logo
ಕನ್ನಡ ಸುದ್ದಿ  /  ಜೀವನಶೈಲಿ  /  Gowri Habba 2022: ಮೊರದ ಬಾಗಿನ, ಅದರ ಮಹತ್ವ ಮತ್ತು ದಾನ ಫಲಗಳ ವಿವರ ಇಲ್ಲಿದೆ..

Gowri Habba 2022: ಮೊರದ ಬಾಗಿನ, ಅದರ ಮಹತ್ವ ಮತ್ತು ದಾನ ಫಲಗಳ ವಿವರ ಇಲ್ಲಿದೆ..

HT Kannada Desk HT Kannada

Aug 30, 2022 02:56 PM IST

google News

ಮೊರದ ಬಾಗಿನ

    • ಗೌರಿ ಹಬ್ಬ ಇಂದು. ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ. ಇದರಲ್ಲಿ ಇರಿಸುವ ವಸ್ತುಗಳು ಮತ್ತು ಅವುಗಳ ದೇವತಾ ಸಾನ್ನಿಧ್ಯ, ಮಹತ್ವ, ದಾನ ಫಲಗಳ ವಿವರ ಇಲ್ಲಿದೆ. 
ಮೊರದ ಬಾಗಿನ
ಮೊರದ ಬಾಗಿನ (SM)

ಗೌರಿ ಹಬ್ಬ ಇಂದು. ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ.

ಮೊರದ ಬಾಗಿನದಲ್ಲಿ ಇರುವ ವಸ್ತುಗಳ ಪಟ್ಟಿಯನ್ನು ಒಮ್ಮೆ ಗಮನಿಸೋಣ.

ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.

ದಾನಗಳು– ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಪು, ತೆಂಗಿನಕಾಯಿ, ಹಣ್ಣು, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ಜತೆಗೆ ರವಿಕೆ ಬಟ್ಟೆ ಕೂಡ ಇರುತ್ತದೆ.

ಈ ವಸ್ತುಗಳಲ್ಲಿರುವ ದೇವತಾ ಸಾನ್ನಿಧ್ಯ ಹೀಗಿದೆ ಗಮನಿಸಿ

1. ಅರಿಸಿನ: ಗೌರಿದೇವೀ.

2. ಕುಂಕುಮ:ಮಹಾಲಕ್ಷ್ಮೀ

3. ಸಿಂಧೂರ: ಸರಸ್ವತೀ

4. ಕನ್ನಡಿ: ರೂಪಲಕ್ಷ್ಮೀ.

5. ಬಾಚಣಿಗೆ:ಶೃಂಗಾರಲಕ್ಷ್ಮೀ.

6. ಕಾಡಿಗೆ:ಲಜ್ಜಾಲಕ್ಷ್ಮೀ.

7. ಅಕ್ಕಿ:ಶ್ರೀ ಲಕ್ಷ್ಮೀ.

8. ತೊಗರಿಬೇಳೆ :ವರಲಕ್ಷ್ಮೀ

9. ಉದ್ದಿನಬೇಳೆ:ಸಿದ್ದಲಕ್ಷ್ಮೀ

10 ತೆಂಗಿನಕಾಯಿ:ಸಂತಾನಲಕ್ಷ್ಮೀ

11. ವೀಳ್ಯದ ಎಲೆ:ಧನಲಕ್ಷ್ಮೀ

12. ಅಡಿಕೆ಼:ಇಷ್ಟಲಕ್ಷ್ಮೀ

13. ಫಲ (ಹಣ್ಣು): ಜ್ಞಾನಲಕ್ಷ್ಮೀ

14. ಬೆಲ್ಲ:ರಸಲಕ್ಷ್ಮೀ

15. ವಸ್ತ್ರ:ವಸ್ತ್ರಲಕ್ಷ್ಮೀ

16. ಹೆಸರುಬೇಳೆ: ವಿದ್ಯಾಲಕ್ಷ್ಮೀ

ಮುತೈದೆ ದೇವತೆಯರು ಒಟ್ಟು 16 ಜನ. ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ. ಇವರನ್ನು ಷೋಡಷಲಕ್ಷ್ಮೀಯರು ಎಂದೂ ಕರೆಯುತ್ತಾರೆ.

ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮೊರದ ಬಾಗಿನ ಕೊಡುತ್ತಾರೆ. ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎನ್ನುತ್ತಾರೆ. ಇಲ್ಲಿ ಮೊರ ಎಂದರೆ ನಾರಾಯಣ ಮತ್ತು ಒಳಗಿರುವುದು ಲಕ್ಷ್ಮಿಯರು.

ದಂಪತಿ ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಎಂದು ಈ ಮೊರದ ಬಾಗಿನ ಕೊಡುತ್ತಾರೆ. 16 ದೇವತೆಗಳು ನಿತ್ಯಸುಮಂಗಲಿಯರು. ಈ 16 ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು.

