logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಈ 5 ಆಹಾರ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ; ಅರಿಯದ ಮಕ್ಕಳ ತಾಳಕ್ಕೆ ಕುಣಿದು ಆರೋಗ್ಯ ಕೆಡಿಸಬೇಡಿ

ಮಕ್ಕಳ ಈ 5 ಆಹಾರ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ; ಅರಿಯದ ಮಕ್ಕಳ ತಾಳಕ್ಕೆ ಕುಣಿದು ಆರೋಗ್ಯ ಕೆಡಿಸಬೇಡಿ

Jayaraj HT Kannada

Oct 08, 2024 12:53 PM IST

google News

ಮಕ್ಕಳ ಈ 5 ಆಹಾರ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ; ಅರಿಯದ ಮಕ್ಕಳ ಆರೋಗ್ಯ ಕೆಡಿಸಬೇಡಿ

    • ನಿತ್ಯ ಜೀವನದಲ್ಲಿ ಮಕ್ಕಳು ಸೇವಿಸುವ ಅನಾರೋಗ್ಯಕರ ಆಹಾರದ ಬಗ್ಗೆ ಪೋಷಕರಿಗೆ ಅರಿವಿರುವುದಿಲ್ಲ. ಕೆಲವೊಮ್ಮೆ ಗೊತ್ತಿದ್ದರೂ ಅದನ್ನು ಕಡೆಗಣಿಸುತ್ತಾರೆ. ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಪೋಷಕರು ಮಕ್ಕಳ ಅಹಾರಕ್ರಮ ಹಾಗೂ ಜೀವನಶೈಲಿ ಬಗ್ಗೆ ಎಚ್ಚರವಹಿಸಬೇಕು.
ಮಕ್ಕಳ ಈ 5 ಆಹಾರ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ; ಅರಿಯದ ಮಕ್ಕಳ ಆರೋಗ್ಯ ಕೆಡಿಸಬೇಡಿ
ಮಕ್ಕಳ ಈ 5 ಆಹಾರ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ; ಅರಿಯದ ಮಕ್ಕಳ ಆರೋಗ್ಯ ಕೆಡಿಸಬೇಡಿ

