ರಾಜ್ಯೋತ್ಸವ ವಿಶೇಷ: ಕನ್ನಡ ಒಂದು ಭಾಷೆಯಷ್ಟೇ ಅಲ್ಲ, ನಮ್ಮ ಆತ್ಮದ ಭಾಗ; ಭೂತಕಾಲಕ್ಕೆ ಸೇತುವೆ, ಭವಿಷ್ಯಕ್ಕೆ ಮಾರ್ಗದರ್ಶಿ – ಕಾಳಜಿ ಅಂಕಣ
Nov 01, 2024 10:05 AM IST
ಕಾಳಜಿ ಅಂಕಣ: ರೂಪರಾವ್
- ರೂಪಾ ರಾವ್ ಬರಹ: ತಾಯಿಭಾಷೆ ನಮ್ಮ ಆತ್ಮದ ಭಾಷೆ. ಸಣ್ಣ ಮಗುವಾಗಿದ್ದಾಗ ನಾವು ಕೇಳಿದ ಮೊದಲ ಲಾಲಿ, ನಿದ್ರೆ ಮಾಡಲು ಅಮ್ಮ ಹಾಡಿದ ಮೊದಲ ಹಾಡು, ನಮ್ಮನ್ನು ಹೆಸರಿಟ್ಟು ಕರೆದ ಮೊದಲ ಧ್ವನಿ. ಮಾತೃಭಾಷೆ ನಮ್ಮ ಸುಪ್ತಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ನೆನಪುಗಳು, ಭಾವನೆಗಳ ಮೂಲಕ ಮತ್ತು ನಾವು ಮಾತನಾಡದ ಮೌನದಲ್ಲಿಯೂ ಸಹ ಅದು ನಮ್ಮ ಕಿವಿಯಲ್ಲಿ ಪಿಸುಗುಟ್ಟುತ್ತದೆ.
ಒಮ್ಮೊಮ್ಮೆ ಹೀಗಾಗುತ್ತದೆ. ಎದುರಿನವರು ಕನ್ನಡದವರು ಎಂದು ತಿಳಿದ ಕೂಡಲೇ ಇಂಗ್ಲಿಷ್ ಮರೆತು ಹೋದಂತಾಗುತ್ತದೆ. ತನ್ನಿಂತಾನೆ ಸರಾಗವಾಗಿ ಕನ್ನಡ ಪದಗಳು ಬರತೊಡಗುತ್ತವೆ. ಎಷ್ಟೇ ಇಂಗ್ಲಿಷ್ ಪರಿಣತಿ ಇದ್ದರೂ ನಮ್ಮ ತಾಯಿ ನುಡಿಯಲ್ಲಿ ಮಾತಾಡುವುದರಿಂದ ಅವರ್ಣನೀಯ ಆನಂದ ಸಿಗುತ್ತದೆ. ಏಕೆ ಹೀಗೆ?
ನಿಜ ಹೇಳಬೇಕೆಂದರೆ ನನಗಂತೂ ನನ್ನ ಮಾತೃಭಾಷೆಯು ನಾನು ಯಾರೆಂಬುದರ ಅಸ್ತಿತ್ವದ ಗುರುತಿನ ಕೇಂದ್ರಬಿಂದು. ಇದು ಕೇವಲ ನನಗಷ್ಟೇ ಅಲ್ಲ ಎಲ್ಲರಿಗೂ ಅವರವರ ಮಾತೃಭಾಷೆ ಅವರೆದೆಯ ಮಿಡಿತವೇ.
