logo
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ಡ್ರೈಫ್ರೂಟ್ಸ್‌ ತಿನ್ನೋದು ಓಕೆ, ಆದ್ರೆ ಅತಿಯಾಗಿ ತಿನ್ನುವ ಮುನ್ನ ಈ ವಿಚಾರ ಗಮನದಲ್ಲಿರಲಿ

ಪ್ರತಿದಿನ ಡ್ರೈಫ್ರೂಟ್ಸ್‌ ತಿನ್ನೋದು ಓಕೆ, ಆದ್ರೆ ಅತಿಯಾಗಿ ತಿನ್ನುವ ಮುನ್ನ ಈ ವಿಚಾರ ಗಮನದಲ್ಲಿರಲಿ

Reshma HT Kannada

Sep 16, 2023 09:58 AM IST

google News

ಒಣಹಣ್ಣುಗಳ ಸೇವನೆಯ ಪರಿಣಾಮ

    • ಪೋಷಕಾಂಶ ಸಮೃದ್ಧ ಒಣಹಣ್ಣಗಳನ್ನು ಪ್ರತಿನಿತ್ಯ ಸೇವಿಸುವುದು ಉತ್ತಮ. ಆದರೆ ಒಣಹಣ್ಣುಗಳ ಸೇವನೆಗೂ ಮುನ್ನ ಈ ವಿಚಾರಗಳನ್ನು ಗಮನಿಸಬೇಕು. ಪ್ರತಿನಿತ್ಯ ಒಣಹಣ್ಣುಗಳನ್ನು ಸೇವಿಸಬೇಕೆ, ಪ್ರತಿದಿನ ಒಣಹಣ್ಣುಗಳನ್ನು ಸೇವಿಸಿದ್ರೆ ಆರೋಗ್ಯದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳನ್ನು ನಿರೀಕ್ಷಿಸಬಹುದು ಈ ಬಗ್ಗೆ ತಜ್ಞರ ಉತ್ತರ ಹೀಗಿದೆ. 
ಒಣಹಣ್ಣುಗಳ ಸೇವನೆಯ ಪರಿಣಾಮ
ಒಣಹಣ್ಣುಗಳ ಸೇವನೆಯ ಪರಿಣಾಮ

ದೇಹಕ್ಕೆ ಪೋಷಕಾಂಶ ಒದಗಿಸುವ ಉದ್ದೇಶದಿಂದ ಒಣಹಣ್ಣುಗಳು ಅಥವಾ ಡ್ರೈಫ್ರೂಟ್ಸ್‌ ತಿನ್ನುತ್ತೇವೆ. ಡ್ರೈ ಫ್ರೂಟ್ಸ್‌ ಪೌಷ್ಟಿಕಾಂಶ ಸಮೃದ್ಧವಾಗಿದೆ. ಆ ಕಾರಣದಿಂದ ಇದನ್ನು ಪ್ರತಿನಿತ್ಯ ಬಳಕೆಯನ್ನು ರೂಢಿಸಿಕೊಂಡಿರುತ್ತೇವೆ. ಇದರಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಹಾಗೂ ನಾರಿನಾಂಶಗಳಿದ್ದು, ಇದು ಒಟ್ಟಾರೆ ಆರೋಗ್ಯ ಸುಧಾರಣೆಗೆ ಉತ್ತಮ. ಒಣಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ, ಇದು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ಇದರ ಹಲವು ಆರೋಗ್ಯ ಗುಣಗಳ ಕಾರಣದಿಂದ ಭಾರತ ಸೇರಿದಂತೆ ವಿದೇಶಗಳಲ್ಲೂ ಪ್ರತಿನಿತ್ಯ ಇದರ ಸೇವನೆಗೆ ಒತ್ತು ನೀಡುತ್ತಾರೆ.

ಆದರೆ ಪ್ರತಿನಿತ್ಯ ಒಣಹಣ್ಣುಗಳನ್ನು ಸೇವಿಸಬೇಕೆ, ಪ್ರತಿದಿನ ಒಣಹಣ್ಣುಗಳನ್ನು ಸೇವಿಸಿದ್ರೆ ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ನಿರೀಕ್ಷಿಸಬಹುದು ಈ ಬಗ್ಗೆ ತಜ್ಞರ ಉತ್ತರ ಇಲ್ಲಿದೆ.

