IRCTC Tour Package: ಬೆಂಗಳೂರಿನಿಂದ ಚಾರ್‌ಧಾಮ್ ಯಾತ್ರೆ ಟೂರ್ ಪ್ಯಾಕೇಜ್ ಘೋಷಿಸಿದ ಐಆರ್‌ಸಿಟಿಸಿ; ಟಿಕೆಟ್ ದರ ಸೇರಿ ವಿವರ ಇಲ್ಲಿದೆ
Sep 08, 2024 01:10 PM IST
ಬೆಂಗಳೂರು-ಚಾರ್‌ಧಾಮ್ ಯಾತ್ರೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ವಿವರ ತಿಳಿಯಿರಿ
- 2024 ರ ಅಕ್ಟೋಬರ್‌ನಲ್ಲಿ ಬೆಂಗಳೂರು-ಚಾರ್‌ಧಾಮ್ ಯಾತ್ರೆಯ ಟೂರ್ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಣೆ ಮಾಡಿದೆ. ಟಿಕೆಟ್ ದರ, ದಿನಾಂಕ, ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಹಿಂದೂಗಳಲ್ಲಿ ಬಹುತೇಕರು ಜೀವನಲ್ಲಿ ಒಮ್ಮೆಯಾದರೂ ಚಾರ್‌ಧಾಮ್ ಯಾತ್ರೆ ಕೈಗೊಳ್ಳಬೇಕೆಂದು ಹೇಳುತ್ತಾರೆ. ಎಷ್ಟೋ ಸಲ ಹೋಗಬೇಕೆಂದು ಅಂತ ಪ್ಲಾನ್ ಮಾಡಿದರೂ ಅದು ಸಾಧ್ಯವಾಗಿರುವುದಿಲ್ಲ. ಕಾರಣಾಂತರಗಳಿಂದ ಮುಂದೂಡಲೇ ಬರಲಾಗಿರುತ್ತದೆ. ಆದರೆ ಈಗ ನೀವು ಕಡಿಮೆ ಬಜೆಟ್‌ನಲ್ಲಿ ಚಾರ್‌ಧಾಮ್ ಯಾತ್ರೆ ಕೈಗೊಳ್ಳುವ ಅವಕಾಶ ಒದಗಿ ಬಂದಿದೆ.
ಭಾರತೀಯ ರೈಲ್ವೆ ಕೇಟರಿಂಗ್ ಅಂಡ್ ಟೂರ್ ಕಾರ್ಪೊರೇಷನ್-ಆರ್‌ಸಿಟಿಸಿ ಕರ್ನಾಟಕದ ಜನತೆಗಾಗಿ ಬೆಂಗಳೂರು-ಚಾರ್‌ಧಾಮ್ ಯಾತ್ರಾ ಟೂರ್ ಪ್ಯಾಕೇಜ್ ಅನ್ನು ಘೋಷಣ ಮಾಡಿದೆ. ಐಆರ್‌ಸಿಟಿಸಿಯ ಈ ಟೂರ್ ಪ್ಯಾಕೇಜ್ ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನ 14 ರಿಂದ ಆರಂಭವಾಗುತ್ತದೆ. ಚಾರ್‌ಧಾಮ್ ಯಾತ್ರಾ ಎಕ್ಸ್ ಬೆಂಗಳೂರು (CHARDHAM YATRA EX BENGALURU (SBA22)) ಹೆಸರಿನ ಈ ಟೂರ್ ಪ್ಯಾಕೇಜ್‌ನ ಮೊತ್ತ ಎಷ್ಟು, ಯಾವೆಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ನೋಡಬಹುದು. ಹೋಟೆಲ್, ಊಟದ ವ್ಯವಸ್ಥೆ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು-ಚಾರ್‌ಧಾಮ್ ಯಾತ್ರೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ 2024ರ ಅಕ್ಟೋಬರ್ 14 ರಿಂದ ಆರಂಭವಾಗುತ್ತದೆ. ಈ ಪ್ಯಾಕೇಜ್ ಒಟ್ಟು 12 ರಾತ್ರಿಗಳು ಹಾಗೂ 13 ಬೆಳಗಿನ ದಿನಗಳನ್ನು ಒಳಗೊಂಡಿದೆ. ಉತ್ತರಾಖಂಡ್‌ನಲ್ಲಿರುವ ಪ್ರಮುಖ 4 ಹಿಂದೂ ಪವಿತ್ರ ದೇವಾಲಯಗಳು, ಪವಿತ್ರ ನದಿಗಳನ್ನು ಒಳಗೊಂಡಿದೆ. ಕೇದಾರನಾಥ, ಬದರಿನಾಥ್, ಯಮುನೋತ್ರಿ ಗಂಗೋತ್ರಿ, ದೇವ ಪ್ರಯಾಗ, ಋಷಿಕೇಶ ಹಾಗೂ ಹರಿದ್ವಾರ ಟೂರ್ ಪ್ಯಾಕೇಜ್‌ನಲ್ಲಿ ಸೇರಿವೆ.