ಈಗಿನ ಪೋಷಕರಿಗೆ ತಮ್ಮ ಮಕ್ಕಳನ್ನು ಹತೋಟಿಯಲ್ಲಿಡುವುದೇ ದೊಡ್ಡ ಕೆಲಸ. ಈ ವೇಗದ ಜಗತ್ತಿನಲ್ಲಿ ಜನರು ಎಲ್ಲವೂ ತಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದು ಬಯಸುತ್ತಾರೆ. ಗುಣಮಟ್ಟದ ಬಗ್ಗೆ ಚಿಂತಿಸುವವರ ಸಂಖ್ಯೆ ತುಂಬಾ ವಿರಳ. ಮಕ್ಕಳ ಆರೋಗ್ಯದ ವಿಷಯದಲ್ಲೂ ಇಷ್ಟೇ. ತಮ್ಮ ಮಕ್ಕಳು ಆರೋಗ್ಯಕರ ಆಹಾರ ಪದ್ಧತಿ ಹಾಗೂ ಜೀವನಶೈಲಿ ಕಾಪಾಡಿಕೊಳ್ಳಬೇಕೆಂದು ಹೆತ್ತವರು ಇಲ್ಲದ ಸರ್ಕಸ್‌ ಮಾಡುತ್ತಾರೆ. ಆದರೂ, ಅದನ್ನು ಪಾಲಿಸುವ ಕುಟುಂಬಗಳು ಬಹಳ ಕಡಿಮೆ. ಮಕ್ಕಳು ಸೇವಿಸುವ ಆಹಾರದ ಗುಣಮಟ್ಟದ ಕಾಳಜಿ ವಹಿಸುವುದು ಪೋಷಕರಿಗೆ ಕಷ್ಟವಾಗುತ್ತಿದೆ ಎಂಬುದು ಸತ್ಯದ ಮಾತು. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಮಾರುಕಟ್ಟೆಗಳಲ್ಲಿ ಸಿಗುವ ಆಹಾರ ಉತ್ಪನ್ನಗಳು ಎಲ್ಲವೂ ಆರೋಗ್ಯಕರವಲ್ಲ. ಪೌಷ್ಟಿಕಾಂಶದ ಹೆಸರಿನಲ್ಲಿ ತಪ್ಪುದಾರಿಗೆಳೆಯುವ ಹಲವು ಉತ್ಪನ್ನಗಳಿವೆ. ಪೌಷ್ಟಿಕಾಂಶದ ವೇಷದಲ್ಲಿರುವ ಅನಾರೋಗ್ಯಕರ ಆಹಾರ ಉತ್ಪನ್ನಗಳು ಮಕ್ಕಳ ಆರೋಗ್ಯ ಕಸಿದುಕೊಳ್ಳುತ್ತಿವೆ. ಪೋಷಕರು ಖರೀದಿಸುವಂತೆ ಪ್ರೇರಣೆಗೊಳ್ಳುವಂತೆ ಅದರ ಪ್ಯಾಕೇಜಿಂಗ್ ಮಾಡಲಾಗಿರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಸಕ್ಕರೆ ಮಟ್ಟ ಅಧಿಕವಿರುತ್ತದೆ. ಇಷ್ಟೇ ಅಲ್ಲದೆ ಅನಾರೋಗ್ಯಕರ ಕೊಬ್ಬು ಸೇರಿದಂತೆ ಮಕ್ಕಳ ಆರೋಗ್ಯಕ್ಕೆ ಮಾರಕ ಅಂಶಗಳಿರುತ್ತವೆ. ಇವೆಲ್ಲವೂ ಮಕ್ಕಳಿಗಾಗಲಿ, ಪೋಷಕರಿಗಾಗಲಿ ಅಂದಾಜು ಇರುವುದಿಲ್ಲ. ಹೀಗಾಗಿ ಪೋಷಕರು ಮಕ್ಕಳ ಆಹಾರದ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳ ಕೆಲವೊಂದು ಆಹಾರ ಪದ್ಧತಿಗಳ ಬಗ್ಗೆ ಗಮನವಿರಬೇಕು.

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರಗಳು ಮಕ್ಕಳ ಆರೋಗ್ಯಕ್ಕೆ ಮಾರಕ. ಇದು ಪೋಷಕರಿಗೆ ಗೊತ್ತಿದ್ದೂ ನಿರ್ಲಕ್ಷ್ಯ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್‌ ಮಾಡಿದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳು, ಸೋಡಿಯಂ ಇರುತ್ತವೆ. ಅಲ್ಲದೆ ಆರೋಗ್ಯ ಕೆಡಿಸುವ ಅಂಶಗಳು ಇದರಲ್ಲಡಗಿವೆ. ಇವು ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಅನಾರೋಗ್ಯ ಪರಿಸ್ಥಿತಿಗೆ ಕಾರಣವಾಗುತ್ತವೆ. ಹೀಗಾಗಿ ಮಕ್ಕಳಿಗೆ ಮನೆಯ ತಾಜಾ ಊಟವನ್ನು ತಿನ್ನಲು ಕೊಡಿ.