ʼಪ್ರತಿನಿತ್ಯ ಒಣಹಣ್ಣುಗಳ ಸೇವನೆಯು ಆರೋಗ್ಯ ಸುಧಾರಣೆಗೆ ಉತ್ತಮ ಮಾರ್ಗವಾಗಿದೆ. ಇವು ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ನಾರಿನಾಂಶಗಳಿಂದ ತುಂಬಿರುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಹಾಗೂ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ. ಒಣ ಹಣ್ಣಗಳು ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಉತ್ತಮʼ ಎನ್ನುತ್ತಾರೆ ಜಿಂದಾಲ್‌ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನ ಆಹಾರ ತಜ್ಞೆ ಸುಷ್ಮಾ ಪಿಎಸ್‌.

ʼಒಣದ್ರಾಕ್ಷಿ, ಏಪ್ರಿಕಾಟ್‌ ಮತ್ತು ಇತರ ಒಣಗಿದ ಹಣ್ಣುಗಳು ಪೊಟ್ಯಾಶಿಯಂ ಹಾಗೂ ನಾರಿನಾಂಶದಿಂದ ಕೂಡಿರುತ್ತದೆ. ಇದು ರಕ್ತದೊತ್ತಡವನ್ನು ನಿವಾರಿಸಲು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯಕ್ಕೂ ಇದು ಉತ್ತಮ. ಒಣಹಣ್ಣುಗಳ ಮಿತವಾದ ಸೇವನೆಯಿಂದ ತೂಕ ಇಳಿಕೆಯೂ ಸಾಧ್ಯ. ಇದರ ಸೇವನೆಯಿಂದ ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು, ಜಂಕ್‌ ಫುಡ್‌ಗಳ ಸೇವನೆಗೆ ಕಡಿವಾಣ ಹಾಕಬಹುದು. ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುವುದರಿಂದ ಮೆದುಳಿನ ಕಾರ್ಯ ಚಟುವಟಿಕೆ ಸುಧಾರಿಸಲು ಹಾಗೂ ದೇಹಕ್ಕೆ ಚೈತನ್ಯ ಹೆಚ್ಚಿಸಲು ಇದು ಇದು ಸಹಾಯ ಮಾಡುತ್ತದೆʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸುಪ್ಮಾ ಪಿಎಸ್‌ ತಿಳಿಸಿದ್ದಾರೆ.

ಆದರೆ ಒಣಹಣ್ಣುಗಳನ್ನು ತಿನ್ನುವ ಮೊದಲು ಈ ಅಂಶಗಳನ್ನು ಗಮನಿಸಬೇಕು. ಇದರೊಂದಿಗೆ ಸಕ್ಕರೆ ಅಥವಾ ಉಪ್ಪು ಸೇರಿಸಿ ಸೇವಿಸುವುದು ಕ್ಯಾಲೊರಿ ಪ್ರಮಾಣದಲ್ಲಿ ಹೆಚ್ಚಳವಾಗಬಹುದು. ಅಲ್ಲದೆ ಒಣಹಣ್ಣುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹ ತೂಕ ಕೂಡ ಹೆಚ್ಚಳವಾಗಬಹುದುʼ ಎನ್ನುತ್ತಾರೆ ಹೈದರಾಬಾದ್‌ನ ಯಶೋದ ಆಸ್ಪತ್ರೆಯ ವೈದ್ಯ ಡಾ. ಶ್ರೀ ಕರಣ್‌ ಉದ್ದೇಶ್‌ ತನುಗುಲಾ.

ಒಣಹಣ್ಣುಗಳ ಸೇವನೆಯೊಂದಿಗೆ ವ್ಯಾಯಾಮವೂ ಅಗತ್ಯ

ʼಒಣ ಹಣ್ಣುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಜ. ಇವುಗಳನ್ನು ಪ್ರತಿನಿತ್ಯ ಸೇವಿಸಬಹುದು, ಆದರೆ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡುವುದು ಅವಶ್ಯ. ಒಣ ಹಣ್ಣುಗಳಲ್ಲಿ ಕ್ಯಾಲೊರಿ ಅಂಶ ದಟ್ಟವಾಗಿರುತ್ತದೆ. ಅಲ್ಲದೆ ನೈಸರ್ಗಿಕ ಸಕ್ಕರೆಯ ಪ್ರಮಾಣವು ಇದರಲ್ಲಿ ಹೆಚ್ಚಿರುತ್ತದೆ. ಹಾಗಾಗಿ ಇದನ್ನು ಅತಿಯಾಗಿ ತಿನ್ನುವುದು ಕ್ಯಾಲೊರಿ ಪ್ರಮಾಣದಲ್ಲಿ ಏರಿಕೆಯಾಗಬಹುದು ಮತ್ತು ದೇಹದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಳವಾಗಬಹುದು ಎನ್ನುತ್ತಾರೆ ಸುಷ್ಮಾ.

