logo
ಕನ್ನಡ ಸುದ್ದಿ  /  ಜೀವನಶೈಲಿ  /  ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ; ಹಿಟ್ಟು ನಾದುವಾಗ, ಚಪಾತಿ ಮಾಡುವಾಗ ಈ ಟಿಪ್ಸ್‌ ಅನುಸರಿಸಿ ನೋಡಿ

ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ; ಹಿಟ್ಟು ನಾದುವಾಗ, ಚಪಾತಿ ಮಾಡುವಾಗ ಈ ಟಿಪ್ಸ್‌ ಅನುಸರಿಸಿ ನೋಡಿ

Jayaraj HT Kannada

Sep 24, 2024 05:19 PM IST

google News

ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ; ಹಿಟ್ಟು ನಾದುವಾಗ ಈ ಟಿಪ್ಸ್‌ ಅನುಸರಿಸಿ ನೋಡಿ

    • ಮೃದುವಾದ ಕೈಯಲ್ಲಿ ಸುಲಭವಾಗಿ ಮುರಿಯಬಹುದಾದ ಚಪಾತಿ ಎಲ್ಲರಿಂದಲೂ ಮಾಡಲು ಆಗಲ್ಲ. ಅದು ಒಂದು ಕಲೆ. ಹಿಟ್ಟು ನಾದುವಾಗ ಒಂದು ಕ್ರಮ ಅನುಸರಿಸಿದರೆ, ನಿಧಾನಕ್ಕೆ ಚಪಾತಿ ಮಾಡುವುದು ಅಭ್ಯಾಸವಾಗುತ್ತದೆ. ಈ ಟಿಪ್ಸ್‌ ನಿಮಗೆ ನೆರವಾಗಬಹುದು.
ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ; ಹಿಟ್ಟು ನಾದುವಾಗ ಈ ಟಿಪ್ಸ್‌ ಅನುಸರಿಸಿ ನೋಡಿ
ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ; ಹಿಟ್ಟು ನಾದುವಾಗ ಈ ಟಿಪ್ಸ್‌ ಅನುಸರಿಸಿ ನೋಡಿ (Pixel)

ಭಾರತೀಯ ಅಡುಗೆಗಳಲ್ಲಿ ಚಪಾತಿಗೆ ಪ್ರಮುಖ ಸ್ಥಾನ. ದೇಶದ ಎಲ್ಲಾ ಭಾಗಗಳಲ್ಲಿಯೂ ನಿತ್ಯ ಚಪಾತಿ ಸೇವಿಸುವವರು ಇಲ್ಲದಿದ್ದರೂ, ಆಗಾಗ ಚಪಾತಿ ಸೇವನೆ ಮಾಡುವ ಸಂದರ್ಭ ಬರುತ್ತದೆ. ಹೆಚ್ಚಿನವರಿಗೆ ಊಟಕ್ಕಿಂತ ಮುಂಚೆ ಚಪಾತಿ ಬೇಕೇ ಬೇಕು. ಹೀಗಾಗಿ ಮನೆಯಲ್ಲಿ ನಿತ್ಯ ಚಪಾತಿ ಮಾಡಬೇಕಾಗುತ್ತದೆ. ದುಂಡಗಿನ, ಮೃದುವಾದ ಚಪಾತಿ ಮಾಡುವ ಕಲೆ ಎಲ್ಲರಿಗೂ ಬರಲ್ಲ. ನೀವು ನಿತ್ಯ ಮನೆಯಲ್ಲಿ ಮಾಡುವ ಚಪಾತಿ ಎಷ್ಟೇ ಶ್ರಮ ಹಾಕಿದರೂ ಮೃದುವಾಗಿ ಬರದಿದ್ದರೆ, ಈ ಸಲಹೆಗಳು ನಿಮಗೆ ನೆರವಾಗಬಹುದು. ಚಪಾತಿ ಮೃದುವಾಗಿಸಲು ಕೆಲವೊಂದು ಪ್ರಾಯೋಗಿಕ ಸಲಹೆಗಳು ಇಲ್ಲಿವೆ.

