ಚಿಕನ್ ಮ್ಯಾಂಚೋ ಸೂಪ್‌ನಿಂದ ಲಡಾಕಿ ಸ್ಟ್ಯೂವರೆಗೆ; ಮಳೆಗಾಲಕ್ಕೆ ಹೇಳಿ ಮಾಡಿಸಿದ ಚಿಕನ್ ಖಾದ್ಯಗಳ ರೆಸಿಪಿ ಇಲ್ಲಿದೆ
ಹೊರಗಡೆ ಧೋ ಎಂದು ಸುರಿಯುವ ಮಳೆ ಅಥವಾ ಮೋಡ ಕವಿದ ವಾತಾವರಣವಿದ್ದರೆ, ಮನೆಯೊಳಗೆ ಕುಳಿತಿದ್ದವರಿಗೆ ರುಚಿ ರುಚಿಯಾಗಿ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸೋದೂ ಸಹಜ. ಹಾಗಂತ ಯಾವಾಗ್ಲೂ ಬೋಂಡ ಬಜ್ಜಿ ತಿಂದ್ರೆ ನಾಲಿಗೆಗೆ ರುಚಿ ಅನ್ನಿಸೊಲ್ಲ, ಹಾಗಿದ್ದಾಗ ನೀವು ಈ ಚಿಕನ್ ಖಾದ್ಯಗಳನ್ನು ಟ್ರೈ ಮಾಡಬಹುದು (ಬರಹ: ಪ್ರಿಯಾಂಕ ಗೌಡ)
ಧೋ.. ಎಂದು ಸುರಿಯುವ ಮಳೆ, ಸೂರ್ಯನ ಮರೆ ಮಾಡಿರುವ ಮೋಡ.. ಬಿಸಿಲೇ ಕಾಣದ ಇಳೆ, ಮಳೆಯಿಂದ ಚಳಿಯ ಅನುಭವವಾದರೇನೇ ಅದು ಮಳೆಗಾಲದ ಋತು. ಹೊರಗೆ ಜೋರಾಗಿ ಮಳೆ ಸುರಿಯುತ್ತಿರುವಾಗ, ಮನೆಯಲ್ಲಿ ಬೆಚ್ಚಗೆ ಕುಳಿತು ಏನಾದರೂ ಬಿಸಿ-ಬಿಸಿ, ಖಾರ-ಖಾರವಾಗಿರುವ ಖಾದ್ಯ ತಿನ್ನಬೇಕು ಅಂತ ನಾಲಿಗೆ ಚಡಪಡಿಸುತ್ತದೆ.
ಮಳೆ ಜೋರಾಗಿ ಸುರಿಯುತ್ತಿರುವಾಗ ಆಹಾರ ಪ್ರಿಯರಿಗೆ ರುಚಿಕರವಾದ ತಿನಿಸುಗಳನ್ನು ತಿನ್ನಬೇಕು ಅನ್ನೋ ಬಯಕೆ ಹೆಚ್ಚೋದು ಸಹಜ. ಮಾನ್ಸೂನ್ ಋತು ಮಾಂಸಾಹಾರ ಪ್ರಿಯರು ಅದರಲ್ಲೂ ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಹಬ್ಬವೇ ಸರಿ. ಚಿಕನ್ (ಫಾರಂ ಕೋಳಿ) ಹೀಟ್ ಆಗಿರುವುದರಿಂದ ಬೇಸಿಗೆ ಕಾಲದಲ್ಲಿ ಇದರ ಖಾದ್ಯವನ್ನು ತಿನ್ನುವುದು ಬಹಳ ಕಡಿಮೆ. ಆದರೆ, ಮಳೆಗಾಲ ಬಂತೆಂದರೆ ರುಚಿಕರವಾದ ಚಿಕನ್ ಸೂಪ್, ಕಬಾಬ್ ಮುಂತಾದವುಗಳನ್ನು ತಯಾರಿಸಿ ಸವಿಯುವುದೇ ಆನಂದ.
ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ಶೈಲಿಯಲ್ಲಿ ಚಿಕನ್ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮಳೆಗಾಲದ ಈ ಋತುವಿನಲ್ಲಿ ನಿಮ್ಮ ನಾಲಿಗೆ ಚಪಲ ತಣಿಸುವ ಈ ಆರು ಬಗೆಯ ಖಾದ್ಯಗಳನ್ನು ತಯಾರಿಸಿ, ನೀವು ತಿಂದು ನಿಮ್ಮ ಮನೆಯವರನ್ನೂ ಖುಷಿ ಪಡಿಸಿ.