ಒಂದು ವೇಳೆ ನೀವು ತೂಕ ನಿಯಂತ್ರಣ ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದರೆ, ಒಣಹಣ್ಣುಗಳ ಸೇವನೆಯ ಪ್ರಮಾಣದ ಮೇಲೆ ಗಮನ ಹರಿಸುವುದು ಬಹಳ ಮುಖ್ಯ.

ʼದೇಹಕ್ಕೆ ವಿವಿಧ ರೀತಿಯ ಪೋಷಕಾಂಶಗಳು ಲಭ್ಯವಾಗಲು ವಿವಿಧ ರೀತಿಯ ಆಹಾರಗಳನ್ನು ಸೇವಿಸುವುದು ಅವಶ್ಯವಾಗುತ್ತದೆ. ಆದ್ದರಿಂದ ವಿವಿಧ ಹಣ್ಣುಗಳಲ್ಲಿ ಕಂಡುಬರುವ ವಿವಿಧ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಪ್ರಯೋಜನ ಪಡೆಯಲು ನೀವು ಸೇವಿಸುವ ಒಣಗಿದ ಹಣ್ಣುಗಳ ವಿಧಗಳನ್ನು ಪರಿಗಣಿಸಿ. ಅಲರ್ಜಿ ಅಥವಾ ಒಣಹಣ್ಣುಗಳ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಿಸುವವರು ಒಣಹಣ್ಣುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಅಲ್ಲದೆ ನಿಮ್ಮ ದೈಹಿಕ ಪ್ರತಿಕ್ರಿಯೆಯ ಮೇಲೆ ಗಮನ ನೀಡಬೇಕು. ಏಕೆಂದರೆ ಒಣ ಹಣ್ಣುಗಳ ನಿಯಮಿತ ಸೇವನೆಯು ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳನ್ನೂ ಉಂಟು ಮಾಡಬಹುದು ಎನ್ನುತ್ತಾರೆ ತಜ್ಞರು.

ಡ್ರೈ ಫ್ರೂಟ್ಸ್‌ ಸೇವನೆಗೆ ಸಂಬಂಧಿಸಿದ ಕೆಲವು ವಿಚಾರಗಳು

  • ಪ್ರತಿದಿನ 1/4 ಕಪ್‌ನಷ್ಟೇ ಒಣಗಿದ ಹಣ್ಣುಗಳನ್ನು ಸೇವಿಸಿ.
  • ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಆಹಾರದಲ್ಲಿ ಒಣಹಣ್ಣುಗಳನ್ನು ಸೇರಿಸಿ.
  • ಸಕ್ಕರೆ ಸೇವನೆ ಕಡಿಮೆ ಮಾಡಲು ಸಕ್ಕರೆ ಅಂಶರಹಿತ ಒಣಹಣ್ಣುಗಳನ್ನು ಸೇವಿಸಿ.
  • ಒಣಹಣ್ಣುಗಳನ್ನು ಸೇವಿಸಿದಾಗ ಸಾಕಷ್ಟು ನೀರು ಕುಡಿಯಲು ಮರೆಯದಿರಿ, ಏಕೆಂದರೆ ಇದು ನಿರ್ಜಲೀಕರಣ ಉಂಟು ಮಾಡಬಹುದು.
  • ಒಣಗಿದ ಹಣ್ಣುಗಳು ತಾಜಾ ಹಣ್ಣುಗಳು, ತಾಜಾ ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ ಅನ್ನು ಒಳಗೊಂಡಿರುವ ಸಮತೋಲಿತ ಆಹಾರದ ಭಾಗವಾಗಿರಬೇಕು.
  • ಸಲ್ಫರ್ ಡೈಆಕ್ಸೈಡ್‌ನಂತಹ ಸಂರಕ್ಷಕಗಳನ್ನು ಹೊಂದಿರುವ ಒಣಗಿದ ಹಣ್ಣುಗಳನ್ನು ತಪ್ಪಿಸಲು ಲೇಬಲ್‌ಗಳನ್ನು ಪರಿಶೀಲಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