ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಉತ್ರಮ ನಿದ್ರೆಗೂ ಸಹಕಾರಿ ಬಿರಿಯಾನಿ ಎಲೆಗಳು, ಇಲ್ಲಿದೆ ವಿವರ
Dec 22, 2024 01:09 PM IST
ಬಿರಿಯಾನಿ ಎಲೆಗಳಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುವುದು ಅಲ್ಲದೆ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವ ಗುಣವಿದೆ.
ಬಿರಿಯಾನಿ ಎಲೆಗಳನ್ನು ಬಳಸುವುದರಿಂದ ಆಹಾರ ಪದಾರ್ಥಗಳಿಗೆ ಉತ್ತಮ ಪರಿಮಗಳವನ್ನು ಒದಗಿಸುವುದು ಅಲ್ಲದೆ ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡಲು ಕೂಡಾ ಉಪಯೋಗವಾಗುತ್ತದೆ.ಈ ಎಲೆಯನ್ನು ಸುಟ್ಟು, ಅದರಿಂದ ಬರುವ ಹೊಗೆಯನ್ನು ಉಸಿರಾಡಿದಲ್ಲಿ ಉತ್ತಮ ನಿದ್ರೆ ಬರುತ್ತದೆ, ಇದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಭಾರತೀಯ ಪಾಕಪದ್ಧತಿಯಲ್ಲಿ ಮಸಾಲೆ ಪದಾರ್ಥಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅವು ಆಹಾರದ ರುಚಿಯನ್ನು ದುಪ್ಪಟ್ಟು ಮಾಡುವುದು ಅಲ್ಲದೆ, ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿವೆ. ಇವುಗಳಲ್ಲಿ ಬಿರಿಯಾನಿ ಎಲೆಗಳು ಕೂಡಾ ಒಂದು. ಬಿರಿಯಾನಿ ಎಲೆಗಳು ಆಹಾರಕ್ಕೆ ಉತ್ತಮ ಪರಿಮಳ ನೀಡುತ್ತವೆ. ಇದು ಅಡುಗೆಯಲ್ಲಿ ರುಚಿ ಹೆಚ್ಚಿಸುವುದಲ್ಲದೆ, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬಿರಿಯಾನಿ ಎಲೆಗಳ ಚಹಾವನ್ನು ಕುಡಿಯುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವೆಲ್ಲಾ ನಿಮಗೆ ಗೊತ್ತಿರುವ ವಿಷಯಗಳೇ ಇರಬಹುದು. ಆದರೆ ಇಲ್ಲಿ ಅನೇಕರಿಗೆ ತಿಳಿದಿಲ್ಲದ ಒಂದು ವಿಷಯವಿದೆ. ಬಿರಿಯಾನಿ ಎಲೆಗಳು ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ರಾತ್ರಿಯಿಡೀ ನಿಮ್ಮನ್ನು ಆರಾಮವಾಗಿ ನಿದ್ರೆ ಮಾಡುವಂತೆ ಮಾಡುತ್ತದೆ.
ಉತ್ತಮ ನಿದ್ರೆಗೆ ಬಿರಿಯಾನಿ ಎಲೆಗಳು ಹೇಗೆ ಸಹಕಾರಿಯಾಗಿದೆ?
ಈಗಂತೂ ಜನರ ಲೈಫ್‌ಸ್ಟೈಲ್ ಬಹಳ ಬದಲಾಗಿದೆ. ಬೆಳಗಿನಿಂದ ಸಂಜೆವರೆಗೂ ದುಡಿಮೆ, ಅದರಿಂದ ಟೆನ್ಷನ್ ಸಹಜ ಎನಿಸುವಂತೆ ಆಗಿದೆ. ಇದು ಕೆಲವೊಮ್ಮೆ ವ್ಯಕ್ತಿಯನ್ನು ತುಂಬಾ ಕಾಡುತ್ತದೆ. ಮನೆಯಲ್ಲಿ ವಿಶ್ರಮಿಸುವಾಗಲೂ ಅದೇ ಆಲೋಚನೆಗಳು ಅವನ ಮನಸ್ಸಿನಲ್ಲಿ ಓಡುತ್ತಿರುತ್ತವೆ. ಇದೇ ಕಾರಣದಿಂದ ಅವರಿಗೆ ರಾತ್ರಿ ನಿದ್ರೆ ಬರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿ ನಿದ್ದೆ ಮಾಡದಿದ್ದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈ ಸಮಸ್ಯೆ ಎದುರಿಸುತ್ತಿರುವವರಿಗೆ ಬಿರಿಯಾನಿ ಎಲೆಗಳು ಪರಿಹಾರ ನೀಡುತ್ತದೆ. 2-3 ಬಿರಿಯಾನಿ ಎಲೆಗಳನ್ನು ನೀವು ಹೆಚ್ಚಿಗೆ ಬಳಸದ ಪಾತ್ರೆಗೆ ಹಾಕಿ, ಅದಕ್ಕೆ ಸ್ವಲ್ಪ ಬೆಂಕಿ ತಾಕಿಸಿ. ಎಲೆಗಳಿಗೆ ಕಿಡಿ ಹೊತ್ತಿಕೊಂಡ ನಂತರ ಬರುವ ಹೊಗೆಯನ್ನು ಉಸಿರಾಡಿ. ಈ ಸುಗಂಧವು ನಿಮಗೆ ರಿಲಾಕ್ಸ್ ಎನಿಸುತ್ತದೆ. ಜೊತೆಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ನೀವು ರಾತ್ರಿಯಿಡೀ ಆರಾಮವಾಗಿ ನಿದ್ರಿಸಬಹುದು.
