logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿ ಸಮಯದಲ್ಲಿ ಪದೇ ಪದೇ ಹಸಿವಾಗೋದು ಇದೇ ಕಾರಣಕ್ಕೆ; ಚಳಿಗಾಲದಲ್ಲಿ ತಿನ್ನುವ ವಿಚಾರದಲ್ಲಿ ಈ ತಪ್ಪುಗಳನ್ನ ಮಾಡಬಾರದು

ಚಳಿ ಸಮಯದಲ್ಲಿ ಪದೇ ಪದೇ ಹಸಿವಾಗೋದು ಇದೇ ಕಾರಣಕ್ಕೆ; ಚಳಿಗಾಲದಲ್ಲಿ ತಿನ್ನುವ ವಿಚಾರದಲ್ಲಿ ಈ ತಪ್ಪುಗಳನ್ನ ಮಾಡಬಾರದು

Reshma HT Kannada

Dec 02, 2024 11:46 AM IST

google News

ಚಳಿಗಾಲದಲ್ಲಿ ಹಸಿವು ಹೆಚ್ಚೋದೇಕೆ

    • ಚಳಿಗಾಲದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗುತ್ತದೆ. ಏನೇ ತಿಂದರೂ ಕೆಲ ಹೊತ್ತಿನಲ್ಲಿ ಪುನಃ ಹೊಟ್ಟೆ ಹಸಿಯಲು ಶುರುವಾಗುತ್ತದೆ. ಚಳಿ ಸಮಯದಲ್ಲಿ ಹಸಿವು ಹೆಚ್ಚಲು ಕಾರಣವೇನು, ಚಳಿಗಾಲದಲ್ಲಿ ಹಸಿವನ್ನ ನಿಗ್ರಹಿಸುವ ಭರದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ನೋಡಿ.
ಚಳಿಗಾಲದಲ್ಲಿ ಹಸಿವು ಹೆಚ್ಚೋದೇಕೆ
ಚಳಿಗಾಲದಲ್ಲಿ ಹಸಿವು ಹೆಚ್ಚೋದೇಕೆ (PC: Canva)

ಋತುಮಾನ ಬದಲಾವಣೆಯು ಪ್ರಕೃತಿಯ ಮೇಲೆ ಮಾತ್ರವಲ್ಲ, ಮನುಷ್ಯ ದೇಹದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮನುಷ್ಯನ ದೇಹ ಪ್ರಕೃತಿಯು ಸಂಪೂರ್ಣ ಬದಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಸೂರ್ಯನ ಬೆಳಕಿನ ಕೊರತೆ. ಶೀತ ವಾತಾವರಣದಲ್ಲಿ ಹಸಿವು ಹೆಚ್ಚಾಗುತ್ತದೆ, ಈ ಅನುಭವ ನಿಮಗೂ ಬಂದಿರಬಹುದು.

ಚಳಿಗಾಲದಲ್ಲಿ ಎಷ್ಟೇ ಹೊಟ್ಟೆ ಗಟ್ಟಿಯಾಗುವಂತೆ ತಿಂದರೂ ಕ್ಷಣ ಮಾತ್ರದಲ್ಲಿ ಪುನಃ ಹಸಿವಾಗಲು ಶುರುವಾಗುತ್ತದೆ. ಇದಕ್ಕೆ ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ, ಚಳಿಗಾಲದಲ್ಲಿ ಹಸಿವಾಯ್ತು ಎನ್ನುವ ಕಾರಣಕ್ಕೆ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದನ್ನು ಎಂದಿಗೂ ಮಾಡಬಾರದು, ಇದರಿಂದ ಆರೋಗ್ಯ ಕೆಡುತ್ತೆ ಎನ್ನುತ್ತಾರೆ ತಜ್ಞರು. ಹಾಗಾದರೆ ಚಳಿಗಾಲದಲ್ಲಿ ಹಸಿವು ಹೆಚ್ಚಲು ಕಾರಣವೇನು, ಏನನ್ನು ತಿನ್ನಬಾರದು ಎಂಬ ವಿವರ ಇಲ್ಲಿದೆ.

ಚಳಿಗಾಲದಲ್ಲಿ ಹಸಿವು ಹೆಚ್ಚಲು ಕಾರಣ

ಚಳಿಗಾಲದಲ್ಲಿ ಶೀತ ವಾತಾವರಣ‌ವಿರುತ್ತದೆ. ತಂಪಾದ ವಾತಾವರಣವು ನಮ್ಮ ದೇಹದಲ್ಲಿ ಉಷ್ಣತೆ ಕಡಿಮೆಯಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಹಸಿವು ಹೆಚ್ಚಾಗುತ್ತದೆ. ಏಕೆಂದರೆ ತಿನ್ನುವುದು ಆಂತರಿಕ ಶಾಖವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ತರುವಾಯ ದೇಹದ ಉಷ್ಣತೆಯ ಏರಿಕೆಗೆ ಕಾರಣವಾಗುತ್ತದೆ. ಇದು ಚಳಿಗಾಲದಲ್ಲಿ ಹಸಿವು ಹೆಚ್ಚಲು ಕಾರಣವಾದ್ರೆ ಈ ಸಮಯದಲ್ಲಿ ಬಿಸಿ ಆಹಾರವನ್ನು ತಿನ್ನಲು ಮನಸ್ಸು ಬಯಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನೂ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಬಿಸಿ ಆಹಾರ ಬೇಕು ಅನ್ನಿಸಲು ಕಾರಣ

