ಕನ್ನಡ ರಾಜ್ಯೋತ್ಸವ ಆಚರಣೆಯ ಹಿಂದಿನ ಇತಿಹಾಸ, ಮಹತ್ವ ಹೀಗಿದೆ; ಕನ್ನಡ ಹಬ್ಬವನ್ನು ಹೀಗೆ ಆಚರಿಸಿ, ಎಲ್ಲೆಲ್ಲೂ ಮೊಳಗಲಿ ಕನ್ನಡದ ಕಹಳೆ
ಪ್ರತಿವರ್ಷ ನವೆಂಬರ್1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ನವೆಂಬರ್ ತಿಂಗಳು ಪೂರ್ತಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಾಭಿಮಾನ ಮೆರೆಯಲಾಗುತ್ತದೆ. ಕನ್ನಡದ ಕಂಪು ಪಸರಿಸುವ ಈ ವಿಶೇಷ ದಿನದ ಸಂದರ್ಭದಲ್ಲಿ ಕರ್ನಾಟಕ, ಕನ್ನಡ ಹಬ್ಬದ ಇತಿಹಾಸ, ಮಹತ್ವ ತಿಳಿದುಕೊಳ್ಳಿ.
ಕರ್ನಾಟಕ ನಮ್ಮ ಹೆಮ್ಮೆಯ ರಾಜ್ಯ, ಕನ್ನಡ ನಮ್ಮ ಮಾತೃಭಾಷೆ. ಕನ್ನಡಾಂಬೆಯ ಮಕ್ಕಳಾದ ನಾವು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆಗೆ ಗೌರವ ಸಲ್ಲಿಸುವುದು ಮಾತ್ರವಲ್ಲ, ಕನ್ನಡದ ಭಾಷಾಭಿಮಾನವನ್ನು ಮೆರೆಯುತ್ತೇವೆ. ಈ ದಿನ ಶಾಲಾ–ಕಾಲೇಜುಗಳಲ್ಲಿ, ಸಮುದಾಯಗಳಲ್ಲಿ, ಕಚೇರಿ, ಸಂಘ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ. ಬೆಂಗಳೂರಿನ ಪ್ರತಿ ಏರಿಯಾಗಳಲ್ಲಿ ಬಹಳ ವಿಭಿನ್ನ, ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಕರ್ನಾಟಕದ ಮೂಲೆ ಮೂಲೆಯಲ್ಲೂ ಕನ್ನಡ ರಾಜ್ಯೋತ್ಸವ ಎಂದರೆ ಸಂಭ್ರಮ, ಸಡಗರ. ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಇತಿಹಾಸ, ಮಹತ್ವವನ್ನೂ ತಿಳಿದುಕೊಳ್ಳೋಣ.
ಕರ್ನಾಟಕ, ಕನ್ನಡ ರಾಜ್ಯೋತ್ಸವ ಇತಿಹಾಸ
ಕರ್ನಾಟಕವು ಆರಂಭದಲ್ಲಿ ಮೈಸೂರು ಪ್ರಾಂತ್ಯವಾಗಿತ್ತು. 1950ರಲ್ಲಿ ಭಾರತ ಗಣರಾಜ್ಯವಾದ ಮೇಲೆ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರೂಪುಗೊಂಡವು. ಆ ಸಮಯದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯವು ಮೈಸೂರು ರಾಜ್ಯವಾಗಿ ಉದಯವಾಯಿತು. ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಹೀಗೆ ನಾಲ್ಕು ವಿಭಾಗವಾಗಿದ್ದ ಅಂದಿನ ಪ್ರಾಂತ್ಯಗಳು ನವೆಂಬರ್ 1 ರಂದು ಅಧಿಕೃತವಾಗಿ ಒಂದಾದವು. ಕನ್ನಡ ಭಾಷೆ ಮಾತನಾಡುವ ಎಲ್ಲಾ ಜನರಿರುವ ಪ್ರಾಂತ್ಯವನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನಾಗಿ ಮಾಡಿದ ದಿನವಿದು.
