ಕಹಿ ಅಂತ ಕಡೆಗಣಿಸಬೇಡಿ, ಮಧುಮೇಹ ನಿಯಂತ್ರಣದಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುವವರೆಗೆ, ಆರೋಗ್ಯಕ್ಕೆ ಮೆಂತ್ಯೆ ನೀರಿನ ಪ್ರಯೋಜನ ಅಪಾರ
Sep 29, 2024 10:37 AM IST
ಮೆಂತ್ಯದ ನೀರಿನ ಪ್ರಯೋಜನ
- ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ಹಲವರು ಇದನ್ನು ಇಷ್ಟಪಡುವುದಿಲ್ಲ. ಕೆಲವರಿಗೆ ಮೆಂತ್ಯದ ವಾಸನೆ ಸಹ್ಯವಾಗುವುದಿಲ್ಲ. ಅದೇನೇ ಇದ್ದರೂ ಮೆಂತ್ಯದ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಧುಮೇಹ ನಿಯಂತ್ರಣ, ತೂಕ ಇಳಿಕೆ ಜೊತೆಗೆ ಇದರಿಂದ ಆರೋಗ್ಯಕ್ಕೆ ಇನ್ನೂ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಭಾರತದ ಮಸಾಲೆ ಪದಾರ್ಥಗಳಲ್ಲಿ ಮೆಂತ್ಯಕ್ಕೂ ಬಹಳ ಮಹತ್ವವಿದೆ. ಕಹಿ ರುಚಿ, ವಿಭಿನ್ನ ಪರಿಮಳ ಹೊಂದಿರುವ ಮೆಂತ್ಯೆದ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮೆಂತ್ಯೆಯಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನುವ ಮೂಲಕ ಮೆಂತ್ಯೆದ ಪ‍್ರಯೋಜನ ಪಡೆಯಬಹುದು. ಆದರೆ ಇದೆಲ್ಲಕ್ಕಿಂತ ಉತ್ತಮ ವಿಧಾನ ಎಂದರೆ ಮೆಂತ್ಯದ ನೀರು ಕುಡಿಯುವುದು. ಮೆಂತ್ಯದ ನೀರನ್ನು ಪ್ರತಿದಿನ ಕುಡಿಯುವುದರಿಂದ ನೀವು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಉಳಿಯಬಹುದು. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೆಂತ್ಯೆ ನೀರು ಪರಿಹಾರ. ಹಾಗಾದರೆ ಪ್ರತಿದಿನ ಮೆಂತ್ಯದ ನೀರು ಕುಡಿಯುವುದರಿಂದಾಗುವ ಪ್ರಯೋಜನ ತಿಳಿಯಿರಿ.
ಜೀರ್ಣಶಕ್ತಿ ಸುಧಾರಿಸುತ್ತದೆ
ಅಜೀರ್ಣ, ಉಬ್ಬುವುದು ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಮೆಂತ್ಯದ ನೀರು ಉತ್ತಮ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ನೆರವಾಗುತ್ತದೆ.
ತೂಕ ನಿರ್ವಹಣೆ
ಮೆಂತ್ಯ ನೀರು ಹಸಿವನ್ನು ನಿಗ್ರಹಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ
ಮೆಂತ್ಯದ ನೀರಿನ ನಿಯಮಿತ ಸೇವನೆಯು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಮೆಂತ್ಯ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಇದು ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧದ ವ್ಯಕ್ತಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಉರಿಯೂತದ ಗುಣಲಕ್ಷಣಗಳು
ಮೆಂತ್ಯದ ನೀರಿನಲ್ಲಿ ಉರಿಯೂತದ ಪರಿಣಾಮಗಳನ್ನು ಹೊಂದಿರುವ ಸಂಯುಕ್ತಗಳಿವೆ. ಸಂಧಿವಾತ ಮತ್ತು ಅಸ್ತಮಾದಂತಹ ಉರಿಯೂತ-ಸಂಬಂಧಿತ ಪರಿಸ್ಥಿತಿಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
ಹಾರ್ಮೋನ್ ಸಮತೋಲನ
ಮೆಂತ್ಯದ ನೀರು ಅದರ ಫೈಟೊಈಸ್ಟ್ರೊಜೆನ್ ಅಂಶಕ್ಕೆ ಹೆಸರುವಾಸಿಯಾಗಿದೆ, ಇದು ಹಾರ್ಮೋನ್ ಅಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಋತುಬಂಧದ ಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಇದು ಹೆಚ್ಚು ಪ್ರಯೋಜನಕಾರಿ.
ಚರ್ಮದ ಆರೋಗ್ಯ ಸುಧಾರಣೆ
ಮೆಂತ್ಯದ ನೀರಿನ ನಿಯಮಿತ ಸೇವನೆಯು ಮೊಡವೆಗಳನ್ನು ಕಡಿಮೆ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಮೈಬಣ್ಣವನ್ನು ಹೆಚ್ಚಿಸಿ, ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ.
ಕೂದಲಿನ ಆರೋಗ್ಯ
ಮೆಂತ್ಯ ನೀರು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟು ಅಥವಾ ತುರಿಕೆಯಂತಹ ನೆತ್ತಿಯ ಸಮಸ್ಯೆಗಳನ್ನು ತಡೆಯುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ
ಮೆಂತ್ಯ ನೀರಿನಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ವಿವಿಧ ಸೋಂಕುಗಳು ಮತ್ತು ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.
ಮೆಂತ್ಯದ ನೀರು ಮಾಡುವುದು ಹೇಗೆ?
ಒಂದು ಲೋಟ ನೀರಿನಲ್ಲಿ 1 ರಿಂದ 2 ಚಮಚ ಮೆಂತ್ಯೆ ಕಾಳು ಹಾಕಿ ರಾತ್ರಿಯಿಡಿ ನೆನೆಸಿಡಿ. ಇದನ್ನು ಮುಂಜಾನೆ ಎದ್ದು ಖಾಲಿ ಹೊಟ್ಟಿಯಲ್ಲಿ ಸೇವಿಸಿ.