ದಾಳಿಂಬೆಯಿಂದ ಡಾರ್ಕ್ ಚಾಕೊಲೇಟ್‌ವರೆಗೆ, ನೈಸರ್ಗಿಕವಾಗಿ ಹಿಮೊಗ್ಲೊಬಿನ್ ಹೆಚ್ಚಲು ಸಹಾಯ ಮಾಡುವ 9 ಆಹಾರ ಪದಾರ್ಥಗಳಿವು
Feb 20, 2024 03:00 PM IST
ನೈಸರ್ಗಿಕವಾಗಿ ಹಿಮೊಗ್ಲೊಬಿನ್ ಹೆಚ್ಚಲು ಸಹಾಯ ಮಾಡುವ 9 ಆಹಾರಗಳಿವು
- ರಕ್ತದಲ್ಲಿ ಹಿಮೊಗ್ಲೊಬಿನ್ ಕೊರತೆಯ ಕಾರಣದಿಂದ ಹಲವು ಸಮಸ್ಯೆಗಳು ಎದುರಾಗುವುದು ಸಹಜ. ಇದರಿಂದ ಪ್ರತಿದಿನ ಸುಸ್ತು, ಆಯಾಸ ಕಾಡಬಹುದು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನೈಸರ್ಗಿಕ ವಿಧಾನದಲ್ಲಿ ಹಿಮೊಗ್ಲೊಬಿನ್ ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ.
ದೇಹದಲ್ಲಿ ಯಾವುದೇ ಪೋಷಕಾಂಶಗಳ ಕೊರತೆ ಉಂಟಾದರೂ ಒಂದಿಲ್ಲೊಂದು ಸಮಸ್ಯೆ ಕಾಡುವುದು ಸಹಜ. ಸಂಪೂರ್ಣ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ದೇಹದಲ್ಲಿನ ಎಲ್ಲಾ ಅಂಶಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದ ಆಯಾಸ, ಸುಸ್ತು, ನಿಶಕ್ತಿಯಂತಹ ಸಮಸ್ಯೆ ಕಾಡಬಹುದು. ಆದರೆ ಇದಕ್ಕೆಲ್ಲಾ ಕಾರಣ ಹಿಮೊಗ್ಲೋಬಿನ್ ಕೊರತೆ. ಹಿಮೊಗ್ಲೊಬಿನ್ ಪ್ರಮಾಣವು ಸರಿಯಾಗಿರುವುದು ಒಟ್ಟಾರೆ ದೈಹಿಕ ಯೋಗಕ್ಷೇಮಕ್ಕೆ ಬಹಳ ಮುಖ್ಯ. ಇದು ಕೆಂಪು ರಕ್ತ ಕಣಗಳಲ್ಲಿನ ಪ್ರೊಟೀನ್ ಸಂಯುಕ್ತವಾಗಿದ್ದು, ಶ್ವಾಸಕೋಶದಿಂದ ಆಮ್ಲಜನಕವನ್ನು ಎಲ್ಲಾ ಅಂಗಾಂಶಗಳು ಮತ್ತು ಅಂಗಗಳಿಗೆ ಸಾಗಿಸುತ್ತದೆ. ಅಲ್ಲದೇ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತ ಪಡಿಸುತ್ತದೆ.
ಹಿಮೊಗ್ಲೋಬಿನ್ ಮಟ್ಟವು ಸಮ ಪ್ರಮಾಣದಲ್ಲಿ ಇರುವುದರಿಂದ ಶಕ್ತಿ ಉತ್ಪಾದನೆ, ಅರಿವಿನ ಕಾರ್ಯ ಸುಧಾರಿಸುವುದು ಮಾತ್ರವಲ್ಲ ಸ್ನಾಯುವಿನ ಬಲವನ್ನೂ ಹೆಚ್ಚಿಸುತ್ತದೆ.
ಹಿಮೊಗ್ಲೊಬಿನ್ ಕೊರತೆಯಿಂದ ರಕ್ತಹೀನತೆ, ಆಯಾಸ, ದೌರ್ಬಲ್ಯ, ತಲೆ ತಿರುಗುವುದು, ಉಸಿರಾಟದ ತೊಂದರೆ ಇಂತಹ ಸಮಸ್ಯೆಗಳು ಎದುರಾಗಬಹುದು. ಆ ಕಾರಣಕ್ಕೆ ಹಿಮೊಗ್ಲೊಬಿನ್ ಪ್ರಮಾಣವನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ. ಹಾಗಂತ ಇದಕ್ಕೆ ವೈದ್ಯರ ಬಳಿ ಹೋಗಿ ಔಷಧಿ, ಮಾತ್ರೆಗಳನ್ನು ಸೇವಿಸಬೇಕು ಅಂತೇನಿಲ್ಲ. ನೈಸರ್ಗಿಕವಾಗಿಯೂ ಹಿಮೊಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಅಂತಹ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ವಿವರ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ, ಫೊಲೆಟ್, ವಿಟಮಿನ್ ಸಿ ಅಂಶಗಳು ಸಮೃದ್ಧವಾಗಿದ್ದು, ಇದು ಹಿಮೊಗ್ಲೊಬಿನ್ ಪ್ರಮಾಣ ಹೆಚ್ಚಲು ಸಹಾಯ ಮಾಡುತ್ತದೆ. ಇದರಲ್ಲಿನ ಕಬ್ಬಿಣಾಂಶವು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಪಲಾಕ್ ಸೊಪ್ಪನಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು.
