ಚಳಿಗಾಲದಲ್ಲಿ ಆರೋಗ್ಯ ಕೆಡಬಾರದು ಅಂದ್ರೆ ಈ ಕಷಾಯಗಳನ್ನು ಕುಡಿಯುವ ಅಭ್ಯಾಸ ಮಾಡಿ; ಇದ್ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ
Nov 21, 2024 04:21 PM IST
ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಕಷಾಯಗಳು
- ವಾತಾವರಣ ಬದಲಾದಾಗ ಆರೋಗ್ಯ ಕೆಡುವುದು ಸಹಜ. ಅದರಲ್ಲೂ ಚಳಿಗಾಲ ಅಂದ್ರೆ ಕೇಳ್ಬೇಕಾ, ಈ ಸಮಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮಹತ್ವ ನೀಡಬೇಕು. ಈ ಸೀಸನ್‌ನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಕಷಾಯಗಳು ಕುಡಿಯುವ ಅಭ್ಯಾಸ ಮಾಡಬೇಕು. ಇದರಿಂದ ಚಳಿಗಾಲದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
ಚಳಿಗಾಲ ಎಂದರೆ ಎಲ್ಲೆಲ್ಲೂ ಹಿಮದ ವಾತಾವರಣ. ರಾತ್ರಿ, ಹಗಲು ಎಲ್ಲಾ ಸಮಯದಲ್ಲೂ ಚಳಿಯಿಂದ ನಡುಗಬೇಕು. ಇದೊಂಥರಾ ಖುಷಿ ಕೊಡುವ ವಾತಾವರಣವಾದ್ರೂ ಕೂಡ ಆರೋಗ್ಯ ಬೇಗ ಕೆಡುತ್ತೆ. ಯಾಕೆಂದರೆ ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ಜ್ವರ, ಕೆಮ್ಮವಿನಂತಹ ಸಮಸ್ಯೆಗಳು ಪದೇ ಪದೇ ಕಾಡಬಹುದು. ಇದರೊಂದಿಗೆ ಗಂಟಲು ನೋವು, ಮೈಕೈನೋವು ಕೂಡ ಜೊತೆಯಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ಕೀವು ನೋವು, ಗಂಟು ನೋವಿನ ಸಮಸ್ಯೆಯೂ ಹೆಚ್ಚು. ಈ ಸಮಯದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದು ಎಂದರೆ ಕಷಾಯಗಳು. ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಕಷಾಯಗಳು ಯಾವುವು ನೋಡಿ.
ಶುಂಠಿ ಕಷಾಯ
ಶುಂಠಿಗೆ ಆಯುರ್ವೇದದಲ್ಲಿ ವಿಶೇಷ ಮಹತ್ವವಿದೆ. ಇದು ದೇಹ ಬೆಚ್ಚಗಾಗಿಸುವ ಗುಣವನ್ನು ಹೊಂದಿದೆ. ಶುಂಠಿ ಕಷಾಯವನ್ನು ಚಳಿಗಾಲ ಆಗಾಗ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಾತ್ರವಲ್ಲ ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಶುಂಠಿಯನ್ನು ತುರಿದು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಬೇಕಿದ್ದರೆ ಇದರ ಜೊತೆ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು. ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.
ಜೀರಿಗೆ ಕಷಾಯ
ಜೀರಿಗೆ ತಂಪು ನಿಜ, ಆದರೆ ಇದರಲ್ಲಿರುವ ಅಂಶಗಳು ದೇಹಾರೋಗ್ಯಕ್ಕೆ ಬಹಳ ಉತ್ತಮ. ಆ ಕಾರಣಕ್ಕೆ ಜೀರಿಗೆ ಕಷಾಯ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಕರುಳಿನ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.
ಕಾಳುಮೆಣಸಿನ ಕಷಾಯ
ಕಾಳುಮೆಣಸು ಕೂಡ ದೇಹ ಬೆಚ್ಚಾಗಿಸುವ ಗುಣವನ್ನು ಹೊಂದಿದೆ. ಕಾಳುಮೆಣಸಿನ ಕಷಾಯ ಕುಡಿಯುವುದರಿಂದ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ನಿವಾರಣೆಯಾಗುವುದು ಮಾತ್ರವಲ್ಲ, ಮೈಕೈ ನೋವು ಕೂಡ ಕಡಿಮೆಯಾಗುತ್ತದೆ. ಕಾಳುಮೆಣಸಿನ ಕಷಾಯ ಮಾಡಲು ಕಾಳುಮೆಣಸನ್ನು ಜಜ್ಜಿ , ಜೀರಿಗೆ ಹಾಕಿ. ಇದರ ಜೊತೆ ಶುಂಠಿ, ಅರಿಸಿನ, ಈರುಳ್ಳಿ, ಚೂರು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿದ್ರೆ ಕಷಾಯ ರೆಡಿ.
