ಬಾಲ್ಯದಲ್ಲೂ ಕಂಡುಬರುತ್ತೆ ಸಂಧಿವಾತ; ಮಗುವಿನ ಬೆಳವಣಿಗೆ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ: ಮೂಳೆ ಶಸ್ತ್ರಚಿಕಿತ್ಸಕ ಡಾ ಸುರೇಂದ್ರ ಕಾಮತ್ ಲೇಖನ
Oct 12, 2024 09:40 PM IST
ಮಂಗಳೂರು ಕೆಎಂಸಿ ಆಸ್ಪತ್ರೆ ಡಾಕ್ಟರ್ ಸುರೇಂದ್ರ ಕಾಮತ್ ಅವರು ವಿಶ್ವ ಸಂಧಿವಾತ ದಿನದ ಹಿನ್ನೆಲೆಯಲ್ಲಿ ಬಾಲ್ಯಾವಸ್ಥೆಯ ಸಂಧಿವಾತದ ಕುರಿತು ಬರೆದ ಲೇಖನ. (ಸಾಂದರ್ಭಿಕ ಚಿತ್ರ)
ಸಂಧಿವಾತ ದೊಡ್ಡವರಲ್ಲಷ್ಟೇ ಅಲ್ಲ, ಪುಟ್ಟ ಮಕ್ಕಳಲ್ಲೂ ಕಂಡುಬರುತ್ತದೆ. ಇದನ್ನು ಬಾಲ್ಯಾವಸ್ಥೆಯ ಸಂಧಿವಾತ ಎನ್ನುತ್ತಾರೆ. ಮಕ್ಕಳು, ಹದಿಹರೆಯದವರ ಮೇಲೆ ಇದರ ಪರಿಣಾಮ ಅರ್ಥಮಾಡುವುದು ಅಗತ್ಯ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆ ಡಾಕ್ಟರ್ ಸುರೇಂದ್ರ ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ. ಅಂದ ಹಾಗೆ ಇಂದು ವಿಶ್ವ ಸಂಧಿವಾತ ದಿನ. ತನ್ನಿಮಿತ್ತವಾಗಿ ಅವರು ಬರೆದ ಲೇಖನ ಇಲ್ಲಿದೆ.
ಇಂದು ವಿಶ್ವ ಸಂಧಿವಾತ ದಿನ. ಸಂಧಿವಾತ ಅಥವಾ ಆರ್ಥ್ರೈಟಿಸ್ ಎನ್ನುವುದು ಈಗ ದೊಡ್ಡವರಲ್ಲಷ್ಟೇ ಅಲ್ಲ, ಸಣ್ಣ ಮಕ್ಕಳಲ್ಲೂ ಕಾಣಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ನಿರ್ಲಕ್ಷಿಸಲ್ಪಟ್ಟು ಅವರ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಿದರ್ಶನಗಳಿವೆ. ಅದರ ಗುಣಲಕ್ಷಣಗಳನ್ನು ಬೇಗ ಗುರುತಿಸುವುದು ಸಾಧ್ಯವಾಗದೇ ಹೋಗಿರುವುದು ಅದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆ ಡಾಕ್ಟರ್ ಸುರೇಂದ್ರ ಕಾಮತ್ ಅವರು, ತಾವು ಗಮನಿಸಿದ ಒಂದು ಪ್ರಕರಣವನ್ನು ನಿದರ್ಶನವಾಗಿಟ್ಟುಕೊಂಡು ಜಾಗೃತಿ ಮೂಡಿಸುವ ದೃಷ್ಟಿಯಿಂದ ಬರೆದ ಲೇಖನ ಇದು.
