logo
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಪೂರ್ತಿ ಉದಾಸೀನತೆಯ ಭಾವ ಆವರಿಸಿದೆಯಾ: ಬೆಳಗ್ಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿ, ರಿಲ್ಯಾಕ್ಸ್ ಆಗಿ

ದಿನಪೂರ್ತಿ ಉದಾಸೀನತೆಯ ಭಾವ ಆವರಿಸಿದೆಯಾ: ಬೆಳಗ್ಗಿನ ಸೂರ್ಯ ಕಿರಣಗಳಿಗೆ ಮೈಯೊಡ್ಡಿ, ರಿಲ್ಯಾಕ್ಸ್ ಆಗಿ

Priyanka Gowda HT Kannada

Sep 09, 2024 03:24 PM IST

google News

ಬೆಳಗ್ಗಿನ ಸೂರ್ಯನ ಕಿರಣಗಳ ಐದು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:

  • ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವುದರಿಂದ ಹಿಡಿದು ತೂಕ ನಿರ್ವಹಣೆವರೆಗೆ ಬೆಳಗ್ಗಿನ ಸೂರ್ಯನ ಬೆಳಕಿನ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಬೆಳಗ್ಗಿನ ಸೂರ್ಯನ ಕಿರಣಗಳ ಐದು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ:

ಬೆಳಗ್ಗಿನ ಸೂರ್ಯನ ಕಿರಣಗಳ ಐದು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:
ಬೆಳಗ್ಗಿನ ಸೂರ್ಯನ ಕಿರಣಗಳ ಐದು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ: (Unsplash)

ಬಹುತೇಕ ಮಂದಿ ಬೆಳಗ್ಗೆದ್ದು ತಿಂಡಿ ತಿಂದು ಆಫೀಸ್‍ಗೆ ಹೊರಡುವ ಧಾವಂತದಲ್ಲಿರುತ್ತಾರೆ. ಇನ್ನೂ ಕೆಲವರು ಗಂಟೆ 10 ಆದ್ರೂ ಹಾಸಿಗೆಯಿಂದ ಮೇಲೆ ಏಳುವುದೇ ಇಲ್ಲ. ಅದರಲ್ಲೂ ಬೆಳಗ್ಗೆ ವೇಳೆ ಸೂರ್ಯನ ಬಿಸಿಲಿದ್ದರಂತೂ ಬೈಯ್ದುಕೊಂಡೇ ತೆರಳುವವರು ಅನೇಕರು. ಆದರೆ, ಬೆಳಗ್ಗಿನ ಸೂರ್ಯನ ಬೆಳಕು ಮೈಗೆ ತಾಕಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಸೂರ್ಯನ ಬೆಳಕಿನ ಕಿರಣಗಳು ದೇಹ ಮತ್ತು ಮನಸ್ಸಿಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಪ್ರತಿದಿನ ಬೆಳಗ್ಗೆ ಕೆಲಹೊತ್ತು ಸೂರ್ಯನ ಬೆಳಕಿಗೆ ಮೈಯೊಡ್ಡಿದರೆ ಈ ಐದು ಅದ್ಭುತ ಆರೋಗ್ಯ ಪ್ರಯೋಜನಗಳು ಪಡೆಯಬಹುದು.

ಬೆಳಗ್ಗಿನ ಸೂರ್ಯನ ಬೆಳಕಿನ ಅದ್ಭುತ ಪ್ರಯೋಜನಗಳು

ವಿಟಮಿನ್ ಡಿ ಮಟ್ಟ ಹೆಚ್ಚಿಸಲು ಸಹಕಾರಿ: ಬೆಳಗ್ಗಿನ ಸೂರ್ಯನ ಬೆಳಕು ನೈಸರ್ಗಿಕ ವಿಟಮಿನ್ ಡಿ ಯ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುವ ಅಗತ್ಯ ಪೋಷಕಾಂಶವಾಗಿದೆ.ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಇದು ಅತ್ಯಗತ್ಯ. ಮುಂಜಾನೆ ಸೂರ್ಯನ ಬೆಳಕಿಗೆ ಕೇವಲ 15 ರಿಂದ 30 ನಿಮಿಷಗಳ ಒಡ್ಡಿಕೊಳ್ಳುವಿಕೆಯಿಂದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ವಿಟಮಿನ್ ಡಿ ಅನ್ನು ಸೂರ್ಯನ ಕಿರಣಗಳು ಒದಗಿಸುತ್ತದೆ.

