ಚಳಿಗಾಲ ಆರಂಭವಾಗ್ತಿದೆ, ಈಗಿನಿಂದಲೇ ದೇಹವನ್ನು ಸಜ್ಜುಗೊಳಿಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಅಭ್ಯಾಸಗಳನ್ನ ನಿತ್ಯ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲ ಆರಂಭವಾಗ್ತಿದೆ, ಈಗಿನಿಂದಲೇ ದೇಹವನ್ನು ಸಜ್ಜುಗೊಳಿಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಅಭ್ಯಾಸಗಳನ್ನ ನಿತ್ಯ ಪಾಲಿಸಿ

ಚಳಿಗಾಲ ಆರಂಭವಾಗ್ತಿದೆ, ಈಗಿನಿಂದಲೇ ದೇಹವನ್ನು ಸಜ್ಜುಗೊಳಿಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಅಭ್ಯಾಸಗಳನ್ನ ನಿತ್ಯ ಪಾಲಿಸಿ

ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ವಾತಾವರಣ ಬದಲಾದ ಕೂಡಲೇ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುವುದು ಸಹಜ. ಅದಕ್ಕಾಗಿ ಈಗಿನಿಂದಲೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಕಾಯಿಲೆಗಳು ಬರದಂತೆ ತಡೆಯಲು ಈ ಅಭ್ಯಾಸಗಳನ್ನು ನಿತ್ಯ ಪಾಲಿಸಿ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಟಿಪ್ಸ್
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಟಿಪ್ಸ್ (PC: Canva)

ಚಳಿಗಾಲವು ಮಳೆಗಾಲ, ಬೇಸಿಗೆಗಾಲಕ್ಕಿಂತ ಭಿನ್ನವಾಗಿರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುವುದು ಸಹಜ. ದುರ್ಬಲಗೊಳ್ಳುವ ರೋಗನಿರೋಧಕ ಶಕ್ತಿಯ ಕಾರಣ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ರೋಗನಿರೋಧಕ ಶಕ್ತಿಯು ಸೋಂಕು ಮತ್ತು ರೋಗದ ವಿರುದ್ಧ ಹೋರಾಡುವ ದೈಹಿಕ ಸಾಮರ್ಥ್ಯವನ್ನು ಸೂಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಅಂಗಗಳು, ಅಂಗಾಂಶಗಳು, ಜೀವಕೋಶಗಳು ಮತ್ತು ಪ್ರೊಟೀನ್‌ಗಳ ಸಂಕೀರ್ಣ ಜಾಲದಿಂದ ಮಾಡಲ್ಪಟ್ಟಿದೆ, ಅದು ದೇಹವನ್ನು ಹಾನಿಕಾರಕ ಆಕ್ರಮಣಕಾರರಿಂದ ರಕ್ಷಿಸಲು ಒಟ್ಟಾಗಿ ಕೆಲಸ ಮಾಡುತ್ತದೆ. ಅಂದರೆ ಹೊರಗಡೆ ಸೋಂಕು, ಬ್ಯಾಕ್ಟೀರಿಯಾಗಳು ದೇಹದ ಮೇಲೆ ದಾಳಿ ಮಾಡುವುದನ್ನು ತಡೆಯುತ್ತದೆ.

ಚಳಿಗಾಲದಲ್ಲಿ ಶೀತ ವಾತಾವರಣ, ಶುಷ್ಕ ಗಾಳಿ ಮತ್ತು ಋತುಮಾನದ ವೈರಸ್‌ಗಳು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಆದ್ದರಿಂದ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತು ಸಂಪೂರ್ಣ ಚಳಿಗಾಲದಲ್ಲಿ ನೀವು ಆರೋಗ್ಯವಾಗಿರಲು ಸಹಾಯ ಮಾಡುವ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇಂದಿನಿಂದಲೇ ರೂಢಿಸಿಕೊಳ್ಳಿ, ಇದರಿಂದ ಚಳಿಗಾಲ ಪೂರ್ತಿ ನೆಮ್ಮದಿಯಿಂದ ಇರಬಹುದು.

ಸಾಕಷ್ಟು ನೀರು ಕುಡಿಯಿರಿ, ಹೈಡ್ರೇಟ್ ಆಗಿರಿ

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದಾದ್ರೂ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ಶುಷ್ಕ ವಾತಾವರಣವಿರುವ ಚಳಿಗಾಲದಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಇದು ಚರ್ಮದ ಆರೋಗ್ಯಕ್ಕೂ ಬಹಳ ಅವಶ್ಯ. ಕನಿಷ್ಠ 8 ಲೋಟ ನೀರು ಕುಡಿಯಲು ಪ್ರಯತ್ನಿಸಿ. ಇದರೊಂದಿಗೆ ಹಣ್ಣಿನ ರಸ, ಗಿಡಮೂಲಿಕೆ ಚಹಾ, ಕಷಾಯದಂತಹ ಪಾನೀಯಗಳನ್ನು ಕುಡಿಯಬಹುದು.

