Benefits of Basil: ಹೃದಯದ ಆರೋಗ್ಯದಿಂದ ಹಿಡಿದು ತ್ವಚೆಯ ಕಾಂತಿಯವರೆಗೆ: ತುಳಸಿಯ ಅತ್ಯದ್ಬುತ ಪ್ರಯೋಜನಗಳು ಇಂತಿವೆ
Oct 30, 2024 07:03 PM IST
ತುಳಸಿಯನ್ನು ಪ್ರತಿದಿನ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ
ದೇವರ ಪೂಜೆಗೆ ಸಲ್ಲುವ ತುಳಸಿ ಅನೇಕ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಭಾರತದ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ತುಳಸಿಯನ್ನು ಔಷಧವನ್ನಾಗಿ ಬಳಸಲಾಗುತ್ತದೆ. ಹೃದಯದ ಆರೋಗ್ಯ, ತ್ವಚೆಯ ಕಾಂತಿಗೆ ತುಳಸಿ ಬಹಳ ಪ್ರಯೋಜನಾಕಾರಿಯಾಗಿದೆ. (ಬರಹ: ಅರ್ಚನಾ ವಿ ಭಟ್)
ದೇವರ ಪೂಜೆಯಿಂದ ಹಿಡಿದು ಆಯುರ್ವೇದದ ಔಷಧಗಳವರೆಗೆ ತುಳಸಿ ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ. ಇದನ್ನು ಪವಿತ್ರ ಗಿಡ ಎಂದು ಕರೆಯಲಾಗುತ್ತದೆ. ಔಷಧಿಯ ಗುಣಗಳನ್ನು ಹೊಂದಿರುವ ಈ ಗಿಡಮೂಲಿಕೆಯನ್ನು ಶತಮಾನಗಳಿಂದಲೂ ಭಾರತದ ವೈದ್ಯ ಪದ್ಧತಿಯಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ವಿಶಿಷ್ಟ ಪರಿಮಳ ಮತ್ತು ರುಚಿಯನ್ನು ಹೊಂದಿರುವ ತುಳಸಿಯು ಮಾನಸಿಕ ಮತ್ತು ದೈಹಿಕ ಆರೋಗ್ಯ ಇವೆರಡನ್ನೂ ಕಾಪಾಡಿಕೊಳ್ಳಲು ಅದ್ಭುತವಾಗಿದೆ.
ಒಂದೆರಡು ತುಳಸಿ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ಅಷ್ಟೊಂದು ಶಕ್ತಿಯುತವಾದ ತುಳಸಿಯು ಆಂಟಿ ಬ್ಯಾಕ್ಟೀರಿಯಾ, ಆಂಟಿಇನ್ಫಾಮೇಟರಿ, ಆಂಟಿ ಫಂಗಲ್ ಮುಂತಾದ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಹೃದಯದ ಆರೋಗ್ಯ ಕಾಪಾಡುವವರೆಗೆ ಪ್ರಯೋಜನಕಾರಿಯಾಗಿದೆ. ತುಳಸಿಯು ಪೂರ್ತಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವುದರಿಂದ ರಕ್ಷಣಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ. ಇಂತಹ ಅದ್ಭತ ತುಳಸಿಯಿಂದ ನಮಗೆ ಸಿಗುವ ಪ್ರಯೋಜನಗಳೇನು ಇಲ್ಲಿದೆ ಓದಿ.
ತುಳಸಿಯ 10 ಪ್ರಯೋಜನಗಳು
1) ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ತುಳಸಿಯು ಹೇರಳವಾದ ಪೋಷಕಾಂಶ ಮತ್ತು ಆಂಟಿ ಆಕ್ಸಿಡೆಂಟ್‌ನಿಂದ ಕೂಡಿರುವ ಗಿಡಮೂಲಿಕೆಯಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಕಪ್ ತುಳಸಿ ಚಹಾ ಕುಡಿಯುವುದರಿಂದ ಸಾಮಾನ್ಯ ಕಾಯಿಲೆಗಳಿಂದ ದೂರವಿರಬಹುದು.
2) ಒತ್ತಡ ದೂರಮಾಡುತ್ತದೆ: ತುಳಸಿಯು ಒತ್ತಡ ನಿವಾರಿಸುವ ಅದ್ಭುತ ಮೂಲಿಕೆಯಾಗಿದೆ. ಇದು ಮನಸ್ಸನ್ನು ಶಾಂತಗೊಳಿಸಲು ನೆರವಾಗುತ್ತದೆ. ಒತ್ತಡ ಮತ್ತು ಆತಂಕವನ್ನು ದೂರಮಾಡುವ ಸಂಯುಕ್ತಗಳನ್ನು ಇದು ಒಳಗೊಂಡಿದೆ. ತುಳಸಿ ಚಹಾ ಅಥವಾ ತುಳಸಿ ನೀರನ್ನು ಕುಡಿಯುವುದರಿಂದ ಫ್ರೆಶ್ ಫೀಲ್ ಆಗುತ್ತದೆ.