ಕನ್ನಡದ ಕುಲಪುರೋಹಿತ ಎಂದೇ ಕರೆಸಿಕೊಳ್ಳುವ ಆಲೂರು ವೆಂಕಟರಾವ್ ಅವರು 1905ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸುತ್ತಾರೆ. ಆದರೆ 1950ರಲ್ಲಿ ಭಾರತವು ಗಣರಾಜ್ಯವಾದ ಮೇಲಷ್ಟೇ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ಪರಿವರ್ತನೆಗೊಂಡವು. ರಾಜರ ಆಳ್ವಿಕೆಯ ಕಾಲದಲ್ಲಿ ದಕ್ಷಿಣ ಭಾರತದಲ್ಲಿದ್ದ ಹಲವು ಸಂಸ್ಥಾನಗಳು ಭಾಷೆಯ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪಾಂತ್ರ್ಯವು ಮೈಸೂರು ರಾಜ್ಯವಾಗಿ ಉದಯವಾಯಿತು.
1956 ನವೆಂಬರ್ 1ರಂದು ಕನ್ನಡ ಭಾಷಿಗರಿಗಾಗಿ ಒಂದು ರಾಜ್ಯ ಉದಯವಾದ ಹಿನ್ನೆಲೆ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಚಳವಳಿ ಹೋರಾಟಗಾರ ಎಂ. ರಾಮಮೂರ್ತಿ ಅವರು ಮೊದಲ ಬಾರಿಗೆ ಕೆಂಪು–ಹಳದಿ ಬಣ್ಣದ ಕನ್ನಡ ಬಾವುಟ ತಯಾರಿಸಿ ಬಳಸಿದ್ದರು. ಅದು ಕರ್ನಾಟಕದ ಬಾವುಟವಾಗಿ ಇಂದಿಗೂ ರಾಷ್ಟ್ರ, ರಾಜ್ಯಗಳಲ್ಲಿ ರಾಜಾಜಿಸುತ್ತಿದೆ.
ಹೀಗೆ ಕೆಲವು ವರ್ಷಗಳ ಕಾಲ ಮೈಸೂರು ರಾಜ್ಯವಾಗಿದ್ದು, 1973, ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕದ ಎಂದು ನಾಮಕರಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಕನ್ನಡ ರಾಜ್ಯೋತ್ಸವದ ಮಹತ್ವ
ಕನ್ನಡ ನಾಡು ಅಥವಾ ಕರ್ನಾಟಕ ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ.
ಕನ್ನಡ ರಾಜ್ಯೋತ್ಸವ ಆಚರಣೆ
ಈ ದಿನದಂದು ಕನ್ನಡಾಂಬೆಯ ಫೋಟೊ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಶಾಲಾ–ಕಾಲೇಜುಗಳಲ್ಲಿ ಧ್ವಜಾರೋಹಣದ ಜೊತೆಗೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಸಂಘ–ಸಂಸ್ಥೆಗಳು, ಕಚೇರಿಗಳಲ್ಲಿ ಕನ್ನಡಾಂಬೆಯ ಫೋಟೊ ಇಟ್ಟು ಪೂಜೆ ಮಾಡಲಾಗುತ್ತದೆ. ಮೆರವಣಿಗೆಗಳನ್ನು ಮಾಡುವ ಮೂಲಕ ಕನ್ನಡಾಭಿಮಾನ ಮರೆಯುತ್ತಾರೆ. ಈ ದಿನ ನಾಡಿನೆಲ್ಲೆಡೆ ಕೆಂಪು–ಹಳದಿ ಬಣ್ಣದ ಬಾವುಟ ರಾರಾಜಿಸುತ್ತದೆ. ಕನ್ನಡ ನಾಡಗೀತೆಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ವಂದನೆ ಹೇಳಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.