ಮಧುಮೇಹಿಗಳ ಪಾದಗಳಲ್ಲಿ ವ್ಯತ್ಯಾಸ ಗೋಚರಿಸಲು ಪ್ರಮುಖ ಕಾರಣವಿದು, ಪಾದದ ಆರೈಕೆಯಲ್ಲಿ ಕೊಂಚ ಎಡವಿದ್ರೂ ಸಮಸ್ಯೆ ಗಂಭೀರವಾಗಬಹುದು ಎಚ್ಚರ
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಸಕ್ಕರೆ ಕಾಯಿಲೆ ಇರುವವರು ದೇಹದ ಎಲ್ಲಾ ಭಾಗಗಳಿಗಿಂತ ಪಾದಗಳ ಆರೈಕೆಗೆ ಕೊಂಚ ಹೆಚ್ಚೇ ಗಮನ ನೀಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮಳೆಗಾಲ, ಚಳಿಗಾಲ ಯಾವುದೇ ಆಗಿರಲಿ ಪಾದಗಳಲ್ಲಿ ಗಾಯ, ಹುಣ್ಣು ಆದರೆ ತಕ್ಷಣ ವೈದ್ಯರ ಬಳಿ ಹೋಗಬೇಕು. ಪಾದಗಳ ಆರೈಕೆಗೆ ಯಾಕಷ್ಟು ಗಮನ ಕೊಡಬೇಕು ಎಂಬ ವಿವರ ಇಲ್ಲಿದೆ.
ಮಧುಮೇಹ ಇತ್ತೀಚಿಗೆ ಯುವ ಜನರನ್ನೂ ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಮಧುಮೇಹದಿಂದ ದೇಹದಲ್ಲಿ ಹಲವು ಇನ್ನಿತರ ಸಮಸ್ಯೆಗಳು ಎದುರಾಗಬಹುದು. ಆದರೆ ಸಕ್ಕರೆ ಕಾಯಿಲೆ ಇರುವ ಹಲವರಿಗೆ ತಮಗಾಗುವ ತೊಂದರೆಗಳ ಅರಿವೇ ಇರುವುದಿಲ್ಲ. ಅನಕ್ಷರತೆ, ಬರಿಗಾಲಿನಲ್ಲಿ ನಡೆಯುವ ಅಭ್ಯಾಸ, ಬಡತನ, ಧೂಮಪಾನದ ಅಭ್ಯಾಸ, ಸಮಸ್ಯೆಯ ಗಂಭೀರತೆಯ ಬಗ್ಗೆ ಅರಿವಿನ ಕೊರತೆ ಮತ್ತು ಸಮಸ್ಯೆ ಉಲ್ಬಣಗೊಂಡ ನಂತರ ವೈದ್ಯರ ಬಳಿಗೆ ಹೋಗುವ ಕಾರಣ ಕಾಲು ತೆಗೆಯಬೇಕಾಗುವ ಸಂದರ್ಭ ಬರಬಹುದು. ಆ ಕಾರಣಕ್ಕೆ ಪಾದಗಳ ಬಗ್ಗೆ ಹೆಚ್ಚೇ ಕಾಳಜಿ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸಕ್ಕರೆ ಕಾಯಿಲೆ ಇರುವವರಿಗೆ ಪಾದಗಳಲ್ಲಿ ಬದಲಾವಣೆಯಾಗಲು ಕಾರಣ
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಪಾದ ಹಾಗೂ ಕಾಲುಗಳಲ್ಲಿ ಬದಲಾವಣೆಯಾಗುವುದನ್ನು ನೀವೂ ಗಮನಿಸಿರಬಹುದು. ಇದಕ್ಕೆ ಡಯಾಬಿಟಿಕ್ ನ್ಯೂರೋಪತಿ ಮತ್ತು ಸೋಂಕುಗಳು ಸಹ ಕಾರಣವಾಗಬಹುದು.
ರಕ್ತನಾಳಗಳಲ್ಲಿನ ಬದಲಾವಣೆಗಳು: ಮಧುಮೇಹವು ದೊಡ್ಡ ಮತ್ತು ಸಣ್ಣ ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರಣೆಯಾಗುವಂತೆ ಮಾಡಿ ರಕ್ತನಾಳಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ. ಪರಿಣಾಮವಾಗಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ, ಹೈಪರ್ಲಿಪಿಡೆಮಿಯಾ ಮತ್ತು ಇನ್ಸುಲಿನ್ ಪ್ರತಿರೋಧವು ಸಾಮಾನ್ಯವಾಗಿ ಮಧುಮೇಹದೊಂದಿಗೆ ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಧೂಮಪಾನದ ಅಭ್ಯಾಸವೂ ಇದ್ದರೆ, ಪಾದಗಳ ಸಮಸ್ಯೆ ಹಲವು ಪಟ್ಟು ಹೆಚ್ಚಾಗುತ್ತದೆ.