ನೀರು ಮತ್ತು ಗೋದಿ ಹಿಟ್ಟಿನ ಅನುಪಾತ ಸರಿಯಿರಲಿ

ಚಪಾತಿ ಚೆನ್ನಾಗಿ ಬರಬೇಕೆಂದರೆ ಹಿಟ್ಟನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವುದು ಮುಖ್ಯ. ಮೊದಲಿಗೆ ಆ ಕಲೆ ನಿಮಗೆ ಬರಬೇಕು. ಹಿಟ್ಟು ಸರಿಯಾಗಿ ನಾದದಿದ್ದರೆ ಚಪಾತಿ ಗಟ್ಟಿಯಾಗಿ ಬರುತ್ತದೆ. ಹೀಗಾಗಿ ನೀರು ತುಂಬಾ ಕಡಿಮೆಯಾದರೆ ಹಿಟ್ಟು ಗಟ್ಟಿಯಾಗಿ ಬರುತ್ತದೆ. ಹೆಚ್ಚು ನೀರು ಹಾಕಿದರೂ ಲಟ್ಟಿಸಲು ಕಷ್ಟವಾಗುತ್ತದೆ. ಹೀಗಾಗಿ, ಹಿಟ್ಟಿಗೆ ಸರಿಯಾದ ಅನುಪಾತದಲ್ಲಿ ನೀರು ಹಾಕುವುದು ಮುಖ್ಯ. ಅಂದರೆ ಹಿಟ್ಟಿನ ಅಳತೆಯೆ ಅರ್ಧ ಭಾಗದಷ್ಟು ನೀರು ಹಾಕಬೇಕು.

ಹಿಟ್ಟನ್ನು ನಾದುವುದು

ಹಿಟ್ಟನ್ನು ನಾದುವ ವಿಧಾನ ತುಂಬಾ ಮುಖ್ಯ. ಚೆನ್ನಾಗಿ ಬರಬೇಕೆಂದು ಅತಿಯಾಗಿ ನಾದುವುದು ಬೇಡ. ಅದರಿಂದಲೂ ಚಪಾತಿ ಗಟ್ಟಿಯಾಗಬಹುದು. ಹೆಚ್ಚು ನಾದುವಾಗ ಅತಿಯಾದ ಗ್ಲುಟನ್ ಅಭಿವೃದ್ಧಿಯಾಗಿ ಚಪಾತಿ ಗಟ್ಟಿಯಾಗಿಸುತ್ತದೆ. ಒಂದು ವೇಳೆ ಕಡಿಮೆ ನಾದಿದರೂ ಗಡಸುತನ ಉಂಟಾಗುತ್ತದೆ. ಹೀಗಾಗಿ ಒಂದು ಹಂತದವರೆಗೆ ಮೃದುವಾಗುವವರೆಗೆ ಚಪಾತಿ ನಾದಿ.

ಮೃದುವಾಗಲು ಹಿಟ್ಟನ್ನು ಬಿಡುವುದು

ಹಿಟ್ಟನ್ನು ಕೆಲಕಾಲ ನಾದಿದ ಬಳಿಕ ಅದನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಮುಚ್ಚಿಡಬೇಕು. ಕನಿಷ್ಠ ಅರ್ಧ ಗಂಟೆಯಾದರೂ ಮುಚ್ಚಿಡಿ. ಒಂದು ವೇಳೆ ನೀವು ನೀರಿನ ಬದಲು ಹಾಲು ಮಿಶ್ರಣ ಮಾಡಿದ್ದರೆ ಹೆಚ್ಚು ಹೊತ್ತು ಇಡುವ ಅಗತ್ಯವಿಲ್ಲ. ನೀರು ಹಾಕಿದ್ದರೆ ಮೃದುವಾದ ಚಪಾತಿಗಳನ್ನು ಮಾಡಲು ಹಿಟ್ಟನ್ನು ಕೆಲಕಾಲ ಹಾಗೆಯೇ ಬಿಡಬಹುದು.

