್‌ ಕೂಲ್‌ ಆಗಿದ್ದು, ದೇಹಕ್ಕೆ ಜಡ ಹಿಡಿದಂತಿದೆ. ಈ ಸಮಯದಲ್ಲಿ ದೇಹ ಚುರುಕಾಗಬೇಕು ಅಂದ್ರೆ ಥಟ್‌ ಅಂತ ಬಿಸಿ ಬಿಸಿ ಸೂಪ್‌ ಕುಡಿಬೇಕು. ಸೂಪ್‌ ಕುಡಿಯೋಕೆ ನೀವು ಹೋಟೆಲ್‌ಗೆ ಹೋಗಬೇಕು ಅಂತಿಲ್ಲ, ಮನೆಯಲ್ಲೇ ರುಚಿ ರುಚಿ ಸೂಪ್‌ ತಯಾರಿಸಬಹುದು.

ಸೂಪ್‌ ರೆಸಿಪಿ
ಸೂಪ್‌ ರೆಸಿಪಿ

ಕಳೆದ ಕೆಲ ತಿಂಗಳುಗಳಿಂದ ಬಿಸಿಲಿನ ಝಳಕ್ಕೆ ಕಂಗೆಟ್ಟಿದ ರಾಜ್ಯದ ಜನರು ಇದೀಗ ಕೂಲ್‌ ಕೂಲ್‌ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ. ಮುಂಗಾರು ಮಳೆ ಆರಂಭವಾಗಿದ್ದು, ವಾತಾವರಣ ಸಖತ್‌ ಕೂಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಜು ಸುರಿದಂತಹ ವಾತಾವರಣವಿದ್ದು, ದೇಹ ಚಟುವಟಿಕೆಯಿಂದಿರಲು ಹಿಂದೇಟು ಹಾಕುವುದು ಸಹಜ. ಈ ಸಮಯದಲ್ಲಿ ದೇಹ ಬೆಚ್ಚಗಾಗಿಸಲು ಬಿಸಿ ಬಿಸಿ ಸೂಪ್‌ ಕುಡಿತಾ ಇದ್ರೆ, ಆಹಾ! ಮನಸ್ಸಿಗೂ ಹಿತ ದೇಹಕ್ಕೂ ಸುಖ.

ಸೂಪ್‌ ಕುಡಿಯೋಕೆ ಅಂತ ನೀವು ಹೋಟೆಲ್‌ಗೆ ಹೋಗಬೇಕು ಅಂತಿಲ್ಲ, ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿ ರುಚಿ, ರುಚಿ, ಬಿಸಿ, ಬಿಸಿ ಸೂಪ್‌ ತಯಾರಿಸಿ ಸವಿಯಬಹುದು. ಕೂಲ್‌ ವೆದರ್‌ಗೆ ಸೆಟ್‌ ಆಗೋ ಹಾಟ್‌ ಸೂಪ್‌ ರೆಸಿಪಿ ಇಲ್ಲಿದೆ, ನೀವೂ ಮನೆಯಲ್ಲಿ ಮಾಡಿ ಸವಿಯಿರಿ.

ತರಕಾರಿ ಸೂಪ್‌

ಬೇಕಾಗುವ ಸಾಮಗ್ರಿಗಳು: ತರಕಾರಿ- ಟೊಮೆಟೊ, ಕ್ಯಾರೆಟ್‌, ಬಟಾಣಿ, ಬೀನ್ಸ್‌, ನೀರು - 2 ಕಪ್‌, ಬೆಣ್ಣೆ- ಅರ್ಧ ಚಮಚ, ಕರಿಬೇವು - 4 ರಿಂದ 5, ಜೀರಿಗೆಪುಡಿ - 4 ರಿಂದ 5, ಉಪ್ಪು - ರುಚಿಗೆ, ಕರಿಮೆಣಸಿನ ಪುಡಿ - ಚಿಟಿಕೆ

ತಯಾರಿಸುವ ವಿಧಾನ: ಒಂದು ಕುಕ್ಕರ್‌ನಲ್ಲಿ ತರಕಾರಿ ಹಾಗೂ 2 ಲೋಟ ನೀರು ಹಾಕಿ 2 ವಿಶಲ್‌ ಕೂಗಿಸಿ. ಬಾಣಲೆಗೆ ಬೆಣ್ಣೆ ಹಾಕಿ, ಕರಗಿದ ಮೇಲೆ ಕರಿಬೇವಿನ ಎಲೆ, ಜೀರಿಗೆ ಹಾಗೂ ಕಾಳುಮೆಣಸಿನ ಪುಡಿ ಹಾಕಿ ಕೈಯಾಡಿಸಿ. ಇದಕ್ಕೆ ತರಕಾರಿ ಸೇರಿಸಿ ಕುದಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ತರಕಾರಿ ಸೂಪ್‌ ಸವಿಯಲು ಸಿದ್ಧ.