ಇದು ಕೇವಲ ಸಂವಹನ ಮಾಡಲು ಒಂದು ವಿಧಾನವಲ್ಲ; ತಾಯಿಭಾಷೆ ನಮ್ಮ ಆತ್ಮದ ಭಾಷೆ, ಸಣ್ಣ ಮಗುವಾಗಿದ್ದಾಗ ನಾವು ಕೇಳಿದ ಮೊದಲ ಲಾಲಿ, ನಿದ್ರೆ ಮಾಡಲು ಅಮ್ಮ ಹಾಡಿದ ಮೊದಲ ಹಾಡು, ಮತ್ತು ನಮ್ಮನ್ನು ಹೆಸರಿಟ್ಟು ಕರೆದ ಮೊದಲ ಧ್ವನಿ.
ಸುಪ್ತ ಮನಸ್ಸಿನಲ್ಲಿ ಮಾತೃಭಾಷೆ
ನಮ್ಮ ಮಾತೃಭಾಷೆ, ನಮ್ಮ ಸಬ್ ಕಾಂಷಿಯಸ್ಸ್‌ನಲ್ಲಿ ಆಳವಾಗಿ ಬೇರೂರಿದೆ. ನೆನಪುಗಳು, ಭಾವನೆಗಳ ಮೂಲಕ ಮತ್ತು ನಾವು ಮಾತನಾಡದ ಮೌನದಲ್ಲಿಯೂ ಸಹ ನಮ್ಮ ಕಿವಿಯಲ್ಲಿ ಪಿಸುಗುಟ್ಟುತ್ತದೆ. ಈ ಭಾಷೆಯ ನಂಟು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವುದು ಮಾತ್ರವಲ್ಲ, ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ನಮ್ಮ ಜೀನ್‌ಗಳು ಅಥವಾ ವರ್ಣತಂತಿಗಳಲ್ಲಿಯೂ ಸಹ ಪ್ರತಿಧ್ವನಿಸಬಹುದು ಮಾತೃಭಾಷೆ ಗಡಿಗಳು, ದೂರ ಮತ್ತು ಸಮಯವನ್ನು ಮೀರಿದ ಬಂಧ ನಮಗೆ. ನಮ್ಮ ಸುಪ್ತ ಮನಸ್ಸು ಹಾಗೂ ಅದನ್ನು ಮೀರಿ ಮಾತೃಭಾಷೆ ನಿಜಾರ್ಥದಲ್ಲಿ ಕಣಕಣದಲ್ಲೂ ಇದೆ. ಹೇಗೆ ಎಂದು ನೋಡೋಣ.
‘ನೀವು ಒಬ್ಬ ವ್ಯಕ್ತಿಯೊಂದಿಗೆ ಅವನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ, ಅದು ಅವನ ತಲೆಗೆ ಹೋಗುತ್ತದೆ. ನೀವು ಅವನೊಂದಿಗೆ ಅವನ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ಹೃದಯಕ್ಕೆ ಹೋಗುತ್ತದೆ‘: ನೆಲ್ಸನ್ ಮಂಡೇಲಾ
ಹೌದು, ನಾವು ಭೂಮಿಯಲ್ಲಿ ಹುಟ್ಟಿದಾಗಿನಿಂದ ಎಲ್ಲಾ ನೆನಪುಗಳು ನಮ್ಮ ಮಾತೃಭಾಷೆಯ ದನಿಯ ಜೊತೆಯೇ ಹೆಣೆಯಲ್ಪಟ್ಟಿವೆ. ‘ಅಮ್ಮಾ‘ ಎಂಬ ಸರಳ ಪದವೇ ಇರಲಿ. ಕನ್ನಡಿಗರ ಪಾಲಿಗೆ, ಈ ಪದವು ಬೆಚ್ಚಗಿನ ಅನುಭವದ, ರಕ್ಷಣೆ ಮತ್ತು ಪ್ರೀತಿಯ ಮಹಾಪೂರ ತರುತ್ತದೆ. ಅಮ್ಮಾ ಎಂಬ ಪದ ಬಾಲ್ಯದ ಚಿತ್ರಣಗಳನ್ನು ಮತ್ತು ಕುಟುಂಬದ ಕಾಳಜಿಯನ್ನು ಹೊತ್ತು ತರುತ್ತದೆ.
