ಮನೆಯಲ್ಲೇ ಮಾಡಿಟ್ಟುಕೊಳ್ಳಿ ಆರೋಗ್ಯಕರ ಕಷಾಯ ಪುಡಿ; ಇಲ್ಲಿದೆ ಸರಳ ರೆಸಿಪಿ, ಬಹಳ ದಿನ ಬಾಳಿಕೆ ಬರುತ್ತೆ
Sep 30, 2024 03:22 PM IST
ಮನೆಯಲ್ಲೇ ಮಾಡಿಟ್ಟುಕೊಳ್ಳಿ ಆರೋಗ್ಯಕರ ಕಷಾಯ ಪುಡಿ
- ಕಾಫಿ ಅಥವಾ ಟೀಗೆ ಬದಲಾಗಿ ನೀವು ಆರೋಗ್ಯಕರ ಕಷಾಯವನ್ನು ಕುಡಿಯಬಹುದು. ನಿತ್ಯ ಟೀ ಕುಡಿಯುವ ಅಭ್ಯಾಸ ಇದ್ದರೆ ಅದನ್ನು ತಪ್ಪಿಸಲು ಕೂಡ ನೀವು ಈ ಕಷಾಯವನ್ನು ಟ್ರೈ ಮಾಡಬಹುದು. ಮನೆಯಲ್ಲೇ ಕಷಾಯ ಪುಡಿ ಮಾಡಲು ಇಲ್ಲಿದೆ ರೆಸಿಪಿ. ಹಲವು ದಿನಗಳ ಕಾಲ ಬಾಳಿಕೆ ಬರುವ ಈ ಕಷಾಯ ಪೌಡರ್‌ಅನ್ನು ರೆಡಿ ಮಾಡಿ.
ಕಾಫಿಗೆ ಬದಲಿಯಾಗಿ ನೀವು ಆರೋಗ್ಯಕರ ಕಷಾಯವನ್ನು ಕುಡಿಯಬಹುದು. ನಿತ್ಯ ಟೀ ಕುಡಿಯುವ ಅಭ್ಯಾಸ ಇದ್ದರೆ ಅದನ್ನು ತಪ್ಪಿಸಲು ಸಹ ನೀವು ಕಷಾಯವನ್ನು ಬಳಕೆ ಮಾಡಬಹುದು. ಹಾಲು ಸೇರಿದ ಮತ್ತು ಹಾಲು ಸೇರಿಸದ ಹೀಗೆ ಎರಡು ರೀತಿಯ ಕಷಾಯವನ್ನು ನೀವು ಮಾಡಿ ಬಳಕೆ ಮಾಡಬಹುದು. ಹೀಗೆ ಮಾಡುವುದಕ್ಕಿಂತ ಮುನ್ನ ನೀವು ಮನೆಯಲ್ಲೇ ಕಷಾಯದ ಪೌಡರ್ ತಯಾರಿ ಮಾಡಿಕೊಳ್ಳಿ. ನೀವೆ ಮನೆಯಲ್ಲಿ ಸುಲಭವಾಗಿ ಹೇಗೆ ಕಷಾಯದ ಪುಡಿಯನ್ನು ತಯಾರಿಸಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಕಷಾಯ ಪುಡಿಯನ್ನು ಸಾಮಾನ್ಯವಾಗಿ ಪೇಟೆಯಿಂದ ತರುವವರ ಸಂಖ್ಯೆಯೇ ಹೆಚ್ಚು. ಇನ್ನು ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇರುವವರು ಮನೆಯಲ್ಲೇ ಇದನ್ನು ತಯಾರಿಸುತ್ತಾರೆ. ಕಾಷಾಯ ಪುಡಿ ಮಾಡಲು ಎಲ್ಲಾ ಸೂಕ್ತ ಮಸಾಲೆಗಳನ್ನು ಮೊದಲು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಒಮ್ಮೆ ನೀವು ಕಷಾಯ ಪುಡಿಯನ್ನು ಮಾಡಿ ಇಟ್ಟುಕೊಂಡರೆ ಹಲವು ದಿನಗಳ ಕಾಲ ಉಪಯೋಗಿಸಬಹುದು.