ನರಗಳ ಸಮಸ್ಯೆ (ಮಧುಮೇಹ ನರರೋಗ): ನೋವು ಮತ್ತು ತಾಪಮಾನವನ್ನು ಗ್ರಹಿಸಲು ಅಸಮರ್ಥವಾಗುವ ಕಾರಣ, ಮಧುಮೇಹ ರೋಗಿಗಳು ನರಗಳ ತೊಂದರೆಗಳು, ಯಾಂತ್ರಿಕ ಮತ್ತು ರಾಸಾಯನಿಕ ಕ್ರಿಯೆಗಳು, ಪಾದಗಳು ಬಿಸಿಯಾಗುವುದು ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಮಧುಮೇಹಿಗಳ ಕೆಲವೊಮ್ಮೆ ಗಾಯವನ್ನು ಗುರುತಿಸುವುದಿಲ್ಲ. ಗಾಯದ ಮೇಲೆ ಪದೇ ಪದೇ ಒತ್ತಡ ಹೇರುವುದು, ಬೇರೆ ವಸ್ತುಗಳನ್ನು ತಾಕಿಸಿ ಅದು ಒಣಗದಂತೆ ಮಾಡುತ್ತಾರೆ. ಆದರೆ ಇದರ ಪರಿಣಾಮ ಗಾಯ ವಾಸಿಯಾಗದೇ ಇನ್ನಷ್ಟು ದೊಡ್ಡದಾಗುತ್ತದೆ.
ಡಯಾಬಿಟಿಕ್ ಮೋಟಾರ್ ನರರೋಗ: ಇದು ಸಣ್ಣ ಸ್ನಾಯುಗಳ ದೌರ್ಬಲ್ಯ ಮತ್ತು ಕಾಲ್ಬೆರಳುಗಳ ಕರ್ಲಿಂಗ್‌ಗೆ ಕಾರಣವಾಗುತ್ತದೆ. ಇದರಿಂದಾಗಿ ತೆಳುವಾದ ಮೂಳೆಗಳ ತುದಿಗಳು ನೆಲದ ಕಡೆಗೆ ಚಾಚಿಕೊಂಡಿರುತ್ತವೆ, ಅವುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ ಮತ್ತು ಹುಣ್ಣುಗಳು ಉಂಟಾಗುತ್ತವೆ. ಸ್ವನಿಯಂತ್ರಿತ ನರರೋಗವು ಒಣ ಚರ್ಮ ಮತ್ತು ಕಾಲುಗಳಲ್ಲಿ ಬಿರುಕುಗಳನ್ನು ಉಂಟು ಮಾಡುತ್ತದೆ. ಸೋಂಕು ಬಿರುಕುಗಳ ಮೂಲಕ ಪಾದವನ್ನು ಪ್ರವೇಶಿಸುತ್ತದೆ. ಸ್ನಾಯುರಜ್ಜುಗಳು ಮತ್ತು ಪ್ಲಾಂಟರ್ ತಂತುಕೋಶಗಳಂತಹ ಬಿಳಿ ಅಂಗಾಂಶಗಳು ಬ್ಯಾಕ್ಟೀರಿಯಾವನ್ನು ವಿರೋಧಿಸಲು ಸಾಧ್ಯವಿಲ್ಲ. ಹೀಗಾಗಿ ಪಾದಗಳ ಒಳ ಭಾಗಗಳಿಗೂ ಸೋಂಕು ತಗುಲುತ್ತದೆ.
ಸೋಂಕು: ಮಧುಮೇಹ ಇರುವವರಲ್ಲಿ ಕಳಪೆ ರಕ್ತ ಪರಿಚಲನೆ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಸೋಂಕಿನ ತೀವ್ರತೆಯು ಹೆಚ್ಚು. ಗಾಯಗೊಂಡ ಪ್ರದೇಶಕ್ಕೆ ರಕ್ತ ಪೂರೈಕೆಯ ಕೊರತೆಯಿಂದಾಗಿ ಅಂಗಾಂಶವು ಸಾಯುತ್ತದೆ ಮತ್ತು ಪ್ರದೇಶದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಮಧುಮೇಹಿಗಳ ಪಾದದಲ್ಲಿ ವಿವಿಧ ಬ್ಯಾಕ್ಟೀರಿಯಾಗಳು ವೃದ್ಧಿಯಾಗುತ್ತವೆ.