ಒಲೆ ಮೀಡಿಯಂ ಫ್ಲೇಂನಲ್ಲಿರಲಿ

ಚಪಾತಿ ಕಾಯಿಸುವಾಗ ಹೆಚ್ಚು ತಾಪಮಾನದಲ್ಲಿ ಕಾಯಿಸುವುದು ಬೇಡ. ತವಾ ಅಥವಾ ಕಾವಲಿ ತುಂಬಾ ಬಿಸಿಯಾಗಿದ್ದರೆ ಚಪಾತಿ ಹೊರಭಾಗದಲ್ಲಿ ಬೇಗನೆ ಬೆಂದು ಒಳಭಾಗ ಗಟ್ಟಿಯಾಗಿ ಉಳಿಯಬಹುದು. ಹೀಗಾಗಿ ಮೀಡಿಯಂ ಫ್ಲೇಂನಲ್ಲಿ ಎರಡೂ ಬದಿ ಕಾಯಿಸಬೇಕು.

ಚಪಾತಿ ಸಂಗ್ರಹಿಸಿಡುವ ವಿಧಾನ

ಕಾಯಿಸಿದ ಚಪಾತಿಗಳನ್ನು ಶೇಖರಿಸಿಡುವ ವಿಧಾನವೂ ಮುಖ್ಯ. ಬೆಚ್ಚಗೆ ಉಳಿಯುವ ಪಾತ್ರೆಗಳಲ್ಲಿ ಹಾಕಿಟ್ಟರೆ ಹೆಚ್ಚು ಹೊತ್ತು ಮೃದುವಾಗಿ ಇರುತ್ತದೆ. ಚಪಾತಿಯ ತೇವಾಂಶ ಬೇಗನೆ ಆರದಂತೆ ಉಳಿಯುತ್ತದೆ. ಬಿಸಿ ಆರಿದಂತೆ ಚಪಾತಿ ಗಟ್ಟಿಯಾಗುತ್ತದೆ.

ಈ ಟಿಪ್ಸ್ ಪಾಲಿಸಿ

ಹಿಟ್ಟು ಕಲಸುವಾಗ ಹಿಟ್ಟಿಗೆ ಅಗತ್ಯ ಪ್ರಮಾಣದಲ್ಲಿ ಉಪ್ಪು ಹಾಕಿಕೊಂಡು ಒಮ್ಮೆ ಮಿಶ್ರಣ ಮಾಡಿ. ಸಂಪೂರ್ಣ ನೀರು ಹಾಕುವ ಬದಲಿಗೆ ಸ್ವಲ್ಪವಾದರೂ ಹಾಲು ಹಾಕಿ. ಹಿಟ್ಟಿನ ಅರ್ಧಭಾಗದಷ್ಟು ನೀರು ಅಥವಾ ಹಾಲು ಹಾಕಿ ನಾದಿಕೊಳ್ಳಿ. ಮಿಶ್ರಣವನ್ನು ಕೆಲಕಾಲ ಇಟ್ಟು ಚಪಾತಿ ಲಟ್ಟಿಸುವ ಸಮಯದಲ್ಲಿ ಮತ್ತೊಮ್ಮೆ ನಾದಿಕೊಳ್ಳಿ. ಚಪಾತಿ ಉಂಡೆಗಳನ್ನು ಯಾವುದೇ ಬಿರುಕು ಇಲ್ಲದಂತೆ ಉಂಡೆ ಮಾಡಿಕೊಳ್ಳಿ. ಇನ್ನೂ ಪದರಪದರವಾಗಿ ಚಪಾತಿ ಬರಬೇಕಿದ್ದರೆ ಸ್ವಲ್ಪ ಲಟ್ಟಿಸಿದ ಚಪಾತಿಯನ್ನು ಒಂದೆರಡು ಮಡಕೆ ಮಡಚಿ ಮತ್ತೆ ಲಟ್ಟಿಸಿಕೊಳ್ಳಿ. ಈ ವೇಳೆ ಲಟ್ಟಣಿಗೆ ಮೇಲೆ ಹೆಚ್ಚು ಒತ್ತಡ ಬೀಳದ ಹಾಗೆ ನಾಜೂಕಾಗಿ ಲಟ್ಟಿಸಿಕೊಳ್ಳಿ. ಆಗ ಮೃದು ಚಪಾತಿ ಜೊತೆಗೆ ಪರಪದರವಾಗಿ ಚಪಾತಿ ಬರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