ಮಸೂರೆ ಬೇಳೆ: ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಮಸೂರ ಬೇಳೆಯು ಹಿಮೊಗ್ಲೊಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೂಪ್, ಸ್ಟ್ಯೂ, ಕರಿ, ಸಲಾಡ್ ರೂಪದಲ್ಲಿ ಸೇವಿಸಬಹುದು. ದೇಹದಕ್ಕೆ ಕಬ್ಬಿಣಾಂಶ ಒದಗಿಸುವಲ್ಲಿ ಮಸೂರ ಬೇಳೆಗಳ ಪಾತ್ರ ಮಹತ್ವದ್ದು.
ಬೀಟ್ರೂಟ್: ಹಿಮೊಗ್ಲೊಬಿನ್ ಹೆಚ್ಚಿಸುವ ವಿಚಾರದಲ್ಲಿ ಬೀಟ್ರೂಟ್ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ಕಬ್ಬಿಣಾಂಶ, ಫೋಲಿಕ್ ಆಮ್ಲ ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳು ರಕ್ತದಲ್ಲಿ ಹಿಮೊಗ್ಲೊಬಿನ್ ಪ್ರಮಾಣ ಹೆಚ್ಚಲು ಸಹಾಯ ಮಾಡುತ್ತವೆ. ಇದನ್ನು ಸಾಂಬಾರ್, ಪಲ್ಯ, ಜ್ಯೂಸ್, ಸ್ಮೂಥಿ ತಯಾರಿಸಿ ಸವಿಯಬಹುದು.
ದಾಳಿಂಬೆ: ಕಬ್ಬಿಣಾಂಶ, ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ದಾಳಿಂಬೆ ಹಣ್ಣು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಲು ಸಹಾಯ ಮಾಡುತ್ತದೆ. ಅದನ್ನು ನೀವು ಬೇರೆ ಬೇರೆ ವಿಧಾನಗಳಲ್ಲಿ ತಿನ್ನಬಹುದು.
ಧಾನ್ಯಗಳು: ಕೆಲವು ಧಾನ್ಯಗಳು ಕಬ್ಬಿಣಾಂಶಗಳಿಂದ ಸಮೃದ್ಧವಾಗಿರುತ್ತವೆ. ಇವು ಹಿಮೊಗ್ಲೊಬಿನ್ ಮಟ್ಟವನ್ನು ಹೆಚ್ಚಿಸಲು ಅನುಕೂಲ ಮಾಡುತ್ತವೆ.
ಮೀನು: ನೀವು ಮಾಂಸಾಹಾರಿಗಳಾಗಿದ್ದು ಹಿಮೊಗ್ಲೊಬಿನ್ ಕೊರತೆ ಎದುರಿಸುತ್ತಿದ್ದರೆ, ಮೀನು ತಿನ್ನುವುದನ್ನು ರೂಢಿಸಿಕೊಳ್ಳಿ. ಅದರಲ್ಲೂ ಎಣ್ಣೆಯಂಶವುಳ್ಳ ಸಾಲ್ಮಾನ್ ಹಾಗೂ ಟ್ಯೂನದಂತಹ ಮೀನುಗಳು ಕಬ್ಬಿಣಾಂಶ ಹಾಗೂ ವಿಟಮಿನ್ ಬಿ 12 ಅನ್ನು ಹೊಂದಿವೆ. ಇದು ರಕ್ತಶುದ್ಧೀಕರಣಕ್ಕೂ ಸಹಾಯ ಮಾಡುತ್ತವೆ. ಅಲ್ಲದೇ ಹಿಮೊಗ್ಲೊಬಿನ್ ಪ್ರಮಾಣ ಹೆಚ್ಚಲು ಸಹಕಾರಿ.
ಒಣಹಣ್ಣು ಹಾಗೂ ಬೀಜಗಳು: ಬಾದಾಮಿ, ಕುಂಬಳಕಾಯಿ, ಎಳ್ಳಿನಂತಹ ಬೀಜಗಳು ಹಾಗೂ ಒಣಹಣ್ಣುಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ಇದು ಹಿಮೊಗ್ಲೊಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್‌ಗಳು ಆರೋಗ್ಯಕ್ಕೆ ಖಂಡಿತ ಕೆಟ್ಟದ್ದಲ್ಲ. ಇವು ಕಬ್ಬಿಣ ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಹಿಮೊಗ್ಲೊಬಿನ್ ಹೆಚ್ಚಲು ಪರೋಕ್ಷವಾಗಿ ಸಹಾಯ ಮಾಡುತ್ತವೆ.
ಸ್ಪಿರುಲಿನಾ: ಈ ನೀಲಿ-ಹಸಿರು ಪಾಚಿ ಕಬ್ಬಿಣ ಸೇರಿದಂತೆ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಸ್ಮೂಥಿ ಹಾಗೂ ಜ್ಯೂಸ್‌ಗಳಿಗೆ ಸ್ಪಿರುಲಿನಾ ಪುಡಿಯನ್ನು ಸೇರಿಸುವುದರಿಂದ ಹಿಮೊಗ್ಲೊಬಿನ್ ಪ್ರಮಾಣ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.
ಈ ಮೇಲೆ ತಿಳಿಸಿದ ಆಹಾರ ಪದಾರ್ಥಗಳನ್ನು ನಿಮ್ಮ ಡಯೆಟ್ ಕ್ರಮದಲ್ಲಿ ಸೇರಿಸುವುದರಿಂದ ಹಿಮೊಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಇವುಗಳ ಸೇವನೆಯಿಂದ ದೇಹ ಹಾಗೂ ಆರೋಗ್ಯಕ್ಕೆ ಇನ್ನೂ ಹಲವು ಪ್ರಯೋಜನಗಳಿವೆ. ಆದರೆ ನಿರಂತರ ಸೇವನೆಯಿಂದ ಮಾತ್ರವಲ್ಲ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ಮರೆಯದಿರಿ.
(This copy first appeared in Hindustan Times Kannada website. To read more like this please logon to kannada.hindustantimes.com)