ಆರೋಗ್ಯಕರ ಆಹಾರ ಸೇವನೆ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಆರೋಗ್ಯಕರ ಆಹಾರಗಳನ್ನ ಸೇವಿಸುವುದು ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ಹಣ್ಣುಗಳು, ತರಕಾರಿ, ಲೀನ್ ಪ್ರೊಟೀನ್‌ ಹಾಗೂ ಧಾನ್ಯಗಳನ್ನು ಸೇರಿಸಿಕೊಳ್ಳಿ. ಇದರೊಂದಿಗೆ ವಿಟಮಿನ್‌, ಖನಿಜಾಂಶ ಇರುವ ಆಹಾರಗಳನ್ನು ಸೇವಿಸುವುದು ಕೂಡ ಬಹಳ ಮುಖ್ಯ.

ಉತ್ತಮ ನಿದ್ದೆ

ಇತ್ತೀಚಿನ ದಿನಗಳಲ್ಲಿ ಹಲವರು ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ನಿದ್ದೆ ಕೊರತೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಸಾಕಷ್ಟು ನಿದ್ದೆ ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ರೋಗನಿರೋಧಕ ಶಕ್ತಿ ವೃದ್ಧಿಯಾಗಲು 8 ಗಂಟೆಗಳ ಕಾಲ ತಪ್ಪದೇ ನಿದ್ದೆ ಮಾಡಬೇಕು. ಚಳಿಗಾಲ ಎಂದುಕೊಂಡು ಅತಿಯಾದ ನಿದ್ದೆ ಮಾಡುವುದು ಕೂಡ ಸರಿಯಲ್ಲ ನೆನಪಿರಲಿ.

ನಿಯಮಿತ ವ್ಯಾಯಾಮ

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ವ್ಯಾಯಾಮಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ಹಾಗಾಗಿ ನಿಯಮಿತ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಏಕೆಂದರೆ ಯೋಗ, ವ್ಯಾಯಾಮವು ನಿಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವಾಗ ದೇಹವು ಬೆವರಲು ಪ್ರಾರಂಭಿಸುತ್ತದೆ. ಇದು ನಮ್ಮ ದೇಹದಲ್ಲಿನ ಎಲ್ಲಾ ವಿಷಾಂಶವನ್ನು ಹೊರ ಹಾಕುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

ದೇಹವನ್ನು ಬೆಚ್ಚಗಿಡಿ

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬೆಚ್ಚಗಿರುವುದು ಕೂಡ ಬಹಳ ಮುಖ್ಯ. ಮೈ ತುಂಬಾ ಬೆಚ್ಚಗಿನ ಬಟ್ಟೆ ಧರಿಸಿ. ಹವಾಮಾನ ತಂಪಿರುವಾಗ ಸಾಧ್ಯವಾದಷ್ಟು ಮನೆಯೊಳಗೆ ಇರಿ.

ಒತ್ತಡ ನಿರ್ವಹಣೆ

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಒತ್ತಡ ನಿರ್ವಹಣೆ ಕೂಡ ಬಹಳ ಮುಖ್ಯ. ಒತ್ತಡವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಾವು ಒತ್ತಡಕ್ಕೊಳಗಾದಾಗ, ದೇಹವು ಕಾರ್ಟಿಸೋಲ್ ಮತ್ತು ಇತರ ಒತ್ತಡದ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ, ಅದು ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸುತ್ತದೆ. ಹಾಗಾಗಿ ಈಗಿನಿಂದಲೇ ನಿಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡಿ. ಯೋಗ, ಧ್ಯಾನದಂತಹ ಮನಸ್ಸಿಗೆ ಶಾಂತಿ ಸಿಗುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಸಾರಭೂತ ತೈಲಗಳ ಬಳಕೆ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾರಭೂತ ತೈಲಗಳು ಉತ್ತಮ ಮಾರ್ಗವಾಗಿದೆ. ನಿಮ್ಮ ಮನೆಯಲ್ಲಿ ನಿಂಬೆ, ಪುದೀನಾ ಅಥವಾ ನೀಲಗಿರಿಯಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾರಭೂತ ತೈಲಗಳನ್ನು ಹರಡಲು ಪ್ರಯತ್ನಿಸಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಅವುಗಳನ್ನು ಬೆಚ್ಚಗಿನ ಸ್ನಾನಕ್ಕೆ ಸೇರಿಸಬಹುದು.

ಈ ಎಲ್ಲಾ ಸರಳ ವಿಧಾನಗಳನ್ನ ಅನುಸರಿಸುವ ಮೂಲಕ ನೀವು ದೇಹದಲ್ಲಿ ರೋಗನಿರೋಧಶಕ್ತಿಯನ್ನು ಹೆಚ್ಚಿಸಿಕೊಳ್ಳಬಹದು. ಚಳಿಗಾಲ ಆರಂಭವಾಗುವ ಸಮಯ ಹತ್ತಿರದಲ್ಲೇ ಇರುವ ಕಾರಣ ಈಗಿನಿಂದಲೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

Whats_app_banner