ಖ್ಯಾತ ನಿರೂಪಕಿ ಅಪರ್ಣಾ ಅವರಿಗೆ ಕಾಣಿಸಿಕೊಂಡಿದ್ದ ಶ್ವಾಸಕೋಶದ ಕ್ಯಾನ್ಸರ್ ಮೊದಲ ಹಂತವನ್ನು ಗುರುತಿಸುವುದು ಹೇಗೆ?
Jul 12, 2024 04:16 PM IST
ಖ್ಯಾತ ನಿರೂಪಕಿ ಅಪರ್ಣಾ ಅವರಿಗೆ ಕಾಣಿಸಿಕೊಂಡಿದ್ದ ಶ್ವಾಸಕೋಶದ ಕ್ಯಾನ್ಸರ್ ಮೊದಲ ಹಂತವನ್ನು ಗುರುತಿಸುವುದು ಹೇಗೆ?
ಅಚ್ಚಕನ್ನಡದ ನಿರೂಪಕಿ ಖ್ಯಾತಿಯ ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಅಷ್ಟಕ್ಕೂ ಈ ಶ್ವಾಸಕೋಶದ ಲಕ್ಷಣಗಳೇನು? ಆರಂಭದಲ್ಲಿ ಇದನ್ನು ಗುರುತಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.
ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಕನ್ನಡದ ಖ್ಯಾತ ನಿರೂಪಕಿ ಮತ್ತು ನಟಿ ಅಪರ್ಣಾ ವಸ್ತಾರೆ (Anchor Aparna Vastarey) ಗುರುವಾರ (ಜುಲೈ 11) ವಿಧಿವಶರಾಗಿದ್ದಾರೆ. ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ (Lung Cancer) ಬಳಲುತ್ತಿದ್ದರು. ಈ ಶ್ವಾಸಕೋಶದ ಕ್ಯಾನ್ಸರ್ (4th Stage of Lung Cancer) ಇವರಿಗೆ 4ನೇ ಹಂತದಲ್ಲಿ ಇತ್ತು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಅವರು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಶ್ವಾಸಕೋಶ ಕ್ಯಾನ್ಸರ್ ಬರಲು ಕಾರಣವೇನು? ಇದರ ಲಕ್ಷಣಗಳೇನು? ಕ್ಯಾನ್ಸರ್ ಕಾಣಿಸಿಕೊಂಡರೆ ಮೊದಲೇ ಗೊತ್ತಾಗುತ್ತಾ? ಮೊದಲ ಹಂತದ ಲಕ್ಷಣಗಳು ಹೇಗಿರುತ್ತವೆ, ಶ್ವಾಸಕೋಶ ಕ್ಯಾನ್ಸರ್‌ಗೆ ಚಿಕಿತ್ಸೆ ಇದೆಯಾ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರದ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಿಂದ ದೇಹದಲ್ಲಿ ಅನಿಯಂತ್ರಿತವಾಗಿ ಕೆಲವು ಜೀವಕೋಶಗಳು ಬೆಳೆಯಲು ಪ್ರಾರಂಭವಾಗುತ್ತದೆ. ದೇಹದ ಇತರ ಭಾಗಗಳಿಗೆ ಹರಡುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಒಂದು ರೀತಿಯ ಕ್ಯಾನ್ಸರ್ ಆಗಿದ್ದು, ಅದು ಸೋಂಕಿತ ವ್ಯಕ್ತಿಯ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಶ್ವಾಸಕೋಶದ ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆಯನ್ನು ಉಂಟುಮಾಡುತ್ತದೆ. ದುಗ್ಧರಸ ಗ್ರಂಥಿಗಳು, ಮೆದುಳು, ಮೂತ್ರಜನಕಾಂಗದ ಗ್ರಂಥಿಗಳು, ಯಕೃತ್ತು ಹಾಗೂ ಮೂಳೆಗಳಂತ ಇತರೆ ಭಾಗಗಳಿಗೆ ವೇಗವಾಗಿ ಹರಡುವ ಸಾಧ್ಯತೆ ಬಹಳಷ್ಟು ಇರುತ್ತದೆ.
