ಗುರುಪ್ರಸಾದ್‌ಗೆ ಸೋರಿಯಾಸಿಸ್ ಇತ್ತು, ಇದು ಕೀಳರಿಮೆಗೂ ಕಾರಣವಾಗಿತ್ತು ಎಂದ ಜಗ್ಗೇಶ್; ಏನಿದು ಸೋರಿಯಾಸಿಸ್? ಇಲ್ಲಿದೆ ವಿವರ
Nov 03, 2024 04:04 PM IST
ಗುರುಪ್ರಸಾದ್‌ಗೆ ಸೋರಿಯಾಸಿಸ್ ಇತ್ತು ಎಂದ ಜಗ್ಗೇಶ್; ಏನಿದು ಸೋರಿಯಾಸಿಸ್?
- ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ನಿರ್ದೇಶಕ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ. ಅವರಿಗೆ ಸೋರಿಯಾಸಿಸ್ ಇತ್ತು. ಇದು ಕೀಳರಿಮೆಗೂ ಕಾರಣವಾಗಿತ್ತು ಎಂದ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ ಸೋರಿಯಾಸಿಸ್ ಎಂದರೇನು? ಅದರ ಲಕ್ಷಣಗಳೇನು ಎಂಬ ವಿವರ ಇಲ್ಲಿದೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಬರಹಗಾರ ಗುರುಪ್ರಸಾದ್ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಸೂಸೈಡ್ ಮಾಡಿಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಗುರುಪ್ರಸಾದ್ ಶವ ಸಿಕ್ಕಿದೆ. 52 ವರ್ಷದ ಗುರುಪ್ರಸಾದ್, ಸ್ಯಾಂಡಲ್‌ವುಡ್‌ನಲ್ಲಿ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ಸ್ ಸ್ಪೇಷಲ್ ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಗುರುಪ್ರಸಾದ್ ಜತೆಗೆ ಒಡನಾಟ ಹೊಂದಿದ್ದ ನಟ ಜಗ್ಗೇಶ್, ಗುರುಪ್ರಸಾದ್ ಮೃತದೇಹ ದೊರೆತ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಸಹವಾಸ ದೋಷ ಹಾಗೂ ಕುಡಿತದ ಚಟವು ಪ್ರಾಣಕ್ಕೆ ಕುತ್ತು ತಂದಿದೆ ಎಂದಿರುವ ಅವರು, ಗುರುಪ್ರಸಾದ್‌ಗೆ ಸೋರಿಯಾಸಿಸ್ ಇತ್ತು. ಇದು ಕೀಳರಿಮೆಗೂ ಕಾರಣವಾಗಿತ್ತು ಎಂದು ಹೇಳಿದ್ದಾರೆ. ಹಾಗಿದ್ರೆ ಸೋರಿಯಾಸಿಸ್ ಎಂದರೆ ಏನು ಎಂಬುದನ್ನು ತಿಳಿಯೋಣ.
ಸೋರಿಯಾಸಿಸ್ (Psoriasis) ಎಂಬುದು ದೀರ್ಘಕಾಲದ ಚರ್ಮದ ಸಮಸ್ಯೆಯಾಗಿದೆ. ಇದು ಸಾಮಾನ್ಯ ಚರ್ಮದ ಕಾಯಿಲೆಯಲ್ಲ. ಇದು ಇತರ ಚರ್ಮ ರೋಗಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ಚರ್ಮದ ದೀರ್ಘಕಾಲದ ಉರಿಯೂತದ ಸ್ಥಿತಿಯಾಗಿದೆ. ಚರ್ಮದಲ್ಲಿ ಬಿಳಿ ಗುರುತುಗಳು ಮತ್ತು ಕೆಂಪು ಬಣ್ಣದ ಪ್ಲೇಕ್‌ಗಳು ಕಾಣಿಸಿಕೊಳ್ಳುತ್ತದೆ. ತುರಿಕೆಯ ಸ್ಥಿತಿಯು ಚರ್ಮದ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಮಾನಸಿಕವಾಗಿ ಮತ್ತು ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಜಾಗತಿಕವಾಗಿ ಸುಮಾರು 25 ಕೋಟಿಗೂ ಹೆಚ್ಚು ಜನರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಇದೇ ವೇಳೆ ಭಾರತದಲ್ಲಿ ಸುಮಾರು 3 ಕೋಟಿ ಜನರಿಗೆ ಸೋರಿಯಾಸಿಸ್ ಸಮಸ್ಯೆ ಇದೆ. ಸೋರಿಯಾಸಿಸ್ ಸಾಂಕ್ರಾಮಿಕ ರೋಗವಲ್ಲ. ಆದರೂ ಸೋರಿಯಾಸಿಸ್ ರೋಗಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ, ಈ ಸಮಸ್ಯೆ ಕಾಣಿಸಿಕೊಂಡವರು ಒಂದು ರೀತಿಯ ಅಸುರಕ್ಷಿತ ಭಾವನೆ ಹೊಂದಿರುತ್ತಾರೆ.
