logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಧುಮೇಹಿಗಳಲ್ಲಿ ಪಾದ ಊದಿಕೊಳ್ಳಲು ಪ್ರಮುಖ ಕಾರಣಗಳಿವು, ಪಾದದ ಊತವನ್ನ ನಿರ್ಲಕ್ಷ್ಯ ಮಾಡ್ಬೇಡಿ, ನಿವಾರಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಮಧುಮೇಹಿಗಳಲ್ಲಿ ಪಾದ ಊದಿಕೊಳ್ಳಲು ಪ್ರಮುಖ ಕಾರಣಗಳಿವು, ಪಾದದ ಊತವನ್ನ ನಿರ್ಲಕ್ಷ್ಯ ಮಾಡ್ಬೇಡಿ, ನಿವಾರಣೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Reshma HT Kannada

Oct 13, 2024 05:00 PM IST

google News

ಮಧುಮೇಹಿಗಳಲ್ಲಿ ಪಾದ ಊದಿಕೊಳ್ಳಲು ಕಾರಣವೇನು?

    • ಮಧುಮೇಹದ ಪರಿಣಾಮ ಜಾಸ್ತಿ ಆದ್ರೆ ಕಾಲು ಹಾಗೂ ಪಾದಗಳು ಊದಿಕೊಂಡು ಬಿಡುತ್ತವೆ. ಇದರಿಂದ ಕೆಲವೊಮ್ಮೆ ಸೆಳೆತವೂ ಉಂಟಾಗುತ್ತದೆ. ಸಕ್ಕರೆ ಕಾಯಿಲೆಯ ಕಾರಣದಿಂದ ಪಾದಗಳು ಊದಿಕೊಂಡಿದ್ದು, ನೋವು ಉಂಟಾದರೆ ಅದಕ್ಕೆ ಪರಿಹಾರವೇನು ನೋಡಿ.
ಮಧುಮೇಹಿಗಳಲ್ಲಿ ಪಾದ ಊದಿಕೊಳ್ಳಲು ಕಾರಣವೇನು?
ಮಧುಮೇಹಿಗಳಲ್ಲಿ ಪಾದ ಊದಿಕೊಳ್ಳಲು ಕಾರಣವೇನು?

ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದೆ ಮತ್ತು ಇದು ಬಹುತೇಕ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಅಜಾಗರೂಕತೆ ನಿಮ್ಮ ಅಂಗಗಳನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕಗೊಳಿಸುತ್ತದೆ. ಅದಕ್ಕಾಗಿಯೇ ವೈದ್ಯರು ಯಾವಾಗಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಶಿಫಾರಸು ಮಾಡುತ್ತಾರೆ. ಮಧುಮೇಹದ ಪರಿಣಾಮಗಳು ಪಾದಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದ ಮುಂಗಾಲಿನ ಕೆಳಗೆ ಹಾಗೂ ಪಾದಗಳು ಊದಿಕೊಳ್ಳಲು ಆರಂಭವಾಗುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ ಏಕೆಂದರೆ ದೀರ್ಘಾವಧಿಯಲ್ಲಿ ಪಾದಗಳಲ್ಲಿ ಊತದಿಂದ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ನಡೆಯಲು ಸಹ ಕಷ್ಟವಾಗುತ್ತದೆ. ಪಾದಗಳಲ್ಲಿ ಊತಕ್ಕೆ ಕಾರಣವೇನು ಮತ್ತು ಪಾದಗಳಲ್ಲಿ ಊತದ ಸಮಸ್ಯೆಯನ್ನು ನಿವಾರಿಸುವುದು ಹೇಗೆ ನೋಡಿ.

