ಪ್ರಪಂಚದಲ್ಲೇ ಅತಿ ಹೆಚ್ಚು ಉಪ್ಪು ತಿನ್ನುವವರು ಭಾರತೀಯರು; ದೇಹಕ್ಕೆ ಸೋಡಿಯಂ ಪೂರೈಸಲು ಉಪ್ಪಿನ ಬದಲು ಇವುಗಳನ್ನು ಸೇವಿಸಿ
Sep 29, 2023 07:52 AM IST
ಪ್ರಪಂಚದಲ್ಲೇ ಅತಿ ಹೆಚ್ಚು ಉಪ್ಪು ತಿನ್ನುವವರು ಭಾರತೀಯರು
- ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಅತಿ ಹೆಚ್ಚು ಉಪ್ಪು ತಿನ್ನುವವರಲ್ಲಿ ಭಾರತೀಯರಿಗೆ ಅಗ್ರಸ್ಥಾನ. ಭಾರತೀಯರು ಪ್ರಮಾಣಿತ ಸೇವನೆಗಿಂತ 3 ಗ್ರಾಂ ನಷ್ಟು ಹೆಚ್ಚು ಸೋಡಿಯಂ ಅಂಶದ ಸೇವನೆ ಮಾಡುತ್ತಾರೆ. ಉಪ್ಪಿನ ಬದಲು ದೇಹಕ್ಕೆ ಸೋಡಿಯಂ ಪೂರೈಸಲು ಈ ಕೆಲವು ಪದಾರ್ಥಗಳನ್ನು ಸೇವಿಸಬಹುದು. ಇವು ಇನ್ನಿತರ ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಆ ಪದಾರ್ಥಗಳು ಯಾವುವು ನೋಡಿ.
ಉಪ್ಪಿಗಿಂತ ರುಚಿ ಬೇರೆಯಲ್ಲ ಎಂಬ ಗಾದೆ ಮಾತನ್ನು ನಾವು ಬುದ್ಧಿ ತಿಳಿದಾಗಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ನಾವು ಸೇವಿಸುವ ಆಹಾರದಲ್ಲಿ ಕೊಂಚ ಉಪ್ಪಿನಾಂಶ ಕಡಿಮೆ ಇದ್ದರೂ ಅದನ್ನು ಸೇವಿಸಲು ಮನಸ್ಸಾಗುವುದಿಲ್ಲ. ಒಂದು ಚಿಟಿಕೆ ಉಪ್ಪಿಗೆ ಆಹಾರದ ರುಚಿಯನ್ನೇ ಬದಲಿಸುವ ಶಕ್ತಿ ಇದೆ. ಉಪ್ಪಿಲ್ಲದೆ ಆಹಾರ ಖಾದ್ಯಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಆದರೆ ಒಂದು ಚಿಟಿಕೆ ಉಪ್ಪು ನಮ್ಮ ಆಹಾರದ ರುಚಿಯನ್ನು ಹೇಗೆ ಹೆಚ್ಚಿಸುವುದೋ ಹಾಗೆಯೇ ಆರೋಗ್ಯವನ್ನೂ ಹಾಳು ಮಾಡುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಡೆಸಿದ ಇತ್ತೀಚಿನದ ಅಧ್ಯಯನದ ಪ್ರಕಾರ ಭಾರತೀಯರು ಅತಿ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಇತರರಿಗೆ ಹೋಲಿಸಿದರೆ ಪ್ರತಿದಿನ 3 ಗ್ರಾಂಗಳಷ್ಟು ಉಪ್ಪನ್ನು ಹೆಚ್ಚು ಸೇವಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿದಿನ 5 ಗ್ರಾಂ ಉಪ್ಪಿನ ಸೇವನೆಯನ್ನು ಶಿಫಾರಸು ಮಾಡುತ್ತದೆ. ಅದರಲ್ಲೂ ಈ ಅಧ್ಯಯನ ತಿಳಿಸಿದ ಇನ್ನೊಂದು ಅಂಶವೆಂದರೆ ಭಾರತೀಯ ಮಹಿಳೆಯರಿಗಿಂತ ಪುರುಷರು ಇನ್ನೂ ಹೆಚ್ಚು ಉಪ್ಪು ಸೇವಿಸುತ್ತಾರೆ.