ಶ್ವಾಸಕೋಶದ ಕ್ಯಾನ್ಸರ್‌ಗೆ ನಿಖರವಾದ ಕಾರಣ (Reason for Lung Cancer) ಇನ್ನೂ ತಿಳಿದಿಲ್ಲ. ಆದರೆ ಈ ರೋಗದ ಪ್ರಮುಖ ಕಾರಣವೆಂದರೆ ಧೂಮಪಾನ ಆಗಿದೆ. ಶೇಕಡಾ 85 ರಷ್ಟು ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತೆ ಎಂದು ಹೇಳಲಾಗಿದೆ. ಧೂಮಪಾನ ತ್ಯಜಿಸಿದರೆ ರೋಗದ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಶ್ವಾಸಕೋಶದ ಕ್ಯಾನ್ಸರ್ ಆರಂಭಿಕ ಲಕ್ಷಣಗಳು
ಶ್ವಾಸಕೋಶದ ಕ್ಯಾನ್ಸರ್ ಬಂದಾಗ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಾಣಿಸುವುದಿಲ್ಲ. ಮುಂದುವರಿದ ಹಂತಗಳಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸುತ್ತವೆ. ಸಾಮಾನ್ಯವಾಗಿ ಕಡಿಮೆಯಾಗದ ಕೆಮ್ಮು, ಕೆಮ್ಮುವಾಗ ರಕ್ತ ಬರುವುದು, ಉಸಿರಾಟದ ತೊಂದರೆ, ಕರ್ಕಶ ಶಬ್ದ, ತೂಕವನ್ನು ಕಳೆದುಕೊಳ್ಳುವುದು, ಎದೆ ನೋವು ಹಾಗೂ ತಲೆ ನೋವು ಕಾಣಿಸಿಕೊಳ್ಳುತ್ತದೆ. ವಿವಿಧ ರೀತಿಯ ಶ್ವಾಸಕೋಶದ ಕ್ಯಾನ್ಸರ್‌ಗಳಿವೆ. ಇವುಗಳ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅದೂ ಕೂಡ ಕ್ಯಾನ್ಸರ್‌ನ ಹಂತಗಳ ಮೇಲೆ ಆಧರಿಸಿರುತ್ತದೆ. ಶಸ್ತ್ರಚಿಕಿತ್ಸೆ, ಕೀಮೋಥೆರಡಿ, ರೇಡಿಯೊಥೆರಪಿ ಹಾಗೂ ಇಮ್ಯುನೊಥೆರಪಿಗಳ ಮೂಲಕ ಚಿಕಿತ್ಸೆಯನ್ನ ನೀಡಲಾಗುತ್ತದೆ.
ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅಡೆನೊಕಾರ್ಸಿನೋಮ, ಸ್ಕ್ವಾಮಸ್ ಸೆಲ್ ಕಾರ್ಸಿನೋಮ, ದೊಡ್ಡ ಜೀವಕೋಶದ ಕಾರ್ಸಿನೋ, ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್, ಮೆಸೊಥೆಲಿಯೊಮಾ, ಎದೆಯ ಗೋಡೆಯ ಗಡ್ಡೆಗಳು, ಮಮೆಟಾಸ್ಟಾಟಿಕ್ ಶ್ವಾಶಕೋಶದ ಕ್ಯಾನ್ಸರ್ ಇದೆ. ಶ್ವಾಸಕೋಶದ ಕ್ಯಾನ್ಸರ್ ಹೊರತುಪಡಿಸಿದರೆ ಮೂತ್ರಕಶ ಕ್ಯಾನ್ಸರ್, ಸ್ತನ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ನರ ಕೋಶಗಳ ಕ್ಯಾನ್ಸರ್, ಸಾರ್ಕೋಮಾ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೂತ್ರಪಿಂಡದ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಕಾಣಬಹುದು. ಪ್ರಮುಖವಾಗಿ ಮನುಷ್ಯ ತಿನ್ನುವ ಆಹಾರ, ನೀರು, ಗಾಳಿ, ಕೆಲೊಂದು ಅಭ್ಯಾಸಗಳು ಹಾಗೂ ಜೀವನ ಶೈಲಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)