ಕೂದಲು ಬಿಳಿಯಾಗಿದೆ ಅಂತ ಪದೇ ಪದೇ ಬಣ್ಣ ಹಚ್ಚಬೇಡಿ; ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವ ವಿಧಾನ ಇಲ್ಲಿದೆ, ಇದನ್ನೊಮ್ಮೆ ಟ್ರೈ ಮಾಡಿ
Oct 08, 2024 06:30 AM IST
ಕೂದಲು ಕಪ್ಪಾಗಿಸುವ ವಿಧಾನ
- ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗೋದು ಸಹಜ. ಆದ್ರೆ ಈಗೆಲ್ಲಾ 30 ದಾಟುತ್ತಿದ್ದಂತೆ ಕೂದಲು ಬಿಳಿಯಾಗಲು ಶುರುವಾಗುತ್ತೆ. ಹಾಗಂತ ಪದೇ ಪದೇ ಡೈ ಮಾಡುವುದು, ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಅದರ ಬದಲು ಮನೆಯಲ್ಲಿ ನೈಸರ್ಗಿಕ ಬಣ್ಣ ತಯಾರಿಸಿ ಬಳಸುವುದರಿಂದ ಕೂದಲನ್ನು ಕಪ್ಪಗಾಗಿಸುವುದು ಮಾತ್ರವಲ್ಲ, ಕೂದಲ ಬೆಳವಣಿಗೆಯನ್ನೂ ಉತ್ತೇಜಿಸಬಹುದು.
ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ತುಂಬಾನೇ ಸಾಮಾನ್ಯವಾಗಿದೆ. ವಯಸ್ಸಿನ ಭೇದವಿಲ್ಲದೆ ಚಿಕ್ಕ ವಯಸ್ಸಿನಿಂದಲೇ ಅಂದರೆ 20–25 ವರ್ಷಕ್ಕೆ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಕಾರಣಕ್ಕೆ ಹಲವರು ಕೂದಲಿಗೆ ಬಣ್ಣ ಹಚ್ಚುವುದು ಅಥವಾ ಡೈ ಮಾಡುತ್ತಾರೆ. ಬಿಳಿ ಕೂದಲು ಮರೆಮಾಡಲು ಡೈ ಮಾಡಿದ್ರೆ ಕೂದಲು ಇನ್ನಷ್ಟು ಬೆಳ್ಳಗಾಗುತ್ತದೆ. ಕೂದಲಿಗೆ ಕಲರಿಂಗ್ ಮಾಡುವುದು ಕೂದಲಿಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಆ ಕಾರಣಕ್ಕೆ ಕೂದಲು ಕಪ್ಪಾಗಿಸಲು ನೈಸರ್ಗಿಕ ಬಣ್ಣಗಳನ್ನು ಬಳಸಬೇಕು. ಇದರಿಂದ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ, ಹೊಸದಾಗಿ ಬಿಳಿ ಕೂದಲು ಬರುವುದೂ ಇಲ್ಲ. ಹಾಗಾದರೆ ಮನೆಯಲ್ಲೇ ನೈಸರ್ಗಿಕ ಕೂದಲಿನ ಬಣ್ಣವನ್ನು ತಯಾರಿಸುವುದು ಹೇಗೆ ನೋಡಿ.
ನೈಸರ್ಗಿಕ ಬಣ್ಣ ತಯಾರಿಸಲು ಏನೆಲ್ಲಾ ಬೇಕು?
ಆರೋಗ್ಯಕರ ನೈಸರ್ಗಿಕ ಕೂದಲ ಬಣ್ಣವನ್ನ ತಯಾರಿಸಲು 4 ಸಾಮಗ್ರಿಗಳು ಸಾಕು. ಅವುಗಳಿಂದ ಬಣ್ಣ ತಯಾರಿಸಿ ಇಟ್ಟರೆ ಆಗಾಗ ಬಳಸುವುದು. ಹಾಗಾದರೆ ಕೂದಲು ಕಪ್ಪಾಗಿಸಲು ಏನೆಲ್ಲಾ ಬೇಕು ನೋಡಿ.
ಕಹಿಜೀರಿಗೆ ಅಥವಾ ಕಾಳು ಜೀರಿಗೆ – 4 ಚಮಚ, ನೆಲ್ಲಿಕಾಯಿ ಪುಡಿ – 1 ಚಮಚ, ಭೃಂಗರಾಜ ಪುಡಿ – 1 ಚಮಚ, ತೆಂಗಿನೆಣ್ಣೆ
ನೈಸರ್ಗಿಕ ಹೇರ್ ಡ್ರೈ ತಯಾರಿಸುವ ವಿಧಾನ
ಬಾಣಲಿಯಲ್ಲಿ 1 ಚಮಚ ತೆಂಗಿನೆಣ್ಣೆ ಹಾಕಿ, ಬಿಸಿಯಾದ ಮೇಲೆ ಕಾಳುಜೀರಿಗೆ ಸೇರಿಸಿ ಕೈಯಾಡಿಸಿ. ನಂತರ ಅದನ್ನು ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್‌ನಲ್ಲಿ ನೆಲ್ಲಿಕಾಯಿ ಪುಡಿ, ಭೃಂಗರಾಜ ಪುಡಿ ಎರಡನ್ನೂ ಸಮವಾಗಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣ ತುಂಬಾ ದಪ್ಪಗಿದ್ದರೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ. ಇದನ್ನು ಕಾಲು ಗಂಟೆಗಳ ಕಾಲ ಹಾಗೇ ಇಡಿ. ಇದನ್ನು ಡೈ ಮಾಡಿದಂತೆ ಕೂದಲಿಗೆ ಹಚ್ಚಿ, ಬಿಳಿ ಕೂದಲು ಮಾತ್ರವಲ್ಲದೇ ಬೇರೆ ಕೂದಲಿಗೂ ಹಚ್ಚಬಹುದು. ಹಚ್ಚಿದ ನಂತರ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಹಾಗೆ ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಈ ನೈಸರ್ಗಿಕ ಕೂದಲಿನ ಬಣ್ಣವನ್ನು ವಾರಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಹಚ್ಚವುದರಿಂದ ಕೂದಲು ಕಪ್ಪಾಗುವುದು ಕಡಿಮೆಯಾಗುತ್ತದೆ. ಇದು ಬೇರೆ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಅಲ್ಲದೇ ಈಗಾಗಲೇ ಬಿಳಿಯಾಗಿರುವ ಕೂದಲು ಕಪ್ಪಗಾಗುತ್ತದೆ.
ಆದರೆ ಇದನ್ನು ಕೂದಲಿಗೆ ಹಚ್ಚುವ ಮುನ್ನ ನೆತ್ತಿಯ ಬುಡದಲ್ಲಿ ಯಾವುದೇ ಗಾಯ, ಅಲರ್ಜಿ ಇಲ್ಲದೇ ಇರುವಂತೆ ನೋಡಿಕೊಳ್ಳಿ. ಕೆಲವೊಮ್ಮೆ ಇದು ಚರ್ಮಕ್ಕೆ ಅಲರ್ಜಿಯೂ ಆಗಬಹುದು. ನೀವು ಸೂಕ್ಷ್ಮ ಚರ್ಮದವರಾಗಿದ್ದರೆ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ.
ವಿಭಾಗ