ಮಾನ್ಸೂನ್‌ಗಾಗಿ ಆರೋಗ್ಯಕರ ಚಿಕನ್ ಭಕ್ಷ್ಯಗಳು
ಚಿಕನ್ ಮ್ಯಾಂಚೋ ಸೂಪ್
ಮಳೆಯಲ್ಲಿ ಚಿಕನ್ ಮ್ಯಾಂಚೋ ಸೂಪ್ ತಯಾರಿಸಿ ತಿಂದರೆ ದೇಹ ಬೆಚ್ಚಗಿರುತ್ತದೆ. ಈ ಇಂಡೋ-ಚೈನೀಸ್ ಸೂಪ್ ಪ್ರೊಟೀನ್‌ನ ಉತ್ತಮ ಮೂಲವಾಗಿದೆ. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್.
ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಅವುಗಳನ್ನು ಹುರಿಯಿರಿ. ಎಲೆಕೋಸು, ಅಣಬೆ, ಕ್ಯಾಪ್ಸಿಕಂ, ಫ್ರೆಂಚ್ ಬೀನ್ಸ್ ಮತ್ತು ಸ್ಪ್ರಿಂಗ್ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬಳಿಕ ಈಗಾಗಲೇ ಬೇಯಿಸಿರುವ ಚಿಕ್ಕ ತುಂಡುಗಳಾಗಿ ಮಾಡಿರುವ ಚಿಕನ್ ಅನ್ನು ಸೇರಿಸಿ. ಅದಕ್ಕೆ ಸೋಯಾ ಸಾಸ್ ಮತ್ತು ಚಿಕನ್ ಸ್ಟಾಕ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಲ್ಲದೆ, ಇದನ್ನು ಚೆನ್ನಾಗಿ ಕುದಿಸಬೇಕು. ನಂತರ ಕಾರ್ನ್‌ಫ್ಲೋರ್ ಮಿಶ್ರಣವನ್ನು ಸೇರಿಸಿ, ಕುದಿಸಿ. ಇದು ಸ್ವಲ್ಪ ದಪ್ಪವಾದಾಗ ಸ್ಟ್ರಿಂಗ್ ಈರುಳ್ಳಿಯನ್ನು ಸೇರಿಸಿದರೆ ರುಚಿಕರವಾದ ಸೂಪ್ ಸವಿಯಲು ರೆಡಿ.
ಕ್ಯಾಂಟೋನೀಸ್ ಚಿಕನ್ ಸೂಪ್
ಮಾನ್ಸೂನ್ ಋತುವಿನಲ್ಲಿ ಕ್ಯಾಂಟೋನೀಸ್ ಚಿಕನ್ ಸೂಪ್ ಅನ್ನು ತಿನ್ನುವುದರಿಂದ ಇದು ನಿಮ್ಮನ್ನು ಆರೋಗ್ಯಕರವಾಗಿ, ಅಲ್ಲದೆ ದೇಹವನ್ನು ಫಿಟ್ ಆಗಿ ಇರಿಸುವಲ್ಲೂ ಸಹಾಯ ಮಾಡುತ್ತದೆ. ಇದನ್ನು ತಯಾರಿಸಲು ಮೊದಲಿಗೆ ಚಿಕನ್ ಸ್ಟಾಕ್ ಅನ್ನು ಕುದಿಸಿ. ನಂತರ ಸಣ್ಣದಾಗಿ ಕತ್ತರಿಸಿರುವ ಚಿಕನ್ ಅನ್ನು ಸೇರಿಸಿ. ಸುಮಾರು ಹತ್ತು ನಿಮಿಷ ಕುದಿಸಿದ ನಂತರ, ಸ್ವಲ್ಪ ಕಾರ್ನ್ ಫ್ಲೋರ್ ಅನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ ಇದಕ್ಕೆ ಸೇರಿಸಿ. ಚಿಕನ್ ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ. ಉಪ್ಪು, ಸೋಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್, ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾರೆಟ್, ಸ್ಟ್ರಿಂಗ್ ಈರುಳ್ಳಿ ಎಲ್ಲವನ್ನೂ ಸೇರಿಸಿ, ಕೆಲವು ನಿಮಿಷಗಳ ಕಾಲ ಅದನ್ನು ಬೇಯಲು ಬಿಡಿ. ನಂತರ ಈ ಸೂಪ್ ಅನ್ನು ಬಿಸಿಯಾಗಿ ಬಡಿಸಿ.
ಬೀನ್ (ಹುರುಳಿ) ಮತ್ತು ಒನ್ ಪಾಟ್ ಚಿಕನ್
ಹುರುಳಿ ಮತ್ತು ಚಿಕನ್ ಸಂಯೋಜನೆಯಿರುವ ಈ ಖಾದ್ಯವನ್ನು ಸೇವಿಸುವುದು ಮಳೆಗಾಲಕ್ಕೆ ಒಂದು ಆರೋಗ್ಯಕರ ಆಯ್ಕೆಯಾಗಿದೆ. ಚಿಕನ್, ಕೆಂಪು ಬೀನ್ಸ್ ಮತ್ತು ಮೊಳಕೆಭರಿತ ಹುರುಳಿಯಿಂದ ಈ ವಿಶೇಷ ಖಾದ್ಯವನ್ನು ತಯಾರಿಸಲಾಗುತ್ತದೆ.