ಮಧುಮೇಹಿಗಳಲ್ಲಿ ಪಾದಗಳು ಊದಿಕೊಳ್ಳಲು ಕಾರಣ

ದೀರ್ಘಕಾಲದವರೆಗೆ ದೇಹದಲ್ಲಿ ಗ್ಲೂಕೋಸ್‌ನ ಪ್ರಮಾಣದ ಅಧಿಕವಾದರೆ ಕಾಲುಗಳು ಮತ್ತು ದೇಹದ ಇತರ ಭಾಗಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾದ್ರೆ ದೇಹದ ನರಗಳಿಗೆ ಹಾನಿಯಾಗುತ್ತದೆ. ಮಧುಮೇಹವು ನರಗಳು ಹಾಗೂ ಪಾದಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ನೋವು ಪ್ರಾರಂಭವಾಗುತ್ತದೆ. ಕೆಲವರಲ್ಲಿ ಈ ಸಮಸ್ಯೆ ಕಡಿಮೆಯಾದರೆ ಇನ್ನು ಕೆಲವರಲ್ಲಿ ಡಯಾಬಿಟಿಕ್ ನ್ಯೂರೋಪತಿ ಸಮಸ್ಯೆ ಸಾಕಷ್ಟು ನೋವಿನಿಂದ ಕೂಡಿರುತ್ತದೆ. ದೇಹದಲ್ಲಿ ಊತ ಹೆಚ್ಚಾಗಿ ಎಡಿಮಾ ಉಂಟಾಗುತ್ತದೆ. ಎಡಿಮಾ ಎನ್ನುವುದು ಒಂದು ರೀತಿಯ ವೈದ್ಯಕೀಯ ಸ್ಥಿತಿಯಾಗಿದ್ದು, ದೇಹದ ಅಂಗಾಂಶಗಳಲ್ಲಿ ದ್ರವವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಮಧುಮೇಹದಿಂದ ಈ ಸಮಸ್ಯೆ ಕಂಡುಬಂದರೆ ತಕ್ಷಣದ ಚಿಕಿತ್ಸೆ ಅಗತ್ಯ.

ಮಧುಮೇಹಿಗಳಲ್ಲಿ ಪಾದದ ಊತ ಕಡಿಮೆ ಮಾಡುವುದು ಹೇಗೆ

ಕಂಪ್ರೆಷನ್ ಸಾಕ್ಸ್: ಕಂಪ್ರೆಷನ್ ಸಾಕ್ಸ್‌ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಇದು ಕ್ರಮೇಣ ನರಗಳನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆದರೂ ಕಂಪ್ರೆಷನ್ ಸಾಕ್ಸ್‌ಗಳನ್ನು ಧರಿಸುವಾಗ, ತುಂಬಾ ಬಿಗಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ರಕ್ತ ಪರಿಚಲನೆ ನಿಲ್ಲುತ್ತದೆ. ಆರಂಭದಲ್ಲಿ ತುಂಬಾ ಹಗುರವಾದ ಮತ್ತು ಸಡಿಲವಾದ ಕಂಪ್ರೆಷನ್ ಸಾಕ್ಸ್‌ಗಳನ್ನು ಧರಿಸಿ. ಇದರಿಂದ ನರಗಳಿಗೆ ಹಾನಿಯಾಗುವುದಿಲ್ಲ.

ಕಾಲುಗಳನ್ನು ಮೇಲಕ್ಕೆತ್ತಿ: ನೀವು ಇಡಿ ದಿನ ಕುಳಿತುಕೊಂಡಿದ್ದರೆ ಅಥವಾ ನಿಮ್ಮ ಕಾಲುಗಳನ್ನು ದೀರ್ಘಕಾಲದವರೆಗೆ ಒಂದೇ ಸ್ಥಾನದಲ್ಲಿ ಇರಿಸಿದರೆ ಪಾದಗಳು ದಪ್ಪವಾಗಲು ಆರಂಭವಾಗುತ್ತದೆ. ಆದ್ದರಿಂದ ಮಲಗಿಕೊಂಡು ಎದೆಯ ಸಮಕ್ಕೆ ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ. ಇದು ಕಾಲುಗಳನ್ನು ತಲುಪುವ ದ್ರವವು ದೇಹಕ್ಕೆ ಮರಳಲು ಸಹಾಯ ಮಾಡುತ್ತದೆ. ಮಧುಮೇಹಿಗಳಲ್ಲಿ ಪಾದ ದಪ್ಪ ಆಗಬಾರದು ಎಂದರೆ ಪ್ರತಿದಿನ ತಪ್ಪದೇ ವಾಕಿಂಗ್ ಮಾಡುವುದು ಕೂಡ ಪರಿಹಾರ.