ಧನಾತ್ಮಕವಾಗಿರಲು ಸಹಕಾರಿ: ಸೂರ್ಯನ ಬೆಳಕು ಸಿರೊಟೋನಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಇದು ಸಂತೋಷ ಮತ್ತು ವಿಶ್ರಾಂತಿಯ ಭಾವನೆಗಳನ್ನು ಉತ್ತೇಜಿಸುತ್ತದೆ. ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುವುದರಿಂದ ಆತಂಕ ಮತ್ತು ಖಿನ್ನತೆಯ ಭಾವನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಇದರಿಂದ ದಿನವಿಡೀ ಧನಾತ್ಮಕವಾಗಿರಲು ಸಹಕಾರಿಯಾಗಿದೆ.

ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಬೆಳಿಗ್ಗೆ ಸೂರ್ಯನ ಬೆಳಕನ್ನು ಪಡೆಯುವುದರಿಂದ ನಿದ್ದೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ. ಇದು ನಿದ್ದೆಯ ಚಕ್ರವನ್ನು ಸುಧಾರಿಸುವಲ್ಲೂ ಸಹಕಾರಿಯಾಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಬೆಳಗ್ಗೆ ವೇಳೆ ಸೂರ್ಯನ ಬೆಳಕಿಗೆ ಮೈಯೊಡ್ಡಿದರೆ ರಾತ್ರಿ ವೇಳೆ ಮಲಗಿದ ಕೂಡಲೇ ನಿದ್ದೆ ಬರಬಹುದು. ಸೂರ್ಯನ ಕಿರಣಗಳು ಮೆಲಟೋನಿನ್ ಉತ್ಪಾದನೆಯನ್ನು ಉತ್ತೇಜಿಸುವುದರಿಂದ ಗುಣಮಟ್ಟದ ನಿದ್ದೆ ಪಡೆಯಬಹುದು.

ತೂಕ ನಿರ್ವಹಣೆಗೆ ಸಹಕಾರಿ: ಬೆಳಗ್ಗಿನ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ಉತ್ತಮ ಚಯಾಪಚಯ ಕ್ರಿಯೆಗೂ ಸಹಕಾರಿ. ಇದು ದೇಹವು ತನ್ನ ಶಕ್ತಿಯ ಮಟ್ಟವನ್ನು ನಿಯಂತ್ರಿಸಲು ಮತ್ತು ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ.

ಹೃದಯದ ಆರೋಗ್ಯ ಉತ್ತೇಜಿಸುವಲ್ಲಿ ಸಹಕಾರಿ: ಬೆಳಗ್ಗಿನ ಸೂರ್ಯನ ಬೆಳಕು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಯುವಿ ಕಿರಣಗಳು ಚರ್ಮದಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಿ, ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಇದು ಆರೋಗ್ಯಕರ ರಕ್ತದೊತ್ತಡದ ಮಟ್ಟಗಳಿಗೆ ಕಾರಣವಾಗಬಹುದು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಒಟ್ಟಿನಲ್ಲಿ ಪ್ರತಿದಿನ ಬೆಳಗ್ಗೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದರಿಂದ ಮನಸ್ಥಿತಿಯನ್ನು ಸುಧಾರಿಸುವುದರಿಂದ ಹಿಡಿದು ಮೂಳೆಗಳನ್ನು ಬಲಪಡಿಸುವವರೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಟೈಮ್ ವೇಸ್ಟ್ ಆಗುತ್ತೆ ಅಂದುಕೊಳ್ಳುವವರು ಕಾಫಿ ಹೀರುತ್ತಾ ಹೊರಗೆ ಹೆಜ್ಜೆ ಹಾಕಿ, ಸೂರ್ಯನ ಕಿರಣಗಳಿಗೆ ಮೈಯೊಡ್ಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