logo
ಕನ್ನಡ ಸುದ್ದಿ  /  ಜೀವನಶೈಲಿ  /  Killer Diets: ಮಿತಿ ಮೀರಿದರೆ ಪ್ರಾಣಕ್ಕೆ ಸಂಚು ತರುವ 5 ಡಯೆಟ್‌ ವಿಧಾನಗಳಿವು; ಇವುಗಳ ಅನುಕರಣೆಗೂ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ

Killer Diets: ಮಿತಿ ಮೀರಿದರೆ ಪ್ರಾಣಕ್ಕೆ ಸಂಚು ತರುವ 5 ಡಯೆಟ್‌ ವಿಧಾನಗಳಿವು; ಇವುಗಳ ಅನುಕರಣೆಗೂ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ

Reshma HT Kannada

Aug 14, 2023 04:00 PM IST

google News

ಕೆಲವು ಡಯೆಟ್‌ ಕ್ರಮಗಳನ್ನು ಅಸಮರ್ಪಕ ರೀತಿಯಲ್ಲಿ ಪಾಲಿಸುವುದು ಜೀವಕ್ಕೆ ಹಾನಿ ಉಂಟು ಮಾಡಬಹುದು

    • ತೂಕ ಇಳಿಕೆ, ಆರೋಗ್ಯ ರಕ್ಷಣೆ ಹೀಗೆ ಹಲವು ಕಾರಣಗಳಿಂದ ಇತ್ತೀಚೆಗೆ ಡಯೆಟ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೊಂದು ಹೆಸರಿನ ಡಯೆಟ್‌ ಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ ಯಾವುದೇ ಡಯೆಟ್‌ ಕ್ರಮವನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯುವುದು ಅವಶ್ಯ. ಇಲ್ಲದಿದ್ದರೆ ಪ್ರಾಣಾಪಾಯ ಉಂಟಾಗಬಹುದು.
ಕೆಲವು ಡಯೆಟ್‌ ಕ್ರಮಗಳನ್ನು ಅಸಮರ್ಪಕ ರೀತಿಯಲ್ಲಿ ಪಾಲಿಸುವುದು ಜೀವಕ್ಕೆ ಹಾನಿ ಉಂಟು ಮಾಡಬಹುದು
ಕೆಲವು ಡಯೆಟ್‌ ಕ್ರಮಗಳನ್ನು ಅಸಮರ್ಪಕ ರೀತಿಯಲ್ಲಿ ಪಾಲಿಸುವುದು ಜೀವಕ್ಕೆ ಹಾನಿ ಉಂಟು ಮಾಡಬಹುದು

ಇತ್ತೀಚೆಗೆ ಯಾರ ಬಾಯಲ್ಲಿ ಕೇಳಿದರೂ ʼಡಯೆಟ್‌ʼ ಅಥವಾ ಡಯೆಟಿಂಗ್‌ ಈ ಪದ ಹೆಚ್ಚು ಕೇಳುತ್ತಿರುತ್ತದೆ. ಅಸಮರ್ಪಕ ಜೀವನಶೈಲಿ, ಅತಿಯಾದ ಒತ್ತಡ, ಆಹಾರಕ್ರಮ ಇವುಗಳಿಂದ ತೂಕ ಹೆಚ್ಚಳ ಸಾಮಾನ್ಯವಾಗಿದೆ. ಆ ಕಾರಣದಿಂದ ಹಲವರು ಡಯೆಟ್‌ ಮೊರೆ ಹೋಗುತ್ತಿದ್ದಾರೆ. ಆದರೆ ಡಯೆಟ್‌ ಕ್ರಮ ಪಾಲಿಸಲು ಇಂಟರ್‌ನೆಟ್‌ ಮೊರೆ ಹೋಗುವವರ ಸಂಖ್ಯೆ ಹೆಚ್ಚು.

