logo
ಕನ್ನಡ ಸುದ್ದಿ  /  ಜೀವನಶೈಲಿ  /  ಹಾರ್ನ್‌ಬಿಲ್‌ನಿಂದ ರಣ್‌ ಉತ್ಸವದವರೆಗೆ, ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ವಿಭಿನ್ನ ಹಬ್ಬ, ಆಚರಣೆಗಳಿವು; ಒಮ್ಮೆಯಾದ್ರೂ ಇದರ ಅನುಭವ ಪಡೆಯಿರಿ

ಹಾರ್ನ್‌ಬಿಲ್‌ನಿಂದ ರಣ್‌ ಉತ್ಸವದವರೆಗೆ, ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ವಿಭಿನ್ನ ಹಬ್ಬ, ಆಚರಣೆಗಳಿವು; ಒಮ್ಮೆಯಾದ್ರೂ ಇದರ ಅನುಭವ ಪಡೆಯಿರಿ

Reshma HT Kannada

Nov 26, 2024 03:44 PM IST

google News

ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ಉತ್ಸವಗಳು

    • ಭಾರತದಲ್ಲಿ ಚಳಿಗಾಲದಲ್ಲಿ ಕೆಲವೊಂದು ವಿಶೇಷ ಹಬ್ಬಗಳನ್ನು ಆಯೋಜಿಸಲಾಗುತ್ತದೆ. ಚಳಿಗಾಲದ ಋತುವಿನಲ್ಲಿ ನಡೆಯುವ ಈ ಹಬ್ಬಗಳು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತವೆ. ಹಾರ್ನ್‌ಬಿಲ್‌ನಿಂದ ರಣ್ ಉತ್ಸವದವರೆಗೆ ಚಳಿಗಾಲದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯುವ ಹಬ್ಬಗಳ ಬಗ್ಗೆ ತಿಳಿಯೋಣ
ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ಉತ್ಸವಗಳು
ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ಉತ್ಸವಗಳು

ಭಾರತ ವೈವಿಧ್ಯತೆಯ ನಾಡು, ಇಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಆಚರಣೆ, ಉತ್ಸವ, ಹಬ್ಬಗಳು ನಡೆಯತ್ತವೆ. ಈಗ ಚಳಿಗಾಲ, ಈ ಸಮಯದಲ್ಲಿ ಮೈ ನಡುಗುವ ಚಳಿ ಮಾತ್ರವಲ್ಲ ನಮ್ಮ ದೇಶದ ಸಾಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ಕೆಲ ಉತ್ಸವಗಳೂ ನಡೆಯುತ್ತವೆ. ಚಳಿಗಾಲದಲ್ಲಿ ವಿಶೇಷವಾಗಿರುವ ಈ ಹಬ್ಬಗಳು ಭಾರತದ ಶ್ರೀಮಂತ ಪರಂಪರೆಯನ್ನು ಬಿಂಬಿಸುವುದು ಸುಳ್ಳಲ್ಲ.

ನಾಗಾಲ್ಯಾಂಡ್‌ನಲ್ಲಿ ಆಚರಿಸುವ ಹಾರ್ನ್‌ಬಿಲ್ ಉತ್ಸವದಿಂದ ಗುಜರಾತ್‌ನ ರಣ್ ಉತ್ಸವದವರೆಗೆ ಭಾರತದಲ್ಲಿ ಚಳಿಗಾಲದಲ್ಲಿ ಆಚರಿಸುವ ವಿಶೇಷ ಹಬ್ಬಗಳು ಯಾವುದು ನೋಡಿ. ನೀವು ಕಲೆ, ಸಂಗೀತ, ಆಹಾರ ಪ್ರೇಮಿಯಾಗಿದ್ದರೆ ಚಳಿಗಾಲದಲ್ಲಿ ಭಾರತದಲ್ಲಿ ನಡೆಯುವ ಈ ಹಬ್ಬಗಳಿಗೆ ಜೀವನದಲ್ಲಿ ಒಮ್ಮೆಯಾದ್ರೂ ಭೇಟಿ ನೀಡಬೇಕು. ಅಂತಹ ಉತ್ಸವಗಳ ಬಗ್ಗೆ ಇಲ್ಲಿದೆ ಮಾಹಿತಿ.