ಬಿರಿಯಾನಿ ಎಲೆಗಳಿಂದ ಇನ್ನಷ್ಟು ಆರೋಗ್ಯ ಪ್ರಯೋಜನಗಳು ಹೀಗಿವೆ
ಪ್ರತಿರಕ್ಷಣಾ ವ್ಯವಸ್ಥೆಯನ್ನು ರಕ್ಷಿಸುವುದು
ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ದೇಹಕ್ಕೆ ಅವಶ್ಯಕವಾಗಿದೆ. ನಮ್ಮ ರೋಗನಿರೋಧಕ ಶಕ್ತಿ ಬಲಗೊಂಡಷ್ಟೂ ರೋಗಗಳ ವಿರುದ್ಧ ಹೋರಾಡುವ ಮತ್ತು ರಕ್ಷಿಸುವ ನಮ್ಮ ಸಾಮರ್ಥ್ಯ ಉತ್ತಮವಾಗಿರುತ್ತದೆ. ಉತ್ತಮ ಆಹಾರ ಮತ್ತು ಸರಿಯಾದ ಜೀವನಶೈಲಿಯ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಬಿರಿಯಾನಿ ಎಲೆಗಳನ್ನು ಬಳಸಬಹುದು. ಬಿರಿಯಾನಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಅವುಗಳನ್ನು ಸುಟ್ಟ ಹೊಗೆಯನ್ನು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ .
ಗಾಳಿಯನ್ನು ಸ್ವಚ್ಛಗೊಳಿಸುವುದು
ಪ್ರಾಚೀನ ಕಾಲದಲ್ಲಿ ಸೋಂಕನ್ನು ತಡೆಗಟ್ಟಲು ಜನರು ತಮ್ಮ ಮನೆಗಳಲ್ಲಿ ಬಿರಿಯಾನಿ ಎಲೆಗಳು ಮತ್ತು ಬೇವಿನ ಎಲೆಗಳ ಹೊಗೆಯನ್ನು ಹೊತ್ತಿಸುತ್ತಿದ್ದರು. ಈ ಎಲೆಗಳಿಂದ ಹೊರ ಸೂಸುವ ಹೊಗೆ ಸುತ್ತಮುತ್ತಲಿನ ವಾತಾವರಣದಲ್ಲಿನ ಮಾಲಿನ್ಯಕಾರಕಗಳನ್ನು ನಾಶಪಡಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಸಂಜೆ ಮನೆಯಲ್ಲಿ ಬಿರಿಯಾನಿ ಎಲೆಗಳನ್ನು ಸುಡುವುದು ಗಾಳಿಯನ್ನು ಸ್ವಚ್ಛವಾಗಿಡಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೀಟಗಳಿಂದ ರಕ್ಷಣೆ
ಬಿರಿಯಾನಿ ಎಲೆಗಳ ವಾಸನೆಯು ಕೋಣೆಯನ್ನು ಆಹ್ಲಾದಕರವಾಗಿಸುವುದಲ್ಲದೆ ನೊಣಗಳು, ಸೊಳ್ಳೆಗಳು ಮತ್ತು ಜಿರಳೆಗಳಂತಹ ಹಾನಿಕಾರಕ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ರೂಮ್ ಫ್ರೆಶ್‌ನರ್‌ಗಳು ಮತ್ತು ಕೀಟನಾಶಕಗಳ ಅಗತ್ಯವಿಲ್ಲದೆ ಇದು ನಿಮಗೆ ಉತ್ತಮ ಪರಿಹಾರವಾಗಿದೆ. ಈ ಎಲೆಗಳನ್ನು ಮನೆಯ ಮೂಲೆಗಳಲ್ಲಿ ಸುಡಿ, ನಂತರ ಕೀಟಗಳ ಸಮಸ್ಯೆ ಕಡಿಮೆಯಾಗುವುದನ್ನು ನೀವೇ ಗಮನಿಸುತ್ತೀರಿ.
ಉರಿಯೂತ ನಿವಾರಕ
ಬಿರಿಯಾನಿ ಎಲೆಗಳಲ್ಲಿ ಯುಜೆನಾಲ್ ಎಂಬ ರಾಸಾಯನಿಕವಿದೆ. ಇದು ನೈಸರ್ಗಿಕ ಉರಿಯೂತ ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇವುಗಳನ್ನು ಸುಟ್ಟು ಹೊಗೆಯನ್ನು ಆಘ್ರಾಣಿಸುವುದರಿಂದ ದೇಹದಲ್ಲಿ ಉರಿ, ನೋವಿನಂತಹ ನಾನಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಮನೆಯಲ್ಲಿ ಯಾರಾದರೂ ಕೀಲು ನೋವು, ಕೀಲುಗಳಲ್ಲಿ ಉರಿಯೂತ ಸಮಸ್ಯೆಯಿಂದ ಬಳಲುತ್ತಿದ್ದರೆ ಇದು ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ.
ಗಮನಿಸಿ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಮಾಹಿತಿ ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.