ಸಂಧಿವಾತ ರೋಗ ನಿರ್ಣಯ: ಆ 14 ವರ್ಷದ ಬಾಲಕನಿಗೆ 8 ವಾರದಿಂದ ಈ ಸಮಸ್ಯೆ ಇತ್ತು
ಜ್ವರದ ಲಕ್ಷಣಗಳು, ಅನೇಕ ಕೀಲುಗಳಲ್ಲಿ ನೋವು ಮತ್ತು ಊತವನ್ನು ಹೊಂದಿದ್ದ 14 ವರ್ಷದ ಹುಡುಗ ನಮ್ಮ ಹೊರರೋಗಿ ಚಿಕಿತ್ಸಾಲಯಕ್ಕೆ ಬಂದಿದ್ದ. ಆಗ ಆತನಿಗೆ ಜ್ವರ ಅಷ್ಟು ತೀವ್ರವಾಗಿರಲಿಲ್ಲ, ಶೀತವೂ ಇರಲಿಲ್ಲ. ಸಂಜೆ ಹೊತ್ತು ಜ್ವರ ಹೆಚ್ಚುತ್ತಿತ್ತು. ಈ ರೋಗಲಕ್ಷಣಗಳು ಸುಮಾರು 8 ವಾರಗಳಿಂದ ಇದ್ದವು. ಬಾಲಕ ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಔಷಧಿಗಳೊಂದಿಗೆ ಚಿಕಿತ್ಸೆ ಪಡೆದಿದ್ದ. ಆ ಚಿಕಿತ್ಸೆಯಿಂದ ರೋಗಲಕ್ಷಣಗಳಲ್ಲಿ ಯಾವುದೇ ಉಪಶಮನ ಕಂಡುಬಂದಿರಲಿಲ್ಲ. ನಾವು ತಾತ್ಕಾಲಿಕವಾಗಿ ಇದು ಬಾಲ್ಯಾವಸ್ಥೆಯ ಸಂಧಿವಾತ ಇರಬಹುದೆಂದು ರೋಗನಿರ್ಣಯ ಮಾಡಿ, ಸೂಕ್ತ ಪರೀಕ್ಷೆಗಳನ್ನು ನಡೆಸಿದೆವು. ರೋಗಿಯನ್ನು ಮಕ್ಕಳ ತಜ್ಞರು ಮತ್ತು ಸಂಧಿವಾತ ತಜ್ಞರೂ ಪರೀಕ್ಷಿಸಿದರು. ರೋಗನಿರ್ಣಯವನ್ನು ದೃಢಪಡಿಸಿದ ನಂತರ, ರೋಗವನ್ನು ನಿಯಂತ್ರಿಸುವ ಔಷಧಗಳ ಜೊತೆಗೆ, ನೋವು ಮತ್ತು ಕೀಲು ಊತವನ್ನು ನಿವಾರಿಸಲು ಔಷಧೋಪಚಾರ ಮಾಡಲಾಯಿತು. ರೋಗಲಕ್ಷಣಗಳಿಂದ ಉಪಶಮನ ಪಡೆದ ನಂತರ, ಬಾಧಿತ ಕೀಲುಗಳನ್ನು ಸಜ್ಜುಗೊಳಿಸಲು ಮತ್ತು ಬಲಪಡಿಸಲು ಅವರನ್ನು ʻಫಿಸಿಯೋಥೆರಪಿಸ್ಟ್ʼ ಬಳಿಗೆ ಕಳುಹಿಸಲಾಯಿತು. ರೋಗಿಯು ವೈದ್ಯಕೀಯ ಚಿಕಿತ್ಸೆಗಳಿಗೆ ಉತ್ತಮ ಪ್ರತಿಕ್ರಿಯೆ ತೋರಿದ್ದು, ಪ್ರಸುತ ನಿಯತವಾಗಿ ವೈದ್ಯರನ್ನು ಕಾಣುತ್ತಿದ್ದಾನೆ.