ವೇಗನ್‌ ರಾ ಫುಡ್‌ ಇನ್ಫ್ಲುಯೆನ್ಸರ್‌, ವೇಗನ್‌ ಪಾಕಪದ್ಧತಿಯ ಬಗ್ಗೆ ಅಪಾರ ಒಲವು ಹೊಂದಿದ್ದ, ವೇಗನ್‌ ಡಯೆಟ್‌ಗಾಗಿ ಪಾಕಪದ್ಧತಿಯನ್ನು ರೂಪಿಸಿದ್ದ ಝನ್ನಾ ಡಿʼಆರ್ಟ್‌ ಹಸಿವು ಹಾಗೂ ಬಳಲಿಕೆಯಿಂದ ಸಾವು ಬದುಕಿನ ನಡುವೆ ಹಲವು ದಿನಗಳು ಹೋರಾಡಿ ನಂತರ ಸಾವನ್ನಪ್ಪುತ್ತಾರೆ. ಝನ್ನಾ ಅವರು ವಿಶಿಷ್ಟವಾದ ಹಣ್ಣಿನ ಡಯೆಟ್‌ ಪಾಲಿಸುತ್ತಿದ್ದರು. ಇದು ಆರೋಗ್ಯಕರ ಜೀವನಶೈಲಿಯ ಉತ್ತಮ ಮತ್ತು ಇದು ತನ್ನ ಯೌವನವನ್ನು ಕಾಪಾಡುತ್ತದೆ ಎಂದು ಆಕೆ ನಂಬಿದ್ದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಆದರೆ ತಜ್ಞರ ಪ್ರಕಾರ ಇಂತಹ ಕಟ್ಟುನಿಟ್ಟಿನ ಡಯೆಟ್‌ ಕ್ರಮಗಳು ಹಲವು ರೀತಿಯಲ್ಲಿ ದೇಹದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು. ದೇಹದ ಕಾರ್ಯ ವ್ಯವಸ್ಥೆಗಳ ಸುಧಾರಣೆ ಹಾಗೂ ರೋಗಗಳನ್ನು ತಡೆಗಟ್ಟಲು ಸರಿಯಾದ ಪೋಷಣೆ ಅಗತ್ಯ ಎನ್ನುತ್ತಾರೆ ತಜ್ಞರು. ಅತ್ಯಂತ ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರವು ಎಲ್ಲಾ ರೀತಿ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ನೀವು ಪೂರ್ಣ ಆಹಾರ ಎನ್ನಿಸಿಕೊಳ್ಳುವುದಿಲ್ಲ, ಜೊತೆಗೆ ದೇಹಕ್ಕೆ ಚೈನತ್ಯವನ್ನೂ ನೀಡಲು ಅಸಮರ್ಥವಾಗುತ್ತವೆ. ಇವು ಆಯಾಸ ಹಾಗೂ ದೌರ್ಬಲ್ಯವನ್ನು ಉಂಟು ಮಾಡುತ್ತವೆ. ಹಾಗಾಗಿ ಈ ಕೆಲವು ಡಯೆಟ್‌ ಮಾಡುವುದು ಪ್ರಾಣಕ್ಕೆ ಅಪಾಯ ಎನ್ನುತ್ತಾರೆ ವೈದ್ಯರು.

ಈ ವಿಷಯಕ್ಕೆ ಸಂಬಂಧಿಸಿದ ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೌಷ್ಟಿಕತಜ್ಞೆ ಸಾಕ್ಷಿ ಲಾಲ್ವಾನಿ 5 ಮಾರಣಾಂತಿಕ ಡಯೆಟ್‌ಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ. ಮಾತ್ರವಲ್ಲ ಸರಿಯಾದ ಜ್ಞಾನ, ಅನುಕ್ರಮ, ಮಾಹಿತಿ ಇಲ್ಲದೆ ಈ ಡಯೆಟ್‌ಕ್ರಮಗಳನ್ನು ಪಾಲಿಸುವುದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಅತಿ ಕಡಿಮೆ ಕ್ಯಾಲೊರಿ ಆಹಾರ ಸೇವನೆಯ ಡಯೆಟ್‌