ಕಡಿಮೆ ಉಪ್ಪು ತಿನ್ನಿ: ಹೆಚ್ಚು ಉಪ್ಪಿನಾಂಶ ಸೇವನೆಯು ಮಧುಮೇಹಿಗಳಲ್ಲಿ ಪಾದಗಳು ಊದಿಕೊಳ್ಳಲು ಕಾರಣವಾಗುವ ಅಂಶಗಳಲ್ಲಿ ಒಂದಾಗಿದೆ. ಅತಿಯಾದ ಬಾಯಾರಿಕೆಗೆ ಉಪ್ಪಿನಾಂಶ ಹೆಚ್ಚು ಸೇವನೆಯು ಕಾರಣವಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣದ ಅತಿಯಾದರೂ ಪಾದಗಳು ಊದಿಕೊಳ್ಳಲು ಆರಂಭವಾಗುತ್ತದೆ.

ತೂಕ ಇಳಿಸಿ: ದೇಹದಲ್ಲಿನ ಬೊಜ್ಜು ಮಧುಮೇಹಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವಂತೆ ಮಾಡುತ್ತದೆ. ಸ್ಥೂಲಕಾಯದ ಸಮಸ್ಯೆಯಿಂದಾಗಿ ಪಾದಗಳಲ್ಲಿ ಊತ ಉಂಟಾಗಬಹುದು. ಮಧುಮೇಹದಿಂದ ಉಂಟಾಗುವ ಎಡಿಮಾವನ್ನು ತೊಡೆದುಹಾಕಲು ತೂಕ ನಷ್ಟ ಅಗತ್ಯ. ಆದ್ದರಿಂದ, ಪ್ರತಿದಿನ ವ್ಯಾಯಾಮ ಮಾಡಿ.

ಮೆಗ್ನೀಸಿಯಮ್ ಕೊರತೆ ನಿವಾರಿಸಿ: ಮಧುಮೇಹದಲ್ಲಿ ಮೆಗ್ನೀಸಿಯಮ್ ಕೊರತೆಯು ಕಾಲುಗಳಲ್ಲಿ ಊತಕ್ಕೆ ಕಾರಣವಾಗಬಹುದು. ಏಕೆಂದರೆ ಮೆಗ್ನೀಸಿಯಮ್ ನರಗಳ ಕಾರ್ಯವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮೆಗ್ನೀಸಿಯಮ್ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಪಾದಗಳಲ್ಲಿನ ಊತದ ಸಮಸ್ಯೆಯನ್ನು ನಿವಾರಿಸಬಹುದು.

ಪಾದಗಳನ್ನು ನೀರಿನಲ್ಲಿ ನೆನೆಸಿ: ಊತವನ್ನು ಕಡಿಮೆ ಮಾಡಲು, ನಿಮ್ಮ ಪಾದಗಳನ್ನು ಎಪ್ಸಮ್ ಉಪ್ಪಿನೊಂದಿಗೆ ತಣ್ಣನೆಯ ನೀರಿನಲ್ಲಿ ನೆನೆಸಿ ಮತ್ತು ಸುಮಾರು 10 ರಿಂದ 20 ನಿಮಿಷಗಳ ಕಾಲ ಬಿಡಿ. ಇದು ಪಾದಗಳಲ್ಲಿನ ಊತದಿಂದ ಪರಿಹಾರವನ್ನು ನೀಡುತ್ತದೆ.

ಈ ಮೇಲೆ ಹೇಳಿದ ಕ್ರಮವನ್ನು ಪಾಲಿಸುವ ಮೂಲಕ ಡಯಾಬಿಟಿಕ್ ನ್ಯೂರೊಪತಿ ಎಡಿಮಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪಾದದ ಊತ ಅತಿಯಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಈ ವಿಚಾರವನ್ನು ನಿರ್ಲಕ್ಷ್ಯ ಮಾಡದಿರಿ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