ಮನೋವಿಜ್ಞಾನವೂ ಸಹ ಈ ನಮ್ಮ ತಾಯಿ ಭಾಷೆ ಬಾಲ್ಯದಲ್ಲಿ ಮೆದುಳಿನ ಬೆಳವಣಿಗೆಯನ್ನು ರೂಪಿಸುತ್ತದಷ್ಟೇ ಅಲ್ಲ, ನಮ್ಮ ಸುಪ್ತಮನಸಿನಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳುತ್ತದೆ ಎಂದು ಹೇಳುತ್ತದೆ. ಈ ಸುಪ್ತ ಮನಸಿನಲ್ಲಿಯೇ ನಮ್ಮ ತಾಯಿ ಭಾಷೆ ಸದಾ ಕಾಲ ನಮ್ಮೊಂದಿಗಿರುತ್ತದೆ. ಇದು, ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ನಮಗೆ ಗೊತ್ತಾಗದ ರೀತಿಯಲ್ಲಿ ಪ್ರಭಾವಿಸುತ್ತಿರುತ್ತದೆ.
ಪ್ರಖ್ಯಾತ ಭಾಷಾಶಾಸ್ತ್ರಜ್ಞರೂ ಹಾಗೂ ಮನಃಶಾಸ್ತ್ರಜ್ಞರೂ ಆದ ಡಾ. ಅನೆಟಾ ಪಾವ್ಲೆಂಕೊ, ಅವರ ಪ್ರಕಾರ ಜನರು ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡುವುದಕ್ಕಿಂತ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವಾಗ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು.
ಇದರಿಂದ ಗೊತ್ತಾಗುವುದೇನೆಂದರೆ ನಮ್ಮ ತಾಯಿಭಾಷೆ ನಮ್ಮ ಹೃದಯದೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಇದರಿಂದ, ಇತರ ಯಾವುದೇ ಭಾಷೆಗಿಂತ ಹೆಚ್ಚು ಸ್ಪಷ್ಟವಾಗಿ ಮತ್ತು ತೀವ್ರವಾಗಿ ಭಾವನೆಗಳನ್ನು ಅರಳಿಸಲು ಅಥವಾ ಕೆರಳಿಸಲು ಅನುವು ಮಾಡಿಕೊಡುತ್ತದೆ.
ಬೇಕಿದ್ದರೆ ನೆನಪಿಸಿಕೊಳ್ಳಿ, ನಾವು ಕನ್ನಡ ಭಾಷೆಯನ್ನು ಕೇಳುವಾಗ, ನಾವು ಕೇವಲ ಪದಗಳನ್ನು ಕೇಳುವುದಿಲ್ಲ, ಅಲ್ಲಿ ನಾವು ಭಾವನೆಗಳನ್ನು ಅನುಭವಿಸುತ್ತೇವೆ, ಒಂದು ಪರಿಚಿತ ದನಿಯನ್ನು ಅನುಭವಿಸುತ್ತೇವೆ,
ನಿನ್ನ ಪೂಜೆಗೆಂದು ಹೂಗಳನ್ನು ತಂದೆ
ಕರುಣಿಸಿ ಕಾಪಾಡು ತಂದೆ
ಜನಿಸಿದೆ ಬದುಕಿನ ಭರವಸೆಯ ಹೊಸ ಕೊಂಡಿ
ನೀ ಉಪ್ಪು ತಿಂದ ಮೇಲೆ ನೀರನ್ನು ಕುಡಿ
ಒಬ್ಬನೇ ಕಾಡಿನಲ್ಲಿ ಓಡಾಡಬೇಡ
ಹಿಡಿದಾನು ಬಲೆ ಹಾಕಿ ಬೇಡ
ಬಳಸಿ ಬಿಸಾಡಿದ ಪದಾರ್ಥಗಳು
ಬಳಸಿ ನಿಂತ ಬಳ್ಳಿಲತೆಗೆ ಮರವು ಕೊಡುವ ಉತ್ತರ
ಇಂತಹ ಮೇಲಿನ ಒಂದೇ ಪದ ಆದರೆ ವಿವಿದಾರ್ಥ ಕೊಡುವ ಕನ್ನಡದ ವಾಕ್ಯಗಳನ್ನು ಕೂಡಲೇ ಅರ್ಥ ಮಾಡಿಕೊಂಡು ನಗುವುದೋ ಇಲ್ಲ ಒಂದು ಕಣ್ಣೀರೋ ಬರಲು ಸಾಧ್ಯವಾಗುವುದಾದರೆ ಅದು ಕನ್ನಡದವರಿಗೇ ಮಾತ್ರ.
