ರಾಜ್ಯೋತ್ಸವ ವಿಶೇಷ: ಮಾತೃಭಾಷೆ ಕನ್ನಡ ನಮ್ಮ ಗುರುತು, ಅಸ್ತಿತ್ವವಷ್ಟೇ ಅಲ್ಲ, ಆತ್ಮಗೌರವ ಹೆಮ್ಮೆಯೂ ಹೌದು– ಮನದ ಮಾತು ಅಂಕಣ
ಭವ್ಯಾ ವಿಶ್ವನಾಥ್ ಬರಹ: ಪೂರ್ವಜರು ಹೇಗೆ ನಮ್ಮ ಅಸ್ತಿತ್ವದ ಒಂದು ಮಹತ್ವದ ಭಾಗವೋ ಹಾಗೆಯೇ ನಮ್ಮ ಸಂಸ್ಕೃತಿ, ನಾಡು ಮತ್ತು ಮಾತೃಭಾಷೆ. ಮಾತೃಭಾಷೆಯು ನಮ್ಮೊಳಗಿನ ಮಾತೃವಿನ ಮಮತೆಯನ್ನು ಆಹ್ಲಾದಿಸುವ, ಸಂಪರ್ಕಿಸುವ ಒಂದು ಮಹತ್ವವಾದ ಸೇತುವೆ. ನಮ್ಮ ಮಾತೃಭಾಷೆ, ನಾಡು, ಸಂಸ್ಕೃತಿ ನಮ್ಮ ಗುರುತು ಮತ್ತು ಅಸ್ತಿತ್ವ ಮಾತ್ರವಲ್ಲ, ನಮ್ಮ ಆತ್ಮಗೌರವ ಮತ್ತು ಹೆಮ್ಮೆಯೂ ಕೂಡ.
ಈ ವಾರದ ಮನದ ಮಾತಿನ ಅಂಕಣದ ವಿಶೇಷ ಬರಹವು ನಮ್ಮ ಮಾತೃಭಾಷೆಯಾದ ಕನ್ನಡದ ಮೇಲೆ ಆಧಾರಿತವಾಗಿದೆ. ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡ ಮತ್ತು ಮನಶಾಸ್ತ್ರದ ನಡುವೆ ಯಾವ ರೀತಿಯ ಸಂಬಂಧವಿರಬಹುದೆಂದು ನಿಮಗೂ ಕುತೂಹಲವಿದ್ದರೆ, ಈ ಅಂಕಣವನ್ನು ಓದಿ ನೀವೆಲ್ಲರೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೀರೆಂದು ಭಾವಿಸಿ, ಈ ಒಂದು ಸಣ್ಣ ಬರಹವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೇನೆ.
ಕನ್ನಡ ಭಾಷೆ ಮತ್ತು ನಮ್ಮ ಅಸ್ತಿತ್ವ: ಮೊದಲಿಗೆ, ನಮ್ಮ ಮಾತೃಭಾಷೆ ನಮ್ಮ ಅಸ್ತಿತ್ವಗಳಲ್ಲಿ ಒಂದು ಎನ್ನುವುದನ್ನು ಅರಿಯೋಣ. ಅಸ್ತಿತ್ವವೆಂದರೆ ನಮ್ಮ ಒಟ್ಟಾರೆ ಇರುವಿಕೆಯ ಮೂಲ, ಗುರುತು ಮತ್ತು ಸಂಕೇತ. ಪ್ರತಿಯೊಬ್ಬ ವ್ಯಕ್ತಿಗೆ ಅವನದೇ ಆದ ಅಸ್ತಿತ್ವವಿರುತ್ತದೆ. ಈ ಅಸ್ತಿತ್ವವಿಂದ ಅವರದೇ ಆದ ಪ್ರತ್ಯೇಕವಾದ ಗುಣ, ಸ್ವಭಾವ, ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ. ನಮ್ಮ ಮಾತೃಭಾಷೆ, ನಾಡು, ಸಂಸ್ಕೃತಿ ನಮ್ಮ ಅಸ್ತಿತ್ವದ ಮೂಲಗಳಾಗಿವೆ.
ಮಾತೃಭಾಷೆಯು ನಮ್ಮ ಸಾಂಪ್ರಾದಾಯಿಕ, ಸಾಂಸ್ಕೃತಿಕ ಮೌಲ್ಯಗಳನ್ನು ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.ಇವುಗಳಿಂದಲೇ ನಮಗೆಲ್ಲಾ ಒಂದು ಗುರುತು, ವಿಳಾಸ ಲಭ್ಯವಾಗಿರುತ್ತದೆ.
