Vitamin D: ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದೆ ಎಂದು ಸೂಚಿಸುವ 10 ಲಕ್ಷಣಗಳಿವು, ಈ ಸೂಚನೆಗಳನ್ನು ಕಡೆಗಣಿಸಬೇಡಿ
Nov 08, 2024 11:17 AM IST
ವಿಟಮಿನ್ ಡಿ ಕೊರತೆಯಿದೆ ಎಂದು ಸೂಚಿಸುವ 10 ಲಕ್ಷಣಗಳಿವು
low vitamin d symptoms: ವಿಟಮಿನ್ ಡಿ ದೇಹದ ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳ ಆರೋಗ್ಯಕರ ಕಾರ್ಯನಿರ್ವಹಣೆಗೆ ಅಗತ್ಯ. ಕೆಲವೊಮ್ಮೆ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು, ದೇಹ ತೋರಿಸುವ ಸೂಚನೆಗಳಿಂದಲೂ ವಿಟಮಿನ್ ಡಿ ಪೊಷಕಾಂಶದ ಕೊರತೆಯನ್ನು ಸೂಚಿಸುತ್ತವೆ. ಬನ್ನಿ ಅಂತಹ 10 ಲಕ್ಷಣಗಳನ್ನು ತಿಳಿಯೋಣ.
Low vitamin d symptoms: ನಮ್ಮ ದೇಹದ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಡಿ ಅತ್ಯವಶ್ಯ. ಇದು ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂಳೆಯ ಆರೋಗ್ಯಕ್ಕೂ ಪ್ರಯೋಜನಕಾರಿ. ಮೂಳೆಗಳ ರಚನೆ ಮತ್ತು ಅಂಗಾಂಶಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಹೀರಿಕೊಳ್ಳಲು ನೆರವಾಗುತ್ತದೆ. ಇಷ್ಟು ಮಾತ್ರವಲ್ಲ, ನಮ್ಮ ದೇಹದ ನರ ವ್ಯವಸ್ಥೆ, ಪ್ರತಿರಕ್ಷಣಾ ವ್ಯವಸ್ಥೆ, ಸ್ನಾಯು ವ್ಯವಸ್ಥೆಗಳ ಸಮರ್ಪಕ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತದೆ. ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ನಮ್ಮ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಖಿನ್ನತೆ, ಆತಂಕದಂತಹ ಹಲವು ರೋಗಲಕ್ಷಣಗಳನ್ನು ನೀಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆ ಇದೆ ಎಂದು ಸೂಚಿಸುವ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳ ವಿವರ ಇಲ್ಲಿ ನೀಡಲಾಗಿದೆ.
1. ಆಗಾಗ ಕಾಯಿಲೆಗಳಿಗೆ ತುತ್ತಾಗುವುದು
ವಿಟಮಿನ್ ಡಿ ಕೊರತೆ ಇರುವವರಿಗೆ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುತ್ತದೆ. ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಸಣ್ಣ ಸೋಂಕಿನಿಂದ ಕಾಯಿಲೆಗೆ ತುತ್ತಾಗುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಇದೆ ಎಂದರ್ಥ. ಕೆಲವರಿಗೆ ಆಗಾಗ ಜ್ವರ ಬರುವುದು ಕೂಡ ವಿಟಮಿನ್ ಡಿ ಕೊರತೆಯ ಕಾರಣದಿಂದಲೇ.
2. ಆಯಾಸ
ವಿಟಮಿನ್ ಡಿ ಕೊರತೆಯಿಂದ ಆಯಾಸ, ಸುಸ್ತಾಗುವಂತಹ ಲಕ್ಷಣಗಳು ಕಾಣಿಸುತ್ತವೆ. ವಿಟಮಿನ್ ಡಿ ಪೂರಕ ತೆಗೆದುಕೊಳ್ಳುವ ವ್ಯಕ್ತಿಗಳಲ್ಲಿ ಆಯಾಸ ಕಡಿಮೆಯಾಗುತ್ತದೆ ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ.
3. ಖಿನ್ನತೆ ಮತ್ತು ಆತಂಕ
ವಿಟಮಿನ್ ಡಿ ಕೊರತೆ ಕಡಿಮೆ ಮಾಡಿಕೊಳ್ಳುವುದರಿಂದ ಅಥವಾ ವಿಟಮಿನ್ ಡಿ ಪೂರಕಗಳನ್ನು ಸೇವಿಸುವುದರಿಂದ ಖಿನ್ನತೆ ಕಡಿಮೆ ಮಾಡಿಕೊಳ್ಳಬಹುದೇ ಎಂದು ಸಂಶೋಧನೆಗಳು ನಡೆಯುತ್ತಿವೆ. ಹಲವಾರು ಅಧ್ಯಯನಗಳು ವಿಟಮಿನ್ ಡಿ ಕೊರತೆಯಿರುವ ವ್ಯಕ್ತಿಗಳಲ್ಲಿ ಖಿನ್ನತೆ ಹೆಚ್ಚಿರುವುದನ್ನು ಕಂಡುಕೊಂಡಿವೆ.
4. ಬೆನ್ನು ನೋವು
ಸ್ನಾಯು ಬಲ ಕಡಿಮೆಯಾದ ಸಂದರ್ಭದಲ್ಲಿ ನಿಮ್ಮ ಬೆನ್ನು ಮತ್ತು ಕತ್ತಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಇದು ಬೆನ್ನುನೋವಿಗೆ ಕಾರಣವಾಗಬಹುದು.