ಪಾದಗಳ ಆರೈಕೆ ಹೇಗೆ?
* ಪಾದಗಳನ್ನು ಪ್ರತಿದಿನ ಪರೀಕ್ಷಿಸಬೇಕು. ಕನ್ನಡಿಯನ್ನೂ ಬಳಸಬೇಕು. ಪಾದಗಳು, ಉಗುರುಗಳು, ಕಾಲ್ಬೆರಳುಗಳ ನಡುವಿನ ಅಂತರ ಇತ್ಯಾದಿಗಳನ್ನು ನೋಡಬೇಕು.
* ರೋಗಿಯ ದೃಷ್ಟಿ ಕುಂಠಿತವಾಗಿದ್ದರೆ, ಕುಟುಂಬ ಸದಸ್ಯರ ಸಹಾಯದಿಂದ ಕಾಲು, ಪಾದಗಳಲ್ಲಿನ ಗಾಯಗಳನ್ನು ಪರೀಕ್ಷೆ ಮಾಡಬೇಕು.
* ಪ್ರತಿದಿನ ಪಾದಗಳನ್ನು ಸ್ವಚ್ಛಗೊಳಿಸಿ. ವಿಶೇಷವಾಗಿ ಬೆರಳುಗಳನ್ನು ಶುಷ್ಕ ಮತ್ತು ಸ್ವಚ್ಛವಾಗಿಡಿ.
* ಒಡೆದ ಪಾದಗಳಿಗೆ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಿ. ಕಾಲ್ಬೆರಳುಗಳ ನಡುವೆ ತೇವ ಇರದಂತೆ ನೋಡಿಕೊಳ್ಳಿ.
* ಪಾದಗಳನ್ನು ನೀರಿನಲ್ಲಿ ಮುಳುಗಿಸಬೇಡಿ.
* ಉಗುರುಗಳನ್ನು ಪಾದಗಳಿಗೆ ಸಮಾನಾಂತರವಾಗಿ ಕತ್ತರಿಸಬೇಕು. ಅಂಚುಗಳನ್ನು ಕತ್ತರಿಸಬಾರದು ಆದ್ದರಿಂದ ಬೆರಳುಗಳಲ್ಲಿ ಕೊಳೆ, ಬ್ಯಾಕ್ಟೀರಿಯಾ ಸೇರಿಕೊಂಡು ಇನ್ನಷ್ಟು ಸಮಸ್ಯೆಯಾಗಬಹುದು.
* ಸಾಕ್ಸ್ ಬಿಗಿಯಾಗಿರಬಾರದು, ಪ್ರತಿದಿನ ಬದಲಾಯಿಸಬೇಕು.
* ಬೂಟುಗಳಿಲ್ಲದೆ ಬರಿಗಾಲಿನಲ್ಲಿ ಮನೆಯಲ್ಲೂ ನಡೆಯಬೇಡಿ.
* ಚಪ್ಪಲಿಗಳಿಗೆ ಕಲ್ಲು, ಮುಳ್ಳು, ಮೊಳೆ ನುಗ್ಗಿದೆಯೇ ಎಂಬುದನ್ನು ಪರಿಶೀಲಿಸಿ.
* ಧೂಮಪಾನವನ್ನು ನಿಲ್ಲಿಸಿ.
* ಬೈಕಿನ ಹಿಂಭಾಗದಲ್ಲಿ ಕುಳಿತುಕೊಳ್ಳುವಾಗ, ನಿಮ್ಮ ಪಾದಗಳನ್ನು ಸೈಲೆನ್ಸರ್‌ಗಳಿಂದ ದೂರವಿಡಿ. ಇಲ್ಲವಾದರೆ ಸೈಲೆನ್ಸರ್‌ಗಳ ಬಿಸಿಯಿಂದ ಕಾಲಿಗೆ ಗಾಯವಾಗಬಹುದು.
* ಬರಿಗಾಲಿನಲ್ಲಿ ಹೊರಗಡೆ ಕಾಲು ಇರಿಸಬೇಕು ಅಂದರೆ ತಪ್ಪದೇ ಚಪ್ಪಲಿ ಧರಿಸಬೇಕು. ಬರಿಗಾಲಿನಲ್ಲಿ ವಾಕಿಂಗ್ ಮಾಡಬೇಕು ಅಂತಿದ್ದರೆ ಸಂಜೆ ಭೂಮಿಯಾ ಶಾಖ ಕಡಿಮೆಯಾದ ಮೇಲೆ ವಾಕಿಂಗ್ ಮಾಡಬೇಕು.
ವಿಭಾಗ