‘ತವರು ಕೊಡುವ ಭಾವವನ್ನು ಮೈಕೆ ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ಮೈಕೆ ಕೇವಲ ಹಿಂದಿ ಪದವಾಗಿ ಮಾತ್ರ ಗೊತ್ತು ಅದನ್ನು ಭಾವವಾಗಿ ನಾವು ಅನುಭವಿಸಿಲ್ಲ. ಸಮರ್ಪಣೆ ಅಥವಾ ಶ್ರದ್ಧೆ ಪದಗಳನ್ನು ನಾವು ವಾಕ್ಯದಲ್ಲಿ ಬಳಸಿದರೆ ಅದರ ತೂಕವೇ ಬೇರೆ.
ಡಿಡಿಕೇಶನ್ ಅಥವ ಫಿಡಿಲಿಟಿ ಈ ಇಂಗ್ಲಿಷ್ ಪದಗಳು ಆ ಭಾವನೆಯನ್ನು ನಮಗೆ ಕೊಡೋದು ಅಪರೂಪ. ಹಾಗಂತ ಆ ಪದಗಳು ತೂಕವಿಲ್ಲ ಅಂತಲ್ಲ,ಅದು ನಮ್ಮಂದಿಗೆ ಕನೆಕ್ಟ್ ಆದ ನಮ್ಮ ಮಾತೃಭಾಷೆಯ ಪದಗಳಂತಲ್ಲ ಅಷ್ಟೇ.
ನಮ್ಮ ಗುರುತನ್ನ ಎತ್ತಿ ಹಿಡಿಯುವ ಭಾಷೆ
ಮಾತೃ ಭಾಷೆ ಕೇವಲ ಸಂವಹನ ಮಾಡುವುದಿಲ್ಲ, ಅದು ನಮ್ಮ ಗುರುತನ್ನು ಎತ್ತಿ ಹಿಡಿಯುತ್ತದೆ ಮತ್ತು ವ್ಯಾಖ್ಯಾನಿಸುತ್ತದೆ. ಕನ್ನಡಿಗರಾಗಿ, ಕನ್ನಡ ನಮ್ಮ ಭಾವನಾತ್ಮಕ ಆಧಾರವಾಗಿದೆ. ನಾವು ಇತರ ಭಾಷೆಗಳನ್ನು ಮಾತನಾಡುತ್ತಿದ್ದರೂ, ಭಾವನಾತ್ಮಕವಾದ ಸಮಯದಲ್ಲಿ ಕನ್ನಡಕ್ಕೆ ಬದಲಾಗುವ ಪ್ರವೃತ್ತಿ ನೋಡಿದ್ದೇವೆ, ಇದಕ್ಕೆ ಕಾರಣ ಮೆದುಳು ನಮ್ಮ ಮಾತೃಭಾಷೆಯನ್ನು ನಮ್ಮದೇ ಆದ ವೈಯಕ್ತಿಕ ನೆನಪುಗಳು ಮತ್ತು ಭಾವನೆಗಳಿಗೆ ಸಂಬಂಧಿಸಿದ ಭಾಗಗಳಲ್ಲಿ ಸಂಗ್ರಹಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಆದ್ದರಿಂದ ನಾವು ಕನ್ನಡದಲ್ಲಿ ಮಾತನಾಡುವಾಗ, ಯೋಚಿಸುವಾಗ ಅಥವಾ ಕನಸು ಕಾಣುವಾಗ, ನಾವು ನಮ್ಮ ಸಹಜ ಸ್ವಂತ ಗುರುತಿನೊಂದಿಗೆ ಹೊಂದಿಕೊಳ್ಳುತ್ತೇವೆ.