ದಾನ ಮತ್ತು ಫಲ

ಬಾಗಿನದ ವಸ್ತುಗಳು ಮತ್ತು ಅವುಗಳನ್ನು ದಾನ ನೀಡುವುದರಿಂದ ಸಿಗುವ ದಾನ ಫಲ ಏನು ಎಂಬುದರ ಮಾಹಿತಿ ಇಲ್ಲಿದೆ.

ಅರಿಸಿನ ದಾನ - ರೋಗ ನಿವಾರಣೆ ಆಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ.

ಕುಂಕುಮ ದಾನ - ದೃಷ್ಟಿದೋಷ ನಿವಾರಣೆ, ಕೋಪ, ಹಠ,ಕಮ್ಮಿ ಆಗುತ್ತದೆ. ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ಆಗುತ್ತದೆ..

ಸಿಂಧೂರ ದಾನ - ಸತಿ ಪತಿ ಕಲಹ ನಿವಾರಣೆ, ರೋಗಬಾಧೆ, ಋಣಬಾಧೆ ನಿವಾರಣೆ, ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ.

ಕನ್ನಡ (ರೂಪಲಕ್ಷ್ಮೀ) - ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆ.

ಬಾಚಣಿಗೆ - ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ. ರೂಪವತಿಯಾಗುತ್ತಾರೆ.

ಕಾಡಿಗೆ - ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ ಎಂಬ ನಂಬಿಕೆ. ಪೂರ್ಣ ಸ್ತ್ರೀತತ್ವದಲ್ಲಿ ಹೆಚ್ಚಳ.

ಅಕ್ಕಿ : ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗಿ ಆರೋಗ್ಯಭಾಗ್ಯವಾಗುತ್ತದೆ. ಮನೆಯಲ್ಲಿ ಕಲಹ ಇಲ್ಲವಾಗುತ್ತದೆ.

ತೊಗರಿಬೇಳೆ : ಕುಜದೋಷ ನಿವಾರಣೆ, ಸರ್ಪದೋಷ ನಿವಾರಣೆ, ರಜಸ್ವಲಾ ದೋಷಗಳು ನಿವಾರಣೆ, ರಕ್ತದೊತ್ತಡ ಸಹಜಸ್ಥಿತಿಗೆ ಮರಳುತ್ತವೆ. ವಿವಾಹ ದೋಷ ನಿವಾರಣೆಯಾಗುತ್ತವೆ.

ಉದ್ದಿನ ಬೇಳೆ - ಪಿತೃಶಾಪ ನಿವಾರಣೆ, ಅಪಮೃತ್ಯು ನಿವಾರಣೆಯಾಗುತ್ತದೆ. ಅಗೋಚರ ರೋಗ ದೂರಾಗುತ್ತದೆ. ಪತಿಯಲ್ಲಿರುವ ಸರ್ವ ದೋಷ ಇಲ್ಲವಾಗುತ್ತದೆ.

ತೆಂಗಿನಕಾಯಿ : ಇಷ್ಟಾರ್ಥಸಿದ್ಧಿ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಸರ್ವಕಾರ್ಯ ವಿಜಯ, ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ. ಸಂತಾನ ಸಮಸ್ಯೆ, ಉದರ ಸಂಬಂಧಿ ರೋಗ ನಿವಾರಣೆ.

ವೀಳ್ಯದೆಲೆ : ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ನಿವಾರಣೆ.‌

ಅಡಿಕೆ : ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತವೆ.

ಫಲದಾನ: ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮ. ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪ ನಿವಾರಣೆ.

ಬೆಲ್ಲ (ರಸಲಕ್ಷ್ಮೀ) : ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇದೆ. ಬೆಲ್ಲದಾನ ಮಾಡಿದರೆ ಬಹಳಷ್ಟು ಚಿಂತೆ, ನಿತ್ಯದಾರಿದ್ರ್ಯ ನಿವಾರಣೆ ಆಗಿ, ಜೀವನದಲ್ಲಿ ಉತ್ತಮ ಅಭಿವೃ‍ದ್ಧಿ ಆಗುವುದು.

ವಸ್ತ್ರಲಕ್ಷ್ಮೀ : ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ", ಕುಲದೇವತೆ, ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು. ಇದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆ, ಕುಲದೇವತಾ ತೃಪ್ತಿ, ಸುಮಂಗಲೀ ದೋಷ ನಿವಾರಣೆ

ಹೆಸರುಬೇಳೆ - ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹ ಪ್ರಾಪ್ತಿ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ. ವಾಯುವಿನ ಉಪದ್ರ, ಗರ್ಭಕೋಶದ ತೊಂದರೆ ಕಡಿಮೆಯಾಗುತ್ತವೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