3) ಜೀರ್ಣಕ್ರಿಯೆ ಹೆಚ್ಚಿಸುತ್ತದೆ: ತುಳಸಿಯು ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯುರಿ ಶಮನಗೊಳಿಸುತ್ತದೆ. ಈ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಎದೆಯುಬ್ಬುರ, ಗ್ಯಾಸ್ ಮತ್ತು ಅಜೀರ್ಣವನ್ನು ತಡೆಯುತ್ತದೆ. ಕರುಳಿನ ಆರೋಗ್ಯ ಹೆಚ್ಚಿಸುತ್ತದೆ.
4) ತ್ವಚೆಗೆ ರಕ್ಷಣೆ ನೀಡುತ್ತದೆ: ತುಳಸಿಯಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿವೆ. ಇದು ತ್ವಚೆಗೆ ಅದ್ಭುತ ಪ್ರಯೋಜನ ನೀಡುತ್ತದೆ. ಮೊಡವೆ, ಕಲೆಗಳು ಮತ್ತು ಚರ್ಮದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತುಳಸಿಯು ಕಾಂತಿಯುತ ಮತ್ತು ಆರೋಗ್ಯಪೂರ್ಣ ಚರ್ಮ ನೀಡುತ್ತದೆ.
5) ಉಸಿರಾಟಕ್ಕೆ ಉತ್ತಮವಾಗಿದೆ: ಶತಮಾನಗಳಿಂದಲೂ ತುಳಸಿಯನ್ನು ಕೆಮ್ಮ, ನೆಗಡಿ ಮತ್ತು ಮೂಗು ಕಟ್ಟುವಿಕೆಯಂತಹ ಉಸಿರಾಟದ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತಿದೆ. ಇದು ಉರಿಯೂತಕ್ಕೆ ಪರಿಹಾರವನ್ನು ನೀಡುತ್ತದೆ. ಉಸಿರಾಟದ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಂಗಾಂಗಗಳು ಕಟ್ಟಿಕೊಂಡಾಗ ಅವುಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ.
6) ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುತ್ತದೆ: ತುಳಸಿಯು ಮಧುಮೇಹದಿಂದ ಬಳಲುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನಿತ್ಯದ ಡಯಟ್‌ನಲ್ಲಿ ತುಳಸಿಯನ್ನು ಸೇರಿಸಿಕೊಳ್ಳುವುದರಿಂದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
7) ಬಾಯಿಯ ಆರೋಗ್ಯ: ತುಳಸಿಯು ಬಾಯಿಯ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅದ್ಭುತ ಮೂಲಿಕೆಯಾಗಿದೆ. ಇದು ಬ್ಯಾಕ್ಟೀರಿಯಾವನ್ನು ದೂರ ಮಾಡುವ ಗುಣಲಕ್ಷಣ ಹೊಂದಿದೆ. ಇದು ಬಾಯಿಯಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ. ಕೆಟ್ಟ ಉಸಿರಾಟ ತಡೆಯುತ್ತದೆ.
8) ಏಕಾಗ್ರತೆ ಹೆಚ್ಚಿಸುತ್ತದೆ: ತುಳಸಿಯಲ್ಲಿ ಕಂಡುಬರುವ ಅಡಾಪ್ಟೋಜೆನಿಕ್ ಗುಣಲಕ್ಷಣಗಳು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಇದು ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ತುಳಸಿಯು ನೈಸರ್ಗಿಕ ಚಿತ್ತ ವರ್ಧಕವಾಗಿದ್ದು ಉತ್ಸಾಹ ಹೆಚ್ಚಿಸುತ್ತದೆ.
9) ಹೃದಯದ ಆರೋಗ್ಯ ಕಾಪಾಡುತ್ತದೆ: ನಿಯಮಿತವಾಗಿ ತುಳಸಿಯನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ.
10) ಉರಿಯೂತ ನಿವಾರಕ: ಅನೇಕ ಕಾಯಿಲೆಗಳಿಗೆ ಮೂಲ ಕಾರಣ ಉರಿಯೂತವಾಗಿದೆ. ತುಳಸಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಲಕ್ಷಣಗಳಿವೆ. ಇದು ಉರಿಯೂತವನ್ನು ಕಡಿಮೆ ಮಾಡುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಆರೋಗ್ಯಕ್ಕೆ ಇಷ್ಟೆಲ್ಲಾ ಉಪಯೋಗಕಾರಿಯಾಗಿರುವ ತುಳಸಿಯನ್ನು ನೀವೂ ಪ್ರತಿದಿನ ಸೇವಿಸಿ.
ಬರಹ: ಅರ್ಚನಾ ವಿ ಭಟ್