ಮತ್ತೊಂದು ವಿಸ್ಮಯಕಾರಿ ವಿಷಯವೆಂದರೆ ಕೇವಲ ಸುಪ್ತ ಮನಸಿನ ನೆನಪಾಗಿ ಮಾತ್ರವಲ್ಲ ಅದನ್ನೂ ಮೀರಿ ನಮ್ಮ ಮಾತೃಭಾಷೆ ನಮ್ಮೊಂದಿಗೆ ಬೆಸೆದುಕೊಳ್ಳುತ್ತೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಸುಪ್ತ ಮನಸಿನಾಚೆ ಎಂದರೆ ಕೇವಲ ನಮ್ಮ ಮನಸ್ಸಿನ ಭಾಗವಾಗಿ ಅಲ್ಲ, ಆದರೆ ನಮ್ಮ ಜೈವಿಕ ಮೂಲತತ್ವದ ಭಾಗವಾಗಿಯೂ ಮಾತೃಭಾಷೆ ಇದೆ.
ಇದರ ಬಗ್ಗೆ ಕಲ್ಚರಲ್ ಜೆನೆಟಿಕ್ ಎಂಬ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಡಾ. ಅನ್ನಿ ಕಟ್ಲರ್ನಂತಹ ಸಂಶೋಧಕರು ಕಂಡುಕೊಂಡ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ದತ್ತು ಪಡೆದ ಮಕ್ಕಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಂದು ಸಂಪೂರ್ಣವಾಗಿ ಬೇರೆ ಭಾಷೆಯನ್ನು ಮಾತನಾಡುತ್ತಾ ಬೆಳೆದಿದ್ದರೂ ಸಹ, ತಮ್ಮ ನೇಟಿವ್ ಭಾಷೆಯ ಶಬ್ದಗಳಿಗೆ ಕೂಡಲೇ ತಿರುಗಿಬಲ್ಲ ಸೂಕ್ಷ್ಮತೆಯನ್ನು ಉಳಿಸಿಕೊಳ್ಳುತ್ತಾರೆ.
ಕರ್ನಾಟಕದಿಂದ ದೂರದಲ್ಲಿ ಇದ್ದು ಅಲ್ಲಿಯೇ ಹುಟ್ಟಿ ಬೆಳೆದು ಬಂದ ಕನ್ನಡಿಗರ ಮಟ್ಟಿಗೆ, ಈ ಸಂಬಂಧವು ಅವರು ಕನ್ನಡವನ್ನು ಕೇಳಿದಾಗ, ಅದು ಅವರೊಳಗೆ ಒಂದು ರೀತಿಯ ಸೂಕ್ಷ್ಮ ಕಂಪನ ಉಂಟು ಮಾಡಬಹುದು, ಪೂರ್ತಿಯಾಗಿ ಬಹಳಷ್ಟು ಕಾಲ ಮರೆತುಹೋದ, ಆದರೆ ಕೇಳಿದ ತಕ್ಷಣ ಪರಿಚಿತವೆನಿಸುವಂತಹ ಹಾಡಿನ ಹಾಗೆ. ಇದಕ್ಕೆ ಕಾರಣ ಅವರೊಳಗೆ ನೆಲೆಗೊಂಡ ಅವರ ಪರಂಪರೆಯ ನೆನಪು-ಅವರ ವಂಶಾವಳಿ, ಅವರ ಕುಟುಂಬ, ಅವರ ಸಂಸ್ಕೃತಿಯ ನೆನಪು. ಹಾಗಾಗಿ ಅವರಿಗೆ ಕನ್ನಡವು ಕಲಿತ ಭಾಷೆಯಾಗದಿದ್ದರೂ, ಇದು ಅವರಿಗೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಭಾಷೆ.