ಕೊತ್ತಂಬರಿ ಕಷಾಯ
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಿರಂತರವಾಗಿ ಕೊತ್ತಂಬರಿ ಕಷಾಯ ಮಾಡಿ ಕುಡಿಯಬಹುದು. ಕೊತ್ತಂಬರಿ, ಜೀರಿಗೆ ಅರಿಸಿನ ಸೇರಿಸಿ ಕುದಿಸಿ. ಇದಕ್ಕೆ ಶುಂಠಿ ಹಾಗೂ ಹಾಲು ಸೇರಿಸಬಹುದು. ಹಾಲು ಇಷ್ಟವಿಲ್ಲ ಎಂದರೆ ನೀರು ಕೂಡ ಹಾಕಿ ಕಷಾಯ ಮಾಡಿ ಕುಡಿಯಬಹುದು.
ಎಳ್ಳಿನ ಪಾನೀಯಗಳು
ಚಳಿಗಾಲದಲ್ಲಿ ದೇಹ ಬೆಚ್ಚಾಗಿಸುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಅಂತಹ ಪದಾರ್ಥಗಳಲ್ಲಿ ಎಳ್ಳು ಕೂಡ ಒಂದು. ಎಳ್ಳಿನ ಪದಾರ್ಥಗಳು ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹೇಳಿ ಮಾಡಿಸಿದಂಥವು. ಈ ಸಮಯದಲ್ಲಿ ನೀವು ಎಳ್ಳಿನ ಪಾನೀಯಗಳನ್ನು ಕುಡಿಯುವ ಮೂಲಕವೂ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಓಂ ಕಾಳಿನ ಕಷಾಯ
ಚಳಿಗಾಲದಲ್ಲಿ ಕೆಮ್ಮು, ಶೀತದಂತಹ ಸಮಸ್ಯೆ ಮಾತ್ರವಲ್ಲ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದು ಹೆಚ್ಚು. ಅದಕ್ಕಾಗಿ ನೀವು ಓಂ ಕಾಳಿನ ಕಷಾಯ ಮಾಡಿ ಕುಡಿಯಬೇಕು. ಊಟದ ನಂತರ ಓಂ ಕಾಳಿನ ಕಷಾಯ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ತುಳಸಿ, ಲವಂಗದ ಪಾನೀಯ
ತುಳಸಿ ಎಲೆಯೂ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸುವ ಜ್ವರಕ್ಕೆ ತುಳಸಿ ಎಲೆ ಹಾಗೂ ಲವಂಗವನ್ನು ಕುದಿಸಿ ಕಷಾಯ ಮಾಡಿ ಕುಡಿಯಬೇಕು. ಇದರಿಂದ ಜ್ವರ ಥಟ್ಟಂತ ವಾಸಿಯಾಗುತ್ತೆ.
ಮಸಾಲ ಚಾಯ್
ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು ಮಸಾಲ ಚಾಯ್. ಶುಂಠಿ, ಕಾಳುಮೆಣಸು, ಲವಂಗ, ಏಲಕ್ಕಿ, ದಾಲ್ಚಿನ್ನಿ ಈ ಎಲ್ಲವನ್ನೂ ನೀರಿಗೆ ಹಾಕಿ ಕೆಲವು ಹೊತ್ತಿನ ತನಕ ಬಿಸಿ ಮಾಡಬೇಕು. ನಂತರ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದರಿಂದ ಕೂಡ ಚಳಿಗಾಲದ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.
ಅರಿಸಿನ ಕಧಾ
ಮಹಾರಾಷ್ಟ ಭಾಗದಲ್ಲಿ ವಿಶೇಷವಾಗಿ ಕಧಾ ಎಂಬ ಕಷಾಯವನ್ನು ತಯಾರಿಸುತ್ತಾರೆ. ಅರಿಸಿನ ಕಧಾ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹೇಳಿ ಮಾಡಿಸಿದ್ದು. ಅರಿಸಿನ, ಹಾಲು, ಚಕ್ಕೆ ಮುಂತಾದವುಗಳನ್ನು ಸೇರಿಸಿ ತಯಾರಿಸುವ ಕಧಾ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ.
ಈರುಳ್ಳಿ ಕಷಾಯ
ನೀವು ಗಂಟಲು ನೋವು, ಗಂಟಲು ಕೆರೆತದಂತಹ ಸಮಸ್ಯೆ ಎದುರಿಸುತ್ತಿದ್ದರೆ ಈರುಳ್ಳಿ ಕಷಾಯ ಹೇಳಿ ಮಾಡಿಸಿದ್ದು. ನೀರಿಗೆ ಹೆಚ್ಚಿದ ಈರುಳ್ಳಿ, ಕಾಳುಮೆಣಸು, ತುಳಸಿಎಲೆ, ಸ್ವಲ್ಪ ಬೆಲ್ಲ ಹಾಗೂ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಮೈಕೈ ನೋವು ನಿವಾರಣೆಗೂ ಉತ್ತಮ.