ನೀರಿನಲ್ಲಿ ಕುದಿಸಿ ಮತ್ತು ನಿಮಗೆ ಸಿಹಿ ಅಂಶ ಬೇಕಿದ್ದಲ್ಲಿ ಸ್ವಲ್ಪ ಸಕ್ಕರೆ ಸೇರಿಸಿ ಕುಡಿಯಬಹುದು. ಹಾಗಾದರೆ ಈಗ ಮನೆಯಲ್ಲಿ ಕಷಾಯ ಪುಡಿ ಮಾಡುವುದಾದರೆ ಏನೆಲ್ಲ ಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಬೇಕಾಗುವ ಸಾಮಗ್ರಿಗಳು
ಹಿಪ್ಪಲಿ, ಜೇಷ್ಠಮದ್ದು, ಅಶ್ವಗಂಧ ಮತ್ತು ಒಣ ಶುಂಠಿ ಪುಡಿ ಇವುಗಳು ಮುಖ್ಯವಾಗಿ ಬೇಕು.
1 ಕಪ್ ಧನಿಯಾ
1/2 ಕಪ್ ಜೀರಿಗೆ
2-3 ಟೀಸ್ಪೂನ್ ಸೌನ್ಫ್ ಸೋಂಪು
2 ಟೀಸ್ಪೂನ್ ಮೆಂತ್ಯ
2 ಟೀಸ್ಪೂನ್ ಕಪ್ಪು ಮೆಣಸು ಪುಡಿ
10-12 ಲವಂಗ
4-6 ಏಲಕ್ಕಿ
1 ಜಾಯಿಕಾಯಿ
1-2 ಅರಿಶಿನ
2 ಟೀಸ್ಪೂನ್ ಒಣ ಶುಂಠಿ ಪುಡಿ
ಮಾಡುವ ವಿಧಾನ
ಈ ಮೇಲೆ ತಿಳಿಸಲಾದ ಎಲ್ಲಾ ಮಸಾಲೆ ಪದಾರ್ಥಗಳನ್ನೂ ಸಹ ನೀವು ಎಣ್ಣೆ ಹಾಕದೆಯೇ ಹುರಿದುಕೊಳ್ಳಬೇಕು. ಹೀಗೆ ಮಾಡಿದಾಗ ಅದು ಗರಿಗರಿಯಾಗಿ ಚೆನ್ನಾಗಿ ಪುಡಿಯಾಗಲು ಮತ್ತು ಪರಿಮಳ ಬೀರಲು ಸಹಾಯವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ನೀರಿನ ಅಂಶ ಇಲ್ಲದಂತಾಗಿ ಹೆಚ್ಚಿನ ದಿನ ಬಾಳಿಕೆಯೂ ಬರುತ್ತದೆ.
ಈ ಎಲ್ಲವನ್ನು ಒಂದೊಂದಾಗಿ ಹುರಿದುಕೊಂಡು ನಂತರ ಮಿಕ್ಸಿಯಲ್ಲಿ ಹಾಕಿ, ನುಣ್ಣಗೆ ಯಾವುದೇ ನೀರು ಮಿಕ್ಸ್ ಮಾಡದೇ ರುಬ್ಬಿಕೊಂಡರೆ ಆಯ್ತು. ಒಂದು ಒಣಗಿದ ಜಾರ್‌ನಲ್ಲಿ ಇದನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ. ತುಂಬಾ ದಿನಗಳ ಕಾಲ ಬಾಳಿಕೆ ಬರುತ್ತದೆ. ಆದರೆ ಗಾಳಿ ಆಡದಂತೆ ಪ್ಯಾಕ್ ಮಾಡಿ ಇಡಬೇಕು.