ಅಧ್ಯಯನದ ಪ್ರಕಾರ ಹೆಚ್ಚು ಉಪ್ಪಿನಾಂಶ ಸೇವಿಸುವವರಿವರು:
- ಉದ್ಯೋಗದಲ್ಲಿರುವವರು - 8.6 ಗ್ರಾಂ
- ತಂಬಾಕು ಬಳಕೆದಾರರು - 8.3 ಗ್ರಾಂ
- ಬೊಜ್ಜಿನಾಂಶ ಇರುವ ವ್ಯಕ್ತಿಗಳು - 9.2ಗ್ರಾಂ
- ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು - 8.5 ಗ್ರಾಂ.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂದಗಳ ಪ್ರಕಾರ ಮಾನವ ದೇಹವು ಅತ್ಯತ್ತುಮವಾಗಿ ಕಾರ್ಯ ನಿರ್ವಹಿಸಲು ಪ್ರತಿದಿನ 5 ಗ್ರಾಂ ಉಪ್ಪಿನ ಸೇವನೆ ಸಾಕಾಗುತ್ತದೆ. 5ಗ್ರಾಂಗಿಂತ ಕಡಿಮೆ ಉಪ್ಪಿನಾಂಶ ಸೇವನೆಯೂ ಕೂಡ ದೇಹಕ್ಕೆ ಅಪಾಯ ಉಂಟು ಮಾಡಬಹುದು.
ಉಪ್ಪಿನ ಬದಲು ಇವುಗಳನ್ನು ಸೇವಿಸಿ
ಅತಿಯಾದರೆ ಅಮೃತವೂ ವಿಷ ಎಂಬಂತೆ ಉಪ್ಪು ಕೂಡ ಅತಿಯಾದರೆ ದೇಹಕ್ಕೆ ವಿಷವಾಗಿ ಪರಿಣಮಿಸುತ್ತದೆ. ಉಪ್ಪು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಪ್ರತಿನಿತ್ಯದ ಆಹಾರದೊಂದಿಗೆ ಉಪ್ಪಿನ ಬಳಕೆಯ ಮೇಲೆ ನಿಗಾ ವಹಿಸುವುದು ಉತ್ತಮ. ಇಲ್ಲದಿದ್ದರೆ ಇಂದು ಅಂಗಾಂಗ ಹಾನಿಗೆ ಕಾರಣವಾಗಬಹುದು.
ಹಾಗಂತ ಉಪ್ಪನ್ನು ಸೇವಿಸದೇ ಇರಲು ಸಾಧ್ಯವಿಲ್ಲ. ಉಪ್ಪಿನಾಂಶ ಕಡಿಮೆ ಸೇವಿಸಿದರೆ ದೇಹದಲ್ಲಿ ಸೋಡಿಯಂ ಕೊರತೆ ಉಂಟಾಗಬಹುದು. ಸೋಡಿಯಂ ಕೊರತೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಸೋಡಿಯಂ ಮಟ್ಟ ನಿರ್ವಹಿಸಲು ಪರ್ಯಾಯಗಳನ್ನು ಕಂಡುಕೊಳ್ಳಬೇಕು. ಹಾಗಾಗಿ ಸೋಡಿಯಂ ಮಟ್ಟದ ನಿರ್ವಹಣೆಗಾಗಿ ಉಪ್ಪಿನ ಬದಲು ಇವುಗಳನ್ನು ಬಳಸಿ.