ಪ್ರಯಾಣದ ಮಾದರಿಯನ್ನು ನೋಡುವುದಾದರೆ ವಿಮಾನದ ಮೂಲಕ ಕರೆದೊಯ್ಯಲಾಗುತ್ತದೆ. 2024ರ ಅಕ್ಟೋಬರ್ 14 ರ ಬೆಳಗ್ಗೆ 10.30 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರವಾಸಕ್ಕೆ ಹೊರಡಲಾಗುತ್ತದೆ. ಅಂದು ಮಧ್ಯಾಹ್ನ 1.20ಕ್ಕೆ ದೆಹಲಿಯನ್ನು ತಲುಪಲಾಗುತ್ತದಿ. ಅಲ್ಲಿಂದ ಬೇರೆ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಅಕ್ಟೋಬರ್ 26 ರ ಸಂಜೆ 7 ಗಂಟೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟು ರಾತ್ರಿ 9.50ಕ್ಕೆ ಬೆಂಗಳೂರಿಗೆ ವಾಪಸ್ ಬರಲಾಗುತ್ತದೆ.
ಈ ಪ್ಯಾಕೇಜ್‌ನಲ್ಲಿ ನೀವೇನಾದರೂ ಚಾರ್‌ಧಾಮ್ ಯಾತ್ರೆಗೆ ಹೋಗಬೇಕೆಂದುಕೊಂಡಿದ್ದರೆ ವಿಮಾನದ ನಿರ್ಗಮನಕ್ಕೆ ಕನಿಷ್ಠ 2 ಗಂಟೆಗಳ ಮೊದಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ವರದಿ ಮಾಡಿಕೊಂಡಿರಬೇಕು. ಬೆಂಗಳೂರಿನಿಂದ ವಿಮಾನ ಅಕ್ಟೋಬರ್ 14 ರ ಬೆಳಗ್ಗೆ 10.30ಕ್ಕೆ ಹೊರಡಲಿದೆ. ಮೊದಲ ದಿನ ದೆಹಲಿಗೆ ಆಗಮಿಸಿ ಆ ನಂತರ ಅಲ್ಲಿಂದ ಹರಿದ್ವಾರಕ್ಕೆ ಕರೆದೊಯ್ಯಲಾಗುತ್ತದೆ. ಹರಿದ್ವಾರದ ಹೋಟೆಲ್‌ಗೆ ಚೆಕ್ ಇನ್ ಆಗಿ ಅಲ್ಲೇ ಊಟದ ವ್ಯವಸ್ಥೆ ಇರುತ್ತೆ.
ಬೆಂಗಳೂರು-ಚಾರ್‌ಧಾಮ್ ಯಾತ್ರೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಟಿಕೆಟ್ ದರ
ಬೆಂಗಳೂರು-ಚಾರ್‌ಧಾಮ್ ಯಾತ್ರೆ ಟಿಕೆಟ್ ದರವನ್ನು ನೋಡುವುದಾದರೆ ಒಬ್ಬರಿಗೆ 75,440 ರೂಪಾಯಿ ಇರುತ್ತದೆ. ಇಬ್ಬರಿಗೆ ತಲಾ 63,850 ರೂಪಾಯಿ ಹಾಗೂ ಮೂವರಿಗೆ ಆದರೆ ತಲಾ 62,330 ರೂಪಾಯಿ ಪ್ಯಾಕೇಜ್ ಮೊತ್ತವನ್ನು ನಿಗದಿ ಮಾಡಲಾಗಿದೆ. ಇನ್ನೂ ಇದಕ್ಕೆ ಒಂದಷ್ಟು ಷರತ್ತುಗಳು ಕೂಡ ಇರಲಿವೆ. ಬೆಂಗಳೂರು-ಚಾರ್‌ಧಾಮ್ ಯಾತ್ರೆಯ 13 ದಿನಗಳ ಸಂಪೂರ್ಣ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ irctctourism.com ಭೇಟಿ ನೀಡಿ.