logo
ಕನ್ನಡ ಸುದ್ದಿ  /  ಜೀವನಶೈಲಿ  /  ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವಿರಾ? ಈ 10 ಆರೋಗ್ಯ ಪ್ರಯೋಜನ ತಿಳಿದ್ರೆ ಇನ್ನೊಂದು ಲೋಟ ಹೆಚ್ಚು ಕುಡಿಯುವಿರಿ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವಿರಾ? ಈ 10 ಆರೋಗ್ಯ ಪ್ರಯೋಜನ ತಿಳಿದ್ರೆ ಇನ್ನೊಂದು ಲೋಟ ಹೆಚ್ಚು ಕುಡಿಯುವಿರಿ

Praveen Chandra B HT Kannada

Nov 18, 2024 11:47 AM IST

google News

ಪ್ರತಿದಿನ ಬೆಳಗ್ಗೆ ನೀರು ಕುಡಿಯುವುದರಿಂದ ಪ್ರಯೋಜನಗಳು

    • ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ. ಉತ್ತಮ ಮೂಡ್‌, ಮಿದುಳಿನ ಆರೋಗ್ಯ, ದೇಹದ ಟಾಕ್ಸಿಕ್‌ಕಡಿಮೆ ಮಾಡಲು, ಚರ್ಮದ ಆರೋಗ್ಯ, ಕೂದಲು ಸೊಂಪಾಗಿ ಬೆಳೆಯಲು ನೀರು ಸಹಕಾರಿ. ಎಲ್ಲಕ್ಕಿಂತ ಮುಖ್ಯವಾಗಿ ಬೆಳಗ್ಗೆ ಟಾಯ್ಲೆಟ್‌ನಲ್ಲಿ ನಿರಾಳ ಅನುಭವವಾಗುತ್ತದೆ.
ಪ್ರತಿದಿನ ಬೆಳಗ್ಗೆ ನೀರು ಕುಡಿಯುವುದರಿಂದ ಪ್ರಯೋಜನಗಳು
ಪ್ರತಿದಿನ ಬೆಳಗ್ಗೆ ನೀರು ಕುಡಿಯುವುದರಿಂದ ಪ್ರಯೋಜನಗಳು (pixel)

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಸಾಕಷ್ಟು ಜನರಿಗೆ ಇದೆ. ಇದು ಉತ್ತಮ ಆರೋಗ್ಯಕರ ಅಭ್ಯಾಸವಾಗಿದೆ. ಆರೋಗ್ಯಕರ ದಿನಚರಿಯ ಸರಳ ಮತ್ತು ಅಗತ್ಯ ಅಂಶಗಳಲ್ಲಿ "ನೀರು ಕುಡಿಯುವುದು" ಒಂದಾಗಿದೆ. ಈ ರೀತಿ ನೀರು ಕುಡಿಯುವುದು ಚಯಾಪಚಯವನ್ನು ವೇಗಗೊಳಿಸಲು ಸಹಕಾರಿ. ಇದು ಕರುಳಿನ ಚಲನೆ ಉತ್ತಮಪಡಿಸುತ್ತದೆ. ಸಂಶೋಧಕರ ಪ್ರಕಾರ ಪುರುಷರು ದಿನಕ್ಕೆ ಸುಮಾರು 3 ಲೀಟರ್ ನೀರನ್ನು ಸೇವಿಸಬೇಕು. ಮಹಿಳೆಯರು 2 ಲೀಟರ್‌ಗಿಂತ ಹೆಚ್ಚು ಕುಡಿಯಬೇಕು. ಗರ್ಭಿಣಿಯರಿಗೆ 2.5 ಲೀಟರ್ ವರೆಗೆ ಬೇಕಾಗುತ್ತದೆ. ನೀರು ಕುಡಿಯುವುದು ದೇಹದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ. ತೂಕ ಇಳಿಕೆ ಮಾಡಲು ಬಯಸುವವರಿಗೆ, ಚರ್ಮದ ಕಾಂತಿ ಹೆಚ್ಚಿಸಲು ಬಯಸುವವರಿಗೆ, ಉತ್ತಮ ಆರೋಗ್ಯ ಬಯಸುವವರು ಪ್ರತಿದಿನ ಸಾಕಷ್ಟು ನೀರು ಕುಡಿಯಲೇಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಏನು ಪ್ರಯೋಜನವಿದೆ ತಿಳಿಯೋಣ.