ಮಾತೃಭಾಷೆ ಮತ್ತು ಪೂರ್ವಜರು
ನಮ್ಮ ಪೂರ್ವಜರು ಹೇಗೆ ನಮ್ಮ ಅಸ್ತಿತ್ವದ ಒಂದು ಮಹತ್ವದ ಭಾಗವೋ ಹಾಗೆಯೇ ನಮ್ಮ ಸಂಸ್ಕೃತಿ, ನಾಡು ಮತ್ತು ಮಾತೃಭಾಷೆ. ಮಾತೃಭಾಷೆಯು ನಮ್ಮೊಳಗಿನ ಮಾತೃವಿನ ಮಮತೆಯನ್ನು ಆಹ್ಲಾದಿಸುವ, ಸಂಪರ್ಕಿಸುವ ಒಂದು ಮಹತ್ವವಾದ ಸೇತುವೆ.
ಹಾಗೆಯೇ, ನಮ್ಮ ಪೂರ್ವಜರ ಮೂಲವನ್ನು, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಸಾರಾಗ, ಸುಲಲಿತ ಮತ್ತು ಸೂಕ್ತವಾದ ಮಾತೃಭಾಷೆಗಿಂತ ಮತ್ತೊಂದು ಭಾಷೆ ಇದೆಯೇ?
ನಮ್ಮ ಮನದ ಮಾತು ಅರಿತು, ಅದರ ಅನುಗುಣವಾಗಿ ನಡೆದುಕೊಂಡು, ಆತ್ಮೀಯರ ಬಳಿ ನಮ್ಮ ಅಂತರಾಳವನ್ನು ಸಂಪೂರ್ಣವಾಗಿ ತೋಡಿಕೊಳ್ಳುವುದಕ್ಕೆ ಅನ್ಯ ಭಾಷೆಗಿಂತ ಮಾತೃಭಾಷೆಯ ಬಳಕೆ ಮಾಡಿದರೆ ಇದರ ಸೊಗಸೇ ಬೇರೆ. ಮಾತೃಭಾಷೆಯಲ್ಲಿ ಪರಸ್ಪರ ಸಂಬಂಧಗಳ ನಡುವೆ ಅನ್ಯೋನ್ಯತೆ, ಪ್ರೀತಿ ಮತ್ತು ವಿಶ್ವಾಸವನ್ನು ಬೆಳೆಸುವಂತಹ ಶಕ್ತಿಯಿರುತ್ತದೆ.
ಸ್ವ ಅರಿವು ಮತ್ತು ಮಾತೃಭಾಷೆ
ನಮ್ಮನ್ನು ನಾವು ಅರಿಯಬೇಕಾದರೆ ಮತ್ತು ನಮ್ಮ ಅಂತರಂಗದ ಆಳವನ್ನು ತಿಳಿಯಬೇಕಾದರೆ ಮಾತೃಭಾಷೆಯ ಪಾತ್ರ ಗಣನೀಯ.
ನಮ್ಮ ಭಾವನೆ, ಆಲೋಚನೆ, ವರ್ತನೆಗಳ ನಡುವೆ ಇರುವ ಪರಸ್ಪರ ಸಂಹವನದ ಅಡಿಪಾಯವೇ ನಮ್ಮ ಮಾತೃಭಾಷೆ. ನಮ್ಮ ಅಂತರಾಳದಲ್ಲಿ ನಿತ್ಯವೂ ನಡೆಯುವ ನಿರಂತರ ಸಂಭಾಷಣೆಯಲ್ಲಿ ನಾವು ಬಳಕೆ ಮಾಡುವ ಮಾತೃಭಾಷೆಯ ಪದಗಳು ನಮ್ಮ ಭಾವನೆ, ಆಲೋಚನೆ ಮತ್ತು ನಡವಳಿಕೆಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ.
ನಮ್ಮ ಮೂಲ, ಮಾತೃಭಾಷೆ, ಬಾಲ್ಯ, ಬೆಳೆದು ಬಂದ ವಾತಾವರಣ, ಸಮಾಜ, ಆಚಾರ ವಿಚಾರ, ಸಂಪ್ರದಾಯ, ಸಂಸ್ಕೃತಿಗಳೆಲ್ಲವೂ ನಮ್ಮ ವ್ಯಕ್ತಿತ್ವದ ಮೇಲೆ ಭಾರಿ ಪ್ರಭಾವವನ್ನು ಬೀರಿರುತ್ತವೆ. ಇವುಗಳೇ ನಮ್ಮ ಸಾಮರ್ಥ್ಯ, ದೌರ್ಬಲ್ಯ, ನಂಬಿಕೆ, ಮೌಲ್ಯ ಮತ್ತು ಅಗತ್ಯಗಳನ್ನು ನಿಶ್ಚಯಿಸುವಂಥ ಮಹತ್ವದ ಅಂಶಗಳು. ಇವುಗಳನ್ನು ಅರಿಯುವುದರಿಂದ ನಮ್ಮ ಬಗ್ಗೆ ನಾವು ಹೆಚ್ಚು ತಿಳಿದು, ಸ್ವ ಜಾಗೃತರಾಗುತ್ತೀವಿ. ಇದರ ಫಲಿತಾಂಶವಾಗಿ ನಾವು ಎಲ್ಲಾ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ಉತ್ತಮವಾಗಿ ನಿರ್ವಹಿಸಿಕೊಳ್ಳುತ್ತೇವೆ.