ಚಳಿಗಾಲದಲ್ಲಿ ಆಹಾರವು ದೇಹದ ಉಷ್ಣತೆ ಹೆಚ್ಚಿಸುವಂತೆ ಈ ಸಮಯದಲ್ಲಿ ದೇಹವು ಬೇಗ ಉಷ್ಣತೆಯನ್ನು ಹೆಚ್ಚಿಸಿಕೊಂಡು ಬೆಚ್ಚಗಾಗಬೇಕು ಎನ್ನುವ ಕಾರಣಕ್ಕೆ ಬಿಸಿ ಆಹಾರವನ್ನು ಬಯಸುತ್ತದೆ. ಚಳಿಗಾಲದಲ್ಲಿ ಬೆಳಗಿನ ಹೊತ್ತು ಬಿಸಿ ಗಂಜಿ ತಿನ್ನುವುದು ಉತ್ತಮ. ಚಳಿಗಾಲದಲ್ಲಿ ಮಧ್ಯಾಹ್ನದ ಊಟದಲ್ಲಿ ಕಾಲೋಚಿತ ತರಕಾರಿಗಳಾದ ಕ್ಯಾರೆಟ್, ಈರುಳ್ಳಿ, ಬೇಳೆಗಳು, ಬೀನ್ಸ್ ಇಂತಹ ಆಹಾರಗಳು ಹೆಚ್ಚಿರಬೇಕು. ಇದರೊಂದಿಗೆ ಸೂಪ್‌ನಂತಹ ಆಹಾರಗಳನ್ನೂ ಹೆಚ್ಚು ಹೆಚ್ಚು ಸೇವಿಸಬೇಕು.

ಚಳಿಗಾಲದಲ್ಲಿ ಹೆಚ್ಚು ತಿನ್ನುವುದರಿಂದಾಗುವ ಅಪಾಯಗಳು

ಚಳಿಗಾಲದಲ್ಲಿ ಹಸಿವು ಹೆಚ್ಚುವುದು ಸಹಜವಾದ್ರೂ ಇದು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹೆಚ್ಚು ತಿನ್ನುವುದರಿಂದ ಬೇಗ ತೂಕ ಏರಿಕೆಯಾಗುತ್ತೆ. ಇದು ಮಧುಮೇಹ, ರಕ್ತದೊತ್ತಡ, ಫ್ಯಾಟಿ ಲಿವರ್‌, ಹೃದಯರಕ್ತನಾಳದಂತಹ ದೀರ್ಘಕಾಲದ ಕಾಯಿಲೆಗಳಿಗೂ ಕಾರಣವಾಗಬಹುದು.

ಪಾದರಸ ಕಡಿಮೆಯಾದಂತೆ, ನಮ್ಮ ಹಸಿವು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹಸಿವು ಹಾಗೂ ತಿನ್ನುವ ಬಯಕೆಯು ಅನಾರೋಗ್ಯಕರ ಆಹಾರವನ್ನು ಹೆಚ್ಚು ಸೇವಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ಜಂಕ್‌ಫುಡ್‌, ಫಾಸ್ಟ್‌ಫುಡ್‌ಗಳನ್ನ ಹೆಚ್ಚು ಸೇವಿಸುತ್ತೇವೆ. ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳೇ ಜಾಸ್ತಿ. ಹಾಗಾಗಿ ಚಳಿಗಾಲದ ಊಟದಲ್ಲಿ ಹೆಚ್ಚು ಪ್ರೊಟೀನ್ ಹಾಗೂ ನಾರಿನಾಂಶ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಚಳಿಗಾಲದಲ್ಲಿ ಯಾವ ಆಹಾರ ಸೇವಿಸಬೇಕು