1. ಉತ್ತಮ ನಿದ್ರೆ, ಮೂಡ್‌, ಮಿದುಳಿನ ಯೋಗಕ್ಷೇಮಕ್ಕೆ ನೆರವು

ಸಾಕಷ್ಟು ನೀರು ಸೇವಿಸುವ ಜನರು ಉತ್ತಮವಾಗಿ ನಿದ್ರಿಸುತ್ತಾರೆ. ಅವರ ಮನಸ್ಥಿತಿ ಉತ್ತಮವಾಗಿರುತ್ತದೆ. ನೆನಪಿನ ಶಕ್ತಿಯೂ ಉತ್ತಮವಾಗಿರುತ್ತದೆ. ಮಿದುಳಿನ ಕಾರ್ಯಕ್ಷಮತೆ, ಭಾವನಾತ್ಮಕ ಯೋಗಕ್ಷೇಮಕ್ಕೆ ಸಹಕಾರಿ ಎಂದು ಹಾರ್ವರ್ಡ್‌ ಹೆಲ್ತ್‌ ವರದಿ ತಿಳಿಸಿದೆ.

2. ದೇಹದ ಉಷ್ಣತೆಯ ನಿಯಂತ್ರಣ

ಪ್ರತಿದಿನ ಹೈಡ್ರೆಟ್‌ ಆಗಿರುವುದು ದೇಹದ ಉಷ್ಣಾಂಶದ ನಿಯಂತ್ರಣಕ್ಕೆ ಸಹಕಾರಿ. ದೇಹವು ಶಾಖವನ್ನು ಸರಿಯಾಗಿ ಹೀರಿಕೊಳ್ಳಲು ಮತ್ತು ನಿಯಂತ್ರಿಸಲು ನೀರು ಸಹಕಾರಿ ಎಂದು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಸ್ಪೆಷಲ್‌ ಹೆಲ್ತ್‌ನ ವರದಿ ತಿಳಿಸಿದೆ.

3. ಟಾಕ್ಸಿಕ್‌ ಮುಕ್ತ ದೇಹ

ಸಾಕಷ್ಟು ನೀರು ಕುಡಿಯುವುದು ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ದೇಹದ ಟಾಕ್ಸಿಕ್‌, ವಿಷ, ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದೇಹವು ಮೂತ್ರ, ಬೆವರು ಮತ್ತು ಕರುಳಿನ ಚಲನೆಗಳ ಮೂಲಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ.

4. ಆಮ್ಲಜನಕದ ವಿತರಣೆಗೆ ನೆರವು

ದೇಹದ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಮರ್ಪಕವಾಗಿ ಸಾಗಿಸಲು ನೀರು ಸಹಾಯ ಮಾಡುತ್ತದೆ. ಈ ಮೂಲಕ ದೇಹದ ಅಗತ್ಯ ಪ್ರಕ್ರಿಯೆಗಳು ಸರಾಗವಾಗಿ ನಡೆಯಲು ನೆರವು ನೀಡುತ್ತದೆ. ದೇಹವು ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ಉತ್ತಮ ರಕ್ತ ಪರಿಚಲನೆಗೆ ಸಹಕಾರಿ.

5. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಿಸುತ್ತದೆ

ನೀರಿನಿಂದ ಚರ್ಮದ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ. ನೀರು ಕುಡಿಯುವುದರಿಂದ ಚರ್ಮದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಉಂಟಾಗುತ್ತದೆ. ಇದು ದೇಹದ ಕಾಂತಿ ಹೆಚ್ಚಿಸುತ್ತದೆ. ಹೊಳೆಯುವ ಮೈಬಣ್ಣ ನೀಡುತ್ತದೆ.