ಈ ಭಕ್ಷ್ಯವನ್ನು ತಯಾರಿಸಲು, ಕೆಂಪು ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿಕೊಂಡು ಪಕ್ಕಕ್ಕೆ ಇರಿಸಿ. ನಂತರ ಪ್ಯಾನ್ ಮೇಲೆ ಆಲಿವ್ (ಅಡುಗೆ) ಎಣ್ಣೆ ಹಾಕಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಪ್ಯೂರಿ ಸೇರಿಸಿ. ಬಳಿಕ ಸ್ಮ್ಯಾಶ್ ಮಾಡಿರುವ ಚಿಕನ್ ಅನ್ನು ಸೇರಿಸಿ, ಬೇಯಿಸಬೇಕು. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಸಾಸ್ ಅನ್ನು ಸೇರಿಸಿ. ನಂತರ ಚಿಕನ್ ಸ್ಟಾಕ್ ಮತ್ತು ಮೊದಲೇ ಕುದಿಸಿ ಇಟ್ಟಿದ್ದ ಬೀನ್ಸ್ ನೀರನ್ನು ಸೇರಿಸಿ. ಜೊತೆಗೆ ಸ್ವಲ್ಪ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸನ್ನು ಸೇರಿಸಿ. ಕೊನೆಯಲ್ಲಿ ಮೊಳಕೆಭರಿತ ಬೇಯಿಸಿಟ್ಟ ಹುರುಳಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾ ಸ್ಮಾಶ್ ಮಾಡಿದರೆ ರುಚಿಕರವಾದ ಭಕ್ಷ್ಯ ಸವಿಯಲು ಸಿದ್ಧ.
ಚಿಕನ್ ಮತ್ತು ಮಿಲ್ಕ್ ಸ್ಟ್ಯೂ
ಈ ಖಾದ್ಯವನ್ನು ತಯಾರಿಸಲು ಮೊದಲಿಗೆ ಚಿಕನ್‌ಗೆ ಉಪ್ಪು ಮತ್ತು ಮೆಣಸು ಸೇರಿಸಿ ಅದನ್ನು ಮ್ಯಾರಿನೇಟ್ ಮಾಡಿ. ಸುಮಾರು ಅರ್ಧ ಗಂಟೆಗಳ ಕಾಲ ನೆನೆಸಿಟ್ಟರೆ ಸಾಕು. ನಂತರ ಒಂದು ಪ್ಯಾನ್‌ಗೆ ಬೆಣ್ಣೆ ಹಾಕಿ ಅದಕ್ಕೆ ಕತ್ತರಿಸಿಟ್ಟ ಚಿಕನ್ ಅನ್ನು ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ನಂತರ ಅದನ್ನು ಎತ್ತಿಡಿ.
ಪ್ಯಾನ್‌ಗೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಕ್ಯಾರೆಟ್, ಬೀನ್ಸ್ ಅನ್ನು ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಮಿಕ್ಸ್ ಮಾಡಿ. ನಂತರ ಇದಕ್ಕೆ ಬಿರಿಯಾನಿ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್ ಪೌಡರ್ ಅನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಬೇಯಿಸಿದ ಚಿಕನ್‌ನ ನೀರನ್ನು ಸೇರಿಸಿ, ಕತ್ತರಿಸಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಜೊತೆಗೆ ಈಗಾಗಲೇ ಹುರಿದಿರುವ ಚಿಕನ್ ಅನ್ನು ಸೇರಿಸಿ, ಪದಾರ್ಥಗಳು ಮುಳುಗುವಷ್ಟು ನೀರು ಸೇರಿಸಿ. ಸುಮಾರು 20 ನಿಮಿಷಗಳ ಕಾಲ ಇದನ್ನು ಬೇಯಲು ಬಿಡಿ. ನಂತರ ಬೇಯಿಸಿಟ್ಟ ಬಟಾಣಿ ಕಾಳು, ಸ್ವಲ್ಪ ಸ್ವೀಟ್ ಕಾರ್ನ್ ಅನ್ನು ಸೇರಿಸಿ. ನಂತರ ತೆಂಗಿನಕಾಯಿ ಹಾಲಿಗೆ ಬೇಕಿದ್ದರೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ, ಮಾಡಲಾಗುತ್ತಿರುವ ಪದಾರ್ಥಕ್ಕೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಇದು ದಪ್ಪಗಾಗುವವರೆಗೆ ಚೆನ್ನಾಗಿ ಬೇಯಿಸಿದರೆ, ರುಚಿಕರವಾದ ಚಿಕನ್ ಮತ್ತು ಮಿಲ್ಕ್ ಸ್ಟ್ಯೂ ಸವಿಯಲು ರೆಡಿ.