ನಿಂಬೆಹಣ್ಣಿನ ಜ್ಯೂಸ್ ಅಥವಾ ಜೆಸ್ಟ್
ನಿಂಬೆಹಣ್ಣಿನ ಜ್ಯೂಸ್ ಅಥವಾ ಜೆಸ್ಟ್ (ಸಿಪ್ಪೆಯ ಮೇಲಿನ ಹಳದಿ ಭಾಗ) ಉಪ್ಪಿಗೆ ಉತ್ತಮ ಪರ್ಯಾಯ. ನಿಂಬೆರಸದಲ್ಲಿನ ರಾಸಾಯನಿಕ ಅಂಶ ಉಪ್ಪಿನ ಬದಲು ಆಹಾರಗಳಿಗೆ ರುಚಿಯನ್ನು ನೀಡುತ್ತದೆ. ಲೆಮನ್ ಜೆಸ್ಟ್ ಕೂಡ ಖಾದ್ಯಗಳಿಗೆ ಭಿನ್ನ ಫ್ಲೇವರ್ ನೀಡುವಂತೆ ಮಾಡುತ್ತದೆ.
ಆಮ್‌ಚೂರ್
ಮಾವಿನಕಾಯಿ ಪುಡಿ ಆಮ್‌ಚೂರ್ ಎಂದೇ ಖ್ಯಾತಿ ಪಡೆದಿದೆ. ಇದೊಂದು ರೀತಿಯ ಮಸಾಲೆ ಪದಾರ್ಥ ಎನ್ನಬಹುದು. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿರುತ್ತದೆ. ಇದು ಉಪ್ಪಿಗೆ ಉತ್ತಮ ಪರ್ಯಾಯ. ಇದೊಂದು ಬಹುಮುಖಿ ಬಳಕೆಯ ಪದಾರ್ಥವಾಗಿದೆ. ಇದನ್ನು ಸೂಪ್, ಚಟ್ನಿ, ಸಾರು, ಸಾಂಬಾರ್ ಸೇರಿದಂತೆ ಹಲವು ಖಾದ್ಯಗಳಿಗೆ ಬಳಸಬಹುದು.
ಬೆಳ್ಳುಳ್ಳಿ
ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯ ಹಲವು ಪ್ರಯೋಜನಗಳಿಗೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಮಾತ್ರವಲ್ಲ ಇದು ಆಹಾರ ಖಾದ್ಯಗಳಿಗೆ ಬೇರೆಯದ್ದೇ ರುಚಿಯನ್ನು ನೀಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಸಿಲಿನ್ ಎಂಬ ಸಂಯುಕ್ತದಿಂದಾಗಿ ಇದು ವಿಶಿಷ್ಟ ಪರಿಮಳವನ್ನು ಹೊಂದಿದೆ. ಇದು ಅಧಿಕ ರಕ್ತದೊತ್ತಡ ಇರುವವರಲ್ಲಿ ರಕ್ತದೊತ್ತಡ ನಿರ್ವಹಣೆಗೂ ಸಹಾಯ ಮಾಡುತ್ತದೆ. ಸೋಡಿಯಂ ಅಂಶ ಹೆಚ್ಚಿಸದೇ ಇದು ಆಹಾರದ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಾಳುಮೆಣಸು
ಇದು ಖಾರದ ಕಾರಣದಿಂದ ಖ್ಯಾತಿ ಪಡೆದಿದೆ. ಇದು ಕೂಡ ಬಹುಮುಖಿ ಉಪಯೋಗಗಳನ್ನು ಹೊಂದಿದ್ದು ಬಹುತೇಕ ಖಾರದ ಖಾದ್ಯಗಳಿಗೆ ಇದನ್ನು ಬಳಸುತ್ತಾರೆ. ಇದು ಕ್ಯಾನ್ಸರ್, ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸಬ್ಬಸಿಗೆ
ಸಬ್ಬಸಿಗೆ ಸೊಪ್ಪು ತನ್ನ ವಿಶಿಷ್ಟವಾದ ಪರಿಮಳದಿಂದ ಹೆಸರು ಪಡೆದಿದೆ. ಇದು ಸ್ವಲ್ಪ ಸಿಹಿ ಹಾಗೂ ಕಹಿ ರುಚಿಯನ್ನು ಹೊಂದಿದೆ. ಇದರಲ್ಲಿ ಇರುವ ಫ್ಲೇವನಾಯ್ಡ್‌ಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ.
ವಿಭಾಗ