ರಣ್ ಉತ್ಸವ

ಇದು ಗುಜರಾತ್‌ನ ರೋಮಾಂಚಕ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭವ್ಯವಾದ ಆಚರಣೆಯಾಗಿದೆ.ನವೆಂಬರ್ 1, 2024 ರಿಂದ ಫೆಬ್ರವರಿ 28, 2025 ರವರೆಗೆ ನಡೆಯುವ ಈ ಉತ್ಸವವು ಗುಜರಾತಿ ಕಲೆ, ಕರಕುಶಲ, ಸಂಗೀತ ಮತ್ತು ನೃತ್ಯದ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ, ಪ್ರವಾಸಿಗರಿಗೆ ಸ್ಥಳೀಯ ಜಾನಪದ ಪರಂಪರೆಯ ಅಧಿಕೃತ ಸೊಬಗನ್ನು ತೋರಿಸುತ್ತದೆ. ಈ ಉತ್ಸವದಲ್ಲಿ ಉದ್ದಕ್ಕೂ ಹರಡಿರುವ ಟೆಂಟ್‌ಗಳು, ಸ್ಟಾಲ್‌ಗಳು ನಿಮಗೆ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ.

ಹಾರ್ನ್‌ಬಿಲ್ ಉತ್ಸವ

‘ಹಬ್ಬಗಳ ಹಬ್ಬ‘ ಎಂದು ಕರೆಯಲ್ಪಡುವ ಹಾರ್ನ್‌ಬಿಲ್ ಉತ್ಸವವು ನಾಗಾ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಆಚರಣೆಯಾಗಿದೆ. ಈ ವರ್ಷ ಹಾರ್ನ್‌ಬಿಲ್‌ ಹಬ್ಬದ 25ನೇ ವರ್ಷದ ಆಚರಣೆ. ನಾಗಾಲ್ಯಾಂಡ್‌ನಲ್ಲಿ ನೆಲೆಯಾಗಿರುವ 16 ಬುಡಕಟ್ಟುಗಳನ್ನು ಸಾಂಪ್ರದಾಯಿಕ ಸಂಗೀತ, ನೃತ್ಯ, ಪಾಕಪದ್ಧತಿ ಮತ್ತು ಕರಕುಶಲ ವಸ್ತುಗಳ ರೋಮಾಂಚಕ ಪ್ರದರ್ಶನದಲ್ಲಿ ಈ ಉತ್ಸವ ಒಂದುಗೂಡಿಸುತ್ತದೆ. ಇದರಲ್ಲಿ ಮೈ ನವಿರೇಳಿಸುವ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಅತಿ ಖಾರದ ನಾಗಾ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯು ಒಳಗೊಂಡಿರುತ್ತದೆ. ಈ ಉತ್ಸವವು ಡಿಸೆಂಬರ್ 1 ರಿಂದ 10ರವರೆಗೆ ನಡೆಯುತ್ತದೆ.