ನ್ಯೂರೋ ಸೈನ್ಸ್ ಸಂಶೋಧನೆಯ ಪ್ರಕಾರ ನಮ್ಮ ಮಾತೃಭಾಷೆಯು ಭಾವನೆಗಳು ಮತ್ತು ನೆನಪುಗಳು ಸಂಗ್ರಹಗೊಳ್ಳುವ ಲಿಂಬಿಕ್ ಸಿಸ್ಟಮ್ ಎಂದು ಕರೆಸಿಕೊಳ್ಳುವ ಮೆದುಳಿನ ಭಾಗದಲ್ಲಿ ಸೇರಿರುತ್ತದೆ. ಈ ಆಳವಾಗಿ ಬೇರೂರಿರುವ ನಂಟು ನಮ್ಮ ಮಾತೃಭಾಷೆಯನ್ನು ಕೇಳುವುದು ವರ್ಷಗಳ ನಂತರವೂ, ಏಕೆ ಖುಷಿ ತರುತ್ತದೆ ಅಥವಾ ಮರೆತು ಹೋದ ನೆನಪುಗಳನ್ನು ಜೀವಂತವಾಗಿ ಸುತ್ತಲೇ ಎಂಬುದನ್ನು ವಿವರಿಸುತ್ತದೆ. ಅದಕ್ಕಾಗಿಯೇ ಕನ್ನಡಿಗರು, ಅವರು ಜಗತ್ತಿನಲ್ಲಿ ಎಲ್ಲೇ ಇರಲಿ, ಕನ್ನಡ ರಾಜ್ಯೋತ್ಸವದ ಬಗ್ಗೆ ಹೆಮ್ಮೆಯನ್ನು ಅನುಭವಿಸುತ್ತಾರೆ, ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಕನ್ನಡ ಹಾಡುಗಳು ಮತ್ತು ಕವಿತೆಗಳನ್ನು ಕೇಳಿದಾಗ ತವರಿನಂತಹುದೇ ಹಂಬಲ ಅನುಭವಿಸುತ್ತಾರೆ.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುವ ಮಹತ್ವ
ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕೊಡಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಸಂಶೋಧನೆಗಳೂ ತೋರಿಸುತ್ತವೆ. ಅವುಗಳೆಂದರೆ:
ಅರಿವು ಹಾಗೂ ಆಲೋಚನೆಯ ಶಕ್ತಿ ದೀರ್ಘಾವಧಿಯಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ.
ಮಕ್ಕಳು ತಮ್ಮ ಮತ್ತು ತಮ್ಮ ಕಲಿಕೆಯ ವಾತಾವರಣದ ನಡುವೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಮಾತೃಭಾಷೆಯಲ್ಲಿ ಬಲವಾದ ಅಡಿಪಾಯವನ್ನು ಹೊಂದಿರುವ ಮಕ್ಕಳು ಎರಡನೇ ಭಾಷೆಯನ್ನು ಕಲಿಯುವಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ. ಮಾತೃಭಾಷೆಯ ಶಿಕ್ಷಣವು ಸ್ವ-ಮೌಲ್ಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರಜ್ಞೆಯನ್ನು ಬೆಳೆಸುತ್ತದೆ.