6. ತೂಕ ಇಳಿಕೆಗೆ ನೆರವು

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಉತ್ತಮಗೊಳ್ಳುತ್ತದೆ. ಇದು ಹಸಿವನ್ನು ನಿಯಂತ್ರಿಸುತ್ತದೆ. ದೇಹದಿಂದ ಹೆಚ್ಚುವರಿ ಕ್ಯಾಲೋರಿ ಹೊರಹಾಕಲು ನೆರವಾಗುತ್ತದೆ. ಊಟದ ಮುಂಚೆ ನೀರು ಕುಡಿಯುವುದು ನಿಮ್ಮ ಹಸಿವು ನಿಯಂತ್ರಣಕ್ಕೆ ಸಹಕಾರಿ. ತೂಕ ಇಳಿಕೆ ಮಾಡಲು ಬಯಸುವವರು ಈ ರೀತಿ ಮಾಡಬಹುದು.

7. ಕ್ರಮಬದ್ಧ ಕರುಳಿನ ಚಲನೆಗೆ ಸಹಕಾರಿ

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಕರುಳು ಶುದ್ಧೀಕರಿಸಲು ನೆರವಾಗುತ್ತದೆ. ಇದು ಮಲಬದ್ಧತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀರು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಟಾಯ್ಲೆಟ್‌ನಲ್ಲಿ ಆರಾಮವಾದಕ ಫೀಲ್‌ ನೀಡುತ್ತದೆ.

8. ಕೂದಲಿನ ಆರೋಗ್ಯಕ್ಕೂ ನೆರವು

ದೇಹವು ಉತ್ತಮವಾಗಿ ಹೈಡ್ರೆಟ್‌ ಆಗಿದ್ದರೆ ತಲೆಯ ಸ್ಕಾಲ್ಪ್‌ನ ಪಿಎಚ್‌ ಲೆವೆಲ್‌ ಉತ್ತಮವಾಗಿರುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಕಾರಿ. ಡ್ಯಾಂಡ್ರಾಫ್‌, ತುರಿಸುವಿಕೆ, ತಲೆಕೂದಲ ಕಿರಿಕಿರಿ ನಿವಾರಣೆಗೂ ನೆರವು ನೀಡುತ್ತದೆ. ಇದು ಚರ್ಮದ ಕಾಂತಿಗೂ ನೆರವು ನೀಡುತ್ತದೆ.

9. ತಲೆ ನೋವು ಕಡಿಮೆ ಮಾಡುತ್ತದೆ

ಪ್ರತಿದಿನ ಕೆಲವರಿಗೆ ತಲೆನೋವು ಹೆಚ್ಚು ಇರುತ್ತದೆ. ಕೆಲವರ ತಲೆನೋವಿಗೆ ಪ್ರಮುಖ ಕಾರಣ ಡಿಹೈಡ್ರೇಷನ್‌ ಅಥವಾ ನಿರ್ಜಲೀಕರಣ. ಪ್ರತಿದಿನ ಸಾಕಷ್ಟು ನೀರು ಕುಡಿಯುವ ಮೂಲಕ ತಲೆನೋವು ಕಡಿಮೆ ಮಾಡಿಕೊಳ್ಳಬಹುದು.

10. ಶಕ್ತಿ ಹೆಚ್ಚಿಸುತ್ತದೆ

ನಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚಿಸಲು ನೀರು ಸಹಕಾರಿ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸಾಕಷ್ಟು ನೀರು ಕುಡಿದು ಮುಂದಿನ ಕೆಲಸ ಮಾಡಿ.

ಡಿಸ್ಕ್ಲೈಮರ್‌: ಲಭ್ಯ ಮಾಹಿತಿ ಆಧರಿತ ಬರಹ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