ಆತ್ಮಗೌರವ ಮತ್ತು ಮಾತೃಭಾಷೆ
ನಮ್ಮ ನಾಡು, ಮಾತೃಭಾಷೆ, ಸಂಸ್ಕೃತಿ ನಮ್ಮ ಅಸ್ತಿತ್ವ, ನಮ್ಮ ಗುರುತು ಎಂದಾದ ಮೇಲೆ ಇವುಗಳನ್ನು ಗೌರವಿಸುವುದು, ಸ್ವೀಕರಿಸುವುದು, ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಪೋಷಕರು ತಮ್ಮ ಮಕ್ಕಳು ಹೇಗಿದ್ದರೂ ನಮ್ಮ ಮಕ್ಕಳು ಎಂದು ಪ್ರೀತಿಯಿಂದ ಪೋಷಿಸುವುದಿಲ್ಲವೇ? ಹಾಗೆಯೇ ಮಕ್ಕಳು ಸಹ ತಮ್ಮ ಪೋಷಕರೆಂದು ಸ್ವೀಕರಿಸುವುದಿಲ್ಲವೇ? ಅವರಿಂದ ತಮ್ಮನ್ನು ತಾವು ಗುರುತಿಸಿಕೊಳ್ಳುವುದಿಲ್ಲವೇ? ಅಥವಾ ನಮಗೆ ಇಷ್ಟವಾದ ಬೇರೆ ಯಾವುದೋ ಪೋಷಕರನ್ನು ನಮ್ಮ ಪೋಷಕರೆಂದು ಸ್ವೀಕರಿಸುತ್ತೇವೆಯೇ? ಸಮಾಜದಲ್ಲಿ ಪೋಷಕರಿಲ್ಲದ ಮಕ್ಕಳು ಅನಾಥರಾಗುವುದಿಲ್ಲವೇ? ಹಾಗೆಯೇ,ನಮ್ಮ ದೇಹವು ಹೇಗಿದ್ದರೂ ಅದನ್ನು ನಮ್ಮದು ಎಂದು ಸ್ವೀಕರಿಸುವುದಿಲ್ಲವೇ ಅಥವಾ ಆಕರ್ಷಿತವಾದ ಬೇರೆಯೊಬ್ಬರ ದೇಹವನ್ನು ನಮ್ಮದು ಎಂದು ಪರಿಗಣಿಸುತ್ತೇವೆಯೇ?
ಹಾಗೆಯೇ, ನಮ್ಮನ್ನು ಮತ್ತು ನಮ್ಮದ್ದನ್ನು ನಾವು ಎಷ್ಟು ಗೌರವಿಸುತ್ತೀವೋ, ಪ್ರೀತಿಸುತ್ತೀವೋ, ನಮ್ಮದು ಎಂದು ಹೆಮ್ಮೆಯಿಂದ ಕೊಂಡಾಡುತ್ತೀವೋ ಅಷ್ಟೇ ನಮ್ಮ ಆತ್ಮವಿಶ್ವಾಸ ಮತ್ತು ಗೌರವ ಹೆಚ್ಚುತ್ತದೆ. ಬೇರೆ ಭಾಷೆಯ ಜನಗಳು ಸಹ ನಮ್ಮನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ. ನಾವು ಮೊದಲು ನಮ್ಮ ಮಾತೃಭಾಷೆ ಕನ್ನಡವನ್ನು ಹೆಮ್ಮೆಯಿಂದ ಕಲಿತು, ಬಳಕೆ ಮಾಡಿದರೆ ಸಾಕು ಉಳಿದವರು ಸಹ ನಮ್ಮ ಕನ್ನಡವನ್ನು ಕಲಿತು ಗೌರವಿಸುತ್ತಾರೆ.
ನಮ್ಮ ಮಾತೃಭಾಷೆ, ನಾಡು, ಸಂಸ್ಕೃತಿ ನಮ್ಮ ಗುರುತು ಮತ್ತು ಅಸ್ತಿತ್ವ ಮಾತ್ರವಲ್ಲ, ನಮ್ಮ ಆತ್ಮಗೌರವ ಮತ್ತು ಹೆಮ್ಮೆಯೂ ಕೂಡ.