ಜೈಸಲ್ಮೇರ್ ಮರುಭೂಮಿ ಉತ್ಸವ, ರಾಜಸ್ಥಾನ

ರಾಜಸ್ಥಾನವು ತನ್ನ ರಾಜಮನೆತನದ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಇಲ್ಲಿ ಪ್ರತಿವರ್ಷ ಅದ್ಭುತವಾದ ಜೈಸಲ್ಮೇರ್ ಮರುಭೂಮಿ ಉತ್ಸವ ನಡೆಯುತ್ತದೆ. ಇದನ್ನು ಮಾರು ಮಹೋತ್ಸವ ಎಂದೂ ಕರೆಯಲಾಗುತ್ತದೆ. ವಾರ್ಷಿಕವಾಗಿ ಚಳಿಗಾಲದಲ್ಲಿ ನಡೆಯುವ ಈ ಮೂರು ದಿನಗಳ ಸಂಭ್ರಮವು ಜೈಸಲ್ಮೇರ್‌ನಿಂದ 42 ಕಿಲೋಮೀಟರ್ ದೂರದಲ್ಲಿರುವ ಸ್ಯಾಮ್ ಸ್ಯಾಂಡ್ ಡ್ಯೂನ್ಸ್‌ನಲ್ಲಿ ಥಾರ್ ಮರುಭೂಮಿಯ ಮಿನುಗುವ ಮರಳಿನ ಮೇಲೆ ನಡೆಯುತ್ತದೆ. 2025 ರ ಆವೃತ್ತಿಯು ಫೆಬ್ರವರಿ 22 ರಿಂದ ಫೆಬ್ರವರಿ 24 ರವರೆಗೆ ನಡೆಯಲಿದೆ.

ಜೈಪುರ ಸಾಹಿತ್ಯ ಉತ್ಸವ, ರಾಜಸ್ಥಾನ

ಜೈಪುರ ಸಾಹಿತ್ಯ ಉತ್ಸವ ಸಾಹಿತ್ಯಿಕ ಪ್ರಪಂಚವನ್ನು ತೆರೆದಿಡುವ ಹಬ್ಬವಾಗಿದೆ. ಈ ಬಾರಿ ಜೈಪುರ ಸಾಹಿತ್ಯ ಉತ್ಸವವು 2025 ರ ಜನವರಿ 30ರಿಂದ ಫೆಬ್ರವರಿ 3ರವರೆಗೆ ನಡೆಯಲಿದೆ. ಈ ಸಾಂಪ್ರದಾಯಿಕ ಈವೆಂಟ್ ಪ್ರಪಂಚದಾದ್ಯಂತದ ಹೆಸರಾಂತ ಲೇಖಕರು, ಚಿಂತಕರು ಮತ್ತು ಕಲಾವಿದರನ್ನು ಒಟ್ಟುಗೂಡಿಸುತ್ತದೆ. ಇಲ್ಲಿ ಚರ್ಚೆ, ಪುಸ್ತಕ ಓದುವುದು, ಸಂಗೀತ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಸಾಹಿತ್ಯ ಮತ್ತು ಕಲಾ ಉತ್ಸಾಹಿಗಳು ಈ ಉತ್ಸವಕ್ಕೆ ಒಮ್ಮೆಯಾದ್ರೂ ಭೇಟಿ ನೀಡಲೇಬೇಕು.

ಮನಾಲಿ ವಿಂಟರ್ ಕಾರ್ನಿವಲ್, ಹಿಮಾಚಲ ಪ್ರದೇಶ

ಈ ಹಬ್ಬವು ಹಿಮಾಚಲ ಪ್ರದೇಶದ ಹೊಸ ವರ್ಷದ ಹಬ್ಬದ ಅಂಗೀಕಾರವಾಗಿದೆ, ಇದು 2025ರ ಜನವರಿ 2ರಿಂದ ಜನವರಿ 6ರವರೆಗೆ ನಡೆಯುತ್ತದೆ. 1977ರಿಂದ ಆ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಾರ್ಷಿಕ ಕಾರ್ಯಕ್ರಮವು ಸ್ಕೀಯಿಂಗ್ ಸ್ಪರ್ಧೆಯಿಂದ ಬ್ಯಾಂಡ್ ಪ್ರದರ್ಶನಗಳು, ಆಹಾರ ಉತ್ಸವಗಳು, ಬೀದಿ ನಾಟಕಗಳು, ಜಾನಪದ ನೃತ್ಯಗಳು ಮತ್ತು ಸಾಹಸ ಕ್ರೀಡೆಗಳನ್ನು ಒಳಗೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