ಅತಿಯಾದ ಕ್ಯಾಲೊರಿ ನಿರ್ಬಂಧವು ಪೋಷಕಾಂಶಗಳ ಕೊರತೆ, ಸ್ನಾಯಗಳು ದುರ್ಬಲವಾಗುವುದು, ರೋಗನಿರೋಧಕ ಶಕ್ತಿ ಕುಂಠಿತವಾಗುವುದು ಮುಂತಾದ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಡಯೆಟ್‌ ಕ್ರಮವನ್ನು ದೀರ್ಘಕಾಲದವರೆಗೆ ಮುಂದುವರಿಸುವುದರಿಂದ ಅಂಗಾಂಗ ಹಾನಿ ಉಂಟಾಗಬಹುದು.

ಅಗತ್ಯ ಪೋಷಕಾಂಶಗಳ ಸಮತೋಲಿತ ಆಹಾರ ಸೇವನೆಯ ಜೊತೆಗೆ ದೈಹಿಕ ಶಕ್ತಿಗೆ ಅವಶ್ಯವಿರುವ ಪೋಷಕಾಂಶಗಳು ಪೂರೈಕೆಯಾಗುತ್ತಿವೆಯೇ ಎಂದು ನೋಡಿಕೊಳ್ಳುವುದು ಅವಶ್ಯವಾಗುತ್ತದೆ.

ಫ್ಯಾಡ್‌ ಡಯೆಟ್‌

ಅತಿ ಬೇಗನೆ ತೂಕ ಕಳೆದುಕೊಳ್ಳುವ ಕಾರಣದಿಂದ ಫ್ಯಾಡ್‌ ಡಯೆಟ್‌ ಹೆಚ್ಚು ಖ್ಯಾತಿ ಗಳಿಸಿದೆ. ಆದರೆ ಈ ಡಯೆಟ್‌ ಕ್ರಮಕ್ಕೆ ವೈಜ್ಞಾನಿಕ ಬೆಂಬಲವಿಲ್ಲ. ದೀರ್ಘಾವಧಿಯವರೆಗೆ ಈ ಡಯೆಟ್‌ ಪಾಲಿಸುವುದು ಸಮರ್ಥನೀಯವಲ್ಲ ಎಂದು ಸಾಕ್ಷಿ ಹೇಳುತ್ತಾರೆ. ಅಸಮತೋಲಿತ ಊಟದ ಕ್ರಮವನ್ನು ಪಾಲಿಸುವುದು, ದೇಹಕ್ಕೆ ಅವಶ್ಯ ಎನ್ನುವ ಆಹಾರ ಪದಾರ್ಥಗಳನ್ನು ತ್ಯಜಿಸುವುದು ಪೋಷಕಾಂಶದ ಕೊರತೆಗೆ ಕಾರಣವಾಗಬಹುದು. ಇದು ಅಪೌಷ್ಟಿಕತೆ ಮತ್ತು ಇತರ ಗಂಭೀರ ಸಮಸ್ಯೆಗಳನ್ನು ಉಂಟು ಮಾಡಬಹುದು.

ಡಿಟಾಕ್ಸ್‌ ಡಯೆಟ್‌ ಮತ್ತು ಕ್ಲೀನ್‌ನೆಸ್‌

ಯಾವುದೇ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನವಿಲ್ಲದೇ ಡಿಟಾಕ್ಸ್‌ ಡಯೆಟ್‌ ಕ್ರಮ ಅನುಸರಿಸುವುದರಿಂದ ಕೆಲವೇ ದಿನಗಳಲ್ಲಿ ಇದು ದೇಹಕ್ಕೆ ಮಾರಕವಾಗಬಹುದು. ದೇಹವನ್ನು ಡಿಟಾಕ್ಸ್‌ ಮಾಡುವುದು ಅಥವಾ ವಿಷದ, ಬೇಡ ಅಂಶಗಳನ್ನು ದೇಹದಿಂದ ಹೊರ ಹಾಕುವುದು ಕೇಳಲು ಖುಷಿ ಎನ್ನಿಸಿದರೂ ಈ ಆಹಾರಕ್ರಮವು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಲ್ಲದೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರಿತ ವೈಜ್ಞಾನಿಕ ಬೆಂಬಲವಿಲ್ಲ.