ಸಕ್ಕರೆ ಅಂಶ ಅಧಿಕವಿರುವ ಆಹಾರ ಮತ್ತು ಪಾನೀಯಗಳ ಸೇವನೆ

ಮಕ್ಕಳು ಸೇವಿರುವ ಹಲವು ಆಹಾರಗಳಲ್ಲಿ ಸಕ್ಕರೆ ಅಧಿಕವಿರುತ್ತದೆ. ಇದರಿಂದ ಬೊಜ್ಜು, ಹಲ್ಲಿನ ಸಮಸ್ಯೆಗಳು ಮತ್ತು ಟೈಪ್ 2 ಮಧುಮೇಹದ ಅಪಾಯ ಹೆಚ್ಚು. ಹೀಗಾಗಿ ಪೋಷಕರು ಕೂಡಾ ಮಕ್ಕಳಿಗೆ ಸಿಹಿತಿಂಡಿ ಮತ್ತು ಪಾನೀಯಗಳನ್ನು ಆಗಾಗ ಕೊಡುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ ಮನೆಯಲ್ಲೇ ಸಂಪೂರ್ಣ ಆಹಾರಗಳನ್ನು ಸಿದ್ಧಪಡಿಸಿದ ಆಹಾರ ಕೊಡಿ. ಸಕ್ಕರೆ ಸೇವನೆಯನ್ನು ಮಿತಿಗೊಳಿಸಿ.

ಊಟದ ಸಮಯದಲ್ಲಿ ವ್ಯತ್ಯಾಸ

ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಸರಿಯಾದ ಸಮಯಕ್ಕೆ ಮಾಡಬೇಕು. ಎಚ್ಚರಿಕೆಯ ಆಹಾರ ಪದ್ಧತಿ ಅನುಸರಿಸಬೇಕು. ತಿನ್ನುವ ವೇಳೆ ಮೊಬೈಲ್‌ ಅಥವಾ ಟಿವಿ ವೀಕ್ಷಣೆ ತಪ್ಪಿಸಿ. ಮಕ್ಕಳು ಊಟದ ಬಗ್ಗೆ ಮಾತ್ರವೇ ಗಮನ ಹರಿಸಿ ತಮ್ಮ ಹಸಿವಿನ ಬಗ್ಗೆ ಹೆಚ್ಚು ಗಮನ ಹರಿಸಲು ನೆರವಾಗಿ.

ಫಾಸ್ಟ್ ಫುಡ್, ಜಂಕ್‌ ಫುಡ್‌, ಹೊರಗಡೆ ಊಟ

ಫಾಸ್ಟ್‌ ಫುಡ್‌ನತ್ತ ಮಕ್ಕಳು ಆಕರ್ಷಿತರಾಗುವುದು ಬೇಗ. ಅದರಲ್ಲಿ ಬಳಸುವ ಅನಾರೋಗ್ಯಕರ ಪದಾರ್ಥಗಳು ಮಕ್ಕಳ ಬಾಯಿ ರುಚಿ ಹೆಚ್ಚಿಸುತ್ತವೆ. ಹೆಚ್ಚಿನ ಮಟ್ಟದ ಸಕ್ಕರೆ, ಕೊಬ್ಬು ಒಳ್ಳೆಯದಲ್ಲ. ನಿಯಮಿತವಾಗಿ ಇಂಥಾ ಆಹಾರ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ಹೀಗಾಗಿ ಆಗಾಗ ಫಾಸ್ಟ್ ಫುಡ್ ಸೇವನೆ ಹಾಗೂ ಹೊರಗಡೆ ಊಟಕ್ಕೆ ಕಡಿವಾಣ ಹಾಕಿ.

ಉಪಾಹಾರವನ್ನು ಬಿಡುವುದು

ಬೆಳಗ್ಗಿನ ಉಪಾಹಾರ ವ್ಯಕ್ತಿಯ ಪೋಷಣೆಗೆ ತುಂಬಾ ಮುಖ್ಯ. ರಾತ್ರಿಪೂರ್ತಿ ಖಾಲಿ ಇರುವ ಹೊಟ್ಟಗೆ ಬೆಳಗ್ಗೆ ಹೆಚ್ಚು ಪ್ರಮಾಣದ‌ ಆಹಾರ ಅಗತ್ಯ ಇರುತ್ತದೆ. ಆದರೆ ಮಕ್ಕಳು ಉಪಾಹಾರ ಮಾಡದೆ ಶಾಲೆಗೆ ಹೋದರೆ, ಏಕಾಗ್ರತೆ ಬರುವುದಿಲ್ಲ. ಇದರಿಂದ ಮಕ್ಕಳ ಕಾರ್ಯಕ್ಷಮತೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಮಕ್ಕಳಿಗೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಉಪಹಾರ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