ಬಾಲ್ಯದಲ್ಲಿ ಕಂಡು ಬರುವ ಸಂಧಿವಾತ
ಬಾಲ್ಯಾವಸ್ಥೆಯ ಸಂಧಿವಾತವೆಂದರೆ, ಇದು ಮಕ್ಕಳಲ್ಲಿ ಕೀಲುಗಳ ಉರಿಯೂತ ಉಂಟುಮಾಡುವ ಸ್ಥಿತಿಯಾಗಿದೆ. ಮಕ್ಕಳ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವ ದೀರ್ಘಕಾಲದ ಪರಿಣಾಮವನ್ನೂ ಇದು ಹೊಂದಿರುತ್ತದೆ. ಸಂಧಿವಾತವು ಕೀಲುಗಳ ಒಳಪದರದ ಮೇಲೆ ಪರಿಣಾಮ ಬೀರುವ, ಒಂದು ಅಥವಾ ಹೆಚ್ಚು ಕೀಲುಗಳ ಉರಿಯೂತದ ಸ್ಥಿತಿ. ಕೀಲುಗಳ ಒಳಪದರವನ್ನು ʻಸಿನೋವಿಯಂʼ ಎಂದು ಕರೆಯಲಾಗುತ್ತದೆ. ಕೀಲುಗಳ ಸುಗಮ ಚಲನೆಗಾಗಿ ನಯಗೊಳಿಸುವಿಕೆಗಾಗಿ ʻಸಿನೋವಿಯಂʼ ಒಂದು ರೀತಿಯ ದ್ರವವನ್ನು ಸ್ರವಿಸುತ್ತದೆ. ʻಸಿನೋವಿಯಂʼ ಉರಿಯೂತಕ್ಕೆ ಒಳಗಾದಾಗ ಅದು ಹೆಚ್ಚಿನ ದ್ರವವನ್ನು ಸ್ರವಿಸುತ್ತದೆ, ಇದರ ಪರಿಣಾಮವಾಗಿ ಕೀಲುಗಳ ಊತ, ನೋವು ಮತ್ತು ಬಿಗಿತ ಉಂಟಾಗುತ್ತದೆ. ಬಿಳಿ ಜೀವಕೋಶಗಳು ಮತ್ತು ರಾಸಾಯನಿಕಗಳ ಬಿಡುಗಡೆ ಸೇರಿದಂತೆ ʻಸಿನೋವಿಯಂ ಉರಿಯೂತʼವು ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿದೆ. ಇದು ಅಂತಿಮವಾಗಿ ʻಕಾರ್ಟಿಲೆಜ್ʼ ಮತ್ತು ಮೂಳೆಗೆ ಹಾನಿಯನ್ನುಂಟು ಮಾಡುತ್ತದೆ.
ಬಾಲ್ಯಾವಸ್ಥೆಯ ಸಂಧಿವಾತದ ವಿಧ ಮತ್ತು ಪರಿಣಾಮ
ಬಾಲ್ಯಾವಸ್ಥೆಯ ಸಂಧಿವಾತದಲ್ಲಿ ಏಳು ವಿಭಿನ್ನ ವಿಧಗಳಿವೆ. ಈ ಪೈಕಿ ಪ್ರಮುವಾದವು ಇವು - ಒಲಿಗೊರ್ಟಿಕ್ಯುಲರ್ - ನಾಲ್ಕು ಕೀಲುಗಳು ಅಥವಾ ಅದಕ್ಕಿಂತ ಕಡಿಮೆ ಕೀಲುಗಳಲ್ಲಿ ಸಂಧಿವಾತ, ಪಾಲಿಯಾರ್ಟಿಕುಲರ್ - ಐದು ಅಥವಾ ಹೆಚ್ಚು ಕೀಲುಗಳಲ್ಲಿ ಸಂಧಿವಾತ, ಇನ್ನೊಂದು ವ್ಯವಸ್ಥಿತ - ಸಂಧಿವಾತ. ಇದರಲ್ಲಿ ಜ್ವರ, ದದ್ದು ಮತ್ತು ದೊಡ್ಡ ದುಗ್ಧರಸ ಗ್ರಂಥಿಗಳಲ್ಲಿ ಸಮಸ್ಯೆ ಕಾಣಿಸುತ್ತದೆ.
ಬಾಲ್ಯಾವಸ್ಥೆಯ ಸಂಧಿವಾತವನ್ನು ಪತ್ತೆಹಚ್ಚಲು ಕೀಲು ರೋಗಲಕ್ಷಣಗಳು ಒಂದೇ ಕೀಲಿನಲ್ಲಿ ಸತತವಾಗಿ ಕನಿಷ್ಠ ಆರು ವಾರಗಳವರೆಗೆ ಇರಬೇಕು.