ಲಡಾಕಿ ಸ್ಟ್ಯೂ
ಈ ವಿಶೇಷ ಲಡಾಖಿ ಸ್ಟ್ಯೂ ಖಾದ್ಯವು ಮಾನ್ಸೂನ್ ಋತುವಿಗೆ ಹೇಳಿ ಮಾಡಿಸಿರುವ ಭಕ್ಷ್ಯ. ಇದನ್ನು ತಯಾರಿಸಲು ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮಿಶ್ರಣ ಮಾಡಿ. ನಂತರ ನುಣ್ಣಗೆ ಕತ್ತರಿಸಿದ ಟೊಮೆಟೊ, ಕ್ಯಾರೆಟ್, ಹಸಿರು ಬಟಾಣಿ ಮತ್ತು ಪಾಲಕ್ ಅನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಗರಂ ಮಸಾಲಾ ಮತ್ತು ಕಾಶ್ಮೀರಿ ಕೆಂಪು ಮೆಣಸಿನ ಪುಡಿಯನ್ನು ಇದಕ್ಕೆ ಸೇರಿಸಿ. ನಂತರ, ನೀವು ಚಿಕನ್ ಸ್ಟಾಕ್, ಬೋನ್-ಲೆಸ್ ಚಿಕನ್ ಪೀಸ್, ಆಲೂಗಡ್ಡೆ ಮತ್ತು ಪನೀರ್ ಅನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
ಇದು ಬೇಯುತ್ತಿರುವಾಗ ಇನ್ನೊಂದೆಡೆ ನೀವು ಗೋಧಿಹಿಟ್ಟನ್ನು ತೆಗೆದುಕೊಂಡು ಚಪಾತಿ ಹಿಟ್ಟಿನ ಹದವನ್ನು ಮಾಡಿ. ನಂತರ ಚಪಾತಿಯಂತೆ ಲಟ್ಟಿಸಿ. ತೆಳುವಾಗಿ ಮಾಡಬಾರದು, ದಪ್ಪಕ್ಕೆ ಲಟ್ಟಿಸಿ ಅದನ್ನು ಒಂದು ಸಣ್ಣ ಬೌಲ್‌ನಿಂದ ಕತ್ತರಿಸಬೇಕು. ನಂತರ ಅದನ್ನು ಕೊಳವೆ ಆಕಾರಕ್ಕೆ ತಂದು ಬೇಯುತ್ತಿರುವ ಚಿಕನ್ ಖಾದ್ಯಕ್ಕೆ ಹಾಕಬೇಕು. ಕೆಲವು ನಿಮಿಷಗಳ ಕಾಲ ಮುಚ್ಚಳ ಮುಚ್ಚಿಟ್ಟು ಕಡಿಮೆ ಶಾಖದಲ್ಲಿ ಬೇಯಿಸಿದರೆ ಸವಿಯಲು ರುಚಿಕರವಾದ ಖಾದ್ಯ ರೆಡಿ.
ಸ್ವೀಟ್ ಕಾರ್ನ್ ಚಿಕನ್ ಸೂಪ್
ಈ ರೆಸಿಪಿಯನ್ನು ತಯಾರಿಸಲು ಮೊದಲಿಗೆ ಚಿಕನ್ ಸ್ಟಾಕ್ ಅನ್ನು ತೆಗೆದುಕೊಂಡು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ ಸ್ವೀಟ್ ಕಾರ್ನ್ ಸೇರಿಸಿ. ಬಳಿಕ ಕಾರ್ನ್ ಫ್ಲೋರ್‌ಗೆ ಸ್ವಲ್ಪ ನೀರು ಮಿಶ್ರಣ ಮಾಡಿ, ಮಾಡಲಾಗುತ್ತಿರುವ ಪಾಕವಿಧಾನಕ್ಕೆ ಸೇರಿಸಿ, ಹತ್ತು ನಿಮಿಷ ಬೇಯಿಸಿ. ನಂತರ ನಿಮಗಿಷ್ಟವಾದ ತರಕಾರಿಗಳನ್ನು ಮತ್ತು ಸಣ್ಣಗೆ ಕತ್ತರಿಸಿರುವ ಚಿಕನ್ ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ವಿನೆಗರ್ ಅನ್ನು ಸೇರಿಸಿದರೆ ಸವಿಯಲು ರುಚಿಕರವಾದ ಖಾದ್ಯ ರೆಡಿ.