ಸಾಂಕ್ರಾಮಿಕ ರೋಗವಲ್ಲ
ಸೋರಿಯಾಸಿಸ್ ಸಮಸ್ಯೆಯು ಎಲ್ಲರಿಗೂ ಕಾಣಿಸುವಂತಹ ಚರ್ಮರೋಗವಾಗಿರುವುದರಿಂದ ಜನರು ಇದನ್ನು ಸಾಂಕ್ರಾಮಿಕ ರೋಗವೆಂದು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ಸಾಂಕ್ರಾಮಿಕ ಅಲ್ಲದ ರೋಗ. ಇದು ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದ್ದು, ಚರ್ಮದ ಕೋಶಗಳ ಪುನರುತ್ಪಾದನೆಯು ಸಾಮಾನ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಆಗುತ್ತದೆ. ಹೀಗಾಗಿ ಸೋರಿಯಾಸಿಸ್ ಹೊಂದಿರುವ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ದೈಹಿಕ ಸಂಪರ್ಕವಿದ್ದರೆ, ಅವರಿಗೂ ಸೋರಿಯಾಸಿಸ್ ಹರಡುವುದಿಲ್ಲ.
ಸೋರಿಯಾಸಿಸ್ ನಿಯಂತ್ರಣ ಹೇಗೆ?
ನಿಯಮಿತವಾಗಿ ಚಿಕಿತ್ಸೆ ಪಡೆಯುವುದರ ಮೂಲಕ ಸೋರಿಯಾಸಿಸ್ ಅನ್ನು ನಿಯಂತ್ರಿಸಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ನಿಮಗೆ ವೈದ್ಯರು ಪರಿಹಾರ ಸೂಚಿಸುತ್ತಾರೆ. ಏಕೆಂದರೆ ಇದರ ಲಕ್ಷಣ ಹಾಗೂ ತೀವ್ರತೆ ವಿಭಿನ್ನವಾಗಿರುತ್ತದೆ.
ವೈದ್ಯರ ಸಲಹೆಗಳಿಗೆ ಹೆಚ್ಚುವರಿಯಾಗಿ, ಚರ್ಮಕ್ಕೆ ಹೆಚ್ಚುವರಿ ಮಾಯಿಶ್ಚರೈಸೇಷನ್ ಬೇಕು. ಚರ್ಮವನ್ನು ಒಣಗಲು ಬಿಡಬಾರದು. ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಕೀಲುಗಳನ್ನು ಬಲಪಡಿಸಲು ನಿಯಮಿತ ವ್ಯಾಯಾಮ ಮಾಡಿದರೆ ಉತ್ತಮ. ಮಾನಸಿಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಯೋಗ, ಪ್ರಾಣಾಯಾಮ ಮಾಡಿದರೆ ತುಂಬಾ ಉತ್ತಮ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸೋರಿಯಾಸಿಸ್ ನಿಯಂತ್ರಿಸುವ ಸಲುವಾಗಿ ಧೂಮಪಾನ ಮತ್ತು ಮದ್ಯಪಾನವನ್ನು ಅಗತ್ಯವಾಗಿ ತ್ಯಜಿಸಬೇಕು.