ರಕ್ತ ಪರೀಕ್ಷೆಗಳ ಜೊತೆಗೆ ರೋಗಿಯ ಇತಿಹಾಸ ಮತ್ತು ದೈಹಿಕ ಪರೀಕ್ಷೆ ಬಹಳ ಮುಖ್ಯ. ಬಾಧಿತ ಕೀಲುಗಳ ʻಎಕ್ಸ್-ರೇʼ ಅಥವಾ ಇತರ ಇಮೇಜಿಂಗ್ ಪರೀಕ್ಷೆಗಳು (ಅಲ್ಟ್ರಾಸೌಂಡ್, ಎಂಆರ್‌ಐ) ಈ ಸಮಸ್ಯೆಯ ನಿರ್ವಹಣೆಯಲ್ಲಿ ಸಹಾಯಕವಾಗುತ್ತವೆ. ಈ ಸಂಶೋಧನೆಗಳು ಇತರ ರೋಗಗಳನ್ನು ಹೊರಗಿಡಲು ಅಥವಾ ʻಕಾರ್ಟಿಲೆಜ್ʼ ಮತ್ತು ಮೂಳೆಯ ಮೇಲೆ ಪರಿಣಾಮಗಳನ್ನು ತಿಳಿಯಲು ಸಹ ಸಹಾಯಕವಾಗುತ್ತವೆ. ಬಾಲ್ಯಾವಸ್ಥೆಯ ಸಂಧಿವಾತದ ನಿರ್ವಹಣೆಗೆ ಬಹು ವಿಭಾಗೀಯ ತಜ್ಞರ ತಂಡದ ಅಗತ್ಯವಿದೆ.
ಸಂಧಿವಾತ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ನೋವು ಮತ್ತು ದೈಹಿಕ ಚಲನೆಗಳ ಮಿತಿಯು ಬಾಧಿಸುತ್ತದೆ. ಇದು ಈ ಮಕ್ಕಳಲ್ಲಿ ಇತರರಿಗಿಂತ ತಾವು ಭಿನ್ನವೆಂಬ ಭಾವನೆ ಮೂಡಿಸುತ್ತದೆ. ಅವರಲ್ಲಿ ಚೈತನ್ಯದ ಕೊರತೆ ಮತ್ತು ದುರ್ಬಲತೆಯೂ ಕಾಡಬಹುದು. ಸಂಧಿವಾತವು ಮಕ್ಕಳಲ್ಲಿ ತಾವು ಎಲ್ಲರಂತೆ ಸಾಮಾನ್ಯರೆಂಬ ಸಮಾನತೆ ಪ್ರಜ್ಞೆಗೆ ಅಡ್ಡಿಪಡಿಸುತ್ತದೆ. ಕೀಲುಗಳಲ್ಲಿ ಕಾಡುವ ನೋವು, ಕೆಲಸ-ಕಾರ್ಯಗಳಲ್ಲಿ, ಆಟಗಳಲ್ಲಿ ತೊಡಗುವ ಅವರ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ. ನೋವಿನಿಂದಾಗಿ, ಸಾಮಾಜಿಕ ಮತ್ತು ಶಾಲಾ ಚಟುವಟಿಕೆಗಳಲ್ಲಿ ಇಂತಹ ಮಕ್ಕಳ ಭಾಗವಹಿಸುವಿಕೆಯು ಸೀಮಿತವಾಗಿರಬಹುದು.
ಬಾಲ್ಯಾವಸ್ಥೆಯ ಸಂಧಿವಾತವು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ವಿರೂಪದಿಂದಾಗಿ ಗಂಭೀರ ಕೀಲು ಹಾನಿಯನ್ನೂ ಉಂಟುಮಾಡಬಹುದು. ಈ ಪರಿಣಾಮಗಳು ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆಗೂ ಕಾರಣವಾಗಬಹುದು. ಕುಟುಂಬ ಮತ್ತು ಸ್ನೇಹಿತರಿಂದ ಬಲವಾದ ಬೆಂಬಲವು ನೋವು ಮತ್ತು ಇತರ ಸವಾಲುಗಳನ್ನು ನಿರ್ವಹಿಸಲು ಈ ಮಕ್ಕಳಿಗೆ ಸಹಾಯ ಮಾಡುತ್ತದೆ.
- ಲೇಖನ: ಡಾ. ಸುರೇಂದ್ರ ಕಾಮತ್, ಹಿರಿಯ ಮೂಳೆ ಶಸ್ತ್ರಚಿಕಿತ್ಸಕ, ಕೆಎಂಸಿ ಆಸ್ಪತ್ರೆ, ಡಾ ಬಿಆರ್ ಅಂಬೇಡ್ಕರ್ ಸರ್ಕಲ್ ಮಂಗಳೂರು.