ನಿಂಬೆ ಕೊತ್ತಂಬರಿ ಸೂಪ್‌

ಬೇಕಾಗುವ ಸಾಮಗ್ರಿಗಳು: ಬೆಣ್ಣೆ - 1 ಚಮಚ, ಶುಂಠಿ - 1 ಇಂಚು ಸಣ್ಣಗೆ ಹೆಚ್ಚಿಕೊಂಡಿದ್ದು, ಬೆಳ್ಳುಳ್ಳಿ - 4 ಹೆಚ್ಚಿದ್ದು, ಕ್ಯಾರೆಟ್‌ - ಮುಕ್ಕಾಲು ಕಪ್‌, ಅಣಬೆ - ಅರ್ಧ ಕಪ್‌, ಹಸಿಮೆಣಸು- 1 ಹೆಚ್ಚಿಕೊಂಡಿದ್ದು, ಕಾಳುಮೆಣಸಿನ ಪುಡಿ - ಅಗತ್ಯವಿದ್ದಷ್ಟು, ಉಪ್ಪು - ರುಚಿಗೆ, ನೀರು - 4 ಕಪ್‌, ನಿಂಬೆರಸ- 2 ಚಮಚ, ಕೊತ್ತಂಬರಿ ಸೊಪ್ಪು - ಮುಕ್ಕಾಲು ಕಪ್‌, ಕೊತ್ತಂಬರಿ ಸೊಪ್ಪು,

ತಯಾರಿಸುವ ವಿಧಾನ: ಅಣಬೆ ಹಾಗೂ ಕ್ಯಾರೆಟ್‌ ಸಿಪ್ಪೆ ಸುಲಿದು ಹೆಚ್ಚಿಕೊಳ್ಳಿ. ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ತುಪ್ಪು ಹಾಕಿ ಬಿಸಿಯಾದ ಮೇಲೆ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಹೆಚ್ಚಿದ ಅಣಬೆ, ಕ್ಯಾರೆಟ್‌, ಬೇಬಿ ಕಾರ್ನ್‌, ಹಸಿರು ಬಟಾಣಿ ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಿಸಿ. ಅದಕ್ಕೆ 4 ಕಪ್‌ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಕುದಿದು, ತರಕಾರಿ ಬೆಂದ ಮೇಲೆ ಕಾಳುಮೆಣಸಿನ ಪುಡಿ, ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಒಂದೆರಡು ನಿಮಿಷ ಕುದಿಸಿ ಸ್ಟೌ ಆಫ್‌ ಮಾಡಿ.

ಚಿಕನ್‌ ಸೂಪ್‌

ಬೇಕಾಗುವ ಸಾಮಗ್ರಿಗಳು: ಬೆಣ್ಣೆ - 1 ಚಮಚ, ಈರುಳ್ಳಿ - 1, ಬೆಳ್ಳುಳ್ಳಿ - ನಾಲ್ಕೈದು ಎಸಳು, ಹಸಿಮೆಣಸು - 1, ಕ್ಯಾರೆಟ್‌ - ಅರ್ಧ ಕಪ್‌, ಕೊತ್ತಂಬರಿ ಸೊಪ್ಪು - ಕಾಲು ಕಪ್‌, ಚಿಕನ್‌ ಸ್ಟಾಕ್‌ - 1 ಲೀಟರ್‌, ಬೇಯಿಸಿದ ಚಿಕನ್‌ ತುಂಡುಗಳು - 2 ಕಪ್‌, ಉಪ್ಪು - ರುಚಿಗೆ, ಕಾಳುಮೆಣಸಿನ ಪುಡಿ - ಚಿಟಿಕೆ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಗೆ ಬೆಣ್ಣೆ ಹಾಕಿ ಬಿಸಿಮಾಡಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕ್ಯಾರೆಟ್‌ ಕೊತ್ತಂಬರಿ ಸೊಪ್ಪು ಹಾಕಿ 10 ನಿಮಿಷ ಹುರಿದುಕೊಳ್ಳಿ. ಅದಕ್ಕೆ ಚಿಕನ್‌ ಸ್ಟಾಕ್‌ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಮೊದಲೇ ಬೇಯಿಸಿಕೊಂಡ ಚಿಕನ್‌ ತುಂಡುಗಳು, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಇನ್ನೊಮ್ಮೆ ಕುದಿಸಿ. ಕ್ರೀಮ್‌, ಹಸಿಮೆಣಸು, ಕೊತ್ತಂಬರಿ ಸೊಪ್ಪು ಅಲಂಕರಿಸಿಕೊಂಡು ಕುಡಿಯಬಹುದು.

Whats_app_banner