5. ಸ್ನಾಯು ದೌರ್ಬಲ್ಯ ಮತ್ತು ನೋವು
ಸ್ನಾಯುವಿನ ಸಮರ್ಪಕ ಕಾರ್ಯಕ್ಕೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಡಿ ಕೊರತೆ ಇರುವವರಲ್ಲಿ ದೌರ್ಬಲ್ಯ, ನೋವು, ಸ್ನಾಯುವಿನ ಮೇಲೆ ಒತ್ತಡದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
6. ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತಗಳು
ವಿಟಮಿನ್ ಡಿಯು ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಬಲವಾದ, ಗಟ್ಟಿಮುಟ್ಟಾದ ಮೂಳೆಗಳನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ಮೃದುವಾಗಬಹುದು. ಇದರಿಂದ ಮೂಳೆ ಸಾಂದ್ರತೆ ಕಡಿಮೆಯಾಗಬಹುದು. ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತಗಳ ಅಪಾಯ ಹೆಚ್ಚಿರುತ್ತದೆ.
7. ಕೂದಲು ಉದುರುವುದು
ವಿಟಮಿನ್ ಡಿ ಹೊಸ ಕೂದಲಿನ ಬೆಳವಣಿಗೆ ಸೇರಿದಂತೆ ಕೂದಲಿನ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಕೊರತೆಯಾದರೆ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. ವಿಟಮಿನ್ ಡಿ ಚಿಕಿತ್ಸೆಗಳ ಮೂಲಕ ಬೊಕ್ಕತಲೆ ಕಡಿಮೆ ಮಾಡಿಕೊಳ್ಳಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.
8. ತೂಕ ಹೆಚ್ಚಾಗುವುದು
ವಿಟಮಿನ್ ಡಿ ಕೊರತೆಯು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ಸ್ಥೂಲಕಾಯ ಹೊಂದಿರುವ ವ್ಯಕ್ತಿಗಳು, ಹೆಚ್ಚುವರಿ ಕೊಬ್ಬಿನ ಕೋಶ ಹೊಂದಿರುವುದು ಕೂಡ ವಿಟಮಿನ್ ಡಿ ಕೊರತೆಯ ಸೂಚನೆ. ಕೊಬ್ಬಿನ ಕೋಶಗಳು ಜೀವಸತ್ವಗಳನ್ನು ಉಳಿಸಿಕೊಳ್ಳುತ್ತವೆ. ಆದರೆ, ಜೀವಸತ್ವಗಳನ್ನು ರಕ್ತಪ್ರವಾಹಕ್ಕೆ ಸಮರ್ಪಕವಾಗಿ ಬಿಡುಗಡೆ ಮಾಡುವುದಿಲ್ಲ.
9. ಗಾಯಗಳು ಬೇಗ ಗುಣವಾಗದೆ ಇರುವುದು
ಶಸ್ತ್ರಚಿಕಿತ್ಸೆ ಅಥವಾ ಗಾಯಗೊಂಡ ನಂತರ ಆ ಗಾಯ ತಡವಾಗಿಕೂಡ ವಿಟಮಿನ್ ಡಿ ಕೊರತೆ ಇರುವುದನ್ನು ಸೂಚಿಸುತ್ತದೆ. ಗಾಯ ಗುಣಪಡಿಸುವ ಪ್ರಕ್ರಿಯೆಯಲ್ಲಿ ಹೊಸ ಚರ್ಮದ ರಚನೆಗೆ ಅಗತ್ಯವಾದ ಸಂಯುಕ್ತಗಳ ಉತ್ಪಾದನೆಯನ್ನು ವಿಟಮಿನ್ ಡಿ ಉತ್ತೇಜಿಸುತ್ತದೆ. ವಿಟಮಿನ್ ಡಿ ಉರಿಯೂತವನ್ನು ನಿಯಂತ್ರಿಸುವಲ್ಲಿ ಮತ್ತು ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಪಾತ್ರವನ್ನು ವಹಿಸುತ್ತದೆ.
10. ಎಸ್ಜಿಮಾ
ವಿಟಮಿನ್ ಡಿ ಚರ್ಮದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ. ಎಸ್ಜಿಮಾವು ಚರ್ಮದ ಉರಿಯೂತ, ಕಿರಿಕಿರಿ ಮತ್ತು ಊತ ಮುಂತಾದವುಗಳಿಗೆ ಕಾರಣವಾಗುತ್ತದೆ.
ವಿಟಮಿನ್ ಡಿ ನಮ್ಮ ದೇಹದ ಮೂಳೆಗಳು, ಸ್ನಾಯುಗಳು, ನರಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿಯಾದ ಅಗತ್ಯ ಪೋಷಕಾಂಶವಾಗಿದೆ. ನಿಮ್ಮ ದೇಹದಲ್ಲಿ ಈ ಮೇಲಿನ ಚಿಹ್ನೆಗಳು ಅಥವಾ ರೋಗಲಕ್ಷಣಗಳು ಇದ್ದರೆ ತಜ್ಞ ವೈದ್ಯರ ನೆರವು ಪಡೆದು ವಿಟಮಿನ್‌ಡಿ ಪರೀಕ್ಷೆ ಮಾಡಿಕೊಳ್ಳಿ.