ಅನೇಕ ದೇಶಗಳು ಈಗ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ಕೊಡುತ್ತವೆ. ಆದರೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ, ಸುಮಾರು ಶೇ 37ರಷ್ಟು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಕಲಿಯುವುದಿಲ್ಲ ಭಾರತದಲ್ಲಿ, ಇದರ ಅಂದಾಜು ಶೇ 35 ಎಂದು ಅಂಕಿ–ಅಂಶಗಳು ಹೇಳುತ್ತವೆ
ಕನ್ನಡ ಅಥವಾ ಯಾವುದೇ ಮಾತೃಭಾಷೆಗೆ ಅದರ ಹೊರತಾಗಿ ಬೇರೆ ಯಾವುದೇ ಭಾಷೆಗೂ ಇರದಂತಹ ಒಗ್ಗಟ್ಟಿನ ಭಾವವನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಕನ್ನಡವು ನಮ್ಮ ನೆನಪುಗಳ ಹಡಗು, ನಮ್ಮ ಭೂತಕಾಲಕ್ಕೆ ಸೇತುವೆ ಮತ್ತು ನಮ್ಮ ಭವಿಷ್ಯಕ್ಕೆ ಮಾರ್ಗದರ್ಶಿ. ಇದು ಕೇವಲ ಒಂದು ಭಾಷೆಯಲ್ಲ; ಇದು ನಮ್ಮ ಆತ್ಮದ ಒಂದು ಭಾಗವಾಗಿದೆ, ಪದಗಳು ಮತ್ತು ವಾಕ್ಯಗಳನ್ನು ಮೀರಿ ನಮ್ಮಲ್ಲಿಯೇ ನೆಲೆಯಾದ ನಮ್ಮ ಗುರುತು. ಕರ್ನಾಟಕದಿಂದ ಬೇರ್ಪಟ್ಟ ದೂರದ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಪಾಲಿಗೆ, ಕನ್ನಡವನ್ನು ಮಾತನಾಡುವುದು ಅಥವಾ ಕೇಳುವುದು ಸಂಪೂರ್ಣತೆಯನ್ನು ಅನುಭವಿಸುವ, ಮನೆಯಲ್ಲಿರುವ ಅನುಭವ ಕೊಡುತ್ತದೆ.
ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲದೆ ನಮ್ಮ ಹೃದಯದಲ್ಲೂ, ಬಹುಶಃ ನಮ್ಮ ಡಿಎನ್ಎಯಲ್ಲೂ ಇರುವ ಈ ವಿಶಿಷ್ಟ ಬಂಧವನ್ನು, ಪ್ರೀತಿಸೋಣ, ಗೌರವಿಸೋಣ. ಕನ್ನಡವು ಕಾಲ, ದೂರ ಮತ್ತು ತಲೆಮಾರುಗಳನ್ನು ಮೀರಿ ನಮ್ಮನ್ನು ಒಗ್ಗೂಡಿಸುವ ಭಾಷೆ. ಈ ಭಾಷೆಯನ್ನು ಮುಂದೆ ಕೊಂಡೊಯ್ಯೋಣ, ಅದು ನಮ್ಮ ಕನಸುಗಳ ಧ್ವನಿ, ನಮ್ಮ ಸಂಭಾಷಣೆಗಳಲ್ಲಿನ ಬೆಚ್ಚಗಿನ ಅನುಭವ ಮತ್ತು ನಮ್ಮ ಅಸ್ಮಿತೆಯ ಹೆಮ್ಮೆ ಆಗಿರಲಿ. ಕನ್ನಡವು ಪದಗಳಿಗಿಂತ ಮಿಗಿಲಾದ ಆತ್ಮದ ಹೃದಯ ಬಡಿತ, ನಮ್ಮೊಳಗೆ ಪ್ರತಿಧ್ವನಿಸುತ್ತದ. ಪ್ರತಿದಿನ ಭಾಷೆಯನ್ನು ಬಳಸುವವರಿಗೂ ಬಳಸದವರಿಗೂ ಸಹ, ಅವರ ಬೇರು ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುವ ಮಾರ್ಗದರ್ಶಿ ಶಕ್ತಿ.