  • ಚಳಿಗಾಲ ದಿನಗಳಲ್ಲಿ ಹಸಿವು ಹಾಗೂ ಬಾಯಾರಿಕೆಯನ್ನು ನಿಯಂತ್ರಿಸಲು ಪ್ರತಿದಿನ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು. ನೀವು ಕುಡಿಯಲು ಸಾಧ್ಯವಾಗಿಲ್ಲ ಎಂದರೆ ದ್ರವಾಹಾರಗಳಾಗಿರುವ ಗ್ರೀನ್ ಟೀ, ಕ್ಯಾಮೊಮೈಲ್ ಟೀ, ಡಿಟಾಲ್ಸ್ ವಾಟರ್ ಕುಡಿಯುವ ಮೂಲಕ ದೇಹದಲ್ಲಿ ನೀರಿನಾಂಶ ಹೆಚ್ಚುವಂತೆ ನೋಡಿಕೊಳ್ಳಬೇಕು.
  • ಅತ್ತಿತ್ತ ತಿರುಗಾಡಿ: ದೇಹದಲ್ಲಿ ಉಷ್ಣಾಂಶ ಕಡಿಮೆಯಾದಾಗ ಹಸಿವಾಗುತ್ತದೆ. ಇದನ್ನು ತಡೆಯಲು ಅತ್ತಿತ್ತ ಓಡಾಡುತ್ತಿರಬೇಕು. ಇದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
  • ಚೀಯಾ ಬೀಜವನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿ: ಚಳಿಗಾಲದಲ್ಲಿ ಚಿಯಾ ಬೀಜವನ್ನು ನೀರಿನಲ್ಲಿ ನೆನೆಸಿ ಕುಡಿಯವುದು ಅಥವಾ ಇದರಿಂದ ಸ್ಮೂಥಿ ತಯಾರಿಸುವುದು ಮಾಡಿ. ಇದು ನಿಮಗೆ ಪದೇ ಪದೇ ಹಸಿವಾಗುವುದನ್ನು ತಡೆದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಇಡುತ್ತದೆ.
  • ಅತ್ಯಧಿಕ ಪೋಷಕಾಂಶ ಇರುವ ಆಹಾರಗಳು: ಅತ್ಯಧಿಕ ಪೋಷಕಾಂಶ ಹಾಗೂ ನಾರಿನಾಂಶ ಹೆಚ್ಚಿರುವ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದರಿಂದ ದೇಹ ಬೆಚ್ಚಗಾಗುವುದು ಮಾತ್ರವಲ್ಲ, ಹಸಿವು ಕೂಡ ನಿಯಂತ್ರಣವಾಗುತ್ತದೆ.
  • ದೇಸಿ ತುಪ್ಪ: ಚಳಿಗಾಲದಲ್ಲಿ ದೇಸಿ ತುಪ್ಪವನ್ನು ಆಹಾರದಲ್ಲಿ ಸೇರಿಸುವುದು ಕೂಡ ಹಸಿವನ್ನು ನಿಯಂತ್ರಿಸುವ ಮಾರ್ಗವಾಗಿದೆ. ದೇಸಿ ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವ ಜೊತೆಗೆ ಶಕ್ತಿಯನ್ನೂ ನೀಡುತ್ತದೆ.

    ಇದನ್ನೂ ಓದಿ: ಚಳಿಗಾಲದಲ್ಲಿ ಪದೇ ಪದೇ ಕಣ್ಣು ಒಣಗುವ ಸಮಸ್ಯೆಯಿಂದ ಕಿರಿಕಿರಿ ಆಗ್ತಿದ್ಯಾ; ಇದಕ್ಕೆ ಕಾರಣ, ಪರಿಹಾರ ತಿಳಿಯಿರಿ

ಚಳಿಗಾಲದಲ್ಲಿ ತಿನ್ನುವ ವಿಚಾರದಲ್ಲಿ ಮಾಡಬಾರದಂತಹ ತಪ್ಪುಗಳು

  • ನಿಮ್ಮ ಮನಸ್ಸು ನಿಮ್ಮನ್ನು ನಿರ್ದೇಶನ ಮಾಡದಿರಲಿ. ಮಾತಿನ ಮಾತನ್ನು ಕೇಳದೆ ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಿ. ಆಗ ಅನಾರೋಗ್ಯಕರ ಆಹಾರ ಸೇವನೆಗೆ ಕಡಿವಾಣ ಹಾಕಲು ಸಾಧ್ಯ.
  • ಅತಿಯಾದ ಮಧ್ಯಪಾನ ಸೇವನೆ ಖಂಡಿತ ಒಳ್ಳೆಯದಲ್ಲ. ಚಳಿಗಾಲದಲ್ಲಿ ಮಧ್ಯಪಾನ ಮಾಡಬೇಕು ಎಂಬ ಆಸೆಯಾಗುವುದು ಸಹಜ. ಆದರೆ ಮಧ್ಯಪಾನದಿಂದ ಆರೋಗ್ಯಕ್ಕೆ ಹಾನಿಯಾಗುವ ಜೊತೆಗೆ ಇದು ಇತರ ಸ್ನ್ಯಾಕ್ಸ್‌ಗಳನ್ನು ಬಯಸುತ್ತದೆ. ಈ ಎರಡೂ ಸೇರಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ಚಳಿಗಾಲದಲ್ಲಿ ತಪ್ಪಿಯೂ ಊಟ ಬಿಡಬಾರದು. ಇದರಿಂದ ಹಸಿವು ಹೆಚ್ಚಾಗುತ್ತದೆ. ಇದು ಮೈಗ್ರೇನ್ ಹಾಗೂ ತಲೆನೋವಿಗೂ ಕಾರಣವಾಗುತ್ತದೆ. ಬಿಸಿಯಾದ, ಆರೋಗ್ಯಕರ ಉಪಾಹಾರದಿಂದ ನಿಮ್ಮ ದಿನವನ್ನು ಆರಂಭಿಸಿ. ಇದರಿಂದ ಮಧ್ಯಾಹ್ನದ ಊಟದವರೆಗೆ ನೀವು ಪದೇ ಪದೇ ತಿನ್ನುವುದು ನಿಲ್ಲುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