ಕಿಟೊಜೆನಿಕ್‌ ಡಯೆಟ್‌

ಕಿಟೊಜೆನಿಕ್‌ ಡಯೆಟ್‌ ಕ್ರಮವನ್ನು ವೈದ್ಯರು ಅಥವಾ ತಜ್ಞರ ಸಲಹೆ ಪಡೆಯದೇ ಅನುಸರಿಸುವುದರಿಂದ ಪ್ರಾಣಾಪಾಯ ಉಂಟಾಗಬಹುದು. ಹೀಗೆ ಮಾಡುವುದರಿಂದ ಪೋಷಕಾಂಶಗಳ ಕೊರತೆ, ಎಲೆಕ್ಟ್ರೋಲೈಟ್‌ ಅಸಮತೋಲನ, ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಾಂಶಗಳಿಗೆ ಇದು ಹಾನಿ ಉಂಟುಮಾಡಬಹುದು. ಕಿಟೊ ಡಯೆಟ್‌ ಪಾಲಿಸುವ ಮೊದಲು ವೈದ್ಯರನ್ನು ಅಥವಾ ಡಯೆಟಿಷಿಯನ್‌ಗಳನ್ನು ಸಂಪರ್ಕಿಸುವುದು ಅವಶ್ಯ.

ಪೂರಕ ಪದಾರ್ಥಗಳು ಅಥವಾ ಔಷಧಿಗಳನ್ನು ಸೇವಿಸುವಂತಹ ಡಯೆಟ್‌ ಕ್ರಮ

ಪೂರಕ ಪದಾರ್ಥಗಳು ಅಥವಾ ಅನಿಯಂತ್ರಿತ ಔಷಧಿಗಳ ಮೇಲೆ ಹೆಚ್ಚು ಅವಲಂಬಿತವಾಗಿರುವಂತಹ ಡಯೆಟ್‌ ಕ್ರಮ ಅತ್ಯಂತ ಅಪಾಯಕಾರಿ. ಏಕೆಂದರೆ ಇವುಗಳು ವೈಜ್ಞಾನಿಕವಾಗಿ ಸಾಬೀತಾಗಿರುವುದಿಲ್ಲ ಅಲ್ಲದೆ ಇದರ ಬಗ್ಗೆ ಮಾಹಿತಿ ಕೊರತೆಯೂ ಇರುತ್ತದೆ. ಇವು ಪ್ರಾಣಕ್ಕೆ ಸಂಚಕಾರ ತರುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಡಯೆಟ್‌ ಮಾಡುವ ಮುನ್ನ ಎಚ್ಚರವಿರಲಿ.

ಒಟ್ಟಾರೆ ಈ ಎಲ್ಲಾ ಡಯೆಟ್‌ಗಳು ನಿಮಗೆ ತಕ್ಷಣಕ್ಕೆ ತೂಕ ಇಳಿಕೆ ಮಾಡಬಹುದು, ಆದರೆ ದೀರ್ಘಕಾಲದಲ್ಲಿ ದೇಹಕ್ಕೆ ಹಲವು ಅಪಾಯಗಳನ್ನು ತಂದೊಡ್ಡಬಹುದು. ಮಾತ್ರವಲ್ಲ ಜೀವಕ್ಕೂ ಹಾನಿ ಉಂಟು ಮಾಡಬಹುದು. ಯಾವುದೇ ಡಯೆಟ್‌ ಕ್ರಮ ಪಾಲಿಸುವ ಮೊದಲು ತಜ್ಞರಿಂದ ಸಲಹೆ ಪಡೆದು, ಅವರ ಹೇಳಿದ್ದನ್ನು ಅನುಸರಿಸುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